ಅರಣ್ಯ ಉಳಿಸಲು ಜಾಗೃತಿ ಅಭಿಯಾನ ಅವಶ್ಯ

7

ಅರಣ್ಯ ಉಳಿಸಲು ಜಾಗೃತಿ ಅಭಿಯಾನ ಅವಶ್ಯ

Published:
Updated:
ಅರಣ್ಯ ಉಳಿಸಲು ಜಾಗೃತಿ ಅಭಿಯಾನ ಅವಶ್ಯ

ಹಾಸನ: ‘ಹೇರಳವಾಗಿ ಗಿಡ–ಮರಗಳನ್ನು ಬೆಳೆಸುವುದರಿಂದ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಚನ್ನಕೇಶವ್ ಅಭಿಪ್ರಾಯಪಟ್ಟರು.

ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಯೂರೋ ಶಾಲೆಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಪರಿಸರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. 

ಪರಿಸರ ಸಂರಕ್ಷಣೆ ಕುರಿತು ಎಲ್ಲರಿಗೂ ಕಾಳಜಿ ಬೆಳೆಯಬೇಕು. ಪರಿಸರದ ನಾಶ ಇಂದು ಎಗ್ಗಿಲ್ಲದೆ ನಡೆಯುತ್ತಿದೆ. ಶೇ 33 ರಷ್ಟು ಇರಬೇಕಾದ ಅರಣ್ಯ ಕೇವಲ19 ರಷ್ಟಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೇ ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಎದುರಾಗುತ್ತದೆ. ಅರಣ್ಯ ಉಳಿಸಿ ಬೆಳೆಸಲು ವಿಶ್ವಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಯಬೇಕು. ಇದಕ್ಕೆ ಯುವ ಸಮುದಾಯದ ದಿಟ್ಟ ಹೆಜ್ಜೆ ಇಡಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ನ್ಯಾಯಾಧೀಶ ಚಂದ್ರಶೇಖರ್ ಮಾತನಾಡಿ, ಪರಿಸರ ದಿನಾಚರಣೆ ಉದ್ದೇಶ ಈಡೇರಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಪ್ರಸ್ತುತ ಅರಣ್ಯ ನಾಶ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಅರಣ್ಯವನ್ನು   ಈಗ ಎಷ್ಟು ಬೆಳೆಸುತ್ತಿದ್ದೀವೋ ಅದರ 10 ಪಟ್ಟು ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಹೀಗಾಗಿ ಉಷ್ಣಾಂಶ ಏರುಪೇರಾಗಿ ಅಸಮತೋಲನ ಉಂಟಾಗುತ್ತಿದೆ ಎಂದು ಎಚ್ಚರಿಸಿದರು.

ನ್ಯಾಯಾಲಯಗಳು ಕೂಡ ಪರಿಸರ ಕಾಳಜಿ ಹೊಂದುತ್ತಿವೆ ಎಂಬುದಕ್ಕೆ ಕುದರೆಮುಖದಲ್ಲಿನ ಗಣಿಗಾರಿಕೆ ನಿಲ್ಲಿಸುವಂತೆ ಕ್ರಮಕೈಗೊಂಡಿದ್ದು ಹಾಗೂ ಉತ್ತರ ಪ್ರದೇಶದಲ್ಲಿ ಗಂಗಾನದಿಯ ಮಲೀನತೆ ತಡೆಯಲು ಮುಂದಾಗಿರುವುದು ಸ್ಪಷ್ಟ ನಿರ್ದೇಶನ ಎಂದರು.

ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಶಿವಕುಮಾರ್ ಮಾತನಾಡಿ, ನಿಸರ್ಗವನ್ನು ಜನರ ಬಳಿಗೆ ಕೊಂಡೊಯ್ಯಬೇಕು. ಇದನ್ನೇ ವಿಶ್ವ ಸಂಸ್ಥೆ ಈ ಬಾರಿಯ ಪರಿಸರ ದಿನಾಚರಣೆಯ ಘೋಷವಾಕ್ಯವನ್ನಾಗಿ ಘೋಷಣೆ ಮಾಡಿದೆ. ಪಂಚಶೀಲಗಳು ತತ್ವಗಳು ಸಮರ್ಪಕವಾಗಿ ಇರಲು ಪರಿಸರ ಉತ್ತಮವಾಗಿರಬೇಕು. ಪೂರ್ವಿಕರು ಗಟ್ಟಿಮುಟ್ಟಾಗಿರಲು ಕಾರಣ ಅವರು ಪರಿಸರದೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ಪ್ರಸ್ತುತ ನಗರೀಕರಣದತ್ತ ಜನ ಆಕರ್ಷಿತರಾಗಿ ಪರಿಸರ ನಾಶ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪ್ರಾಣಿ ಮತ್ತು ಪಕ್ಷಿಗಳನ್ನು ಚಿತ್ರಗಳ ಮೂಲಕ ತೋರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು. ನ್ಯಾಯಾಧೀಶ ವಿಜಯನಂದ, ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿ ಮಂಜುನಾಥ್, ಯೂರೋ ಶಾಲೆ ಪ್ರಾಂಶುಪಾಲ ಸುರೇಶ್ ಇದ್ದರು.  

ವಿದ್ಯಾರ್ಥಿಗಳ ಜಾಥಾ

ಜಾವಗಲ್‌: ರಾಷ್ಟ್ರೀಯ ಹಸಿರು ಪಡೆ ಸಂಘದಿಂದ ಸರ್ಕಾರಿ ಪಿಯು ಕಾಲೇಜು ಹಾಗು ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕವಲೀರಪ್ಪ ಮಾತನಾಡಿದರು.

ಪ್ರತಿ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಉಪಪ್ರಾಂಶುಪಾಲ ಯೋಗೀಶ್‌ ಅಧ್ಯಕ್ಷತೆ ವಹಿಸಿದ್ದರು. ಹಸಿರು ಪಡೆ ಸಂಘದ ಸಂಚಾಲಕಿ ಸೌಮ್ಯಾ, ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜೆ.ಎಚ್‌.ದಯಾನಂದ್‌, ಉಪನ್ಯಾಸಕರಾದ ಮಂಜುನಾಥ್‌, ಉದಯ್‌ಕುಮಾರ್‌, ಶ್ರೀನಿವಾಸ್‌ರಾವ್‌, ಕುಮಾರ್‌, ಹಿರಿಯ ಶಿಕ್ಷಕರಾದ ಪುಟ್ಟಶಂಕರಪ್ಪ, ರಾಮಲಿಂಗಪ್ಪ, ಶಿವಲಿಂಗಮೂರ್ತಿ, ಚಂದ್ರೇಗೌಡ, ಸವಿತಾ, ವಿದ್ಯಾ ಇದ್ದರು.

ಉಪಯುಕ್ತ ಗಿಡಗಳನ್ನು ಬೆಳೆಸಿ

ಬೇಲೂರು:
‘ಮಲೆನಾಡು ಭಾಗದಲ್ಲಿಯೇ ಮಳೆ ಕ್ಷೀಣಿಸಲು ಪರಿಸರ ನಾಶವೇ ಕಾರಣ. ಉಪಯುಕ್ತ ಗಿಡಗಳನ್ನು ಬೆಳೆಸದೇ, ಲಾಭದಾಯಕವಾದವುಗಳನ್ನು ಬೆಳೆಸುತ್ತಿರುವುದು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ’ ಎಂದು ಇಲ್ಲಿನ ಸಿವಿಲ್‌ ಹಿರಿಯ ಶ್ರೇಣಿ ನ್ಯಾಯಾಧೀಶ ಸಿ.ನಾಗೇಶ್‌ ಹೇಳಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ಇಂಗು ತೊಟ್ಟಿ ಮತ್ತು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದ ಅವರು ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯುತ್ತಿರುವುದು ಸರಿಯಲ್ಲ ಎಂದರು.

ವಲಯ ಅರಣ್ಯಾಧಿಕಾರಿ ಗಿರೀಶ್‌, ಸಹಾಯಕ ಸರ್ಕಾರಿ ಅಭಿಯೋಜಕ ಮೋತಿಲಾಲ್‌ ಚೌಧರಿ, ವಕೀಲರ ಸಂಘದ ಕಾರ್ಯದರ್ಶಿ ಸಿದ್ದೇಗೌಡ, ಪುಟ್ಟಸ್ವಾಮಿಗೌಡ, ಸುನೀಲ್‌ಕುಮಾರ್‌, ವಕೀಲರಾದ ವೈ.ಸಿ.ಮೋಹನ್‌, ಮಂಜುನಾಥ್‌ ಇದ್ದರು.

ಯುನೈಟೆಡ್‌ ಶಾಲೆ: ಯುನೈಟೆಡ್‌ ಶಾಲೆಯ ವಿದ್ಯಾರ್ಥಿಗಳು ವಾರದ ಸಂತೆ ಮತ್ತು ಪಟ್ಟಣದ ಮುಖ್ಯರಸ್ತೆಯಲ್ಲಿ ಜಾಥಾ ನಡೆಸಿ ‘ಪರಿಸರ ಬೆಳೆಸಿ ಭೂಮಿ ಉಳಿಸಿ’ ಎಂಬ ಘೋಷಣೆ ಕೂಗಿದರು. ಸಂಸ್ಥೆಯ ಕಾರ್ಯದರ್ಶಿ ಬೋಜೇಗೌಡ ಇದ್ದರು.

ಬಿಜಿಎಸ್‌ ಕಾಲೇಜು

ಬಿಜಿಎಸ್‌ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳೂ ಸಹ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜಾಥಾ ನಡೆಸಿದರು. ‘ಪರಿಸರ ರಕ್ಷಿಸಿ, ಕಾಡು ಬೆಳೆಸಿ’ ಎಂಬ ಘೋಷಣೆ ಕೂಗಿದರು.

ವಿದ್ಯಾರ್ಥಿಗಳು ಪರಿಸರದ ಕುರಿತು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಲೆಯ ಪ್ರಾಂಶುಪಾಲ ಚಂದ್ರಶೇಖರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry