ಬಿಜಕಲ್‌: ಬಳಕೆಗೆ ಚರಂಡಿ ನೀರೇ ಗತಿ

7

ಬಿಜಕಲ್‌: ಬಳಕೆಗೆ ಚರಂಡಿ ನೀರೇ ಗತಿ

Published:
Updated:
ಬಿಜಕಲ್‌: ಬಳಕೆಗೆ ಚರಂಡಿ ನೀರೇ ಗತಿ

ಕುಷ್ಟಗಿ: ತಾಲ್ಲೂಕು ಕೇಂದ್ರದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಬಿಜಕಲ್‌ ಗ್ರಾಮ ಅವ್ಯವಸ್ಥೆಯ ಆಗರವಾಗಿದೆ. ಜನರು ಅನುಭವಿಸುತ್ತಿರುವ ತೊಂದರೆಗಳನ್ನು ಗಮನಿಸಿದರೆ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಇದೆಯೇ ಎಂಬ ಅನುಮಾನ ಹುಟ್ಟಿಸುತ್ತದೆ.

ಇಲ್ಲಿ ನೀರಿನ ಅಭಾವ ಇದೆ. ಆದರೆ, ಕೃತಕ ಅಭಾವ ಎದ್ದುಕಾಣುತ್ತಿದೆ. ಊರಿನ ಕೆಲ ಭಾಗಗಳಲ್ಲಿ ನಲ್ಲಿಗಳೇ ಇಲ್ಲ. ಟ್ಯಾಂಕ್‌ ತುಂಬಿದ ನಂತರ ನೀರು ಚರಂಡಿ ಸೇರುತ್ತಿದೆ.

ಜನತಾ ಬಡಾವಣೆಯಲ್ಲಿ ಹನಿ ನೀರಿಗೂ ಅಭಾವ ಇದೆ. ನಾಲ್ಕು ತಿಂಗಳಿ ನಿಂದಲೂ ಮಹಿಳೆಯರು, ಮಕ್ಕಳು ಬವಣೆ ಹೇಳತೀರದಾಗಿದೆ. ಅಂಗನವಾಡಿ ಮಕ್ಕಳು ಮನೆಯಿಂದ ನೀರು ತರಬೇಕಿದೆ.

‘ಪಂಚಾಯಿತಿಯ ನೀರುಗಂಟಿಗಳು ಮತ್ತು ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿ ಜನರು ಪಂಚಾಯಿತಿ ಕಚೇರಿಗೆ ಸೋಮವಾರ ಮುತ್ತಿಗೆಹಾಕಿದರು. ಸಮಸ್ಯೆಗೆ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವ್ಯವಸ್ಥೆ: ಹಳ್ಳದ ಬಳಿಯ ಕೊಳವೆ ಬಾವಿಯಿಂದ ಜನತಾ ಕಾಲೊನಿಯಲ್ಲಿ ರುವ ಮೇಲ್ತೊಟ್ಟಿ (ಒವರ್‌ಹೆಡ್‌ ಟ್ಯಾಂಕ್‌)ಗೆ ಸಂಪರ್ಕ ಕಲ್ಪಿಸಿರುವ ಮುಖ್ಯ ಕೊಳವೆ 10ಕ್ಕೂ ಹೆಚ್ಚುಕಡೆ ಒಡೆದಿದೆ. ನೀರು ಸೋರಿಕೆ ಮತ್ತು ಕೊಳಚೆಮಿಶ್ರಿತ ನೀರು ಟ್ಯಾಂಕ್‌ನಲ್ಲಿ ಬೀಳುತ್ತಿದೆ. ಇದೇ ನೀರನ್ನು ಅನೇಕರು ಕುಡಿಯಲು ಬಳಸುತ್ತಿದ್ದಾರೆ. ಪೋಲು ಹಾಗೂ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಪಂಚಾಯಿತಿ ಸಿಬ್ಬಂದಿ  ತಲೆಕೆಡಿಸಿಕೊಂಡಿಲ್ಲ.

ಚರಂಡಿ ನೀರು ಬಳಕೆಗೆ: ಇಲ್ಲಿನ ಕೆಲವರು ಚರಂಡಿಯಲ್ಲಿನ ಕಲುಷಿತ ನೀರನ್ನೇ ಬಳಕೆಗೆ ಉಪಯೋಗಿಸುತ್ತಿ ದ್ದಾರೆ. ಟ್ಯಾಂಕ್‌ ಭರ್ತಿಯಾದ ನಂತರ ಸಂಜೆಯಿಂದ ಬೆಳಿಗ್ಗೆ ವರೆಗೂ ನೀರು ಕೆಳಗೆ ಬೀಳುತ್ತಿರುತ್ತದೆ. ಅದನ್ನು ಯಾರೂ ಗಮನಿಸುವುದಿಲ್ಲ. ಹನಿ ನೀರಿಗೆ ಪರದಾಡುವ ಜನ ತೆರೆದ ಚರಂಡಿಯಲ್ಲಿ ಹರಯುವ ನೀರಿಗೆ ತಡೆ ಯೊಡ್ಡಿ ನಿಲ್ಲಿಸಿ ಅದನ್ನೇ ಬಟ್ಟೆ ತೊಳೆ ಯಲು, ಜಾನುವಾರುಗಳಿಗೆ ಮತ್ತು ಕಟ್ಟಡ ಕೆಲಸಗಳಿಗೆ ಬಳಸುತ್ತಿದ್ದಾರೆ.

‘ನೀರೇ ಇಲ್ಲದ ಪರಿಸ್ಥಿತಿಯಲ್ಲಿ ಎಲ್ಲಿಗೆ ಹೋಗುವುದು. ಹಳ್ಳ ಸೇರುವ ನೀರು ನಮಗೆ ಅನಿವಾರ್ಯ’ ಎಂದು ಹುಲುಗಪ್ಪ ವಡ್ಡರ, ಲಕ್ಷ್ಮಣ ಭಜಂತ್ರಿ ಪರಿಸ್ಥಿತಿ ವಿವರಿಸಿದರು. ‘ಸಮಸ್ಯೆ ಕೇಳಲು ಪಂಚಾಯಿತಿಗೆ ಅಧ್ಯಕ್ಷರೇ ಬರುವುದಿಲ್ಲ. ಅವರ ಪತಿ ಯದ್ದೇ ಕಾರಬಾರು. ಎನ್ ಮಾಡ್ತಿರೊ ಮಾಡಿಕೊಳ್ಳಿ ಹೋಗಿ’ ಎಂದು ದರ್ಪ ತೋರುತ್ತಾರೆ ಎಂಬುದು ಗ್ರಾಮಸ್ಥರ ದೂರು.

‘ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಹ ಇದೇ ಊರಿನವರು. ಜನತಾ ಕಾಲೊನಿಯಲ್ಲಿ ಅವೈಜ್ಞಾನಿಕ ಚರಂಡಿ, ಕಳಪೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಗೊಳ್ಳುತ್ತಿದ್ದರೂ ಕಂಡೂಕಾಣದಂತೆ ವರ್ತಿಸಿದ್ದಾರೆ’ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ ಯರಗೇರಾ, ‘ನೀರಿನ ಅಭಾವವಿದೆ, ಕೆಲವರು ಪೋಲು ಮಾಡುತ್ತಿದ್ದಾರೆ. ಸಿಬ್ಬಂದಿ ಬೇಜವಾಬ್ದಾರಿ ಮಿತಿಮೀರಿದ್ದು ಕೆಲವೇ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

* * 

ಹಣಕ್ಕೆ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಇಲ್ಲಿ ನೋಡಿದರೆ ಪಂಚಾಯಿತಿಯವರು ಕೊಳವೆಬಾವಿ ದುರಸ್ತಿಗೂ ರೊಕ್ಕ ಇಲ್ಲ ಎನ್ನುತ್ತಿದ್ದಾರೆ.

ವಿರೂಪಣ್ಣ ವಂಕಲಕುಂಟಿ

ಗ್ರಾಮದ ಹಿರಿಯರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry