ಅಮಾಗಿ: ಟಿವಿ ಜಾಹೀರಾತಿನ ಮಾಂತ್ರಿಕತೆ

7

ಅಮಾಗಿ: ಟಿವಿ ಜಾಹೀರಾತಿನ ಮಾಂತ್ರಿಕತೆ

Published:
Updated:
ಅಮಾಗಿ: ಟಿವಿ ಜಾಹೀರಾತಿನ ಮಾಂತ್ರಿಕತೆ

ಇತ್ತೀಚಿನ ವರ್ಷಗಳಲ್ಲಿ ಟೆಲಿವಿಷನ್‌  ಕಾರ್ಯಕ್ರಮಗಳ ಪ್ರಸಾರ ಮತ್ತು ಜಾಹೀರಾತು ಉದ್ದಿಮೆಯ ಸ್ವರೂಪವು ವ್ಯಾಪಕವಾಗಿ ದೇಶದಾದ್ಯಂತ ಬದಲಾಗಿದೆ. ಗ್ರಾಹಕರ ಅಭಿರುಚಿಗಳು ಬದಲಾದಂತೆ, ನಿರ್ದಿಷ್ಟ ಗ್ರಾಹಕರನ್ನೇ ತಲುಪುವಂತಹ ಜಾಹೀರಾತುಗಳ ಅಗತ್ಯವೂ ಈಗ ಹೆಚ್ಚಿದೆ.

2008ರಲ್ಲಿ ಏನಾದರೂ ಹೊಸ ಉದ್ದಿಮೆ ಸ್ಥಾಪಿಸಬೇಕು ಎಂದು ಹಂಬಲಿಸಿದ ಮೂವರು ತಂತ್ರಜ್ಞರ ಪಾಲಿಗೆ, ದೇಶದಲ್ಲಿ ಹೆಚ್ಚುತ್ತಿರುವ ಟೆಲಿವಿಷನ್‌ ವೀಕ್ಷಣೆ ಮತ್ತು ಟಿವಿ ಚಾನೆಲ್‌ಗಳ ಭರಾಟೆಯು  ಹೆಚ್ಚು ಆಕರ್ಷಕವಾಗಿ ಕಂಡಿತ್ತು. ಅದೇ ಕಾರಣಕ್ಕೆ  ಇವರ ಕನಸಿನ ಕೂಸಿನ ರೂಪದಲ್ಲಿ ಅಮಾಗಿ ಮೀಡಿಯಾ ಲ್ಯಾಬ್ಸ್‌ ಅಸ್ತಿತ್ವಕ್ಕೆ ಬಂದಿತ್ತು. ಈ ನವೋದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಈ ಮೂವರ ಕೊಡುಗೆ  ಗಮನಾರ್ಹವಾಗಿದೆ.

ತಂತ್ರಜ್ಞಾನ ರಂಗದ ಹಿನ್ನೆಲೆಯಿಂದ ಬಂದಿರುವ ಕೆ. ಎ. ಶ್ರೀನಿವಾಸನ್‌, ಶ್ರೀವಿದ್ಯಾ   ಮತ್ತು ಭಾಸ್ಕರ್‌ ಸುಬ್ರಮಣಿಯನ್‌ ಅವರು 2000ರಲ್ಲಿ ಬೆಂಗಳೂರಿನಲ್ಲಿ   ವೈರ್‌ಲೆಸ್‌ ತಂತ್ರಜ್ಞಾನ ಸಂಸ್ಥೆ ಇಂಪಲ್ಸ್‌ಸಾಫ್ಟ್‌  ಕಟ್ಟಿ ಬೆಳೆಸಿ, 2005ರಲ್ಲಿ ಅಮೆರಿಕದ ಸಂಸ್ಥೆಗೆ ಮಾರಾಟ ಮಾಡಿದ್ದರು. ಆನಂತರ ತಂತ್ರಜ್ಞಾನ ಆಧಾರಿತ ಹೊಸ  ಬಗೆಯ ಉದ್ದಿಮೆ ಸ್ಥಾಪನೆಯ ಹುಡುಕಾಟದಲ್ಲಿ ಇದ್ದರು.

ಭಾರತದಲ್ಲಿ ಏನಾದರೂ ಹೊಸ ಸಾಹಸಕ್ಕೆ ಕೈಹಾಕಬೇಕು ಎಂದು ಆಲೋಚಿಸುವಾಗ,  ಟೆಲಿವಿಷನ್‌  ಜಾಹೀರಾತು ಕ್ಷೇತ್ರದಲ್ಲಿ  ಹೊಸತನ್ನು ತರುವ ಪ್ರಯತ್ನಕ್ಕೆ ಕೈಹಾಕಿದ್ದರು. ಜಾಹೀರಾತು ಮತ್ತು ಟೆಲಿವಿಷನ್‌ ಚಾನೆಲ್‌ಗಳ ಮಧ್ಯೆ ಇರುವ ದೊಡ್ಡ ಅಂತರ ತುಂಬುವ ಉದ್ದೇಶದಿಂದ ಅಮಾಗಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಟೆಲಿವಿಷನ್‌ ಕಾರ್ಯಕ್ರಮ ಪ್ರಸಾರ ಮಾಡುವವರು ಮತ್ತು ಜಾಹೀರಾತುದಾರರಿಗೆ ಮೌಲ್ಯವರ್ಧಿತ ಸೇವೆ ಒದಗಿಸುವ ಮಾಧ್ಯಮ ತಂತ್ರಜ್ಞಾನ ಸಂಸ್ಥೆ ಇದಾಗಿದೆ. ಸ್ವಾತಂತ್ರ್ಯ ಮತ್ತು ಹೊಸತನವೇ ಸಂಸ್ಥೆಯ ಮುಖ್ಯ ತತ್ವಗಳಾಗಿವೆ.

ಟೆಲಿವಿಷನ್‌ ಜಾಹೀರಾತುಗಳನ್ನು ಮನೆ ಮನೆಗಳಿಗೆ ವಿಶಿಷ್ಟ ಬಗೆಯಲ್ಲಿ ತಲುಪಿಸುವ ಮತ್ತು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಸ್‌ಎಂಇ) ಉತ್ಪನ್ನಗಳಿಗೆ ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆ ಸೃಷ್ಟಿಸುವುದು ಮತ್ತು ವಿಸ್ತರಿಸಲು ನೆರವಾಗುತ್ತಿದೆ. ಕ್ಲೌಡ್‌ ಆಧಾರಿತ ಟೆಲಿವಿಷನ್‌ ಕಾರ್ಯಕ್ರಮ ಪ್ರಸಾರ ತಂತ್ರಜ್ಞಾನ ಒದಗಿಸುವ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ.

ಟೆಲಿವಿಷನ್‌ ಜಾಹೀರಾತು ಕ್ಷೇತ್ರದಲ್ಲಿ  ಸಂಸ್ಥೆಯು ಹಲವು ಪೇಟೆಂಟ್‌ಗಳನ್ನೂ ಹೊಂದಿದೆ. ಸ್ಥಳೀಯ ಜಾಹೀರಾತುಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಚಾನೆಲ್‌ನಲ್ಲಿ ಪ್ರಸಾರ ಮಾಡಲು ಸಂಸ್ಥೆಯು ಅನುವು ಮಾಡಿಕೊಡುತ್ತದೆ.  ತಮ್ಮ ನಿರ್ದಿಷ್ಟ ಗ್ರಾಹಕರನ್ನು ನೇರವಾಗಿ ತಲುಪಲು ಟೆಲಿವಿಷನ್‌ ಜಾಹೀರಾತುದಾರರಿಗೆ ನೆರವಾಗುತ್ತಿದೆ.

ದುಬಾರಿ ಮೊತ್ತದ ಕಾರಣಕ್ಕೆ ಟೆಲಿವಿಷನ್‌ ಚಾನೆಲ್‌ ಪ್ರಚಾರದಿಂದ ದೂರ ಇರುವ ಸಣ್ಣ –ಪುಟ್ಟ  ಬ್ರ್ಯಾಂಡ್‌ನ ಉದ್ದಿಮೆಗಳ ಉತ್ಪನ್ನ ಪ್ರಚಾರಕ್ಕೆ ಕಡಿಮೆ ವೆಚ್ಚದಲ್ಲಿ ಪ್ರಚಾರದ ವೇದಿಕೆ  ಕಲ್ಪಿಸಿಕೊಡುತ್ತಿದೆ. ದೊಡ್ಡ ಪ್ರಮಾಣದ ಜಾಹೀರಾತುದಾರರು ನಿರ್ದಿಷ್ಟ ಪ್ರದೇಶದ ಗ್ರಾಹಕರನ್ನು (geo-target) ತಲುಪಲೂ  ನೆರವಾಗುತ್ತಿದೆ.

‘ಅಮಾಗಿ’ ಅಂದರೆ ಸುಮೇರಿಯಾ ಭಾಷೆಯಲ್ಲಿ ಸ್ವಾತಂತ್ರ್ಯ ಎಂದರ್ಥ. ಟೆಲಿವಿಷನ್‌ ಜಾಹೀರಾತುಗಳನ್ನು ವೀಕ್ಷಿಸುವಲ್ಲಿ ವೀಕ್ಷಕರಿಗೆ ಸ್ವಾತಂತ್ರ್ಯ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ನಿರ್ದಿಷ್ಟ ಪ್ರದೇಶದ ನಿರ್ದಿಷ್ಟ ಗ್ರಾಹಕರನ್ನು  ಗುರಿಯಾಗಿರಿಸಿಕೊಂಡು ನೂರಾರು ಚಾನೆಲ್‌ಗಳ ಅಸಂಖ್ಯ ಜಾಹೀರಾತುಗಳನ್ನು ಸಮರ್ಪಕವಾಗಿ ತಲುಪಿಸುವ ಸಂಕೀರ್ಣ ಸ್ವರೂಪದ ಕ್ಲೌಡ್‌ ತಂತ್ರಜ್ಞಾನ ಆಧಾರಿತ ವಹಿವಾಟು ಇದಾಗಿದೆ.   ಆ ಕಲ್ಪನೆಯ ಮೂಸೆಯಲ್ಲಿಯೇ ಅಮಾಗಿ ಸಂಸ್ಥೆ ರೂಪು ತಳೆದಿತ್ತು.

ಅಲ್ಲಿಯವರೆಗೆ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಇಂತಹ ಪರಿಕಲ್ಪನೆಯ ಪರಿಚಯವೇ ಇದ್ದಿರಲಿಲ್ಲ.  ದೇಶದ ವಿವಿಧ ಭಾಗಗಳಲ್ಲಿ ಒಂದೇ ಸಮಯದಲ್ಲಿ ಬೇರೆ, ಬೇರೆ ಜಾಹೀರಾತುಗಳ ಮೂಲಕ ನಿರ್ದಿಷ್ಟ ಗ್ರಾಹಕರನ್ನು ತಲುಪಿ ವಹಿವಾಟು ವಿಸ್ತರಿಸಿಕೊಳ್ಳಲು ಈ ತಂತ್ರಜ್ಞಾನ ನೆರವಾಗುತ್ತಿದೆ. ಉಪಗ್ರಹ ಸಂಕೇತಗಳನ್ನು ವಿಭಿನ್ನ ನೆಲೆಯಲ್ಲಿ ವಿಂಗಡಿಸಿ ಜಾಹೀರಾತುದಾರರ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಪ್ರದೇಶಗಳಲ್ಲಿ ಬಿತ್ತರಿಸುವ ವಿಶಿಷ್ಟ ತಂತ್ರಜ್ಞಾನವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ – ಇಂತಹ ತಂತ್ರಜ್ಞಾನ  ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ‘ಅಮಾಗಿ‘ಯದು. ಈ ತಂತ್ರಜ್ಞಾನವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಒಂದು ರೀತಿಯಲ್ಲಿ ವರದಾನವಾಗಿದೆ. ಸಣ್ಣ ಉದ್ದಿಮೆದಾರರಿಗೆ ತುಂಬ ಉಪಯುಕ್ತ. ಅವರಿಗೆ ಬೇಕಾದ ಗ್ರಾಹಕರನ್ನೇ ತಲುಪಲು ನೆರವಾಗಲಿದೆ. ಈ ಉದ್ದಿಮೆದಾರರು ಸೀಮಿತ ಪ್ರಮಾಣದಲ್ಲಿ, ಕಡಿಮೆ ವೆಚ್ಚದಲ್ಲಿ ತಮ್ಮ ನಿರ್ದಿಷ್ಟ ಗ್ರಾಹಕರನ್ನು ತಲುಪಲು  ಸಹಾಯ ಹಸ್ತ ಚಾಚುತ್ತಿದೆ.

ಉದ್ದಿಮೆ ಸಂಸ್ಥೆಗಳ ಉತ್ಪನ್ನ ಮತ್ತು ಸೇವೆಗಳ ಪ್ರಚಾರಕ್ಕೆ ಪೂರಕವಾದ ಜಾಹೀರಾತುಗಳನ್ನು ಸೃಷ್ಟಿಸುವ, ಟೆಲಿವಿಷನ್‌ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಸಮಯ ಖರೀದಿಸುವ ಕೆಲಸಗಳನ್ನೂ ಇದು ಮಾಡುತ್ತಿದೆ.

ಹೊಸ ಉತ್ಪನ್ನದ ಮಾರುಕಟ್ಟೆ ಪರೀಕ್ಷಿಸಲು ಸೀಮಿತ ಪ್ರದೇಶದಲ್ಲಿ ಜಾಹೀರಾತು ಪ್ರಸಾರ ಮಾಡಲೂ ‘ಅಮಾಗಿ’ಯ ತಂತ್ರಜ್ಞಾನ ನೆರವಿನಿಂದ  ಸಾಧ್ಯವಿದೆ. ರಾಷ್ಟ್ರೀಯ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದ ಮಧ್ಯೆ  ತೂರಿ ಬರುವ ಜಾಹೀರಾತುಗಳನ್ನು ಪ್ರದೇಶವಾರು ವಿಂಗಡಿಸುವ ಕೆಲಸವನ್ನು  ‘ಅಮಾಗಿ’ ಸಮರ್ಥವಾಗಿ ನಿರ್ವಹಿಸುತ್ತಿದೆ.

ಜನಪ್ರಿಯ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಸಂಸ್ಥೆಗಳ ಅಗತ್ಯಕ್ಕೆ ತಕ್ಕಂತೆ  ಪ್ರದೇಶವಾರು ಬೇರೆ, ಬೇರೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಸಾಧ್ಯವಾಗುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಸಣ್ಣ ಕೈಗಾರಿಕೆಗಳು ತಮ್ಮ  ಉತ್ಪನ್ನಗಳ ಪ್ರಚಾರದ ಎಲ್ಲ ಹೊಣೆಗಾರಿಕೆಯನ್ನು ‘ಅಮಾಗಿ’ಗೆ ಒಪ್ಪಿಸಿ ನಿಶ್ಚಿಂತೆಯಿಂದ ಇರಬಹುದು.

ವಿಭಿನ್ನ ಬಗೆಯ ಜಾಹೀರಾತುದಾರರ ಅಗತ್ಯ ಆಧರಿಸಿ ಚಾನೆಲ್‌ಗಳಲ್ಲಿ ಸಮಯ  ನಿಗದಿಪಡಿಸಲೂ ಸಂಸ್ಥೆ ನೆರವಾಗುತ್ತಿದೆ.  ಮಾಧ್ಯಮದ ಮಾರುಕಟ್ಟೆಯು ಪ್ರತಿಯೊಬ್ಬರನ್ನೂ ತಲುಪಲೂ ಇದೊಂದು ಉತ್ತಮ ವೇದಿಕೆಯಾಗಿದೆ. ಒಂದೇ ಸರಕಿನ ಜಾಹೀರಾತು, ಒಂದೇ ಸಮಯದಲ್ಲಿ,  ಬೇರೆ, ಬೇರೆ ಭಾಷೆಗಳಲ್ಲಿ, ಬೇರೆ, ಬೇರೆ ಪ್ರದೇಶಗಳಲ್ಲಿ  ವಿಭಿನ್ನ ಸ್ವರೂಪದಲ್ಲಿ ಪ್ರಸಾರವಾಗುವುದನ್ನು ಈ ಸಂಸ್ಥೆ ಸಾಧ್ಯಮಾಡಿದೆ. ಇದರಿಂದ ಜಾಹೀರಾತುದಾರರ ಹಣ ಉಳಿತಾಯವಾಗುವುದರ ಜತೆಗೆ, ನಿರ್ದಿಷ್ಟ ಗ್ರಾಹಕರನ್ನು ತಲುಪಲು  ಸಾಧ್ಯವಾಗಲಿದೆ. ಜಾಹೀರಾತುಗಳನ್ನು ಖರೀದಿಸಿ ಚಾನೆಲ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ.

‘ದೇಶಿ ಜಾಹೀರಾತು ಮಾರುಕಟ್ಟೆ ಗಾತ್ರ ₹ 50 ಸಾವಿರ ಕೋಟಿಗಳಷ್ಟಿದೆ. ಇದರಲ್ಲಿ ಟೆಲಿವಿಷನ್‌ ಮಾರುಕಟ್ಟೆ ₹ 20 ಸಾವಿರ ಕೋಟಿಗಳಷ್ಟಿದೆ.  ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಭಾರತದಲ್ಲಿ ಜಾಹೀರಾತಿನ ಆರ್ಥಿಕತೆ ಸ್ವರೂಪ ಇನ್ನಷ್ಟು  ಬದಲಾಗಲಿದೆ. ಆ ಸವಾಲುಗಳನ್ನು ಎದುರಿಸಲು ಸಂಸ್ಥೆ ಸಜ್ಜಾಗುತ್ತಿದೆ’ ಎಂದೂ ಭಾಸ್ಕರ್‌ ಹೇಳುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry