ಸ್ಥಳೀಯ ಭತ್ತಕ್ಕೆ ಕುಸಿದ ಬೇಡಿಕೆ

7

ಸ್ಥಳೀಯ ಭತ್ತಕ್ಕೆ ಕುಸಿದ ಬೇಡಿಕೆ

Published:
Updated:
ಸ್ಥಳೀಯ ಭತ್ತಕ್ಕೆ ಕುಸಿದ ಬೇಡಿಕೆ

ಮಂಡ್ಯ: ಮಾರುಕಟ್ಟೆಯಲ್ಲಿ ಸಣ್ಣ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳ ಗಾತ್ರ ದಪ್ಪವಾಗಿರುವ ಕಾರಣ ಬೇಡಿಕೆ ಕಡಿಮೆಯಾಗಿದ್ದು ಬೆಲೆಯೂ ಕುಸಿತ ಕಂಡಿದೆ.

ಜಿಲ್ಲೆಯ ರೈತರು ವೈಜ್ಞಾನಿಕ ಭತ್ತದ ತಳಿ ಬಿತ್ತನೆ ಮಾಡುತ್ತಿಲ್ಲ. ಬಹಳ ಹಿಂದಿನಿಂದಲೂ ಹಳೆಯ ತಳಿಗಳನ್ನೇ ಬೆಳೆಯುತ್ತಿದ್ದಾರೆ. ಈ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಜೊತೆಗೆ ಈ ಹಳೆಯ ತಳಿಗಳಲ್ಲಿ ಎಕರೆವಾರು ಇಳುವರಿಯೂ ಕುಗ್ಗಿದೆ. ಹೀಗಾಗಿ ಜಿಲ್ಲೆಯ ಹೆಚ್ಚಿನ ರೈತರು ಭತ್ತಬೆಳೆದು ನಷ್ಟವನ್ನೇ ಅನುಭವಿಸುತ್ತಿದ್ದಾರೆ.

ಐ.ಆರ್‌–8, ಜಯ ಭತ್ತ, ಸೋನಾ ತನು, 1001 ಭತ್ತದ ತಳಿಗಳನ್ನು ಮಾತ್ರ ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ. ಈ ಭತ್ತ ಗಾತ್ರದಲ್ಲಿ ದೊಡ್ಡದಾಗಿದ್ದು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಗ್ರಾಹಕರು ನಿರಾಕರಿಸುತ್ತಿದ್ದಾರೆ. ಹೀಗಾಗಿ ಬೇಡಿಕೆ ಹಾಗೂ ಬೆಲೆಯೂ ಕುಸಿದಿದೆ. ಈ ವಾರ ಮಾರುಕಟ್ಟೆಯಲ್ಲಿ ಐ.ಆರ್‌–8 ತಳಿಯ ಕ್ವಿಂಟಲ್‌ ಭತ್ತಕ್ಕೆ ₹1,750, ಜಯ ಭತ್ತಕ್ಕೆ ₹ 2,000 ಬೆಲೆ ಇದೆ.

ಗಂಗಾವತಿ ಭತ್ತಕ್ಕೆ ಬೇಡಿಕೆ: ನಗರದ ಮಾರುಕಟ್ಟೆಯಲ್ಲಿ ಗಂಗಾವತಿ ಹಾಗೂ ಸಿಂದನೂರು ಭಾಗದಲ್ಲಿ ಬೆಳೆಯುವ ಭತ್ತಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಸಣ್ಣ ಗ್ರಾಹಕರು ಕೂಡ ಇದೇ ಸಣ್ಣ ಅಕ್ಕಿಗೆ ಆಕರ್ಷಿತರಾಗಿದ್ದಾರೆ. ಗಂಗಾವತಿ ಭಾಗದಲ್ಲಿ ರೈತರು ಸುಧಾರಿತ ಭತ್ತದ ತಳಿಯನ್ನು ಬಿತ್ತುವುದರಿಂದ ಆ

ಭಾಗದ ರೈತರು ಹೆಚ್ಚು ಲಾಭ ಗಳಿಸುತ್ತಿದ್ದಾರೆ.

ಗಂಗಾವತಿಯಿಂದ ಬರುವ ಬಿ.ಟಿ ಸೋನಾ ತಳಿ ಕ್ವಿಂಟಲ್‌ ಭತ್ತಕ್ಕೆ ₹ 3,200 ಬೆಲೆ ಇದೆ. ಅರಳಿ ಸೋನಾ ತಳಿ ಕ್ವಿಂಟಲ್‌ ಭತ್ತಕ್ಕೆ ₹ 3000 ಇದೆ. ಈ ಬೆಲೆಯನ್ನು ಸ್ಥಳೀಯವಾಗಿ ಬೆಳೆಯುವ ಭತ್ತದ ಬೆಲೆಗೆ ಹೋಲಿಸಿದರೆ ಸಾವಿರಕ್ಕೂ ಹೆಚ್ಚು ಹಣದ ವ್ಯತ್ಯಾಸವಿದೆ.

ಆಂಧ್ರ ‘ಬುಲೆಟ್‌’ ತಳಿಗೆ ಬೇಡಿಕೆ: ಜಿಲ್ಲೆಯ ಗ್ರಾಹಕರು ಆಂಧ್ರಪ್ರದೇಶದಿಂದ ಬರುವ ‘ಬುಲೆಟ್‌’ ಭತ್ತಕ್ಕೆ ಮಾರುಹೋಗಿದ್ದಾರೆ. ಅತಿ ಸಣ್ಣ ಹಾಗೂ ಉದ್ದವಾಗಿರುವ ಈ ಭತ್ತದ ಬೆಲೆಯೂ ಜಾಸ್ತಿ. ಬೆಲೆ ಎಷ್ಟಿದ್ದರೂ ಸರಿ, ಒಮ್ಮೆ ರುಚಿ ನೋಡಿದವರು ಮತ್ತೆ ಮತ್ತೆ ಬುಲೆಟ್‌ ಅಕ್ಕಿಯನ್ನೇ ಕೊಳ್ಳುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಬುಲೆಟ್‌ ತಳಿ ಕೆ.ಜಿ.ಅಕ್ಕಿಗೆ ₹ 65 ಬೆಲೆ ಇದೆ. ಕ್ವಿಂಟಲ್‌ಗೆ ₹ 4,000 ಬೆಲೆ ಇದೆ.

ಭತ್ತದ ಸಂಗ್ರಹ ಇಲ್ಲ: ಜಿಲ್ಲೆಯ ಬಹುತೇಕ ರೈತರು ಬೆಳೆದ ಭತ್ತವನ್ನು ಕಣದಲ್ಲೇ ಮಾರಾಟ ಮಾಡುತ್ತಿದ್ದಾರೆ. ಹೊಸ ಭತ್ತಕ್ಕೆ ಸಹಜವಾಗಿ ಬೆಲೆ ಕಡಿಮೆ ಇರುತ್ತದೆ. ಕುಯ್ಲು ಮಾಡುವಾಗ ಪೂರೈಕೆಯೂ ಹೆಚ್ಚಾಗಿರುವುದರಿಂದ ಬೆಲೆ  ಕುಸಿಯುತ್ತದೆ. ಭತ್ತವನ್ನು ಸಂಗ್ರಹ ಮಾಡಿ ಇಟ್ಟುಕೊಂಡು ಬೆಲೆ ಬಂದಾಗ ಮಾರಾಟ ಮಾಡಿದರೆ ಲಾಭ ಗಳಿಸಬಹುದು. ಆದರೆ ರೈತರು ಭತ್ತ ಸಂಗ್ರಹ ಮಾಡುತ್ತಿಲ್ಲ.

‘ರೈತ ಗೋದಾಮು ಕಟ್ಟಿಕೊಂಡು ಭತ್ತ ಸಂಗ್ರಹ ಮಾಡಿದರೆ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ರೈತ ಸಂಗ್ರಹ ಮಾಡಿರುವ ಭತ್ತದ ಪ್ರಮಾಣಕ್ಕೆ ಶೇ 70ರಷ್ಟು ಸಾಲ ಪಡೆಯಬಹುದು. ಆದರೆ ರೈತರು ಕಣದಲ್ಲೇ ಮಾರಿಬಿಡುತ್ತಾರೆ’ ಎಂದು ವ್ಯಾಪಾರಿ ಸೋಮಶೇಖರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry