ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಂದ ನಗರಸಭೆಗೆ ಮುತ್ತಿಗೆ

Last Updated 6 ಜೂನ್ 2017, 6:37 IST
ಅಕ್ಷರ ಗಾತ್ರ

ಗದಗ: ‘ಕಳೆದ 5-6 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 15 ಪೌರಕಾರ್ಮಿಕರನ್ನು ಏಕಾಏಕಿ ತೆಗೆದು ಹಾಕಲಾಗಿದ್ದು, ಇದು ಸರಿಯಲ್ಲ. ಶೀಘ್ರವೇ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಾನತಾ ಸಮಿತಿಯ ಸದಸ್ಯರು ಸೋಮವಾರ ನಗರಸಭೆಗೆ ಮುತ್ತಿಗೆ ಹಾಕಿದರು.
ಹಲಗೆ ಬಾರಿಸುತ್ತ ನಗರಸಭೆಗೆ ಬಂದ ನೂರಾರು ಪ್ರತಿಭಟನಾಕಾರರು ಅಧಿಕಾರಿಗಳು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಪೌರ ಕಾರ್ಮಿಕರನ್ನು ತೆಗೆದು ಹಾಕುವಲ್ಲಿ ಪರಿಸರ ಎಂಜಿನಿಯರ್‌ ಕೈವಾಡವಿದೆ. ಹಣ ಪಡೆದು ಬೇರೆ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನಗರಸಭೆ ಪರಿಸರ ಎಂಜಿನಿಯರ್‌ ಆನಂದ ಬದಿ ಅವರನ್ನು ಸ್ಥಳಕ್ಕೆ ಕರೆತರುವಂತೆ ಪಟ್ಟುಹಿಡಿದರು.

‘ನಗರಸಭೆಯ 5 ಟಾಟಾ ಏಸ್ ಚಾಲಕರು ಮತ್ತು ಸಿಬ್ಬಂದಿಯನ್ನು ಟೆಂಡರ್ ಕರೆಯದೇ, ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದನ್ನು ರದ್ದುಗೊಳಿಸಿ, ಟೆಂಡರ್ ಕರೆದು ನೇಮಕಾತಿ ಮಾಡಿಕೊಳ್ಳಬೇಕು’ ಎಂದು  ಅವರು ಆಗ್ರಹಿಸಿದರು.

ಮನವಿ ಆಲಿಸಲು ಬಂದ ಪೌರಾಯುಕ್ತ ಮನ್ಸೂರ್‌ ಅಲಿ ಹಾಗೂ ಪ್ರತಿಭಟನಾಕರರ ನಡುವೆ ವಾಗ್ವಾದ ನಡೆಯಿತು. ‘ನಾನು ಗದಗ ನಗರಸಭೆಗೆ ವರ್ಗವಾಗಿ ಬಂದ ಮೇಲೆ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರ ನೇಮಕಾತಿ ನಡೆದಿಲ್ಲ. ಜತೆಗೆ ಗುತ್ತಿಗೆದಾರ ಮೂಲಕ ಹೋಗುತ್ತಿದ್ದ ವೇತನವನ್ನು ನೇರವಾಗಿ ಪೌರಕಾರ್ಮಿಕರ ಖಾತೆಗೆ ಜಮೆ ಮಾಡಲಾಗುತ್ತಿದೆ. ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವ ಕುರಿತು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪೌರಾಯುಕ್ತ ಅಲಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪರಶುರಾಮ ಯಲ್ಲಕ್ಕನವರ, ಶಿವಪ್ಪ ಹಾದಿಮನಿ, ಹುಲಗಪ್ಪ ಅನವಾಳ, ಮಹಾಂತೇಶ ಹಾದಿಮನಿ, ಜಗದೀಶ ಮೂಲಿಮನಿ, ನೀಲಪ್ಪ ಹಾದಿಮನಿ, ಶಾಮ ಯಮನಾಳ, ಮಹಾಂತೇಶ ಹಾದಿಮನಿ, ಪ್ರಕಾಶ ಅನವಾಳ, ಹುಲಗಪ್ಪ ಅದ್ವಾನಿ, ಬೂದಪ್ಪ ಹೊಸಳ್ಳಿ, ರಾಜು ಹಾದಿಮನಿ, ಪ್ರಕಾಶ ಹಾದಿಮನಿ, ಯಲ್ಲಪ್ಪ ಯಲ್ಲಕ್ಕನವರ ಇದ್ದರು.

* * 

ತೆಗೆದು ಹಾಕಿರುವ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಮರುನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಕೋರ್ಟ್‌ ಮೊರೆ ಹೋಗಲಾಗುವುದು
ಸಿದ್ದು ಹಾದಿಮನಿ, ಜಿಲ್ಲಾ ಘಟಕದ ಅಧ್ಯಕ್ಷ
ದಲಿತ ಸಂಘರ್ಷ ಸಮಾನತಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT