ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮಾರಾಟಕ್ಕೆ ನಿರ್ಬಂಧ: ಧರಣಿ

Last Updated 6 ಜೂನ್ 2017, 6:28 IST
ಅಕ್ಷರ ಗಾತ್ರ

ಮೈಸೂರು: ಜಾನುವಾರು ಮಾರಾಟಕ್ಕೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶವನ್ನು ವಿರೋಧಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದಿಲ್ಲೊಂದು ಜನವಿರೋಧಿ ನೀತಿಯನ್ನು ಜಾರಿಗೆ ತರುತ್ತಿದೆ. ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಬಿ.ಆರ್‌.ಅಂಬೇಡ್ಕರ್ ಅವರು ಸರ್ವರಿಗೂ ನೀಡಿದ ಸಂವಿಧಾನಬದ್ಧ ಹಕ್ಕುಗಳನ್ನು ದಮನ ಮಾಡುವ ಪ್ರಯತ್ನ ಸರ್ಕಾರದಿಂದಲೇ ನಡೆಯುತ್ತಿದೆ. ಬಡ್ತಿ ಮೀಸಲಾತಿ ರದ್ದುಗೊಳಿಸಿ ದಲಿತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಗೋಮಾಂಸಕ್ಕಾಗಿ ಜಾನುವಾರು ಮಾರಾಟ ನಿಷೇಧ ಮಾಡಿದ್ದರಿಂದ ದಲಿತರು ಮತ್ತು ಅಲ್ಪಸಂಖ್ಯಾತರ ಆಹಾರ ಕ್ರಮದ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಶತಮಾನಗಳಿಂದ ಬೇರೂರಿರುವ ಅಸ್ಪೃಶ್ಯತೆ, ಅಸಮಾನತೆ ಹಾಗೂ ಜಾತಿಯತೆಯ ಕುರಿತು ಬಿಜೆಪಿ ಯಾವತ್ತೂ ಧ್ವನಿ ಎತ್ತಿಲ್ಲ. ಬದಲಿಗೆ ಭಾವನಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡು ರಾಜಕೀಯ ಮಾಡುತ್ತಿದೆ. ದಲಿತರ ಜೀವನ ಕ್ರಮವನ್ನು ಅಪಹಾಸ್ಯ ಮಾಡುವ ಬಿಜೆಪಿ ನಾಯಕರು ಪರಿಶಿಷ್ಟರ ಮನೆಯಲ್ಲಿ ತಿಂಡಿ ತಿನ್ನುವ, ಊಟ ಮಾಡುವ ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ಗೋವುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಹಿಂಪಡೆಯಬೇಕು. ಈ ಆದೇಶದ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT