ಸ್ವಚ್ಛತೆಗಾಗಿ ಜಾಗೃತಿ ಮೂಡಿಸಿದ ಶ್ರೀನಾಥ್

7

ಸ್ವಚ್ಛತೆಗಾಗಿ ಜಾಗೃತಿ ಮೂಡಿಸಿದ ಶ್ರೀನಾಥ್

Published:
Updated:
ಸ್ವಚ್ಛತೆಗಾಗಿ ಜಾಗೃತಿ ಮೂಡಿಸಿದ ಶ್ರೀನಾಥ್

ಮೈಸೂರು: ಸ್ವಚ್ಛತೆ ಮತ್ತು ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸುವ ಬಗ್ಗೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವುದಾಗಿ ಸ್ವಚ್ಛ ಭಾರತ ಅಭಿಯಾನದ ರಾಯಭಾರಿ, ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಇಲ್ಲಿ ಹೇಳಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ‘ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸುವ ಕುರಿತು ಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸುವ ಕಾರ್ಯ ಮನೆಗಳಲ್ಲಿ ನಡೆಯಬೇಕು. ಪ್ರತಿ ಮನೆಯಲ್ಲೂ ಹಸಿ ಕಸವನ್ನು ಹಸಿರು ಡಬ್ಬದಲ್ಲೂ ಒಣಕಸವನ್ನು ನೀಲಿ ಡಬ್ಬದಲ್ಲೂ ಹಾಕಬೇಕು. ಎಲ್ಲರೂ ಈ ಡಬ್ಬಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.

‘ಸ್ವಚ್ಛ ಭಾರತ ಅಭಿಯಾನ ಒಳ್ಳೆಯ ಧೋರಣೆ. ಮನೆಗಳನ್ನು ಸ್ವಚ್ಛ ಮಾಡುವಂತೆ ಪರಿಸರ ಸ್ವಚ್ಛ ಮಾಡುವ ಕೆಲಸವೂ ಆಗಬೇಕು. ಈ ಕೆಲಸ ಪ್ರಜ್ಞಾಪೂರ್ವಕವಾಗಿ ನಡೆಯಬೇಕು. ಅಲ್ಲಲ್ಲಿ ಕೊಳಚೆ ಇದೆ ಎಂದು ಹೇಳದೆ ನಾವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರೆ ನಗರವನ್ನು ಸ್ವಚ್ಛವಾಗಿ ಇಡಬಹುದು. ಸ್ವಚ್ಛತೆಯಲ್ಲಿ ನಮ್ಮ ಶ್ರಮವನ್ನು ಗುರುತಿಸಿ ಸ್ಥಾನ ನೀಡುತ್ತಾರೆಯೇ ಹೊರತು ಸ್ಥಾನಕ್ಕಾಗಿ ನಾವು ಕೆಲಸ ಮಾಡಬಾರದು. ಸ್ವಚ್ಛತೆಯ ಕಾರ್ಯ ಜೀವನಪೂರ್ತಿ ನಡೆಯಬೇಕು’ ಎಂದು ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸುವ ಕುರಿತ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಜಾಗೃತಿಯ ಕರಪತ್ರ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಡಿ.ರಂದೀಪ್‌, ಮೇಯರ್‌ ಎಂ.ಜೆ. ರವಿಕುಮಾರ್‌, ಪಾಲಿಕೆ ಆಯುಕ್ತ ಜಿ.ಜಗದೀಶ್‌, ಪಾಲಿಕೆ ಸದಸ್ಯ ಮಲ್ಲೇಶ್‌ ಇದ್ದರು.

ನಟರಾಜ ಪಿಯು ಕಾಲೇಜು, ನರ್ಸಿಂಗ್‌ ಕಾಲೇಜು, ಕೆ.ಆರ್‌.ಆಸ್ಪತ್ರೆಯ ನರ್ಸಿಂಗ್‌ ವಿದ್ಯಾರ್ಥಿಗಳು, ಜೆಎಸ್ಎಸ್‌ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು, ಸ್ವಚ್ಛ ಬೃಂದಾವನ ಗ್ರೂಪ್‌ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದರು.

ಕೆ.ಆರ್‌.ವೃತ್ತದ ಮೂಲಕ ಸಯ್ಯಾಜಿ ರಾವ್‌ ರಸ್ತೆಯಲ್ಲಿ ಸಾಗಿದ ಜಾಥಾ ಕೆ.ಆರ್‌.ಆಸ್ಪತ್ರೆ ವೃತ್ತದವರೆಗೆ ಸಾಗಿತು.

ಬಿಲ್ಡರ್‌ ಸಂಸ್ಥೆಯಿಂದ ಪರಿಸರ ಸಂರಕ್ಷಣೆ ಮಾಸ

ಮೈಸೂರು: ಪರಿಸರ ದಿನಾಚರಣೆ ಅಂಗವಾಗಿ ಬಿಲ್ಡರ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ವತಿಯಿಂದ ಇಡೀ ತಿಂಗಳು ಪರಿಸರ ಸಂರಕ್ಷಣೆ ಮಾಸವನ್ನಾಗಿ ಆಚರಿಸಲಾಗುತ್ತಿದೆ ಎಂದು ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಮಹದೇವಸ್ವಾಮಿ ತಿಳಿಸಿದರು.

‘ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಮೈಸೂರು ಘಟಕದ ಜೊತೆಯಲ್ಲಿ ವಿಶ್ವ ಪರಿಸರ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಲವಾರು ಕಾರ್ಯಕ್ರಮ ಆಯೋಜಿಸಲಾಗುವುದು. ಉತ್ತಮ ಪರಿಸರ ಹಾಗೂ ಮನುಕುಲದ ಒಳಿತಿಗಾಗಿ ಎಂಬ ಧ್ಯೇಯದೊಂದಿಗೆ ಜೂನ್‌ 6ರಂದು ಬಲ್ಲಾಳ್ ವೃತ್ತದ ಬಳಿ ಇರುವ ನಿತ್ಯೋತ್ಸವ ಕನ್ವೆನ್ಷನ್‌ ಸೆಂಟರ್‌ನಲ್ಲಿ ಸಂಜೆ 6.30ಕ್ಕೆ ಚಾಲನೆ ನೀಡಲಾಗುವುದು. ಐಐಎಸ್ಸಿ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಚಾಲನೆ ನೀಡುವರು. ಪರಿಸರ ತಜ್ಞ ಮನ್ಸೂರ್ ಖಾನ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿವಿಧ ದಿನಗಳಂದು ಸಾಧಕರೊಂದಿಗೆ ಒಂದು ಸಂಜೆ, ಹಸಿರು ಚಿನ್ನದ ಬೇಟೆ, ಮನೆಯೊಡತಿಯೊಂದಿಗೆ ಹಸಿರು ದಿನ, ಟ್ರಕ್ಕಿಂಗ್, ಚಿತ್ರಕಲಾ ಮತ್ತು ಚರ್ಚಾ ಸ್ಪರ್ಧೆ, ರೈತರೊಂದಿಗೆ ಸಂವಾದ, ಗಿಡ ನೆಡುವ ಕಾರ್ಯಕ್ರಮ, ಹಸಿರು ದಾರಿಯ ಸೈಕ್ಲಿಂಗ್ ಹಾಗೂ ಮೈ ಗ್ರೀನ್ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಲ್ಡರ್ ಅಸೋಸಿಯೇಷನ್ ಕಾರ್ಯದರ್ಶಿ ರತ್ನರಾಜ್, ವಿಶ್ವ ಪರಿಸರ ಮಾಸಾಚರಣೆ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಸುಬ್ರಮಣ್ಯ ರಾವ್‌, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಮೈಸೂರು ಘಟಕದ ಅಧ್ಯಕ್ಷ ಎಂ.ಜಿ.ಸೋಮಶೇಖರ್‌, ಮೈ ಗ್ರೀನ್‌ ಅಧ್ಯಕ್ಷ ನೈಧ್ರುವ ಇದ್ದರು.

ಪರಿಸರ ಉಳಿಸಲು ಮುಂದಾಗಿ

ಮೈಸೂರು: ನಗರದ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೆಎಸ್‌ಎಸ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಚ್‌.ಸಿ.ಶಿವರಾಜು ಉದ್ಘಾಟಿಸಿದರು.

ಇಂದು ಕೆರೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ, ಗೋಮಾಳಗಳನ್ನು ಮನುಷ್ಯರು ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಾತಾವರಣ ಕಲುಷಿತಗೊಂಡಿದೆ ಎಂದು ಶಿವರಾಜು ಆತಂಕ ವ್ಯಕ್ತಪಡಿಸಿದರು.

ಮನೆಯ ಸುತ್ತ ಗಿಡಗಳನ್ನು ಬೆಳೆಸಿ ಶುದ್ಧ ಗಾಳಿ ಪಡೆದುಕೊಳ್ಳಲು ಮುಂದಾಗಬೇಕು. ನೀರು ವ್ಯರ್ಥವಾಗದ ರೀತಿ ನೋಡಿಕೊಳ್ಳಬೇಕು. ಪರಿಸರ ಕಾಪಾಡಲು ಯುವ ಜನತೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಪ್ರಸಾದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. 

ನಟರಾಜ ಪ್ರತಿಷ್ಠಾನದ ಶೈಕ್ಷಣಿಕ ಸಂಯೋಜಕ ಸತ್ಯನಾರಾಯಣ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ವಿ.ಡಿ.ಸುನೀತಾರಾಣಿ, ಉಪನ್ಯಾಸಕರಾದ ಎಚ್.ಆರ್.ಗುರು, ವೇದಾವತಿ ಇದ್ದರು.

**

ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿ ನಗರದ ವಿವಿಧೆಡೆ ಜಾಗೃತಿ ಕಾರ್ಯಕ್ರಮ ನಡೆಸುತ್ತೇನೆ. ಎಲ್ಲರನ್ನೂ ಸೇರಿಸಿಕೊಂಡು ಬೀದಿ ಗುಡಿಸುವುದರಲ್ಲಿ ಅವಮಾನ ಇಲ್ಲ

-ಜಾವಗಲ್‌ ಶ್ರೀನಾಥ್‌, ಸ್ವಚ್ಛ ಭಾರತ ಅಭಿಯಾನದ ರಾಯಭಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry