ಕೃಷಿ ಭೂಮಿ ಉಳಿದರೆ ಸಮತೋಲನ

7

ಕೃಷಿ ಭೂಮಿ ಉಳಿದರೆ ಸಮತೋಲನ

Published:
Updated:
ಕೃಷಿ ಭೂಮಿ ಉಳಿದರೆ ಸಮತೋಲನ

ಮಡಿಕೇರಿ: ‘ಪರಿಸರ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಆಮ್ಲಜನಕವನ್ನು ಬಿಸ್ಲೇರಿ ನೀರಿನಂತೆ ಖರೀದ ಮಾಡುವ ಪರಿಸ್ಥಿತಿ ಬರಬಹುದು’ ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಎಚ್ಚರಿಸಿದರು.

ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಸೋಮವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

‘ನಾಗರಿಕತೆಯ ಅಭಿವೃದ್ಧಿ ಜೊತೆಗೆ ಪರಿಸರ ಸಮತೋಲನ ಕಾಪಾಡುವುದು ಅತ್ಯಗತ್ಯ. ಜನಸಂಖ್ಯೆಗೆ ತಕ್ಕಂತೆ ಮರ ಗಿಡಗಳನ್ನು ಸಂರಕ್ಷಣೆ ಮಾಡುವುದು ಅತ್ಯವಶ್ಯಕ’ ಎಂದು ಪ್ರತಿಪಾದಿಸಿದರು.

‘ಪರಿಸರ ಸಮತೋಲನ ಕಾಪಾಡುವುದರಿಂದ ಕೃಷಿ ಭೂಮಿ ಉಳಿಯಲಿದೆ. ಕೃಷಿ ಭೂಮಿ ಉಳಿದಲ್ಲಿ ಮರಗಿಡಗಳು ಹೆಚ್ಚಾಗಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಜತೆಗೆ, ಆಹಾರ ಬೆಳೆ ಕೊರತೆಯೂ ಆಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಿದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ‘ಮರಗಿಡಗಳು ಇಲ್ಲದಿದ್ದರೆ ಬದುಕು ಅಸಾಧ್ಯ. ನದಿ, ಜಲ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯವಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಚಾರುಲತಾ ಸೋಮಲ್, ‘ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ದಿನವೂ ಪರಿಸರ ಬಗ್ಗೆ ಜಾಗೃತಿ ಇರಬೇಕು’ ಎಂದು ಹೇಳಿದರು.

‘ಜನರನ್ನು ಪ್ರಕೃತಿಯೊಂದಿಗೆ ಸಂಪರ್ಕಿಸೋಣ’ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿದೆ ಎಂದು ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಹೇಳಿದರು. 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್ ವಾಸ್, ಜಿಲ್ಲಾ ಸ್ಕೌಟ್ಸ್ ಪ್ರಧಾನ ಆಯುಕ್ತ ಕೆ.ಬಿ. ಕಾಳಪ್ಪ ಹಾಜರಿದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಟಿ.ಜಿ.ಪ್ರೇಮ್ ಕುಮಾರ್ ಅವರು ವಂದಿಸಿದರು.

ಪರಿಸರ ಜಾಥಾಗೆ ಚಾಲನೆ: ನಗರದ ರಾಜಾಸೀಟ್‌ ಉದ್ಯಾನದ ಪುಟಾಣಿ ರೈಲು ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾಸ್ಟರ್ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಪರಿಸರ ಘೋಷಣೆಯ ಪ್ಲೇಕಾರ್ಡ್‌ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ...’, ‘ಮನೆಗೊಂದು ಮರ ಊರಿಗೊಂದು ವನ...’, ‘ಕಾಡೇ ರಾಷ್ಟ್ರದ ಸಂಪತ್ತು...’, ‘ಕುಡಿಯಿರಿ ಶುದ್ಧಜಲ, ಉಳಿಸಿರಿ ಅಂತರ್ಜಲ..’, ‘ಹಸಿರೇ ಉಸಿರು...’ ‘ಜೀವನದಿ ಕಾವೇರಿ ಸಂರಕ್ಷಣೆ ನಮ್ಮೆಲ್ಲರ ಹೊಣೆ...’ ಎನ್ನುವ ಘೋಷ ವಾಕ್ಯಗಳು ಕೇಳಿಬಂದವು.

**

ಕಾವೇರಿ ನದಿ ಸೇರಿದಂತೆ ನದಿ, ತೊರೆ, ಹಳ್ಳ–ಕೊಳ್ಳಗಳು ಕಲುಷಿತ ಆಗದಂತೆ ತಡೆಯುವುದು ಎಲ್ಲರ ಜವಾಬ್ದಾರಿ. ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು

-ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry