ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಸಾಮಿ ಕೆರೆ ಅಭಿವೃದ್ಧಿಗೆ ಚಾಲನೆ

Last Updated 6 ಜೂನ್ 2017, 7:16 IST
ಅಕ್ಷರ ಗಾತ್ರ

ಹೊನ್ನಾವರ: ಅರೆಸಾಮಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಚಿಸಿರುವ ಅಧಿಕಾರಿಗಳ ಸಭೆ ಕರೆದು ಕೆರೆಯ ಅಭಿವೃದ್ಧಿಯ ಕುರಿತಾದ ಸಮಗ್ರ ಪ್ರಸ್ತಾವವನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರಚಿಸಿರುವ ಅಧಿಕಾರಿಗಳ ಸಮಿತಿಯ ಸದಸ್ಯರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ ಹಾಗೂ ಉಪವಿಭಾಗಾಧಿಕಾರಿ ಮಂಜುನಾಥ ಎಂ.ಎನ್. ತಿಳಿಸಿದರು.

ರಾಮತೀರ್ಥ ಸಮೀಪದ ಐತಿಹಾಸಿಕ ಅರೆಸಾಮಿ ಕೆರೆಯ ಅಭಿವೃದ್ಧಿಯ ಅಂಗವಾಗಿ ಸೋಮವಾರ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿ ಸಂಘಟಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆರೆ ಅಭಿವೃದ್ಧಿಗಾಗಿ ಅಭಿವೃದ್ಧಿ ಸಮಿತಿ ನಡೆಸಿರುವ ಪ್ರಯತ್ನಕ್ಕೆ ಇಲಾಖೆಗಳ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

‘ಅರೆಸಾಮಿ ಕೆರೆ 38.39 ಎಕರೆ ಯಷ್ಟು ವಿಸ್ತೀರ್ಣವಿದ್ದು ಜಿಲ್ಲೆಯಲ್ಲಿಯೇ ದೊಡ್ಡ ಕೆರೆಗಳಲ್ಲೊಂದು. ಇಷ್ಟು ದೊಡ್ಡ ಕೆರೆಯನ್ನು ಕೇವಲ ಜನರ ಶ್ರಮದಾನದಲ್ಲಿ ಅಭಿವೃದ್ಧಿಪಡಿಸುವುದು ಕಷ್ಟ. ಸರ್ಕಾರದಿಂದ ಹಣಕಾಸಿನ ನೆರವು ಪಡೆಯಬೇಕಿದ್ದು, ಕೆರೆಯ ಅಭಿವೃದ್ಧಿಯ ಅಗತ್ಯವನ್ನು ಮನಗಂಡಿರುವ ನಾನು ಈ ದಿಶೆಯಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಕೂಡಲೇ ಕೆರೆಯ ಸರ್ವೆ ಕಾರ್ಯ ಕೈಗೊಳ್ಳಲಾಗುವುದು. ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಕಳಿಸಿದ ಪ್ರಸ್ತಾವ ಹಾಗೂ ಯೋಜನೆಯ ಜಾರಿಯ ಕುರಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಜುನಾಥ ಎಂ.ಎನ್.ಹೇಳಿದರು.

ವಸಂತ ರೆಡ್ಡಿ ಕೆ.ವಿ.ಮಾತನಾಡಿ, ಅರೆಸಾಮಿ ಕೆರೆಯ ಹತ್ತಿರ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ದೈವೀವನ ಇದೆ. ಕೆರೆಯ ಹಸ್ತಾಂತರಕ್ಕೆ ಕೋರಿ ಅರಣ್ಯ ಇಲಾಖೆಯಿಂದಲೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆರೆಯ ಮಾಲೀಕತ್ವದ ಬಗ್ಗೆ ಈ ಹಿಂದೆ ಗೊಂದಲ ಸೃಷ್ಟಿಯಾಗಿದ್ದ ಬಗ್ಗೆ ಮಾಹಿತಿ ಇದೆ.

ಆದರೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೆರೆಯನ್ನು ಒಂದು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು. ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿದರು.

ಸಮಿತಿಯ ಕಾರ್ಯದರ್ಶಿ ಪ್ರೊ.ಎಂ.ಜಿ.ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ತುಕಾರಾಮ ನಾಯ್ಕ, ರವೀಂದ್ರ ನಾಯ್ಕ, ಸದಸ್ಯರಾದ ವಿನೋದ ನಾಯ್ಕ, ಬಾಲಚಂದ್ರ ನಾಯ್ಕ, ಡಾ.ಡಿ.ಎಲ್.ಹೆಬ್ಬಾರ, ಉದಯರಾಜ ಮೇಸ್ತ, ವಿನಾಯಕ ಆಚಾರಿ, ರತ್ನಾಕರ ನಾಯ್ಕ, ಕನ್ನಡ ಅಭಿಮಾನಿ ಸಂಘದ ಸದಸ್ಯರು, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸೀತಾರಾಮ ಹೆಗಡೆ, ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT