ಹಣಕಾಸು ಸ್ಥಿರತೆ ರಿಸರ್ವ್ ಬ್ಯಾಂಕ್‌ನ ಆದ್ಯತೆ

7

ಹಣಕಾಸು ಸ್ಥಿರತೆ ರಿಸರ್ವ್ ಬ್ಯಾಂಕ್‌ನ ಆದ್ಯತೆ

Published:
Updated:
ಹಣಕಾಸು ಸ್ಥಿರತೆ ರಿಸರ್ವ್ ಬ್ಯಾಂಕ್‌ನ ಆದ್ಯತೆ

ನಾಗಮಂಗಲ: ಹಣಕಾಸು ಸ್ಥಿರತೆ ರಿಸರ್ವ್ ಬ್ಯಾಂನ್‌ನ ಮುಖ್ಯ ಆದ್ಯತೆಯಾಗಿದ್ದು, ಹಣಕಾಸು ಸಾಕ್ಷರತೆ ಈ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದು ರಿಸರ್ವ್ ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಜುನಿ ಇ. ಕಾರ್ತಿಕ್ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿಯ ಚುಂಚನಾದ್ರಿ ಸಮುದಾಯ ಭವನದಲ್ಲಿ ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕ್ ಏರ್ಪಡಿಸಿದ್ದ ರಾಜ್ಯಮಟ್ಟದ ಹಣಕಾಸು ಸಾಕ್ಷರತಾ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಪ್ರಮುಖ ಶೈಕ್ಷಣಿಕ ಹಾಗೂ ಆದ್ಯಾತ್ಮಿಕ ಕೇಂದ್ರವೆನಿಸಿರುವ ಆದಿಚುಂಚನಗಿರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ಸಾಕ್ಷರತಾ ಸಪ್ತಾಹವನ್ನು ಉದ್ಘಾಟಿಸಲು ನನಗೆ ತುಂಬಾ ಸಂತೋಷವೆನಿಸುತ್ತದೆ. ಹಣಕಾಸು ಸಾಕ್ಷರತಾ ಕೇಂದ್ರಗಳನ್ನು ಬ್ಯಾಂಕುಗಳು ಸ್ಥಾಪಿಸಿರುವುದು ಹಾಗೂ ಗ್ರಾಮೀಣ ಶಾಖೆಗಳು ಹಣಕಾಸು ಸಾಕ್ಷರತೆ ಹಾಗೂ ಜಾಗೃತಿ ಮೂಡಿಸು ವುದರಲ್ಲಿ ನಿರತವಾಗಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದರು.

‘ಜೂನ್ 5ರಿಂದ 9ರವರೆಗೆ ನಡೆಯುವ ಹಣಕಾಸು ಸಾಕ್ಷರತಾ ಸಪ್ತಾಹದಲ್ಲಿ KYC (ನಿಮ್ಮ ಗ್ರಾಹಕರನ್ನು ತಿಳಿಯಿರಿ), BO (ಬ್ಯಾಂಕಿಂಗ್ ಲೋಕಪಾಲರು), ECD (ಶಿಸ್ತು ಬದ್ಧ ಸಾಲ ನಿರ್ವಹಣೆ), Go Digital (ಕ್ಯಾಷ್ ಲೆಸ್ ವ್ಯವಹಾರ) ಎಂಬ ವಿಷಯಗಳಿಗೆ ಮಹತ್ವ ನೀಡಲಾಗಿದೆ’ ಎಂದು ತಿಳಿಸಿದರು.

ಸಪ್ತಾಹದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, 2020ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು ಕನಸು ಕಂಡಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಚಿಂತನೆಯನ್ನು ಸಾಕಾರ ಗೊಳಿಸಲು ಬ್ಯಾಂಕ್‌ಗಳ ಸಹಕಾರ ಅಗತ್ಯ. ಆರ್‌ಬಿಐ ರೈತಾಪಿ ವರ್ಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಬ್ಯಾಂಕ್‌ಗಳು ಸರಿಯಾದ ವೇಳೆಯಲ್ಲಿ ಸಾಲವನ್ನು ಕೊಡುವಂತಾಗಬೇಕು. ಸಾಲ ಪಡೆದವರು ಅದನ್ನು ಸರಿಯಾದ ವೇಳೆಯಲ್ಲಿ ಹಿಂತಿರುಗಿಸಬೇಕು. ಆಗ ಬ್ಯಾಂಕ್‌ಗಳು ಉಳಿಯುತ್ತವೆ ಮತ್ತು ಗ್ರಾಹಕರು ಉಳಿಯುತ್ತಾರೆ ಎಂದರು.

ಇಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದ್ದು, ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಪರಿಸರ ನಾಶವಾದರೆ ಪ್ರಾಣಿ ಮತ್ತು ಪಕ್ಷಿ ಸಂಕುಲ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳೂ ಕಾರ್ಯನಿರ್ವ ಹಿಸುವಂತಾಗಲಿ ಎಂದರು.

ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಐ.ಗಣಗಿ ಮಾತನಾಡಿ, ‘8–10 ವರ್ಷಗಳ ಹಿಂದೆ ಭಾರತದ ಶೇ 73ರಷ್ಟು ಮಂದಿ ಬ್ಯಾಂಕಿಂಗ್ ಸೇವೆಯಿಂದ ಹೊರಗಿದ್ದರು. ಆದರೆ, ಇಂದು ಆ ಸ್ಥಿತಿ ಇಲ್ಲ. ನಿಮ್ಮ ಜೇಬಿನಲ್ಲಿ ನೀವು ಬ್ಯಾಂಕ್‌ ಅನ್ನು ಇಟ್ಟುಕೊಳ್ಳಬಹುದು. ಆ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಅದರ ಬಳಕೆ ಇನ್ನೂ ಶರವೇಗದಲ್ಲಿ ಸಾಗಬೇಕಿದೆ’ ಎಂದು ಹೇಳಿದರು.

‘ಸ್ವಸಹಾಯ ಸಂಘಗಳು ಹಣಕಾಸು ಸೇರ್ಪಡೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ದೇಶದಲ್ಲಿ 80 ಲಕ್ಷ ಸ್ವಸಹಾಯ ಸಂಘಗಳಿವೆ. ಇದರಲ್ಲಿ ಶೇ 90ರಷ್ಟು ಮಹಿಳೆಯರ ಪಾತ್ರವಿದೆ. ಇದರಿಂದ 10 ಕೋಟಿ ಕುಟುಂಬಗಳಿಗೆ ಸಹಾಯ ವಾಗಿದೆ. ಇತ್ತೀಚಿನ ದಿನಗಳಲ್ಲಿ ಶೇ 96ರಷ್ಟು ಸಾಲ ಮರುಪಾವತಿ ಯಾಗುತ್ತಿದೆ. ಅದು ಪೂರ್ಣಪ್ರಮಾಣ ದಲ್ಲಿ ಆಗಬೇಕು’ ಎಂದರು.

ಕರ್ನಾಟಕ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರಭಟ್ ಮಾತನಾಡಿ, ಹಣಕಾಸಿನ ಜ್ಞಾನ ಇಲ್ಲದಿದ್ದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಎಲ್ಲರಿಗೂ ಹಣಕಾಸಿನ ಜ್ಞಾನ ಇರಬೇಕು ಎನ್ನುವ ದೃಷ್ಟಿಯಿಂದ ಆರ್‌ಬಿಐ ಇಂದು ರಾಷ್ಟ್ರವ್ಯಾಪಿ ಹಣಕಾಸು ಸಾಕ್ಷರತಾ ಸಪ್ತಾಹ ಆಚರಿಸುತ್ತಿದೆ ಎಂದರು.

ವಿಜಯ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೆಶಕ ವೈ.ನಾಗೇಶ್ವರರಾವ್ ಹಾಗೂ ಎಸ್ಎಲ್‌ಬಿಸಿ ಕರ್ನಾಟಕದ ಸಂಚಾಲಕ ಎಂ.ಮೋಹನ್ ರೆಡ್ಡಿ ಮಾತನಾಡಿದರು.

ಶ್ರೀನಿವಾಸ ಆಸ್ಥಾನ ತಂಡ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಯಕ್ಷಗಾನದ ಮೂಲಕ ಪ್ರಾತ್ಯಕ್ಷಿಕೆ ನೀಡಿತು.  ಸಂಭಾಗಣದ ಹೊರಭಾಗದಲ್ಲಿ ವಿವಿಧ ಬ್ಯಾಂಕ್‌ಗಳ ಸೌಲಭ್ಯಗಳ ಬಗ್ಗೆ, ಮೊಬೈಲ್ ಎಟಿಎಂ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry