ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆ–ದಾಳಿಂಬೆ ಗಿಡ ಕಿತ್ತ ಬೆಳೆಗಾರ!

Last Updated 6 ಜೂನ್ 2017, 6:24 IST
ಅಕ್ಷರ ಗಾತ್ರ

ವಿಜಯಪುರ: ‘ನಾಲ್ಕ್‌ ವರ್ಸದಿಂದ ತ್ರಾಸ್‌ ತಪ್ಪದು. ಮೂವತ್ತ ವರ್ಸ ಕುಟುಂಬದ ಕೈ ಹಿಡಿದಿದ್ದ ನಿಂಬೆ ಪಡ ಅರ್ಧ ಒಣಗಿದೆ. ಇನ್ನರ್ಧ ಉಳಿಸಿಕೊಳ್ಳಲು ನಿತ್ಯವೂ ಹೆಣಗಾಡುತ್ತಿರುವೆ. ಜೂನ್‌ ಸಾಥ್‌ ಸಮೀಪಿಸಿದರೂ ವರುಣ ಕೃಪೆ ತೋರಿಲ್ಲ.

ಇದ್ದ ಎರಡ್‌ ಬೋರಲ್ಲಿ ಒಂದು ಬತ್ತಿದೆ. ಇನ್ನೊಂದು 500 ಅಡಿ ಆಳವಿದ್ದರೂ ಆಗೊಮ್ಮೆ ಈಗೊಮ್ಮೆ ನೀರು ಬರುತ್ತಿದೆ. ಇದೇ ನೀರಲ್ಲಿ ಎರಡ್‌ ಎಕರೆ ನಿಂಬೆ ಪಡ ಉಳಿಸಿಕೊಳ್ಳಲು ಶ್ರಮಿಸುತ್ತಿರುವೆ. ಸುತ್ತ ಎಲ್ಲೂ ಟ್ಯಾಂಕರ್‌ನಲ್ಲೂ ನೀರು ಸಿಗದಾಗಿದೆ...’

ವಿಜಯಪುರ ತಾಲ್ಲೂಕು ಜುಮನಾಳ ಗ್ರಾಮದ ನಿಂಬೆ–ದಾಳಿಂಬೆ ಬೆಳೆಗಾರ ನಾನಾಗೌಡ ಬಿರಾದಾರ ತೋಟಗಾರಿಕೆ ಬೆಳೆಯ ಜೀವ ಉಳಿಸಿಕೊಳ್ಳಲು ನಿತ್ಯ ನಡೆಸುತ್ತಿರುವ ಹೋರಾಟದ ಬದುಕನ್ನು ಸೋಮವಾರ ‘ಪ್ರಜಾವಾಣಿ’ ಬಳಿ ತೆರೆದಿಟ್ಟರು.

‘ಅಪ್ಪಾರ ಕಾಲದಾಗ ನೆಟ್ಟಿದ್ದ ಲಿಂಬೆ ಗಿಡಗಳಿವು. ಆರಂಭದಿಂದ ಚಲೋ ಆದಾಯ ದೊರಕುತ್ತಿತ್ತು. ಎಲ್ಲ ಖರ್ಚು ಕಳೆದು ವರ್ಸಕ್ಕೆ ₹ 1 ಲಕ್ಷ ಆದಾಯ ಕೈ ಸೇರುತ್ತಿತ್ತು. ಬದುಕು ಬಂಗಾರದಂಗ ಸಾಗಕ್ಹತ್ತಿತ್ತು. ನಾಲ್ಕ್‌ ವರ್ಸದಿಂದ ಆದಾಯ ಕಡಿಮೆಯಾಗಕತ್ತಿತು’ ಎಂದರು.

‘ಇದ್ದ ಎರಡ್‌ ಬೋರಲ್ಲಿ ಒಂದ್ ನಿಂತ್‌ ಹೋಯ್ತು. ಮಳೆ ಬಾರದೆ ಬರ ಬೆನ್ನತ್ತಿ, ಬದುಕನ್ನೇ ಬೀದಿಗೆ ದೂಡಿತು. ಅನಿವಾರ್ಯತೆಯಿಂದ ಬಾಗಲಕೋಟೆ ರಸ್ತೆ ಬದಿ ಕಿರಾಣಿ ಅಂಗಡಿ, ಪಂಕ್ಚರ್‌ ಶಾಪ್‌ ಮಾಡಿಕೊಂಡು ದಿನ ದೂಡುತ್ತಿ ರುವೆ’ ಎಂದು ನಾನಾಗೌಡ ಹೇಳಿದರು.

‘ಇರೋ ನೀರಲ್ಲೇ ಅರ್ಧ ಪಡ ಉಳಿಸಿಕೊಳ್ಳೋ ಸಾಹಸ ಮಾಡ್ತಿರುವೆ. ಒಣಗಿದ ಪಡವನ್ನು ₹ 30,000 ಖರ್ಚು ಮಾಡಿ ತೆಗೆಸಿರುವೆ. ಮಳೆ ಬಂದರೆ ಗಳೆ ಹೊಡೆದು ತೊಗರಿ ಹಾಕುವ ನಿರ್ಧಾರ ಮಾಡಿದ್ದೇನೆ’ ಎಂದು ತಿಳಿಸಿದರು.

ದಾಳಿಂಬೆಯೂ ನಾಶ:
‘ನೆರೆಯವರ 3.19 ಎಕರೆ ಹೊಲವನ್ನು ಗುತ್ತಿಗೆ ಪಡೆದು 1000ಕ್ಕೂ ಅಧಿಕ ದಾಳಿಂಬೆ ಸಸಿ ನೆಟ್ಟಿದ್ದೆ. ಆರು ವರ್ಷದ ಗಿಡಗಳಿವು. ಇದುವರೆಗೂ ಒಮ್ಮೆಯೂ ಫಲ ತೆಗೆಯಲು ಆಗಿಲ್ಲ. ಪ್ರತಿ ಬಾರಿಯೂ ಒಂದಲ್ಲ ಒಂದು ಕಾರಣದಿಂದ ಲುಕ್ಸಾನು ತಪ್ಪದಾಗಿದೆ.

ಬೇಸತ್ತು ಈ ಬಾರಿ ಜೆಸಿಬಿಯಿಂದ ಗಿಡ ಕಿತ್ತಿಸಿರುವೆ. ಇದೇ ಹೊಲವನ್ನು ಮತ್ತೆ ಗುತ್ತಿಗೆ ಪಡೆಯುವೆ. ಮಳೆ ಬರುವುದೊರಳಗಾಗಿ ಗಿಡದ ಬುಡಗಳನ್ನು ಹೊಲದ ಸುತ್ತಲೂ ಹಾಕುವೆ. ನಂತರ ಗಳೆ ಹೊಡೆದು ಈ ಹೊಲದಲ್ಲೂ ತೊಗರಿ ಬಿತ್ತುವ ಆಲೋಚನೆಯಲ್ಲಿದ್ದೇನೆ’ ಎಂದು ನಾನಾಗೌಡ ಹೇಳಿದರು.

* * 

ಕೊಳವೆಬಾವಿ ಬತ್ತಿದವು. ಮತ್ತೆ ಕೊರೆಸಿದರೂ ನೀರು ಸಿಗುವ ಭರವಸೆಯಿಲ್ಲ. ಬದುಕಿನ ಆಸರೆಗಾಗಿ ರಸ್ತೆ ಬದಿ ಕಿರಾಣಿ ಅಂಗಡಿ, ಪಂಕ್ಚರ್‌ ಶಾಪ್‌ ಹಾಕಿಕೊಂಡಿರುವೆ
ನಾನಾಗೌಡ ಬಿರಾದಾರ
ಜುಮನಾಳ ಗ್ರಾಮದ ಬೆಳೆಗಾರ

* * 

ಕೊಳವೆಬಾವಿ ಬತ್ತಿದ್ದರಿಂದ ನೀರಿನ ಇಲ್ಲದೆ ಲಿಂಬೆ, ದಾಳಿಂಬೆ, ಬಾಳೆ, ದ್ರಾಕ್ಷಿ ಪಡ ಒಣಗುತ್ತಿರುವ ಮಾಹಿತಿ ಇದೆ. ಮಳೆ ಬರದಿದ್ದರೆ ಇದರ ಪ್ರಮಾಣ ಹೆಚ್ಚಲಿದೆ
ಎಸ್‌.ಆರ್‌.ಕುಮಾರಸ್ವಾಮಿ
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT