ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀನಾ... ಸಿನಿಮಾ ವ್ಯಾಖ್ಯಾನ

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ದಶಕಗಳ ಹಿಂದೆಯೇ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯಾಗಿದ್ದ ರವೀನಾ ಟಂಡನ್‌ ಸಿಕ್ಕಿದ ಅವಕಾಶಗಳಲ್ಲಿ   ಚೆನ್ನಾಗಿಯೇ ಅಭಿನಯಿಸಿ ಪ್ರೇಕ್ಷಕರ ಮನಗೆದ್ದವರು. ಆದರೂ, ವಾಸ್ತವಕ್ಕೆ ಕನ್ನಡಿ ಹಿಡಿಯುವ ಸಿನಿಮಾ ಮತ್ತು ಅಂತಹ ಸಿನಿಮಾದಲ್ಲೊಂದು ಗಟ್ಟಿ ಪಾತ್ರ ಮಾಡಬೇಕೆಂಬ ತುಡಿತ ಅವರೊಳಗೆ ಉಳಿದೇ ಹೋಗಿತ್ತಂತೆ!
‘ತುಂಬಾ ತುಂಬಾ ಕಾದಿದ್ದ ಪಾತ್ರ ಈಗ ಸಿಕ್ಕಿದೆ. ತಡವಾದರೂ ಪರವಾಗಿಲ್ಲ ಬಯಸಿದ್ದ ಪಾತ್ರ ಸಿಕ್ಕಿದ ಖುಷಿಯಲ್ಲಿದ್ದೇನೆ’ ಎಂಬ ಅವರ ಮಾತೇ ಇದಕ್ಕೆ ಸಾಕ್ಷಿ.

ರವೀನಾ ಮೂರು ಮಕ್ಕಳ ತಾಯಿ. ಈ ಪೈಕಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸುದ್ದಿಯಾಗಿದ್ದರು. ಆದರೆ ಗಟ್ಟಿ ನಿರ್ಧಾರ ತೆಗೆದುಕೊಂಡ ವಿಶ್ವಾಸ ಇತ್ತಲ್ಲ. ಹಾಗಾಗಿ ರವೀನಾ ಟೀಕೆ, ಕುಹಕ, ಪ್ರಶ್ನೆಗಳಿಗೆ ಸರಿಯಾಗಿಯೇ ಉತ್ತರಿಸಿದ್ದರು.

ಸಾಮಾಜಿಕ ಕಳಕಳಿ, ಹೆಣ್ಣಿನ ಸ್ಥಾನಮಾನದ ಮಾತು ಬಂದಾಗ ರವೀನಾ ಸುಮ್ಮನೆ ಕೂತವರೇ ಅಲ್ಲ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣಗಳ ಬಗ್ಗೆ ನಖಶಿಖಾಂತ  ಸಿಟ್ಟು ಅವರಿಗೆ.

‘ಮಾತೃ’ ಸಿನಿಮಾ, ದೇಶವನ್ನೇ ಬೆಚ್ಚಿಬೀಳಿಸಿದ ‘ನಿರ್ಭಯಾ’ ಪ್ರಕರಣದ ಸಂದರ್ಭವನ್ನು ಮುಂದಿಟ್ಟುಕೊಂಡು ನಿರ್ಮಿಸಿದ್ದು. ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಒಬ್ಬ ಮಗಳ ತಾಯಿಯ ಪಾತ್ರವದು. ಸ್ವತಃ ತಾಯಿಯಾಗಿ ನಾನು ಆ ಪಾತ್ರವನ್ನು ಸರಿಯಾಗಿ ಅರ್ಥೈಸಿಕೊಳ್ಳಬಲ್ಲೆ. ಹಾಗಾಗಿ ಆ ಸಿನಿಮಾವನ್ನು ತಕ್ಷಣ ಒಪ್ಪಿಕೊಂಡೆ’ ಎಂದು ರವೀನಾ ಹೇಳುತ್ತಾರೆ.

‘ಮಾತೃ’ ಪಾತ್ರ ಸವಾಲಿನದ್ದು. ಗಟ್ಟಿ ನೆಲೆಗಟ್ಟಿನ ಪಾತ್ರವೂ ಹೌದು. ಮಗಳು ಅತ್ಯಾಚಾರವಾಗಿ ಕೊಲೆಗೀಡಾದಾಗ ಒಬ್ಬ  ತಾಯಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಸೂಕ್ಷ್ಮವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೇನೆ. ಈಗ ಅದಕ್ಕೆ ದಾದಾ ಸಾಹೇಬ ಫಾಲ್ಕೆ ಅಕಾಡೆಮಿ ಕೊಡುವ ‘ವಿಮರ್ಶಕರ ಅತ್ಯುತ್ತಮ ಚಿತ್ರ’ ಪ್ರಶಸ್ತಿಗೆ ಆಯ್ಕೆಯಾಗಿದೆ. 

ಈ ಪ್ರಶಸ್ತಿ ಪ್ರಕಟವಾದ ನಂತರ ಮಾಧ್ಯಮಗಳು, ‘ಚಿತ್ರರಂಗಕ್ಕೆ ಮರಳಿದ ರವೀನಾಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ’ ಎಂದು ಬರೆದವು. ಪ್ರಶಸ್ತಿ ನನಗೂ ಖುಷಿಕೊಟ್ಟಿದೆ’ ಎಂಬ ಮನದಾಳದ ಮಾತನ್ನು ರವೀನಾ ಬಿಚ್ಚಿಡುತ್ತಾರೆ. ರವೀನಾ ಪ್ರಕಾರ, ಭಾರತೀಯ ಚಿತ್ರರಂಗ ಬದಲಾಗುತ್ತಿದೆ. ಅಂದರೆ ವಾಸ್ತವಕ್ಕೆ ಹತ್ತಿರವಾದ ವಸ್ತುಗಳು ಚಿತ್ರಕತೆಗಳಾಗುತ್ತಿವೆ.

ಅಲ್ಲದೆ, ‘ನಟರ ವ್ಯಕ್ತಿತ್ವಕ್ಕೆ ಹೊಂದುವ  ಪಾತ್ರಗಳನ್ನು ಕೊಡುವುದು ತುಂಬಾ ಮುಖ್ಯ. ಕಮರ್ಷಿಯಲ್‌ ಎಂಬ ಸಿದ್ಧಮಾದರಿಯಿಂದ ಹೊರಬಂದು ಬೆರಳೆಣಿಕೆ ಚಿತ್ರಗಳಾದರೂ ನಿರ್ಮಾಣವಾಗುತ್ತಿವೆಯಲ್ಲ ಎಂಬುದಷ್ಟೇ  ಸದ್ಯ ಸಮಾಧಾನದ ಸಂಗತಿ. ಭಾರತೀಯ ಚಿತ್ರರಂಗ ತನ್ನ ಇತಿಮಿತಿಗಳನ್ನು ಮೀರಿ  ವಾಸ್ತವಕ್ಕೆ ಹತ್ತಿರವಾಗಿ ಯೋಚಿಸುತ್ತಿದೆ’  ಎಂಬುದು ಅವರ ವಿಶ್ಲೇಷಣೆ.

ಮೂವರು ಮಕ್ಕಳು, ಸಿನಿಮಾ, ಇತರ ಪ್ರಾಜೆಕ್ಟ್‌ಗಳನ್ನು ರವೀನಾ ಹೇಗೆ ನಿಭಾಯಿಸುತ್ತಾರೆ ಎಂಬುದು ನಿಜಕ್ಕೂ ಕುತೂಹಲದ ಸಂಗತಿ. ಹಾಗಂತ ಅವರಿಗೆ ಅದೇನೂ ದೊಡ್ಡ ಸಮಸ್ಯೆ ಆಗಿಯೇ ಇಲ್ಲವಂತೆ.

‘ಎಲ್ಲವನ್ನೂ ಸಮತೋಲನ ಮಾಡಿಕೊಂಡು ಹೋಗುವ ಕಲೆ ಈಗ ನನಗೆ ಸಿದ್ಧಿಸಿದೆ’ ಎಂದು ನಗುತ್ತಾರೆ ರವೀನಾ. ‘ಮಕ್ಕಳಿಗೆ ಮತ್ತು ಕೆಲಸಕ್ಕೆ ಸಮಯ ಹೊಂದಿಸಿಕೊಳ್ಳುವುದು ಅನಿವಾರ್ಯ. ‘ಸಬ್‌ಸೆ ಬಡಾ ಕಲಾಕಾರ್‌’ ಎಂಬ ಶೋ ಹಾಗೂ ಕೆಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಎಲ್ಲವನ್ನೂ ಮಾಡಲೇಬೇಕಲ್ಲ?’ ಎಂದು ಅವರು ನಮ್ಮನ್ನೇ ಚಕಿತಗೊಳಿಸುತ್ತಾರೆ.

‘ಈಗಿನ ಮಕ್ಕಳಿಗೆ ನಾವೇನೂ ಹೇಳಿಕೊಡುವ ಅಗತ್ಯವಿಲ್ಲ. ನಾವು 30–40 ಸಿನಿಮಾಗಳಲ್ಲಿ ನಟಿಸಿದ ನಂತರ ಮಾಡಿದ್ದನ್ನು ಈಗಿನ ಹುಡುಗರು ಚಿತ್ರರಂಗ ಪ್ರವೇಶಿಸುವ ಹಂತದಲ್ಲೇ ಮಾಡಿಬಿಡುತ್ತಾರೆ.

ನಿಮಗೆ ಗೊತ್ತಾ? ನಾನು ಸಿನಿಮಾದಲ್ಲಿ ನಟಿಸಲು ಆಫರ್‌ ಬರುವವರೆಗೂ ಬ್ಯೂಟಿಪಾರ್ಲರ್‌ಗೆ ಕಾಲಿಟ್ಟಿರಲಿಲ್ಲ, ಡಾನ್ಸ್‌ ಕಲಿತಿರಲಿಲ್ಲ!  ಆಫರ್‌ ಬಂದ ಮರುದಿನ ನಾನು ಕ್ಯಾಮರಾ ಮುಂದಿದ್ದೆ! ಈಗಿನ ಹುಡುಗಿಯರು ಎಲ್ಲದರಲ್ಲೂ ಪಳಗಿದ ನಂತರ ಚಿತ್ರರಂಗಕ್ಕೆ ಕಾಲಿಡುತ್ತಾರೆ!’ ಎಂದು ವಿಶ್ಲೇಷಿಸುತ್ತಾರೆ ರವೀನಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT