ಅಂತರ್ಜಾಲದ ಸುರಕ್ಷಿತ ಬಳಕೆ ಹೇಗೆ?

7

ಅಂತರ್ಜಾಲದ ಸುರಕ್ಷಿತ ಬಳಕೆ ಹೇಗೆ?

Published:
Updated:
ಅಂತರ್ಜಾಲದ ಸುರಕ್ಷಿತ ಬಳಕೆ ಹೇಗೆ?

ನಾವು ಬಳಸುತ್ತಿರುವ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಉತ್ತಮ ತಂತ್ರಜ್ಞಾನವನ್ನು ಒಳಗೊಂಡಿವೆ. ಅಂತರ್ಜಾಲವನ್ನು ಯಾವ ರೀತಿ ಬಳಸಿದರೂ ಯಾವುದೇ ಸಮಸ್ಯೆ ಇಲ್ಲ ಎಂದುಕೊಳ್ಳುವುದು ತಪ್ಪು. ಏಕೆಂದರೆ ಈಚೆಗಷ್ಟೇ ನಡೆದ ವನ್ನಾಕ್ರೈ 2.0 ಎಂಬ ಕುತಂತ್ರಾಂಶದ ದಾಳಿಗೆ 150ಕ್ಕೂ ಅಧಿಕ ರಾಷ್ಟ್ರಗಳು ತತ್ತರಿಸಿದ್ದವು.

ಇಂತಹ ದಾಳಿಗಳು ಮತ್ತಷ್ಟು ಆಗಲಿವೆ ಎಂದು ಸೈಬರ್ ವಿಶ್ಲೇಷಕರು ಹೇಳುತ್ತಿರುವುದರಿಂದ ಅಂತರ್ಜಾಲ ಬಳಸುತ್ತಿರುವವರು ಎಚ್ಚರವಹಿಸುವುದು ಅಗತ್ಯ. ಹೀಗಾಗಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಉತ್ತಮ ರಕ್ಷಣೆ ಒದಗಿಸುವಂತಹ ಕೆಲವು ತಂತ್ರಾಂಶಗಳ ಮಾಹಿತಿ ಇಲ್ಲಿದೆ.

ಪ್ರತಿ ಅಕ್ಷರವೂ ಎನ್‌ಕ್ರಿಪ್ಟ್‌

ನೀವು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡುವ ಪ್ರತಿ ಅಕ್ಷರವನ್ನೂ ತಿಳಿದುಕೊಳ್ಳುವಂತಹ ಕೆಲವು ಕುತಂತ್ರಾಂಶಗಳನ್ನು ಹ್ಯಾಕರ್‌ಗಳು ಅಭಿವೃದ್ಧಿಪಡಿಸುತ್ತಿರುತ್ತಾರೆ. ಇದಕ್ಕೆ ಉತ್ತಮ ಪರಿಹಾರವೆಂದರೆ ನೀವು ಟೈಪ್‌ ಮಾಡಿದ ಅಕ್ಷರ ಯಾವುದು ಎಂದು ಅವರಿಗೆ ತಿಳಿಯದಂತೆ ನೋಡಿಕೊಳ್ಳುವುದು.

ಇದು ‘ಕೀ ಸ್ಕ್ರಾಂಬ್ಲರ್‌ ಪರ್ಸ್‌ನಲ್’ ಎಂಬ ತಂತ್ರಾಂಶದ ಮೂಲಕ ಸಾಧ್ಯವಾಗುತ್ತದೆ. ಇದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಅಳವಡಿಸಿದರೆ  ನೀವು ಟೈಪ್‌ ಮಾಡುವ ಪ್ರತಿ ಅಕ್ಷರವನ್ನೂ ಹ್ಯಾಕರ್‌ಗಳಿಗೆ ಗೊತ್ತಾಗದ ಹಾಗೆ ಇದು ಎನ್‌ಕ್ರಿಪ್ಟ್‌ ಮಾಡುತ್ತದೆ.

ಟೋರ್ ಬ್ರೌಸರ್‌ನ ಬಹು ಹಂತದ ರಕ್ಷಣೆ...

ಈರುಳ್ಳಿಗೆ ಪೊರೆಪೊರೆಯಾಗಿ ರಕ್ಷಣೆ ಇರುತ್ತದೆ. ಅದೇ ರೀತಿ ‘ಟೋರ್‌ ಬ್ರೌಸರ್’ ತಂತ್ರಾಂಶದ ಮೂಲಕ ನಿಮ್ಮ ಕಂಪ್ಯೂಟರ್‌ಗೆ ಹಂತ ಹಂತದ ರಕ್ಷಣೆ ಒದಗಿಸಬಹುದು.

ಇದು ಮೋಜಿಲ್ಲಾ ಫೈರ್‌ಫಾಕ್ಸ್‌ ಸಹಾಯದಿಂದಲೇ ಕೆಲಸ ಮಾಡುತ್ತದೆ. ಇದು ನೋಡಲು ಸಾಧಾರಣ ಬ್ರೌಸರ್‌ನಂತೆ ಕಂಡರೂ ಇದರ ಮೂಲಕ ಕಳುಹಿಸುವ ಸಮಾಚಾರಗಳ ವಿವರಗಳನ್ನು ಪತ್ತೆಹಚ್ಚುವುದು ಅಷ್ಟೊಂದು ಸುಲಭವಲ್ಲ.

ಈ ಬ್ರೌಸರ್‌ ಮೂಲಕ ಮೇಲ್‌ ಕಳುಹಿಸಿದರೆ ಅದು ವಿವಿಧ ದೇಶಗಳ ಸರ್ವರ್‌ಗಳನ್ನು ಬದಲಾಯಿಸಿ ಗುರಿ ತಲುಪುತ್ತದೆ. ಅಲ್ಲದೇ, ನಮ್ಮ ದೇಶದಲ್ಲಿ ನೋಡಲು ಸಾಧ್ಯವಿಲ್ಲದ ಕೆಲವು ವೆಬ್‌ಸೈಟ್‌ಗಳನ್ನೂ ಇದರ ಮೂಲಕ ತೆರೆಯಬಹುದು

ಎಲ್ಲಕ್ಕೂ ಒಂದೇ ತಂತ್ರಾಂಶದ ರಕ್ಷಣೆ

ಅಂತರ್ಜಾಲದಲ್ಲಿ ಹೆಚ್ಚಾಗಿ ಬಳಕೆಯಾಗುವುದು ಬ್ರೌಸರ್, ಇನ್‌ಸ್ಟಂಟ್‌ ಮೆಸೆಂಜರ್, ಇಮೇಲ್‌ನಂತಹ ಸಾಧನಗಳೇ. ಇವುಗಳಿಗೆ ಪ್ರತ್ಯೇಕವಾಗಿ ರಕ್ಷಣೆ ಒದಗಿಸುವುದು ಕಷ್ಟ. ಹೀಗಾಗಿ ಈ ಸಾಧನಗಳಿಗೆ ಫ್ಯಾಮಿಲಿ ಪ್ಯಾಕ್‌ನಂತೆ ರಕ್ಷಣೆ ಒದಗಿಸುವ ಸಾಫ್ಟ್‌ವೇರ್ ಇದ್ದರೆ ಅದಕ್ಕಿಂತ ಹೆಚ್ಚಿನ ಅನುಕೂಲ ಇನ್ನೇನಿದೆ ಹೇಳಿ.

ಇದಕ್ಕೆಂದೇ ಟೈಲ್ಸ್‌ನಂತಹ ತಂತ್ರಾಂಶ ಲಭ್ಯವಿದೆ. ಇದು ಉತ್ತಮ ದರ್ಜೆಯ ತಂತ್ರಜ್ಞಾನ ಒಳಗೊಂಡಿರುವ ತಂತ್ರಾಂಶವಾಗಿದ್ದು, ಬ್ರೌಸಿಂಗ್‌, ಮೆಸೇಜಿಂಗ್, ಇ–ಮೇಲ್, ಆಫೀಸ್‌ ಆ್ಯಪ್‌ಗಳು ಇದರಲ್ಲಿ  ಇರುತ್ತವೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಪ್ರೊಸೆಸ್‌ ದೀರ್ಘವಾಗಿದ್ದರೂ ಕಂಪ್ಯೂಟರ್‌ಗೆ ಮಾತ್ರ ಉತ್ತಮ ರಕ್ಷಣೆ ದೊರೆಯುವುದರಲ್ಲಿ ಸಂಶಯವಿಲ್ಲ.

ಎಲ್ಲವನ್ನೂ ಹೀಗೆ ಬಚ್ಚಿಡಿ

ಕಂಪ್ಯೂಟರ್‌ನಲ್ಲಿರುವ ನಿಮ್ಮ ಮಾಹಿತಿ ಅಮೂಲ್ಯವಾಗಿದ್ದರೆ ಅದು ಇತರರ ಕಣ್ಣಿಗೆ ಬೀಳದಂತೆ ರಕ್ಷಿಸಿಕೊಳ್ಳುವುದು ನಿಮ್ಮ ಕೆಲಸ. ಮಕ್ಕಳು, ಅತಿಥಿಗಳು ನಿಮ್ಮ ಕಂಪ್ಯೂಟರ್‌ ಬಳಸುವಾಗ ಸಿಸ್ಟಂನಲ್ಲಿರುವ ಫೈಲ್‌ಗಳು ಅವರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಲು ಹಲವು ತಂತ್ರಾಂಶಗಳಿವೆ. ಇಂತಹ ತಂತ್ರಾಂಶಗಳಲ್ಲಿ ‘ವೈಸ್‌ ಫೋಲ್ಡರ್‌ ಹೈಡರ್’ ತಂತ್ರಾಂಶ ನಿಮ್ಮ ಮಾಹಿತಿಗೆ ಉತ್ತಮ ರಕ್ಷಣೆ ಒದಗಿಸಬಲ್ಲದು.

ಇದನ್ನು ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಅಳವಡಿಸಿಕೊಂಡರೆ ಪ್ರತ್ಯೇಕ ಫೋಲ್ಡರ್‌ ಒಂದು ಕ್ರಿಯೇಟ್‌ ಆಗಿ  ನಿಮ್ಮ ಫೈಲ್ಸ್, ಚಿತ್ರಗಳು ಇತ್ಯಾದಿ ಭದ್ರವಾಗಿರುತ್ತವೆ.

ಒಂದೇ ಕಲ್ಲಿಗೆ ಆರು ಹಕ್ಕಿ

ಕಚೇರಿ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಹೋಟೆಲ್‌,ರೆಸ್ಟೋರಂಟ್‌ ಹೀಗೆ ಹಲವು ಕಡೆ ವೈಫೈ ಸೌಲಭ್ಯ ಇರುತ್ತದೆ. ಇಂತಹ ಕಡೆ ವೈಫೈ ಮೂಲಕ ಅಂತರ್ಜಾಲ ಬಳಸುವುದು ಅಷ್ಟೊಂದು ಒಳ್ಳೆಯದಲ್ಲ. ಆದರೆ ನಿಮ್ಮ  ಮೊಬೈಲ್‌ನಲ್ಲಿ ವಿಪಿಎನ್‌ ತಂತ್ರಾಂಶಗಳಿದ್ದರೆ ಸಮಸ್ಯೆ ಇಲ್ಲ.ಇಂತಹ ವಿಪಿಎನ್‌ ತಂತ್ರಾಂಶಗಳಲ್ಲಿ ಸೈಬರ್ ಘೋಸ್ಟ್‌ ಕೂಡ ಒಂದು. ಇದರ ಮೂಲಕ  ಎನಾನಿಮಸ್‌ ಬ್ರೌಸಿಂಗ್, ಸ್ಟ್ರೀಮಿಂಗ್ ಸೈಟ್ಸ್ ಅನ್‌ಬ್ಲಾಕ್‌, ಬೋರೆಂಟಿಂಗ್, ಅಂತರ್ಜಾಲ ಸಂಪರ್ಕ ಸುರಕ್ಷತೆ, ವೆಬ್‌ಸೈಟ್‌ ಅನ್‌ಬ್ಲಾಕಿಂಗ್‌ ಮತ್ತು ವಿಪಿಎನ್‌ ಸುರಕ್ಷತೆಯಂತಹ ಆರು ರೀತಿಯ ಸೌಲಭ್ಯಗಳನ್ನು  ಪಡೆಯಬಹುದು.

ಚಾಟಿಂಗ್ ಸುರಕ್ಷಿತವಾಗಿರಲಿ

ಈಗ ಮಾಹಿತಿ ಹಂಚಿಕೊಳ್ಳಲು, ಅಭಿಪ್ರಾಯ ತಿಳಿಸಲು, ಸಂದೇಶ ಕಳುಹಿಸಲು ವಾಟ್ಸ್‌ಆ್ಯಪ್‌, ಹೈಕ್‌, ಟೆಲಿಗ್ರಾಂನಂತಹ ಮೆಸೇಜ್‌ ತಂತ್ರಾಶಗಳನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ.

ವಾಟ್ಸ್‌ಆ್ಯಪ್‌ ಮಾಹಿತಿಗೆ ಕನ್ನ ಹಾಕದಂತೆ ಸಂಸ್ಥೆಯವರು ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಸುರಕ್ಷತೆಯಲ್ಲಿ ವಾಟ್ಸ್‌ಆ್ಯಪ್‌ ಅನ್ನು  ಮೀರಿಸಿದ ಮೆಸೆಂಜಿಗ್‌ ತಂತ್ರಾಂಶಗಳು ಹಲವು ಇವೆ.

ಸಿಗ್ನಲ್‌ನಂತಹ ಆನ್‌ಲೈನ್‌  ಚಾಟಿಂಗ್ ತಂತ್ರಾಂಶಗಳಲ್ಲಿ ನಿಮ್ಮ ಸಂಭಾಷಣೆ, ಮಾಹಿತಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಎಂಡ್‌ ಟು ಎಂಡ್ ಎನ್‌ಕ್ರಿಪ್ಟ್‌, ವಿಒಐಪಿ ಫೋನ್‌ ಕಾಲ್ಸ್, ರೀಡ್‌ ರಿಸಿಪ್ಟ್ಸ್‌ನಂತಹ ಹಲವು ಸೌಲಭ್ಯಗಳೊಂದಿಗೆ ಈ ತಂತ್ರಾಶವನ್ನು ಅಭಿವೃದ್ಧಿಪಡಿಸಲಾಗಿದೆ. v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry