ರೈತರಿಗೆ ಕಹಿಯಾದ ಸಿಹಿಕುಂಬಳ

7

ರೈತರಿಗೆ ಕಹಿಯಾದ ಸಿಹಿಕುಂಬಳ

Published:
Updated:
ರೈತರಿಗೆ ಕಹಿಯಾದ ಸಿಹಿಕುಂಬಳ

ಮೈಸೂರು: ಈ ಬಾರಿ ಸಿಹಿ ಕುಂಬಳಕಾಯಿ ಧಾರಣೆ ಭಾರಿ ಕುಸಿತ ಕಂಡಿದೆ. ಬೆಳೆಗಾರರಿಗೆ ಯಾವುದೇ ಲಾಭವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಎಪಿಎಂಸಿ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ ಇದರ ಸಗಟು ಧಾರಣೆ ಕೆ.ಜಿಗೆ ₹ 3ಕ್ಕೆ ಮಾರಾಟವಾಗಿ ರೈತರಲ್ಲಿ ನಿರಾಸೆ ಮೂಡಿಸಿತು. ಕಳೆದ ವರ್ಷ ಇದೇ ತಿಂಗಳಿನಲ್ಲಿ ಕೆ.ಜಿಗೆ ₹ 10ಕ್ಕೆ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದರ ಆವಕ ಮಾರುಕಟ್ಟೆಗೆ ಹೆಚ್ಚಾಗಿದೆ. ಇದರಿಂದ ಧಾರಣೆ ಕಡಿಮೆಯಾಗಿದೆ ಎಂದು ಎಂ.ಜಿ.ರಸ್ತೆ ಮಾರುಕಟ್ಟೆಗೆ ಬಂದಿದ್ದ ದೂರ ಗ್ರಾಮದ ರೈತ ನಂಜಪ್ಪ ಹೇಳಿದರು.

ಏಕೆ ಹೀಗೆ?: ಜಿಲ್ಲೆಯಲ್ಲಿ ಕಳೆದ ವರ್ಷವೆಲ್ಲ ಮಳೆಯಾಗದೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಯಿತು. ಇದರಿಂದ ಬೇರೆ ತರಕಾರಿ ಬೆಳೆಗಳನ್ನು ಬೆಳೆಯಲಾಗದ ರೈತರು ಕಡಿಮೆ ನೀರು ಬಯಸುವ ಕುಂಬಳವನ್ನು ಹೆಚ್ಚಾಗಿ ಬೆಳೆದರು. ಸಹಜವಾಗಿಯೇ ಹೆಚ್ಚಿನ ಇಳುವರಿ ಬಂದಿದೆ. ನಿತ್ಯ ನೂರಕ್ಕೂ ಹೆಚ್ಚು ಕ್ವಿಂಟಲ್‌ ಸಿಹಿಕುಂಬಳ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಇದಕ್ಕೆ ತಕ್ಕಂತಹ ಬೇಡಿಕೆ ಸೃಷ್ಟಿಯಾಗುತ್ತಿಲ್ಲ. ಇದರಿಂದಾಗಿ ದರ ಕಡಿಮೆಯಾಗಿದೆ.

ಇಳಿಕೆಯತ್ತ ಬೀನ್ಸ್: ಸತತ ದರ ಏರಿಕೆಯಿಂದ ಗ್ರಾಹಕರಿಗೆ ಬಿಸಿತುಪ್ಪವಾಗಿದ್ದ ಬೀನ್ಸ್ ದರ ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಸಗಟು ಧಾರಣೆ ಕೆ.ಜಿಗೆ ₹ 33ರಿಂದ 35ರವರೆಗೆ ಸದ್ಯ ಮಾರುಕಟ್ಟೆಯಲ್ಲಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಧಾರಣೆ ಹೆಚ್ಚೇನೂ ಇಳಿದಿಲ್ಲ. ಕೆ.ಜಿಗೆ ₹ 70ರಿಂದ ₹ 80ರವರೆಗೂ ಮಾರಾಟವಾಗುತ್ತಿದೆ. ಇದಕ್ಕೆ ಸಮಾನಾಂತರವಾಗಿ ಕ್ಯಾರೆಟ್ ದರದಲ್ಲಿ ಏರಿಕೆಯಾಗುತ್ತಿದೆ. ಕೆ.ಜಿಗೆ ₹ 50–55ರವರೆಗೂ ಇದರ ದರ ಇದೆ. ಉಳಿದಂತೆ, ಬಹುತೇಕ ತರಕಾರಿಗಳ ಬೆಲೆಗಳು ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕಡಿಮೆಯಾಗಿವೆ.

ಫಾರಂಕೋಳಿ ದರ ಹೆಚ್ಚಳ: ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಹಾಗೂ ಬ್ರೀಡರ್ಸ್ ಅಸೋಸಿಯೇಷನ್‌ನ ಫಾರಂ ಕೋಳಿ ಸಗಟು ದರ ಕೆ.ಜಿಗೆ ₹ 118 ಇದ್ದದ್ದು ₹ 114ಕ್ಕೆ ಕಡಿಮೆಯಾಗಿದ್ದರೆ, ಕರ್ಲ್ ಬರ್ಡ್ ದರ ಕೆ.ಜಿಗೆ ₹ 105ರಲ್ಲೇ ಸ್ಥಿರವಾಗಿದೆ.

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ಒಂದು ಮೊಟ್ಟೆಗೆ ₹ 3.50 ಇದ್ದದ್ದು ಇದೀಗ ₹ 3.70ಕ್ಕೆ ಹೆಚ್ಚಾಗಿದೆ.

ಜಾಜಿ ಹೂವಿನ ಘಮಲು

ದೇವರಾಜ ಮಾರುಕಟ್ಟೆಗೆ ಈ ವರ್ಷ ಇದೇ ಮೊದಲ ಬಾರಿಗೆ ಜಾಜಿ ಮಲ್ಲಿಗೆ ಅಡಿ ಇಟ್ಟಿದೆ. ತೀರಾ ಕಡಿಮೆ ಪ್ರಮಾಣದಲ್ಲಿ ಆವಕವಾಗಿದ್ದ ಹೂ ಕೆಲ ಹೊತ್ತಿನಲ್ಲೇ ಮಾರಾಟವಾಗಿದೆ. ಕೆ.ಜಿಗೆ ಇದರ ಧಾರಣೆ ₹ 1,000 ತಲುಪಿತ್ತು ಎಂದು ಹೂವಿನ ವ್ಯಾಪಾರಿ ರಮೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry