ಪ್ರಶ್ನೋತ್ತರ

7

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

ಶಿವಪ್ಪ. ಕೆ., ಧಾರವಾಡ

* ಖಾಸಗಿ ಕಾಲೇಜಿನಲ್ಲಿ ವಸತಿ ಪಾಲಕ. ಶಿಕ್ಷಣ ಬಿ.ಕಾಂ. ರಜೆ ದಿನಗಳಲ್ಲಿ ಸ್ವಯಂ ಸೇವಕನಾಗಿ ಸಮಾಜದಲ್ಲಿ ದುಡಿಯುವುದು. ನನ್ನ ಕುಟುಂಬದ ತೊಂದರೆಗಳಿಂದ ಬೆಂಗಳೂರು ಸೇರಿದೆ. ಇನ್ನೂ 5 ವರ್ಷ ಕೆಲಸ ಮಾಡಬಲ್ಲೆ. ನನ್ನ ಇದುವರೆಗಿನ ಉಳಿತಾಯ ಎಫ್‌.ಡಿ.  ₹ 5 ಲಕ್ಷ ಎಲ್‌.ಐ.ಸಿ. (5 ವರ್ಷಗಳಲ್ಲಿ ಬರುವ ಮೊತ್ತ) ₹ 1 ಲಕ್ಷ ಪಿ.ಎಫ್‌. ₹ 50,000 ಒಂದು ಸಣ್ಣ ನಿವೇಶನ ₹ 7 ಲಕ್ಷ. ನನಗೆ ಕನಿಷ್ಠ  ₹ 10,000 ತಿಂಗಳಿಗೆ ಬರಲು ಮಾರ್ಗದರ್ಶನ ಮಾಡಿ.


ಉತ್ತರ: ನೀವು ₹ 5 ಲಕ್ಷ ಎಫ್‌.ಡಿ. ಮಾಡುವುದರ ಬದಲಾಗಿ ಒಮ್ಮೆಲೇ ಬಡ್ಡಿ ಬರುವ (ಅಸಲು ಬಡ್ಡಿ ಒಮ್ಮೆಲೇ ಪಡೆಯುವ) ಠೇವಣಿ ಮಾಡಿರಿ. ಶೇ 7.50 ಬಡ್ಡಿದರದಲ್ಲಿ 5 ವರ್ಷಗಳ ನಂತರ ಅವಧಿ ಮುಗಿಯುತ್ತಲೇ ₹ 7,24,950 ಪಡೆಯುವಿರಿ. ವಿಮೆ ₹ 1 ಲಕ್ಷ, ಪಿ.ಎಫ್‌ ₹ 1 ಲಕ್ಷ (5 ವರ್ಷಗಳ ನಂತರ) ನಿವೇಶನದ ಬೆಲೆ ₹ 10 ಲಕ್ಷ ಹೀಗೆ ಒಟ್ಟು ₹ 19.25 ಲಕ್ಷ ಪಡೆಯುವಿರಿ. ಈ ಹಣ ಬ್ಯಾಂಕಿನಲ್ಲಿ ಇರಿಸಿದರೆ ಶೇ 8 ಬಡ್ಡಿದರದಲ್ಲಿ, ನೀವು ಪ್ರತೀ ತಿಂಗಳೂ ₹ 12,834 ಪಡೆಯಬಹುದು. ಈಗಿನ ಉಳಿತಾಯವಲ್ಲದೆ, ಮುಂದಿನ 5 ವರ್ಷಗಳಲ್ಲಿ ಎಷ್ಟಾದರಷ್ಟು ಉಳಿಸಿ, ಹಾಗೆ ಬರುವ ಮೊತ್ತ ಮತ್ತು ₹ 19.25 ಲಕ್ಷ ಸೇರಿಸಿ, ಕನಿಷ್ಠ ₹ 15,000 ತಿಂಗಳಿಗೆ ಪಡೆಯುವಂತೆ ಪ್ಲ್ಯಾನ್‌ ಹಾಕಿ.

ವಿನೋದ್‌. ಆರ್‌., ಚಾಮರಾಜನಗರ

* ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ. ವಯಸ್ಸು 37. ನನ್ನ ಹೆಂಡತಿ ಅನುದಾನಿತ ಶಾಲಾ ಶಿಕ್ಷಕಿ. ನನ್ನ ಸಂಬಳ ₹ 35,500, ಉಳಿತಾಯ ಹಾಗೂ ಕಡಿತದ ನಂತರ  ₹ 28,000 ಸಿಗುತ್ತದೆ. ಗೃಹ ಸಾಲ ₹ 9 ಲಕ್ಷ, ತಿಂಗಳ ಕಂತು ₹ 11,000 ವೈಯಕ್ತಿಕ ಸಾಲ  ₹ 3.20 ಲಕ್ಷ, ತಿಂಗಳ ಕಂತು ₹ 7,500 ನನ್ನ ಹೆಂಡತಿಗೆ ₹ 16,000 ಸಂಬಳ. ಇದರಿಂದ ಮನೆ ಖರ್ಚು ನಿಭಾಯಿಸುತ್ತೇವೆ. ನನ್ನ ಪ್ರಶ್ನೆಗಳು: 1. ಆರ್.ಡಿ. ಅವಧಿ ಮುಗಿದಾಗ ಆದಾಯ ತೆರಿಗೆ ಬರುತ್ತದೆಯೇ?; 2. ಎಫ್‌.ಡಿ. ಮೇಲೆ ಬರುವ ಬಡ್ಡಿಗೆ ತೆರಿಗೆ ಇದೆಯೇ?; 3. ಗೃಹಸಾಲ ಸುಲಭ ಹಾಗೂ ವೇಗವಾಗಿ ತೀರಿಸಲು ಮಾರ್ಗ ತಿಳಿಸಿರಿ. 4. ಮನೆ ಸಂಪೂರ್ಣಗೊಳಿಸಲು ಬೇಕಾದ ₹ 4 ಲಕ್ಷ ಮುಂಚಿತವಾಗಿ ಪಡೆದು ಪೂರ್ಣಗೊಳಿಸಿ ಲೀಸ್‌ ನೀಡಿದರೆ ಪಡೆದ ₹ 4 ಲಕ್ಷಕ್ಕೆ ಅದಾಯ ತೆರಿಗೆ ಬರುತ್ತಿದೆಯೇ; 5. ವೈಯಕ್ತಿಕ ಸಾಲ ₹ 3.20 ಲಕ್ಷ ತಾತ್ಕಾಲಿಕ ಎಫ್‌.ಡಿ. ಮಾಡಿದ್ದು, ಹಿಂತೆಗೆಯುವಾಗ, ಬ್ಯಾಂಕ್‌ ಹಾಗೂ ಆದಾಯ ತೆರಿಗೆಯವರಿಗೆ ಮನದಟ್ಟು ಮಾಡಬೇಕೇ? ನನಗೆ ಸಮರ್ಪಕವಾಗಿ ಮಾರ್ಗದರ್ಶನ ಮಾಡಬೇಕಾಗಿ ವಿನಂತಿ.

ಉತ್ತರ: 1. ಆರ್‌.ಡಿ. ಅಥವಾ ಇನ್ನಿತರ ಒಮ್ಮೆಲೇ ಬಡ್ಡಿ ಬರುವ ಯಾವುದೇ ಠೇವಣಿ ಇದ್ದರೂ ಇಲ್ಲಿ ಬರುವ ಬಡ್ಡಿಗೆ ಆದಾಯ ತೆರಿಗೆ ಸೆಕ್ಷನ್‌ 194.ಎ ಆಧಾರದ ಮೇಲೆ ಠೇವಣಿದಾರರು ಕಟ್ಟಬೇಕಾಗುತ್ತದೆ. ಇಂತಹ ಠೇವಣಿಗಳಲ್ಲಿ ಅವಧಿ ಮುಗಿದು ಹಣ ಪಡೆಯುವಾಗ ಬಡ್ಡಿ ಒಮ್ಮೆಲೇ ಬರುವುದರಿಂದ ಠೇವಣಿ ಅವಧಿಯಲ್ಲಿ ಪ್ರತೀ ವರ್ಷ ಬಂದಿರುವ ಬಡ್ಡಿಗೆ ಬ್ಯಾಂಕಿನಿಂದ ಫಾರಂ ನಂ. 16ಎ ಪಡೆದು, ಆಯಾಯ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬಹುದು.

2. ಮೇಲೆ ಹೇಳಿದಂತೆ ಎಫ್‌.ಡಿ. ಅಲ್ಪಾವಧಿಗಿರಲಿ, ದೀರ್ಘಾವಧಿಗಿರಲಿ ಇಲ್ಲಿ ಬರುವ ಬಡ್ಡಿಗೆ ತೆರಿಗೆ ಇರುತ್ತದೆ.

3. ಆದಾಯ ತೆರಿಗೆಗೆ ಒಳಗಾಗುವ ನಿಮ್ಮಂತಹ ವ್ಯಕ್ತಿಗಳು ಗೃಹಸಾಲ ಅವಧಿಗೆ ಮುನ್ನ ತೀರಿಸುವುದು ಜಾಣತನವಲ್ಲ. ಇಲ್ಲಿ ಕಟ್ಟುವ ಕಂತು ಸೆಕ್ಷನ್‌ 80ಸಿ ಆಧಾರದ ಮೇಲೂ, ಕಟ್ಟುವ ಬಡ್ಡಿ ಸೆಕ್ಷನ್‌ 24ಬಿ  ಆಧಾರದ ಮೇಲೂ ವಿನಾಯತಿಗೆ ಅರ್ಹವಾಗಿದೆ.

4. ಮನೆ ಸಂಪೂರ್ಣಗೊಳಿಸಲು ನೀವು ಪಡೆದ ₹ 4 ಲಕ್ಷ ನಂತರ ಅವರಿಗೇ ಲೀಸ್‌ ಮಾಡಿದರೆ,  ತೆರಿಗೆ ಪ್ರಶ್ನೆ ಬರುವುದಿಲ್ಲ. ಒಟ್ಟಿನಲ್ಲಿ ₹ 4 ಲಕ್ಷದಿಂದ ನಿವೇನಾದರೂ ಬಡ್ಡಿ ಪಡೆದಲ್ಲಿ ಆ ಬಡ್ಡಿಗೆ ತೆರಿಗೆ ಬರುತ್ತದೆ. 5. ವೈಯಕ್ತಿಕ ಸಾಲ ಪಡೆದು ತಾತ್ಕಾಲಿಕ ಎಫ್‌.ಡಿ. ಮಾಡಿದರೆ, ಹಣ ಹಿಂತೆಗೆಯುವಾಗ ಬ್ಯಾಂಕ್‌ ಆದಾಯ ತೆರಿಗೆ ಇಲಾಖೆಗೆ ವಿವರಣೆ ಅಥವಾ ಮನದಟ್ಟು ಮಾಡುವ ಅವಶ್ಯವಿಲ್ಲ.

ನಿಮ್ಮ ಹಣದ ವ್ಯವಹಾರ ತುಂಬಾ ಸ್ವಚ್ಚ ಹಾಗೂ ಪಾರದರ್ಶಕವಾಗಿದ್ದು, ತೆರಿಗೆಯ ಭಯದ ವಾತಾವರಣದಿಂದ ಹೊರಬಂದು, ಸುಖವಾಗಿ ಬಾಳಿರಿ. ‘ಪ್ರಜಾವಾಣಿ’ ಹಾಗೂ ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ವಂದನೆಗಳು.

ಮೈಲಾರಿ ದೊಮ್ಮತ ಮರಿ, ಪಾವಗಡ

* ನಾನು ಬಿ.ಕಾಂ. ಮೊದಲನೇ ವರ್ಷದಲ್ಲಿ ಓದುತ್ತಿದ್ದು, ನನಗೆ ₹ 10,000 ವಿದ್ಯಾರ್ಥಿ ವೇತನ ಬಂದಿದ್ದು, ಅದನ್ನು ಅಂಚೆ ಕಚೇರಿ 5 ವರ್ಷಗಳ ಠೇವಣಿ ಮಾಡಿದರೆ ಇದಕ್ಕೆ ಬಡ್ಡಿ ಎಷ್ಟು ಬರಬಹುದು ತಿಳಿಸಿರಿ. ನನ್ನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉಳಿತಾಯ_ಭವಿಷ್ಯ. ಬಗ್ಗೆ ಸಲಹೆ ನೀಡಿ.

ಉತ್ತರ: ಅಂಚೆ ಕಚೇರಿ 5 ವರ್ಷಗಳ ಠೇವಣಿಗೆ ವಾರ್ಷಿಕ ಶೇ 7.4 ಬಡ್ಡಿ ದರ ಇರುತ್ತದೆ.  5 ವರ್ಷಗಳ ಠೇವಣಿಗಿಂತ ಎನ್‌.ಎಎಸ್‌.ಸಿ. ಮಾಡಿ. ಎನ್‌.ಎಸ್‌.ಸಿ. ಮಾಡಿದರೆ, ಇಂದಿನ ಬಡ್ಡಿದರ ಶೇ 8 ಇದ್ದು, ₹ 10,000, 5 ವರ್ಷಗಳಲ್ಲಿ ₹ 14,690 ಆಗಿ ಕೈ ಸೇರುತ್ತದೆ. ನೀವು ಬಿ.ಕಾಂ. ಆದ ತಕ್ಷಣ, ಚಾರ್ಟರ್ಡ್ ಅಕೌಂಟೆಂಟ್‌ ಆಗುವ ಬಗ್ಗೆ ಹೆಚ್ಚಿನ ಗಮನ ಕೊಡಿ. ಇದರಿಂದ ನಿಮಗೆ ಉಜ್ವಲ ಭವಿಷ್ಯವಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಹಣ ಉಳಿಸಲು ಚಿಂತಿಸುವ ನಿಮಗೆ ಅಭಿನಂದನೆಗಳು. ಮುಂದೆ ನಿಮ್ಮ ಆದಾಯಕ್ಕನುಗುಣವಾಗಿ ಆರ್ಥಿಕ ಯೋಜನೆ ತಿಳಿಸುತ್ತೇನೆ.

ಬಸವರಾಜ್.ಎಚ್., ಜಮಖಂಡಿ

* ನಾನು ವೃತ್ತಿಯಲ್ಲಿ ಶಿಕ್ಷಕ. ನನ್ನ ತಿಂಗಳ ವೇತನ ಎಲ್ಲಾ ಕಡಿತದ ನಂತರ (NPS+KGID) ₹25,000. ನನಗೆ ಸ್ವಂತ ನಿವೇಶನವಿದೆ. ನನ್ನ ವಯಸ್ಸು 28. ಮನೆ ಕಟ್ಟಲು ಆಸೆ ಹೊಂದಿದ್ದೇನೆ. ಆದರೆ ಸಾಲ ಮಾಡುವ ಮನಸ್ಸಿಲ್ಲ. ಮನೆ ಕಟ್ಟಲು ಈಗಾಗಲೇ  ₹ 13,000 ಆರ್.ಡಿ. ಮಾಡಿದ್ದೇನೆ. ಸುಮಾರು 7 ವರ್ಷಗಳ ನಂತರ ಮನೆ ಕಟ್ಟಬೇಕೆಂದಿದ್ದೇನೆ. 7 ವರ್ಷಗಳ ನಂತರ ಮನೆ ಕಟ್ಟುವುದು ಸೂಕ್ತವೋ– ಈಗ ಕಟ್ಟುವುದು ಸೂಕ್ತವೋ ತಿಳಿಸಿ.

ಉತ್ತರ: ನಿಮ್ಮ ಸಾಲ ರಹಿತ ಜೀವನದ ಆಸೆಗೆ ಅಭಿನಂದನೆಗಳು. ಆದರೆ ಗೃಹ ಸಾಲ, ಒಂದು ಹೂಡಿಕೆ. ಮುಂದಿನ ಹಣ ದುಬ್ಬರವನ್ನು ಎದುರಿಸಲು, ಗೃಹಸಾಲಕ್ಕೆ ಮಿಗಿಲಾದ ಮಾರ್ಗ ಬೇರೊಂದಿಲ್ಲ.

ಇಲ್ಲಿ 30 ವರ್ಷಗಳ ಅವಧಿ ಸಿಗುತ್ತದೆ ಹಾಗೂ ಗೃಹಸಾಲದ ಬಡ್ಡಿ ಬಹಳ ಕಡಿಮೆ ಇರುತ್ತದೆ. ಇನ್ನು 7 ವರ್ಷಗಳಲ್ಲಿ ನೀವು ಉಳಿಸುವ ಹಣದಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ.

ಗೃಹ ಸಾಲದ ಕಂತು ಬಡ್ಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಜೊತೆಗೆ ನೀವು ಕೊಡುವ ಬಾಡಿಗೆ ಉಳಿಯುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಸಾಲದ ಕಂತು ತುಂಬುವ ಜವಾಬ್ದಾರಿಯಿಂದಾಗಿ, ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ.

ನೀವು ಕೊಡುವ ಬಾಡಿಗೆ, ತೆರಿಗೆ ಉಳಿತಾಯ ಇವೆರಡರಿಂದಲೇ ಹೆಚ್ಚಿನ ಸಾಲದ ಕಂತು ಭರಿಸಬಹುದು. ಧೈರ್ಯಮಾಡಿ ಗೃಹಸಾಲ  ಪಡೆದು ಮನೆ ಕಟ್ಟಿಸಿರಿ. ಗೃಹಸಾಲ ಪಡೆದು ಮನೆ ಕಟ್ಟಿಸಲು ಇದು ಪರ್ವಕಾಲ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

ಹೆಸರು ಬೇಡ, ಭದ್ರಾವತಿ

* ನಾನು ಜಲ ಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್ ‘ಎ’ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇನ್ನೂ ಎರಡು ವರ್ಷ ಮಾತ್ರ ಸೇವಾವಧಿ ಇದೆ. ನನಗೆ ನಿವೃತ್ತಿಯಿಂದ ₹ 50 ಲಕ್ಷ, ಪಿ.ಎಫ್.ನಿಂದ 35 ಲಕ್ಷ ಬರಬಹುದು. ಪಿಂಚಣಿ ಅಂದಾಜು ₹ 37,000 ಬರಬಹುದು. ನಾನು ಈ ಹಣದಲ್ಲಿ  ₹ 50 ಲಕ್ಷ ಕ್ರಮಬದ್ಧವಾಗಿ ಹೆಂಡತಿಯ ಹೆಸರಿಗೆ ವರ್ಗಾಯಿಸಬೇಕೆಂದಿದ್ದೇನೆ. ಈ ಹಣ ಅವಳೇ ಉಪಯೋಗಿಸಬಹುದೇ ಹಾಗೂ ಈ ಹಣಕ್ಕೆ ನಾನು ನನ್ನ ಮಕ್ಕಳು ವಾರಸದಾರರಾಗಿರಬೇಕು. ಅವಳಿಗೆ ಪ್ರತ್ಯೇಕ ಪ್ಯಾನ್ ಇದೆ. ಈ ಹಣ ಅವಳ ಸ್ವಂತ ದುಡಿಮೆಯಲ್ಲ. ಇಲ್ಲಿ ಬರುವ ಠೇವಣಿ ಬಡ್ಡಿಗೆ ಅವಳೇ ತೆರಿಗೆ ಕೊಡುವಂತಾಗಬೇಕು. ಎಲ್ಲವೂ ಕಾನೂನಿನಂತೆ ಕ್ರಮಬದ್ಧವಾಗಿರಬೇಕು. ನಮಗೆ ಇಬ್ಬರು ಮಕ್ಕಳು. ಅವರು ಸ್ವತಂತ್ರವಾಗಿ ಜೀವನ ನಡೆಸುತ್ತಾರೆ.

ಉತ್ತರ: ನಿಮಗೆ ನಿವೃತ್ತಿಯಿಂದ ಬರುವ ಹಣ ಅಥವಾ ನಿಮ್ಮ ಆದಾಯದಿಂದ ಶೇಖರಿಸಿದ ಹಣ, ನಿಮ್ಮ ಹೆಂಡತಿಗೆ ಇನಾಮಾಗಿ ಕೊಡಬಹುದು ಅಥವಾ ಅವರ ಹೆಸರಿನಲ್ಲಿ ಠೇವಣಿಯಾಗಿರಿಸಬಹುದು. ಆದರೆ ಹೀಗೆ ಹಣ ವರ್ಗಾಹಿಸಿದರೂ, ಅವರ ಹೆಸರಿನಲ್ಲಿಟ್ಟ ನಿಮ್ಮ ದುಡಿಮೆ ಹಣದ ಬಡ್ಡಿ ಅಥವಾ ವರಮಾನ, ನಿಮ್ಮ ಆದಾಯಕ್ಕೆ ಸೇರಿಸಿ ನೀವು ತೆರಿಗೆ ಕೊಡಬೇಕಾಗುತ್ತದೆ. ಇಲ್ಲಿ ವಿನಾಯಿತಿ ಪಡೆಯಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ.

ಠೇವಣಿಗೆ ಯಾರಾದರೊಬ್ಬರು, ಅಂದರೆ ನೀವು ಅಥವಾ ನಿಮ್ಮ ಮಕ್ಕಳಲ್ಲಿ ಒಬ್ಬರು, ನಾಮ ನಿರ್ದೇಶನ ಪಡೆಯಬಹುದು. ಇದೇ ವೇಳೆ ಠೇವಣಿ ವಿಂಗಡಿಸಿ, ನೀವು ನಿಮ್ಮ ಇಬ್ಬರು ಮಕ್ಕಳು.. ಹೀಗೆ ಮೂವರೂ ಬೇರೆ ಬೇರೆ ಠೇವಣಿಗೆ ನಾಮನಿರ್ದೇಶನ ಪಡೆಯಬಹುದು. ನಿಮ್ಮ ಹೆಂಡತಿಗೆ ಪ್ಯಾನ್ ಕಾರ್ಡು ಇದ್ದರೂ ಈ ವಿಚಾರದಲ್ಲಿ ಏನೂ ಉಪಯೋಗವಿಲ್ಲ.

ಹೆಂಡತಿ ಬದಲಾಗಿ ನೀವು ನಿಮ್ಮ ಮಕ್ಕಳಿಗೆ ಹಣ ಠೇವಣಿ ರೂಪದಲ್ಲಿ ಕೊಟ್ಟರೆ, ಇಲ್ಲಿ ಬರುವ ಆದಾಯ ನಿಮ್ಮ ಹೆಸರಿಗೆ ಅಂದರೆ  ನಿಮ್ಮ ಆದಾಯಕ್ಕೆ ಸೇರಿಸಿ, ನೀವು ತೆರಿಗೆ ಕೊಡುವ ಅವಶ್ಯವಿಲ್ಲ. ಆದರೆ ನಿಮ್ಮ ಮಕ್ಕಳು ಠೇವಣಿಯಿಂದ ಬರುವ ಬಡ್ಡಿ ಅವರ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ. ತಂದೆ ಮಕ್ಕಳಿಗೆ ಎಷ್ಟೇ ಹಣ, ಆಸ್ತಿ ಇನಾಮಾಗಿ ಕೊಟ್ಟರೂ, ಹಣ ಪಡೆದ ಹಾಗೂ ಕೊಟ್ಟ ವ್ಯಕ್ತಿಗೆ ಗಿಫ್ಟ್ ಅಥವಾ ಇನ್ನಿತರ ಟ್ಯಾಕ್ಸ್ ಬರುವುದಿಲ್ಲ.

ನಿಮ್ಮ ಜೀವಿತ ಕಾಲದಲ್ಲಿ ನೀವು ದುಡಿದ ಹಣ, ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಜಂಟಿಯಾಗಿ ಠೇವಣಿ ಇರಿಸಿ, ಮಕ್ಕಳಿಗೆ ನಾಮ ನಿರ್ದೇಶನ ಮಾಡುವುದು ಸೂಕ್ತ. ದೊಡ್ಡ ಮೊತ್ತವಾದ್ದರಿಂದ ಹಣ ವಿಂಗಡಿಸಿ 4–5 ಠೇವಣಿ ಬಾಂಡ್‌ ಪಡೆಯಿರಿ. ನಾಮ ನಿರ್ದೇಶನಕ್ಕೂ ಹಾಗೂ ಅತೀ ಅವಶ್ಯ ಬಿದ್ದರೆ, ಅವಧಿಗೆ ಮುನ್ನ ಯಾವುದಾದರೂ ಒಂದು ಬಾಂಡ್‌ ಮುರಿದು ಹಣ ಪಡೆಯಲು ಅನುಕೂಲ.

ರಾಘವೇಂದ್ರ, ಬೆಂಗಳೂರು

lನನ್ನ ತಂಗಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬೇಕೆಂದಿದ್ದೇನೆ. ಪ್ರತಿ ತಿಂಗಳೂ ₹ 1,000 ಪಾವತಿಸಿದರೆ, ನನ್ನ ತಂಗಿಗೆ ಈಗ 5 ವರ್ಷ ಇದರಿಂದ ಅವಳ 21ನೇ ವರ್ಷದಲ್ಲಿ ಎಷ್ಟು ಹಣ ಪಡೆಯ ಬಹುದು. ಈ ಯೋಜನೆ ನನಗೆ ಏನಾದರೂ ಪ್ರಯೋಜನವಿದೆಯೇ ತಿಳಿಸಿ.


ಉತ್ತರ: ಸುಕನ್ಯಾ ಸಮೃದ್ಧಿಯೋಜನೆ 10 ವರ್ಷದ ಒಳಗಿರುವ ಹೆಣ್ಣುಮಕ್ಕಳ ಹೆಸರಿನಲ್ಲಿ ಪೋಷಕರು ಖಾತೆ ತೆರೆಯಬಹುದು. ಹೆಣ್ಣುಮಕ್ಕಳ ಜನನ ಪತ್ರ ಪ್ರಮಾಣ ಹಾಗೂ ವಿಳಾಸದ ಪುರಾವೆ ಒದಗಿಸಬೇಕು. ಆರಂಭಿಕ ಠೇವಣಿ ₹ 1,000, ಪ್ರತೀ ವರ್ಷ ಠೇವಣಿ ಕನಿಷ್ಠ ಮೊತ್ತ ಹಣಕಾಸಿನ ವರ್ಷದಲ್ಲಿ ₹ 100 ಗರಿಷ್ಠ ಠೇವಣಿ ಮೊತ್ತ ಪ್ರತೀ ಹಣಕಾಸಿನ ವರ್ಷದಲ್ಲಿ ₹ 1.50 ಲಕ್ಷ. ಖಾತೆ 14 ವರ್ಷಗಳವರೆಗೆ ಮಾತ್ರ ಜಮಾ ಹಣ ಜಮಾ ಮಾಡಬಹುದು. ಠೇವಣಿ ಮೊತ್ತದ ಶೇ 50ನ್ನು ಹೆಣ್ಣು ಮಗುವಿನ 18 ವರ್ಷ ತುಂಬಿದಾಗ ಮದುವೆ, ವಿದ್ಯಾಭ್ಯಾಸ ಸಲುವಾಗಿ ಮಾತ್ರ ಹಿಂಪಡೆಯಬಹುದು. ಖಾತೆಯ ಪೂರ್ಣಾವಧಿಯು ಖಾತೆ ಪ್ರಾರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಇರುತ್ತದೆ. ಬಡ್ಡಿದರ ಬದಲಾಗುತ್ತಿರುವುದರಿಂದ,  ನಿಮ್ಮ ತಂಗಿ 21ನೇ ವರ್ಷದಲ್ಲಿ ಎಷ್ಟು ಪಡೆಯಬಹುದು ಎನ್ನುವುದನ್ನು ಈಗ ನಿರ್ಧರಿಸಲಾಗುವುದಿಲ್ಲ. ಇದರಿಂದ ನಿಮಗೆ ವೈಯಕ್ತಿಕ ಪ್ರಯೋಜನವಿರದಿದ್ದರೂ ತಂಗಿಯ ಮದುವೆಗೆ ಅನುಕೂಲವಾಗುತ್ತದೆ.



ಸುರೇಶ್, ಕಾಟನ್‌ಪೇಟೆ, ಬೆಂಗಳೂರು

* ನನ್ನ ವಯಸ್ಸು 55, ಪ್ರಿಂಟಿಂಗ್ ಕೆಲಸ ಮಾಡುತ್ತೇನೆ. ನನ್ನ ತಂದೆಯಿಂದ ಅವರ ಸ್ವಯಾರ್ಜಿತ   ಒಂದು ವಾಸದ ಮನೆ ಹಾಗೂ   ನಿವೇಶನ ದಾನ ಪತ್ರದ ಮೂಲಕ 2002ರಲ್ಲಿ ಬಂದಿರುತ್ತದೆ. ನಿವೇಶನವನ್ನು ನಾನು 2011ರಲ್ಲಿ ಮಾರಾಟ ಮಾಡಿ ಬಂದಿರುವ ಹಣ ₹ 21 ಲಕ್ಷ, 2013ರಲ್ಲಿ ಬೇರೆ ಕಡೆ ಒಂದು ಮನೆಯನ್ನು ನನ್ನ ಮತ್ತು ಹೆಂಡತಿ ಹೆಸರಿಗೆ ಖರೀದಿಸಿದೆ. ₹ 20,000 ತಿಂಗಳಿಗೆ ಬಾಡಿಗೆ ಬರುತ್ತದೆ. ಇದಕ್ಕೆ ತೆರಿಗೆ ಇದೆಯೇ, ಇಲ್ಲವೇ? ಇದಕ್ಕೆ ಲೆಕ್ಕ ಪತ್ರ ಇಡುವ ಅವಶ್ಯ ಇದೆಯೇ ತಿಳಿಸಿ.


ಉತ್ತರ: ಮನೆ ಬಾಡಿಗೆ ಕೊಟ್ಟಾಗ,ಹಾಗೆ ಬರುವ ಬಾಡಿಗೆಯಲ್ಲಿ ಸೆಕ್ಷನ್ 24 (ಎ) ಆಧಾರದ ಮೇಲೆ ಶೇ 30 ಕಳೆದು ಬರುವ ಮೊತ್ತ ವ್ಯಕ್ತಿಯ ಆದಾಯಕ್ಕೆ ಸೇರಿಸಿ, ಒಟ್ಟು ವಾರ್ಷಿಕ ಆದಾಯ ₹ 2.50 ಲಕ್ಷ ದಾಟಿದಲ್ಲಿ, ಆ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ನಿಮಗೆ ವಾರ್ಷಿಕ ಬಾಡಿಗೆ ₹ 2.40 ಲಕ್ಷ ಬರುತ್ತಿದ್ದು, ಇದರಲ್ಲಿ ಶೇ 30 ಕಳೆದಾಗ ಬರುವ ಮೊತ್ತ ₹ 1.68 ಲಕ್ಷ ಹಾಗೂ ಪ್ರಿಂಟಿಂಗ್ ಕೆಲಸದಲ್ಲಿ ಬರುವ ವಾರ್ಷಿಕ ಆದಾಯ ಸೇರಿಸಿ,₹ 2.50 ಲಕ್ಷ ದಾಟಿದಲ್ಲಿ ಆ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ತೆರಿಗೆ ಉಳಿಸಲು, ತೆರಿಗೆಗೆ ಒಳಗಾಗುವ ಮೊತ್ತ 5 ವರ್ಷಗಳ ಬ್ಯಾಂಕ್ ಠೇವಣಿ ಮಾಡಬಹುದು. ಬಾಡಿಗೆ ಚೆಕ್ ಮುಖಾಂತರ ಸ್ವೀಕರಿಸಿದರೆ ಬೇರೆ ಲೆಕ್ಕ ಪತ್ರ ಇಡುವ ಅವಶ್ಯವಿಲ್ಲ.

ಎಸ್‌.ಆರ್‌. ರಘು, ಬೆಂಗಳೂರು

* ವಯಸ್ಸು 75. ನಿವೃತ್ತಿ 2000 ರಲ್ಲಿ. ಆದಾಯ ನಿವೃತ್ತಿ ವೇತನ ₹ 2.40 ಲಕ್ಷ, ಬಾಡಿಗೆ ₹ 1.90 ಲಕ್ಷ. ಒಟ್ಟು ಆದಾಯ ₹ 3.73 ಲಕ್ಷ ಬಾಡಿಗೆದಾರರಿಂದ ₹ 2 ಲಕ್ಷ ಸೆಕ್ಯೂರಿಟಿ ಡಿಪಾಸಿಟ್‌ ಪಡೆದಿದ್ದೆ. ಮನೆ ಕಟ್ಟಲು ಮಾಡಿದ ಖಾಸಗಿ ಸಾಲ ತೀರಿಸಲು, ಸಹಕಾರಿ ಬ್ಯಾಂಕಿನಿಂದ ಪಡೆದ ವೈಯಕ್ತಿಕ ಸಾಲದ ಕಂತು ₹ 9,500. ನನ್ನ ವೈದ್ಯಕೀಯ ವೆಚ್ಚ ಮಾಸಿಕ ₹ 1,000. ನಾನು ಐಟಿ ರಿಟರ್ನ್‌ ಸಲ್ಲಿಸಬೇಕೇ? ರಿಟರ್ನ್‌ ಆಡಿಟರ್‌ ಮುಖಾಂತರ ಸಲ್ಲಿಸಬೇಕೇ? ವೈದ್ಯಕೀಯ ಹಾಗೂ ನನ್ನ ಇತರೆ ವೆಚ್ಚಗಳನ್ನು ಆದಾಯದಲ್ಲಿ ಕಳೆಯಬಹುದೇ? ತೆರಿಗೆ ಉಳಿಸಲು ದಾರಿ ತೋರಿಸಿ.


ಉತ್ತರ: ನಿಮ್ಮ ಪಿಂಚಣಿ ಆದಾಯ,  ಹೊರತು ಪಡಿಸಿ ಬಾಡಿಗೆ ಆದಾಯದಲ್ಲಿ ಶೇ 30 ಸೆಕ್ಷನ್‌ 24(ಎ) ಆಧಾರದ ಮೇಲೆ ಕಳೆದರೆ ಒಟ್ಟು ಆದಾಯ ₹ 3.73ಲಕ್ಷ ಆಗುತ್ತದೆ.

ನೀವು ಸೆಕ್ಯುರಿಟಿ ಡಿಪಾಸಿಟ್‌ ಠೇವಣಿಯಾಗಿರಿಸಿದಲ್ಲಿ ಅಲ್ಲಿ ಬರುವ ಬಡ್ಡಿ ಕೂಡಾ ಒಟ್ಟು ಆದಾಯಕ್ಕೆ ಸೇರಿಸಬೇಕು. ₹ 3 ಲಕ್ಷ ಒಟ್ಟು ಆದಾಯದಿಂದ ಕಳೆದು

₹ 73,000ಕ್ಕೆ ಶೇ 10 ರಂತೆ ತೆರಿಗೆ ಹಾಗೂ ಬರುವ ತೆರಿಗೆ ಮೇಲೆ ಶೇ 3 ಶಿಕ್ಷಣ ಸೆಸ್‌ ತುಂಬಬೇಕು.  ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲದ ಬಡ್ಡಿ ಹಾಗೂ ಇನ್ನಿತರ ವೆಚ್ಚ ಆದಾಯದಲ್ಲಿ ಕಳೆಯಲು ಬರುವುದಿಲ್ಲ. ತೆಗಿಗೆ ಉಳಿಸಲು ₹ 78,000, 5 ವರ್ಷಗಳ ಠೇವಣಿ ಮಾಡಬಹುದು.  ರಿಟರ್ನ್‌ ತುಂಬಲೇ ಬೇಕು ಹಾಗೂ ಆಡಿಟರ್‌ ಮುಖಾಂತರ ತುಂಬಿದರೆ ಕ್ಷೇಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry