ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ‘ನೆಗೆಟಿವ್ ಥಿಂಕಿಂಗ್’!

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

‘ಅಯ್ಯೋ!  ಇದೇನಿದು ತಪ್ಪು ಬರೆದ್ಬಿಟ್ಟಿದ್ದಾರಲ್ಲ!  ಆರೋಗ್ಯಕ್ಕೆ ‘ಪಾಸಿಟಿವ್ ಥಿಂಕಿಂಗ್ ಬಿಟ್ಟು “ನೆಗೆಟಿವ್ ಥಿಂಕಿಂಗ್” ಬೇಕಾ ಅಂತ ಕೇಳ್ತಾರಲ್ಲ!  ಆರೋಗ್ಯಕ್ಕೆ ‘ನೆಗೆಟಿವ್’ ಥಿಂಕಿಂಗ್ ಅಂದರೆ ನಕಾರಾತ್ಮಕ ಯೋಚನೆಗಳು ಬೇಡವೇ ಬೇಡ’ ಅಂತ ಹೇಳ್ತಾ ಇದ್ದೀರಾ?!

ಒಬ್ಬ ಮಹಿಳೆ ನನ್ನ ಹತ್ತಿರ ಬಂದು ತಮ್ಮ ಮನಸ್ಸಿನ ನೋವು ತೆರೆದಿಡುತ್ತಾ ತಮಗೆ ಬಂದ ಯೋಚನೆಗಳು, ಕೋಪ, ದುಃಖ ಎಲ್ಲವನ್ನೂ ವಿವರಿಸಿದರು. ಹಾಗೆ ಹೇಳಿ ನಂತರ ಅವರು ಹೇಳಿದ ಮಾತು, ‘ಮೇಡಂ, ನನಗೆ ಎಲ್ಲವೂ ಬರೀ “ನೆಗೆಟಿವ್” ಯೋಚನೆಗಳೇ ಬರುತ್ತವೆ. ಕೆಲವೊಮ್ಮೆ ಅವುಗಳಿಂದ ಹೊರ ಬರೋದಿಕ್ಕೇ ಸಾಧ್ಯವಿಲ್ಲ. ಹಾಗೆ ಯೋಚನೆ ಮಾಡೋದು ನನ್ನದೇ ‘ತಪ್ಪು’ ಅಲ್ವಾ? ನನ್ನ ತಲೆಯನ್ನು ತೂತು ಮಾಡಿ ಹೇಗಾದ್ರೂ ಒಂದಷ್ಟು ‘ಪಾಸಿಟಿವ್’ ಯೋಚನೆ ತುಂಬಿಬಿಡಿ ಎನ್ನುವಷ್ಟು ನನಗೆ ರೋಸಿ ಹೋಗಿದೆ!’

ಈ ಮಹಿಳೆಗೆ ಇದ್ದ ತೊಂದರೆ ಏನು? ಹಾಗೆ ನೋಡಿದರೆ ಆಕೆ ಒಬ್ಬ ಯಶಸ್ವೀ, ಸುಖೀ ಮಹಿಳೆ. ಅವರಿಗೆ ಯಾವುದೇ ಮಾನಸಿಕ ಕಾಯಿಲೆ-ಖಿನ್ನತೆ, ಗೀಳು ಇತ್ಯಾದಿಗಳು ಇರಲಿಲ್ಲ. ಅವರು ತನ್ನ ಉದ್ಯೋಗವನ್ನು-ಮನೆಯ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದವರು.  ಆದರೆ  ‘ಕೋಪ-ದುಃಖ-ಹತಾಶೆ’ ಮುಂತಾದ ನಕಾರಾತ್ಮಕ ಭಾವನೆಗಳ ಬಗೆಗೆ ಅವರದು ಅತಿ ಎಚ್ಚರ, ಅವುಗಳನ್ನು ಕಂಡರೆ ಅವರಿಗೆ ದ್ವೇಷ!  ಅವರ ಪ್ರಕಾರ ಹೀಗೆ ‘ನೆಗೆಟಿವ್ ಥಿಂಕಿಂಗ್’ ಏನಾದರೂ ಮನಸ್ಸಿಗೆ ಬಂದರೆ ತಮಗೆ ‘ಮಾನಸಿಕ ಕಾಯಿಲೆ’ ಬಂದೇ ಬಿಡುತ್ತದೆ ಎಂಬುದು ಗ್ಯಾರಂಟಿ.

ದಿನಕ್ಕೆ ಹತ್ತು ನಿಮಿಷ ಅಥವಾ ಯಾವಾಗಲಾದರೊಮ್ಮೆ ಕೂಡ ಮನಸ್ಸಿಗೆ ನಕಾರಾತ್ಮಕವಾದ ಏನೂ ಅನ್ನಿಸಬಾರದು ಎಂಬುದು ಅವರ ನಿರೀಕ್ಷೆ. ಹಾಗಾಗಿಯೇ ಅವರು ಮೊದಲು ಹೇಳಿದ ‘ನನಗೆ ಎಲ್ಲವೂ ‘‘ನೆಗೆಟಿವ್’’ ಯೋಚನೆಗಳೇ, ಹೊರಬರೋದಿಕ್ಕೇ ಸಾಧ್ಯವಿಲ್ಲ’ ಎಂಬ ಮಾತುಗಳೂ ಉತ್ಪ್ರೇಕ್ಷೆಯೇ ಆಗಿತ್ತು.

ಇಂದು ಮಾನಸಿಕ ಸಮಸ್ಯೆಗಳ ಬಗ್ಗೆ ಮನೋವೈದ್ಯರನ್ನು ತಕ್ಷಣ ನೋಡದೆ ಹಿಂಜರಿಯುವುದು, ತನಗೆ ಸಮಸ್ಯೆಯಿದೆ ಎಂದು ನಿರಾಕರಿಸುವುದು ಒಂದು ಕಡೆಗಾದರೆ ಇನ್ನೊಂದೆಡೆ ಸಹಜವಾಗಿ ಇರುವ ಮನಸ್ಸಿನ ಭಾವನೆಗಳಿಗೂ ಹೆದರಿ ಮನೋವೈದ್ಯರನ್ನು ಕಂಡು ‘ನಮ್ಮ ಮನಸ್ಸು ಸರಿ ಇದೆ ಎಂದು ದೃಢೀಕರಿಸಿ’ ಎನ್ನುವ ಪ್ರವೃತ್ತಿಯೂ ಕಾಣುತ್ತಿದೆ.

‘ಪಾಸಿಟಿವ್ ಥಿಂಕಿಂಗ್’ ಎಂಬ ಪದಕ್ಕಂತೂ ಇಂದು ಎಲ್ಲಿಲ್ಲದ ಬೆಲೆ!  ನಿಮ್ಮ ಹಿನ್ನೆಲೆ ಯಾವುದೇ ಆಗಲಿ ನೀವು ‘ಪಾಸಿಟಿವ್ ಥಿಂಕಿಂಗ್’ ಕಲಿಸುತ್ತೀರಿ ಎಂಬ ಬೋರ್ಡ್ ತಗುಲಿಸಿದರೆ, ಒಂದಿಷ್ಟು ಜನ ನಿಮಗೆ ಗ್ರಾಹಕರಾಗಿ ಬಂದೇ ಬರುತ್ತಾರೆ. ಅವರ ಗಮನವೆಲ್ಲಾ ಯಾವಾಗಲೂ ‘ಪಾಸಿಟಿವ್ ಥಿಂಕಿಂಗ್’ ಮಾಡುತ್ತಿರುವುದರ ಬಗೆಗೆ!

ಆದರೆ ಮನೋವಿಜ್ಞಾನ ಪಾಸಿಟಿವ್ -ಸಕಾರಾತ್ಮಕ ಯೋಚನೆಗಳ ಬಗ್ಗೆ ಮಾತನಾಡಿದಷ್ಟೇ ಪ್ರಮುಖವಾಗಿ ನಕಾರಾತ್ಮಕ ಯೋಚನೆಗಳ ಬಗೆಗೂ ಮಾತನಾಡುತ್ತದೆ. ಹಾಗೆ ನೋಡಿದರೆ ದುಃಖ ಮತ್ತು ಕೋಪಗಳನ್ನು ಜೀವನದ ಮುಖ್ಯ ಭಾಗವಾಗಿ ಗುರುತಿಸುತ್ತದೆ. ಆಧುನಿಕ ಮನೋವೈಜ್ಞಾನಿಕ ಸಂಶೋಧನೆಗಳು ನಕಾರಾತ್ಮಕ ಭಾವನೆಗಳನ್ನು ಅನುಭವಿಸುವುದು ಮತ್ತು ಒಪ್ಪಿಕೊಳ್ಳುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯಕ ಎಂಬುದನ್ನು ದೃಢಪಡಿಸಿವೆ. ಈ ಭಾವನೆಗಳನ್ನು ಅದುಮಿಡುವುದು ನಮ್ಮ ಜೀವನತೃಪ್ತಿಯನ್ನು ಕಡಿಮೆ ಮಾಡುತ್ತದೆ.

ಭಾವನೆಗಳೆಂದರೆ ಏನು ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ಅವಶ್ಯಕ. ಮನುಷ್ಯನಿಗೆ ಭಾವನೆಗಳು, ಅವು ಸಕಾರಾತ್ಮಕವಾಗಲೀ, ನಕಾರಾತ್ಮಕವಾಗಲೀ, ಒಂದು ಅನುಭವವನ್ನು ಮೌಲ್ಯಮಾಪನ ಮಾಡುವ ಸಾಧನಗಳು. ‘ಮನಸ್ಸು’ ಭಾವನೆಗಳ ಮೂಲಕವೇ ಒಂದು ‘ಅನುಭವ’ವನ್ನು ಅನುಭವಿಸುತ್ತದೆ. ಜೀವನದ ವೈವಿಧ್ಯಮಯ ಅನುಭವಗಳಲ್ಲಿ ಮನಸ್ಸು ಸಂಕೀರ್ಣವಾಗಿ ಹಲವು ವಿಧದ ಭಾವನೆಗಳನ್ನು ಅನುಭವಿಸುತ್ತದೆ. ಹಾಗೆ ಸಕಾರಾತ್ಮಕ-ನಕಾರಾತ್ಮಕ ಅನುಭವಗಳನ್ನು ಅನುಭವಿಸುವ ಸಾಮರ್ಥ್ಯ, ಅವುಗಳನ್ನು ಹೊರಹಾಕಬಲ್ಲ ಶಕ್ತಿಯು ಮಾನವನ ಮೆದುಳು-ಮನಸ್ಸುಗಳಿಗೆ ಮಾತ್ರ ವಿಶಿಷ್ಟವಾದದ್ದು.

ಆರೋಗ್ಯದ ವಿಷಯದಲ್ಲಿ ಸಕಾರಾತ್ಮಕ ಭಾವನೆಗಳು ಎಷ್ಟು ಅವಶ್ಯಕವೆಂದು ನಾವು ಭಾವಿಸುತ್ತೇವೆಯೋ ನಕಾರಾತ್ಮಕ ಭಾವನೆಗಳು ಅಷ್ಟೇ ಅಥವಾ ಅದಕ್ಕೂ ಒಂದು ಕೈ ಮೇಲೆಯೇ ಅವಶ್ಯಕ ಎನ್ನಬೇಕಾಗುತ್ತದೆ. ಉದಾಹರಣೆಗೆ ಭಯವನ್ನೇ ತೆಗೆದುಕೊಳ್ಳಿ. ಕತ್ತಲಲ್ಲಿ ನಡೆಯುತ್ತಿದ್ದೀರಿ. ಹಾವೊಂದು ಎದುರಾಯಿತು. ಆಗ ಉಂಟಾಗುವ ಭಯವು ದೇಹದಲ್ಲಿ ‘ಓಡು ಇಲ್ಲವೇ ಹೋರಾಡು’ - ‘flight or Fight ’ ಪ್ರತಿಕ್ರಿಯೆಗೆ ಸಹಾಯಕವಾದ ಅಡ್ರಿನಾಲಿನ್ ರಸದೂತವನ್ನು ಸ್ರವಿಸುವಂತೆ ಮಾಡುತ್ತದೆ. ತತ್‌ಕ್ಷಣ ನಿಮ್ಮ ದೇಹ ಓಡಲು ಅಥವಾ ಹೋರಾಡಲು ಬೇಕಾದಂತ ದೇಹದ ಸ್ಥಿತಿಯನ್ನು ಸೃಷ್ಟಿಸುತ್ತದೆ.

ಕೈಕಾಲುಗಳಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಮನಸ್ಸಿನಲ್ಲಿ ಭಯದ ಜೊತೆಗೆ ಧೈರ್ಯ ನಮಗೆ ಗೊತ್ತಿಲ್ಲದಂತೆ ಮೊದಲಾಗುತ್ತದೆ. ಒಂದೋ ಕೋಲನ್ನು ಎತ್ತಿಕೊಂಡು ಹಾವನ್ನು ಹೊಡೆಯಲು ಪ್ರೇರೇಪಿಸುತ್ತದೆ ಅಥವಾ ಜೋರಾಗಿ ಕೂಗುವಂತೆ ಮಾಡುತ್ತದೆ. ಇಲ್ಲವೇ ಹಾವಿನಿಂದ ದೂರ ಓಡಲು ಶಕ್ತಿ ಹೆಚ್ಚುತ್ತದೆ.

ಇಲ್ಲಿ ಮನಸ್ಸಿಗೆ ಮೊದಲು ಬಂದದ್ದೇನು? ‘ಭಯ’ ಎಂಬ ನಕಾರಾತ್ಮಕ ಭಾವನೆ. ಅಪಾಯದ ಪರಿಸ್ಥಿತಿಯಿಂದ ಪಾರಾಗಲು ಅದು ಸಹಾಯ ಮಾಡುವುದಷ್ಟೇ ಅಲ್ಲ, ‘ಧೈರ್ಯ’ ಎಂಬ ಸಕಾರಾತ್ಮಕ ಭಾವನೆಯನ್ನು ಮನಸ್ಸಿಗೆ ಬರುವಂತೆ ಮಾಡಿದ್ದೂ ಈ ‘ಭಯ’ವೇ. ಬದುಕಿನ ಕೆಟ್ಟ-ದುಃಖಕರ ಅನುಭವಗಳಲ್ಲಿಯೂ ಸಂಶೋಧನೆಗಳು ಒಂದು ಮುಖ್ಯ ಅಂಶವನ್ನು ದಾಖಲಿಸಿವೆ.

ಯಾವುದೇ ಕೆಟ್ಟ / ದುಃಖಕರ ಅನುಭವ ಸಮ್ಮಿಶ್ರ ಅನುಭವವಾಗಿರುತ್ತದೆ ಎಂಬ ಅಂಶ. ಎಂದರೆ ‘ನನಗೆ ಆದ ಅನುಭವಗಳೆಲ್ಲವೂ ದುಃಖಕರ, ಆದರೆ ನಾನು ಅವುಗಳನ್ನು ಎದುರಿಸುತ್ತಿರುವ ರೀತಿ ಸಂತೋಷ ಮತ್ತು ನಂಬಿಕೆಗಳನ್ನು ನನಗೆ ನೀಡುತ್ತದೆ’ ಎಂಬ ಮಿಶ್ರಭಾವ. ಈ ರೀತಿಯ ಮಿಶ್ರಭಾವದಿಂದ ಕೆಟ್ಟ ಅನುಭವಗಳನ್ನೂ ನೋಡುವುದು ಕೆಟ್ಟ ಅನುಭವಗಳ ‘ಕೆಟ್ಟತನ’ವನ್ನು ಆರೋಗ್ಯದ ದೃಷ್ಟಿಯಿಂದ ಇಲ್ಲವಾಗಿಸುತ್ತದೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ.

ನಕಾರಾತ್ಮಕ ಯೋಚನೆಗಳನ್ನು ಮುಕ್ತವಾಗಿ, ಆದರೆ ಆರೋಗ್ಯಕರವಾಗಿ ಅನುಭವಿಸುವುದು ಮುಖ್ಯ. ಹಾಗೆ ಅನುಭವಿಸದೆ, ಹೊರಹಾಕದೆ ಅವುಗಳನ್ನು ಅದುಮಿಡುವುದು ಆ ಯೋಚನೆಗಳನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಯೋಚನೆಗಳ ಬಗೆಗೆ ಕೇವಲ ‘ನೆಗೆಟಿವ್ ಥಿಂಕಿಂಗ್’ ಎಂದು ತಳ್ಳಿಹಾಕಿ, ‘ಪಾಸಿಟಿವ್ ಥಿಂಕಿಂಗ್ ಹೇಗೆ ಮಾಡುವುದು?’ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ ಪ್ರಯತ್ನವಾದೀತು.

ನಕಾರಾತ್ಮಕ ಯೋಚನೆಗಳನ್ನು ಗುರುತಿಸಿ, ಅವುಗಳಿಗೆ ‘ಗೌರವ’ ನೀಡುವುದು ಅಗತ್ಯ! ತೀವ್ರ ಭಾವನೆಗಳನ್ನು ಮನಸ್ಸು ಅನುಭವಿಸುವಾಗ ದೀರ್ಘವಾದ, ಆಳವಾದ ಉಸಿರಾಟ ಸಹಕಾರಿ. ಅವು ಕೇವಲ ‘ಭಾವನೆ’ಗಳು, ಅವು ಕ್ಷಣಿಕವಾದವು ಎಂಬುದನ್ನು ಗಮನಿಸಿ.

ಹಾಗಾಗಿ ಹೆದರುವ ಅಗತ್ಯವಿಲ್ಲ. ಭಾವಗಳ ತೀವ್ರತೆ ಮನಸ್ಸಿಗೆ ಬಹು ಉದ್ವೇಗಕಾರಿ ಎಂದಾದರೆ ಮತ್ತೊಬ್ಬರ ಬಳಿ ಹಂಚಿಕೊಳ್ಳಿ. ಡೈರಿ ಬರೆಯುವುದರ ಮೂಲಕ ಹೊರಹಾಕಿ. ಈ ಕ್ರಿಯೆಗಳು ನಿಮ್ಮ ದೃಷ್ಟಿಕೋನವನ್ನು ಬದಲಿಸಬಹುದು, ವಿಷಯವನ್ನು ಮುಗಿಸಬಹುದು.

ಹೀಗೆ ಮಾಡಿಯೂ ನಕಾರಾತ್ಮಕ ಭಾವನೆ ಮುಂದುವರೆದರೆ ನೀವು ಪ್ರಾಯೋಗಿಕವಾಗಿ ಕ್ರಮ ಕೈಗೊಳ್ಳುವ ಕಡೆ ಗಮನಿಸಬೇಕು. ಎಂದರೆ ಸ್ನೇಹಿತೆಗೆ ಆಕೆ ಮಾತನಾಡಿದ್ದು ನಿಮಗೆ ನೋವಾಗಿದೆಎಂದು ತಿಳಿಸುವುದಿರಬಹುದು ಅಥವಾ ನಿಮಗೆ ಕಷ್ಟವೆನಿಸುವ ಉದ್ಯೋಗ ಬದಲಿಸುವುದಿರಬಹುದು.

****
ನಕಾರಾತ್ಮಕ ಯೋಚನೆಗಳನ್ನು ಸ್ವೀಕರಿಸಿ...
ನಕಾರಾತ್ಮಕ ಯೋಚನೆಗಳು ಮನಸ್ಸಿಗೆ ಬಂದಾಗ ತಪ್ಪಿತಸ್ಥ ಭಾವನೆ ಬೇಡ. ಅವು ಮನಸ್ಸಿನ ಸಹಜತೆಗೂ, ಮನಸ್ಸು ಪ್ರತಿಕ್ರಿಯಿಸುತ್ತಿರುವುದಕ್ಕೂ ಗುರುತು ಎಂಬುದು ನೆನಪಿರಲಿ.

ಅಂದರೆ ಕತ್ತಲೆಯಲ್ಲಿ ಹಾವು ಬಂದಾಗಲೂ ಭಯವೇ ಆಗದೆ, ಸುಮ್ಮನೆ ನಿಂತಿದ್ದರೆ ಎಷ್ಟು, ಅಸಹಜವೋ ಅಷ್ಟು! ಸಕಾರಾತ್ಮಕ ಯೋಚನೆಗಳ ಬಗೆಗಿನ ನಮ್ಮ ‘ಸಕಾರಾತ್ಮಕ’ - ಪಾಸಿಟಿವ್ ಧೋರಣೆಯೇ ಅವುಗಳನ್ನು ನಾವು ಹಿಂದು-ಮುಂದು ನೋಡದೆ ಆಲಂಗಿಸುವಂತೆ ಮಾಡುತ್ತವೆ! ಅವುಗಳನ್ನು ಅದುಮಿಡದಂತೆಯೂ ತಡೆಯುತ್ತವೆ! ಆದರೆ ನಕಾರಾತ್ಮಕ ಯೋಚನೆಗಳ ವಿಚಾರದಲ್ಲಿ ಇವು ಹೀಗಲ್ಲ. ನಕರಾತ್ಮಕ ಯೋಚನೆಗಳನ್ನು ಅರ್ಥ ಮಾಡಿಕೊಳ್ಳುವುದು, ಅವುಗಳಿಂದ ಕಲಿಯುವುದು ಒಂದು ಸವಾಲಿನ ಸಂಗತಿ.

ಏಕೆಂದರೆ ನಾವು ನಕಾರಾತ್ಮಕ ಭಾವನೆ-ಯೋಚನೆಗಳ ಜೊತೆ ಹೋರಾಡುತ್ತೇವೆ, ಬದಲಿಸಲು ಪ್ರಯತ್ನಿಸುತ್ತೇವೆ, ಅದುಮಿಡಲು ಸಾಹಸ ಪಡುತ್ತೇವೆ. ಈ ಮೂರನ್ನೂ ಮಾಡಬೇಡಿ. ಅವುಗಳನ್ನು ಅನುಭವಿಸಿ! ಆರೋಗ್ಯ ಮತ್ತು ಸಕಾರಾತ್ಮಕ ಯೋಚನೆಗಳು ಎರಡೂ ತನ್ನಿಂತಾನೇ ನಿಮ್ಮದಾಗುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT