ಕಹಿ ಘಟನೆಯೇ ಯಶಸ್ಸಿಗೆ ಮೆಟ್ಟಿಲು

7

ಕಹಿ ಘಟನೆಯೇ ಯಶಸ್ಸಿಗೆ ಮೆಟ್ಟಿಲು

Published:
Updated:
ಕಹಿ ಘಟನೆಯೇ ಯಶಸ್ಸಿಗೆ ಮೆಟ್ಟಿಲು

‘ಬದುಕಿನ ಆಕಸ್ಮಿಕ ತಿರುವಿನ ಬಗ್ಗೆ ನನಗೆ ಬಹಳ ಅಚ್ಚರಿ ಎನಿಸುತ್ತದೆ. ಕೇವಲ ₹ 6,000ಗಳ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದ ನಾನು ಉದ್ಯಮಿಯಾಗಿ ಬೆಳೆದದ್ದು,  ನೂರಾರು ಜನರಿಗೆ ಉದ್ಯೋಗ ನೀಡಿ ತಿಂಗಳಿಗೆ ₹ 5 ಲಕ್ಷಕ್ಕೂ ಹೆಚ್ಚು ಮೊತ್ತದ ಸಂಬಳವನ್ನು ಸಿಬ್ಬಂದಿಗೆ ಬಟವಡೆ ಮಾಡುತ್ತಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. 

‘ಬಾಗಲಕೋಟ ಜಿಲ್ಲೆಯ ಮುಧೋಳ ನನ್ನ ಹುಟ್ಟೂರು.  ನಾನು ಬಿ.ಕಾಂ, ಎಂ.ಬಿ.ಎ ಪದವಿ ಪಡೆದ ಮೇಲೆ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ಅಲ್ಲಿ ಸ್ನೇಹಿತರ ನೆರವಿನಿಂದ ಖಾಸಗಿ ಸಂಸ್ಥೆಯಲ್ಲಿ ನೌಕರಿ ಸಿಕ್ಕಿತು. ಸಂಬಳ ₹ 6,000.  ಬೆಂಗಳೂರಿಗೆ ಬರುವಾಗ ಊರಿಂದ ಒಂದು ಹಳೆಯ ಮೋಟಾರ್‌ ಸೈಕಲ್ ತಂದಿದ್ದೆ. ಅದರ ಪೆಟ್ರೋಲ್‌ ಮತ್ತು ದುರಸ್ತಿಗೆ ತಿಂಗಳಿಗೆ ₹ 2,000 ಬೇಕಾಗುತ್ತಿತ್ತು. ಸ್ನೇಹಿತರೊಂದಿಗೆ ಸೇರ್ ಮಾಡಿಕೊಂಡು ಸಣ್ಣ ರೂಂ ನಲ್ಲಿ ನೆಲೆಸಿದ್ದೆ.

‘ಮುಧೋಳದವರೇ ಆದ ಮುರುಗೇಶ ಆರ್. ನಿರಾಣಿ ಆಗ ಬೃಹತ್ ಕೈಗಾರಿಕೆ ಮಂತ್ರಿಯಾಗಿದ್ದರು. ಅವರು  2012 ರಲ್ಲಿ ಬೆಂಗಳೂರಿನಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ಸಂಘಟಿಸಿದ್ದರು. ರಜೆ ಚೀಟಿ ಕೂಡದೆ ಗೈರು ಉಳಿದು ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನೋಡಲು ಹೋದೆ. ಅಲ್ಲಿಯ ವಿವಿಧ ರಂಗಳಲ್ಲಿಯ ಸಾಧನೆಯ ಚಿತ್ರಗಳನ್ನು ನೋಡಿ ನಾನೂ ಉದ್ಯಮಿಯಾಗಬೇಕೆಂದು ಕನಸು ಕಾಣತೊಡಗಿದೆ. ಅಲ್ಲಿ ರಾರಾಜಿಸುತ್ತಿದ್ದ ‘ಉದ್ಯಮಿಯಾಗು ಉದ್ಯೋಗ ನೀಡು’ ಎಂಬ ಘೋಷಣಾ ಫಲಕಗಳು ನನ್ನ ಮನಸ್ಸನ್ನು ಆಕರ್ಷಿಸಿದವು.

‘ಸಮಾವೇಶದ ನಂತರ ಕೆಲಸಕ್ಕೆ ಹಾಜರ ಆಗಲು ಹೋದಾಗ ಕಚೇರಿ ಮುಖ್ಯಸ್ಥರು ಗರಂ ಆಗಿದ್ದರು. ಹೆಚ್ಚು ವಯಸ್ಸಾಗೊದ್ದ ಅವರಿಗೆ ಸಿಟ್ಟೂ ಜಾಸ್ತಿ. ‘ಬಂಡವಾಳ ಹೂಡಿಕೆ ಸಮಾವೇಶದಲ್ಲಿ ನಿಂದೇನಿತ್ತಪ್ಪ ಕೆಲಸ ? ದೊಡ್ಡ ದೊಡ್ಡ ಉದ್ದಿಮೆಗಳು ನಡೆಸುವ ಮೇಳ ಅದು. ಸಂಬಳಕ್ಕೆ ದುಡಿಯುವ ನಿನಗೆ ಅದೆಲ್ಲ ಯಾಕೆ ಬೇಕು’ ಎಂದು ರೇಗಾಡಿದರು.

‘ಅಟೆಂಡೆನ್ಸ್ ಪುಸ್ತಕದಲ್ಲಿ ಸಹಿ ಹಾಕಲು ಹೋದೆ. ಅದರಲ್ಲಿ ನಾನು ರಾಜೀನಾಮೆ ಕೊಟ್ಟು ಕೆಲಸ ಬಿಟ್ಟಿರುವುದಾಗಿ ಶರಾ ಬರೆದಿದ್ದರು. ನಾನು ರಾಜೀನಾಮೆ ಕೊಡದಿದ್ದರೂ ತಾವೇ ಇಂಥ ಟಿಪ್ಪಣಿ ಬರೆದ್ದದು ನೋಡಿ ನನ್ನ ಮನಸ್ಸು ರೋಷದಿಂದ ಕುದಿಯತೊಡಗಿತು. ಅಸಾಹಯಕನಾಗಿದ್ದ ನಾನು ಎಲ್ಲವನ್ನು ನುಂಗಿಕೊಂಡೆನು. ಕಚೇರಿಯಲ್ಲಿದ್ದ ಸಿಬ್ಬಂದಿ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. 

‘ಮುಧೋಳಕ್ಕೆ ಮರಳಿ ಹೋಗಲು ನಿರ್ಧರಿಸಿದೆ. ಆಗ ನನ್ನ ಜೇಬಿನಲ್ಲಿ ₹ 1,000ದ ಒಂದು ನೋಟು ಮಾತ್ರ ಇತ್ತು. ಮುಧೋಳಕ್ಕೆ ಬಂದು ತಲುಪಿದಾಗ ಬೆಳಗಿನ 6 ಗಂಟೆಯಾಗಿತ್ತು. ರಾತ್ರಿಯಿಡಿ ಮೋಟಾರ ಬೈಕ್  ಮೇಲೆ ಬಂದಿದ್ದಕ್ಕೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಯಾವುದನ್ನೂ ಮನೆಯವರಿಗೆ, ಗೆಳೆಯರಿಗೆ ಹೇಳದೆ ಮೌನಕ್ಕೆ ಶರಣಾದೆ.

‘ಮುಧೋಳ ಹೊರವಲಯದಲ್ಲಿ ನಮ್ಮದು 8 ಎಕರೆ ಭೂಮಿಯಿದೆ. ಇಲ್ಲಿ ಕೊರೆದ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿದೆ. ಇದನ್ನು ಸರಿಯಾಗಿ ಬಳಸಿಕೊಂಡು ಶುದ್ಧ ಕುಡಿಯುವ ನೀರು ಉತ್ಪಾದಿಸುವ ಘಟಕ ಕಟ್ಟಲು ಯೋಚನೆ ಮಾಡಿದೆ. ಈ ಬಗ್ಗೆ ನನಗೆ ಯಾವ ಅನುಭವ ಕೂಡ ಇರಲಿಲ್ಲ.  ಈ ಬಗ್ಗೆ ಮನೆಯ ಸದಸ್ಯರಿಗೆ ಹೇಳಿದೆ. ಯಾರೂ ಒಪ್ಪಿಕೊಳ್ಳಲಿಲ್ಲ.

ಆದರೆ, ನನ್ನ ನಿರ್ಧಾರ ಅಚಲವಾಗಿತ್ತು. ಕಷ್ಟ ಪಟ್ಟು ಬೆಳೆದ ಸಾಧಕರ ರೋಚಕ ಸಾಹಸ ಕಥೆಗಳು ನನ್ನ ಮನಸ್ಸಿನಲ್ಲಿದ್ದವು. ಮನೆಯವರು ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ಎಲ್ಲಿಯಾದರೂ ನೌಕರಿ ಮಾಡಿಕೊಂಡು ಜೀವನ ನಡೆಸು ಎಂದು ಸಲಹೆ ನೀಡಿದರು. ಕೊನೆಗೆ ನನ್ನ ಪಾಲಿಗೆ ಬರುವ ಆಸ್ತಿ ನನಗೆ ಕೊಟ್ಟು ಬಿಡಿರಿ ನಾನು ಏನಾದರೂ ಮಾಡಿ ಕೊಳ್ಳುತ್ತೇನೆ ಎಂದು ಗಟ್ಟಿಯಾಗಿ ಹೇಳಿದೆನು. ಅಂತಿಮವಾಗಿ ಕುಟುಂಬದವರು ಅರ್ಧ ಮನಸ್ಸಿನಿಂದ ಒಪ್ಪಿಗೆ ನೀಡಿದರು.

‘ಸ್ನೇಹಿತರೊಬ್ಬರಿಂದ ₹ 50 ಲಕ್ಷ   ಖಾಸಗಿ ಸಾಲ ಪಡೆದುಕೊಂಡೆ. ಅದಕ್ಕೆ ಆಧಾರವಾಗಿ 4 ಎಕರೆ ಭೂಮಿ ಬರೆದುಕೊಟ್ಟೆ. ಪರಿಣತರ  ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದೆ. ಆದರೆ ನಾನು ಹಾಕಿಕೊಂಡ ಯೋಜನೆಗೆ ₹ 50 ಲಕ್ಷ  ಸಾಕಾಗುವುದಿಲ್ಲ ಎಂಬುದು ಬೇಗನೆ ತಿಳಿಯಿತು. ನನ್ನ ಅಚಲ ನಿರ್ಧಾರವನ್ನು ಮೆಚ್ಚಿಕೊಂಡ ನನ್ನ ತಂಗಿ ಚನ್ನಮ್ಮಾ ಡಂಗಿ ನನ್ನ ಸಹಾಯಕ್ಕೆ ನಿಂತಳು. ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರ ಶಾಖೆಯ ಉದ್ಯೋಗಿಯಾಗಿದ್ದಾರೆ. ಅವರ ಸಲಹೆ ಮೇರೆಗೆ ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾ ಬೆಂಗಳೂರ ಶಾಖೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದೆನು.  ಬ್ಯಾಂಕ್‌ ಅಧಿಕಾರಿಗಳು ನನಗೆ ₹ 1.10 ಕೋಟಿ ಸಾಲ ನೀಡಿದರು.

2014 ರಲ್ಲಿ ‘ಅಕ್ವ್ಯಾಲಿಂಕ್’ ಎಂಬ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಉತ್ಪಾದನೆ ಆರಂಭವಾಯಿತು. ಮುಂದೆ ಒಂದೇ ವರ್ಷದಲ್ಲಿ ಘಟಕದ ಸಾಮರ್ಥ್ಯದ ವಿಸ್ತರಣೆಗೆ ಕಾರ್ಫೋರೇಷನ್‌ ಬ್ಯಾಂಕ್ ಕೂಡಾ ಸಾಲದ ಸೌಲಭ್ಯ ಒದಗಿಸಿತು.

‘ಕ್ಯಾನ್‌, ಬಾಟಲ್ ಪ್ಯಾಕಿಂಗ್, ಸಾರಿಗೆ, ಮಾರುಕಟ್ಟೆ, ಲೆಕ್ಕಪತ್ರ, ಜಾಹೀರಾತು ಕೆಲಸಗಳು ಆರಂಭವಾದವು. ನನಗೆ ಗೊತ್ತಿರುವ ಯುವಕರನ್ನು ಕೆಲಸಕ್ಕೆ ಸೇರಿಕೊಂಡೆ. ನಾನೇ ಅವರಿಗೆ ತರಬೇತಿ ನೀಡಿದೆ. ನನ್ನ ಸಹೋದರಿ ಚನ್ನಮ್ಮಳ ಆಸೆಯಂತೆ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿರುವೆ. ಇವರು ಹೆಚ್ಚು ಕಲಿಯದ ಬಡ ಕುಟುಂಬದ ಯುವತಿಯರು.  ತರಬೇತಿ ನೀಡಿದ ಮೇಲೆ ಅವರು ತಮ್ಮ ಕೆಲಸದ ಕುಶಲತೆ ಬೆಳೆಸಿಕೊಂಡಿದ್ದಾರೆ. ಹೆಣ್ಣು ಮಕ್ಕಳಲ್ಲಿ ಕೆಲಸದ ಬಗ್ಗೆ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶಿಸ್ತು ಅಧಿಕವಾಗಿ ತೋರುತ್ತದೆ.

‘ಮಹಿಳೆಯರಿಗೆ ಉದ್ಯೋಗ ಕೊಟ್ಟ ಬಗ್ಗೆ ನನ್ನ ತಂಗಿಗೂ ಬಹಳ ಹೆಮ್ಮೆ ಎನಿಸಿದೆ.  ನಮ್ಮ ಸಂಸ್ಥೆಯ ಎಲ್ಲ ಉದ್ಯೋಗಿಗಳು  ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ಕೆಲಸ ಮಾಡುತ್ತಾರೆ. ನಮ್ಮ ಸಂಸ್ಥೆಯಲ್ಲಿ 48 ಪುರುಷರು 60 ಮಹಿಳೆಯರು ಕಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. 

‘ಶ್ರದ್ಧೆಯಿಂದ ಮತ್ತು ಶಿಸ್ತಿನಿಂದ ಕೆಲಸ ಮಾಡಿದ್ದರಿಂದ ಸಂಸ್ಥೆ ಬಹಳ ಬೆಳೆದಿದೆ. ನಮಗೆ ಐ.ಎಸ್.ಐ ಮಾನ್ಯತೆ ದೊರೆಕಿದೆ. ಗುಣಮಟ್ಟದ ಪರೀಕ್ಷೆಗೆ ಪ್ರಯೋಗಾಲಯ ನಿರ್ಮಿಸಿದ್ದೇನೆ. ನೀರು ಪರೀಕ್ಷೆ ಮಾಡುವ ಇಬ್ಬರು ತಜ್ಞರನ್ನು ನೇಮಕ ಮಾಡಿಕೊಂಡಿದ್ದೇನೆ.

ಉತ್ತಮ ನೀರಿನ ಮೂಲಗಳನ್ನು ಮಾಡಿಕೊಂಡಿದ್ದೇನೆ. ಘಟಕದ ಸಾಮರ್ಥ್ಯವನ್ನು ಪ್ರತಿ ಗಂಟೆಗೆ 4,000ಲೀಟರ್ ದಿಂದ 16000 ಲೀಟರಕ್ಕೆ ವಿಸ್ತರಿಸಲಾಗಿದೆ. ರಾಜ್ಯದಾದ್ಯಂತ  ನಮ್ಮ ಸಂಸ್ಥೆಯ ನೀರು ಪೂರೈಕೆ ಮಾಡುತ್ತಿದ್ದೇನೆ. ಮಾರುಕಟ್ಟೆಯಲ್ಲಿ ನಮ್ಮ ನೀರಿಗೆ ಬಹಳ ಬೇಡಿಕೆಯೂ ಇದೆ.

‘ಘಟಕ ಕಟ್ಟುವಾಗ ಒಂಟಿಯಾಗಿದ್ದೆ. ಈಗ ನನ್ನ ಹೆಂಡತಿ ಜಯಶ್ರೀ ಜೊತೆಯಾಗಿದ್ದಾಳೆ. ಆಕೆಯೂ ಸಂಸ್ಥೆಯಲ್ಲಿ ಆಸಕ್ತಿಯಿಂದ ದುಡಿಯುತ್ತಿದ್ದಾಳೆ. ಜನಕ್ಕೆ ಒಳ್ಳೆಯ ಶುದ್ಧ ಕುಡಿಯುವ ನೀರು ಕೊಡಬೇಕು, ಸಂಸ್ಥೆಯನ್ನು ಇನ್ನೂ ಚೆನ್ನಾಗಿ ಬೆಳೆಸಬೇಕು ಎಂಬ ಹಂಬಲ ನಮ್ಮಲ್ಲಿ ಇದೆ.

‘ನನ್ನ ಯಶಸ್ಸು ನಮ್ಮ ಕುಟುಂಬಕ್ಕೆ ಬಹಳ ಸಂತಸ ತಂದಿದೆ. ನಾನು ನನ್ನ ಸಂಸ್ಥೆಯ ಸ್ಥಾಪಕ ಮಾತ್ರ. ನಿಜವಾದ ಮಾಲೀಕರು ಅಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಸದಸ್ಯರಾಗಿದ್ದಾರೆ. 

‘ನಾಲ್ಕು ವರ್ಷಗಳ ಹಿಂದೆ  ನಾನು ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ಅಧಿಕಾರಿ ನನ್ನನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿದ್ದರಿಂದ ನಾನು ಉದ್ದಿಮೆಯಾಗಿ ಬೆಳೆದಿದ್ದೇನೆ. ಬದುಕಿನ ಕಹಿ ಘಟನೆಗಳು ಕೂಡ ಅನೇಕ ಬಾರಿ ಒಳ್ಳೆಯ ಬೆಳವಣಿಗೆಗೆ ಮೆಟ್ಟಿಲುಗಳಾಗುತ್ತವೆ ಎಂಬುದನ್ನು ನಾನು ಸ್ವ ಅನುಭವದಿಂದ ಅರಿತುಕೊಂಡಿದ್ದೇನೆ. ನನ್ನನ್ನು ಕೆಲಸದಿಂದ ಕಿತ್ತುಹಾಕಿದ ಆ ಅಧಿಕಾರಿಗೆ ಅಭಿನಂದನೆ ಹೇಳಲೇ ಬೇಕು ಅಲ್ಲವೆ?’.

ಸಂಪರ್ಕ ನಂ:98863 41143. ನಿರೂಪಣೆ: ಮಲ್ಲಿಕಾರ್ಜುನ ಹೆಗ್ಗಳಗಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry