ಸಮಸ್ಯೆ ಪರಿಹಾರಕ್ಕೆ ಬೇಕು ಸಾಮಾಜಿಕ ಪ್ರಜ್ಞೆ

7

ಸಮಸ್ಯೆ ಪರಿಹಾರಕ್ಕೆ ಬೇಕು ಸಾಮಾಜಿಕ ಪ್ರಜ್ಞೆ

Published:
Updated:
ಸಮಸ್ಯೆ ಪರಿಹಾರಕ್ಕೆ ಬೇಕು ಸಾಮಾಜಿಕ ಪ್ರಜ್ಞೆ

ತುಮಕೂರು: ಸಾಮಾಜಿಕ ಪ್ರಜ್ಞೆ ನಿರ್ಲಕ್ಷಿಸಿರುವ ಪರಿಣಾಮ ಇಂದು ಮನುಕುಲ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಬೈಲುಕುಪ್ಪೆಯ ಸೆರಾ ಜೆಯ್‌ ಮೊನಾಸ್ಟಿಕ್‌ ವಿಶ್ವವಿದ್ಯಾಲಯ ಕುಲಪತಿ (ಮಠಾಧಿಕಾರಿ) ತೆಂಜಿನ್‌ ಚೋಯಿಸಂಗ್‌ ರಿನ್‌ಪೊನ್ಶೆ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ತುಮಕೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ‘ಬೌದ್ಧ ಧರ್ಮದಲ್ಲಿ ಸಾಮಾಜಿಕ ಪ್ರಜ್ಞೆ’ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಒಂದು ಸಮಾಜ ಮತ್ತು ಸಮುದಾಯದ ಸಮಸ್ಯೆ ಪರಿಹರಿಸುವುದು ಅಥವಾ ಸಮುದಾಯದ ಬಗ್ಗೆ ಕಾಳಜಿ ತೋರುವುದೇ ನಿಜವಾದ ಸಾಮಾಜಿಕ ಪ್ರಜ್ಞೆ. ಆದರೆ, ಇಂದು ಎಲ್ಲರೂ ವೈಯಕ್ತಿಕ ಸಮಸ್ಯೆಗಳಿಗಷ್ಟೇ ಗಮನ ಕೊಡುತ್ತಿದ್ದಾರೆ. ಸಾಮಾಜಿಕ ಸಮಸ್ಯೆ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಬಹಳಷ್ಟು ಜನರಿಗೆ ತಮ್ಮ ಸುತ್ತಲಿನ ಸಮಸ್ಯೆಗಳ ಅರಿವು ಮತ್ತು ಕಾಳಜಿ ಇಲ್ಲದೆ, ಹೆಚ್ಚು ಬಾಧಿತರಾಗುತ್ತಿದ್ದಾರೆ’ ಎಂದರು.

‘ಜಾಗತೀಕರಣ ಯುಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಮತ್ತು ವೈಯಕ್ತಿಕ ಲಾಭ ಗಳಿಸುವುದರತ್ತ ಮಾತ್ರ ದೃಷ್ಟಿ ಹರಿಸುತ್ತಿವೆ. ಇದರಿಂದಾಗಿ ಜಾಗತಿಕ ತಾಪಮಾನ, ಪರಿಸರದ ಅಸಮತೋಲನ, ಪರಿಸರದ ಮೇಲೆ ಭಾರೀ ಪ್ರಮಾಣದ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ಯಾವುದೇ ರಾಷ್ಟ್ರ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

‘ಮನುಷ್ಯ ಉಳಿದ ಜೀವ ಸಂಕುಲದ ಮೇಲೂ ಕಾಳಜಿ ತೋರುತ್ತಿಲ್ಲ. ಇದರ ಫಲಿತಾಂಶವೇ ವನ್ಯಜೀವಿ ಮತ್ತು ಮಾನವ ಸಂಘರ್ಷ. ಎಲ್ಲರ ಯೋಗಕ್ಷೇಮ ಬಯಸಿದರೆ, ಬೇರೆಯವರ ಕಷ್ಟಗಳಿಗೆ ಸ್ಪಂದಿಸಿದರೆ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂಬ ಬುದ್ಧನ ಸಂದೇಶ ಎಲ್ಲರೂ ಅರಿಯಬೇಕು’ ಎಂದರು.

ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎ.ಎಚ್‌.ರಾಜಾಸಾಬ್‌ ಮಾತನಾಡಿ, ಬೌದ್ಧ ಧರ್ಮ ಅತ್ಯಂತ ವೈಜ್ಞಾನಿಕವಾಗಿದೆ. ವೈಚಾರಿಕತೆ ಪ್ರತಿಪಾದಿಸುತ್ತದೆ. ಯಾವುದೇ ಪೂರ್ವಗ್ರಹ ಇಲ್ಲದೆ ಬೌದ್ಧ ಧರ್ಮ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.

ನಿರಾಶ್ರಿತರಾಗಿದ್ದ ಟಿಬೆಟಿಯನ್ನರಿಗೆ ನಮ್ಮ ರಾಜ್ಯ ಆಶ್ರಯ ನೀಡಿ ಪ್ರಗತಿಪರ ನಿಲುವು ಮತ್ತು ಉದಾರತೆ ತೋರಿದೆ. ಇದರಲ್ಲಿ ನೆಹರೂ ಮತ್ತು ದೇವರಾಜ ಅರಸು ತೆಗೆದುಕೊಂಡ ನಿಲುವು ಮೆಚ್ಚುವಂತಹುದು. ಬೈಲುಕುಪ್ಪೆ ಮತ್ತು ಮುಂಡಗೋಡು ಇಂದು ಯಾತ್ರಾ ಸ್ಥಳಗಳಾಗಿವೆ. ಟಿಬೆಟಿಯನ್ನರು ಇಲ್ಲಿಗೆ ಆಹಾರವಾಗಿ ತಂದ ಮೆಕ್ಕೆಜೋಳ ಈಗ ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದಾಗಿದೆ ಎಂದರು.

‘ವರ್ತಮಾನದಲ್ಲಿ ಬೌದ್ಧ ಧರ್ಮದ ತಾತ್ವಿಕತೆಗಳು’ ವಿಷಯ ಕುರಿತು ಮಾತನಾಡಿದ ಲೇಖಕ ಡಾ.ನಟರಾಜ ಬೂದಾಳು ‘ಬುದ್ಧ ಸತ್ವ ಎಲ್ಲರಲ್ಲೂ ಇದೆ. ಆದರೆ, ದುರಂತದ ಸಂಗತಿ ಎಂದರೆ, ಇಂದು ಅದನ್ನು ನಾವು ಕಳೆದುಕೊಂಡಿದ್ದೇವೆ. ಎಲ್ಲರ ಮನಸಿನಲ್ಲಿದ್ದ ಬುದ್ಧ ಸತ್ವವನ್ನು ಬ್ರಹ್ಮವಾದ, ಆತ್ಮವಾದ, ಜಾತಿವಾದದ ಬೊಗಳೆ ತುಂಬಿ ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ’ ಎಂದು ವಿಷಾದಿಸಿದರು.

ಸೆರಾ ಜೆಯ್‌ ಮೊನಾಸ್ಟಿಕ್‌ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಗೆಶೆ ತುಪ್ತೆನ್‌ ವಾಂಗ್‌ಚಕ್‌, ವಿವಿ ಶಿಕ್ಷನ ವಿಭಾಗದ ಮುಖ್ಯಸ್ಥ ಗೆಶೆ ತುಪ್ತೆನ್‌ ಚೋಡಕ್‌, ಡಾ.ರಮೇಶ್‌, ಡಾ.ಕೆ.ಜಿ.ಪರಶುರಾಮ, ಡಾ.ನಾಗಭೂಷಣ ಇದ್ದರು.

ಶೈಕ್ಷಣಿಕ ಒಪ್ಪಂದಕ್ಕೆ ಸಹಿ

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಸೆರಾ ಜೆಯ್‌ ಮೊನಾಸ್ಟಿಕ್‌ ವಿಶ್ವವಿದ್ಯಾಲಯಗಳು ಸಂಯುಕ್ತವಾಗಿ ಹಲವು ಶೈಕ್ಷಣಿಕ ಕಾರ್ಯಕ್ರಮ ರೂಪಿಸಲು ಒಡಂಬಡಿಕೆ ಮಾಡಿಕೊಂಡವು. ಪ್ರೊ.ರಾಜಸಾಬ್‌ ಮತ್ತು ತೆಂಜಿನ್‌ ಚೋಯಿಸಂಗ್‌ ರಿನ್‌ಪೊನ್ಶೆ ಒಡಂಬಡಿಕೆ ಪತ್ರಕ್ಕೆ ಪರಸ್ಪರ ಸಹಿಹಾಕಿದರು.

ಒಪ್ಪಂದಗಳೇನು?

* ಬೌದ್ಧ ಗುರು ದಲೈಲಾಮಾ ಅವರ ‘ದಿ ವಿಸ್ಡಂ ಆಫ್‌ ಕಂಪ್ಯಾಷನ್‌’ ಮತ್ತು ‘ಕೈಂಡ್‌ನೆಸ್‌ ಕ್ಲಾರಿಟಿ ಅಂಡ್‌ ಇನ್‌ಸೈಟ್‌’ ಕೃತಿಗಳು ಕನ್ನಡಕ್ಕೆ ತರ್ಜುಮೆ

* ‘ಶಾಂತಿ ಮತ್ತು ಸೌಹಾರ್ದಕ್ಕೆ ಗೌತಮ ಬುದ್ಧನ ಬೋಧನೆಯ ಪ್ರಸ್ತುತತೆ’ ಬಗ್ಗೆ ತುಮಕೂರು ವಿವಿಯಲ್ಲಿ ಕಾರ್ಯಾಗಾರ

* ಬೌದ್ಧ ಧರ್ಮ ಮತ್ತು ವಿಜ್ಞಾನದ ನಡುವಿನ ಸಮಕಾಲೀನ ದಿಗ್ದರ್ಶನ ಕುರಿತು ಸೆರಾ ಜೆಯ್‌ ಮೊನಾಸ್ಟಿಕ್‌ ವಿವಿಯಲ್ಲಿ ಕಾರ್ಯಾಗಾರ

* ಧ್ಯಾನ, ಬೌದ್ಧ ಧರ್ಮ, ಮುಂದುವರಿದ ವಿಜ್ಞಾನ ಅಧ್ಯಯನಕ್ಕೆ ಎರಡೂ ವಿವಿ ನಡುವೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿನಿಮಯ

* ‘ಮನುಷ್ಯನ ಆರೋಗ್ಯ, ಯೋಗಕ್ಷೇಮದ ಮೇಲೆ ಧ್ಯಾನದ ಪರಿಣಾಮ’ ಕುರಿತು ಕಿರು ಸಂಶೋಧನೆ

* ಪಾರಂಪಾರಿಕ ನಾಟಿ ಔಷಧಿ ಸಸ್ಯಗಳ ಅಧ್ಯಯನಕ್ಕಾಗಿ ಸಿದ್ಧರಬೆಟ್ಟಕ್ಕೆ ಬೌದ್ಧ ಸನ್ಯಾಸಿಗಳೊಂದಿಗೆ ಸಸ್ಯವಿಜ್ಞಾನ ಮತ್ತು ಜೀವ ರಸಾಯನ ವಿಜ್ಞಾನ ವಿದ್ಯಾರ್ಥಿಗಳಿಂದ ಅಧ್ಯಯನ ಪ್ರವಾಸ

* ಬೌದ್ಧ ತತ್ವಶಾಸ್ತ್ರದ ಕುರಿತು ರಾಷ್ಟ್ರಮಟ್ಟದಲ್ಲಿ ಸಂಶೋಧನಾ ಪ್ರಬಂಧ ಪ್ರಕಟಿಸುವುದು

**

ವಿಶ್ವವಿದ್ಯಾನಿಲಯಗಳಲ್ಲಿ ಜನಪರ, ವೈಚಾರಿಕ ಧೋರಣೆಯ ಸಂಸ್ಕೃತಿ

ಬೇರೂರಬೇಕು

–ಪ್ರೊ.ಎ.ಎಚ್‌.ರಾಜಾಸಾಬ್‌, ತುಮಕೂರು ವಿವಿ ಕುಲಪತಿ

ಎಲ್ಲ ಸಮಸ್ಯೆಗಳಿಗೂ ನಿಸರ್ಗದಲ್ಲೇ ಪರಿಹಾರವಿದೆ. ನಾವು ನಿಸರ್ಗ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು

–ಗೆಶೆ ತೆಂಜಿನ್‌ ನಮ್ದ, ಬೈಲುಕುಪ್ಪೆ ಸೆರಾ ಜೆಯ್‌ ಮೊನಾಸ್ಟಿಕ್‌ ವಿವಿ ಸಲಹೆಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry