ಹಿರಿಯ ನಾಗರಿಕರಿಗೆ ಯೋಗ, ಮುದ್ರೆಗಳು

7

ಹಿರಿಯ ನಾಗರಿಕರಿಗೆ ಯೋಗ, ಮುದ್ರೆಗಳು

Published:
Updated:
ಹಿರಿಯ ನಾಗರಿಕರಿಗೆ ಯೋಗ, ಮುದ್ರೆಗಳು

ವಯಸ್ಸಾಗುತ್ತಾ ಹೋದಂತೆ ಸಹಜವಾಗಿ ಆರೋಗ್ಯ ಮತ್ತು ಮರೆವಿನ ಸಮಸ್ಯೆ ಕಾಡುತ್ತದೆ. ಮಿದುಳಿನ ನರಕೋಶ ಪುನಶ್ಚೇತನಗೊಳ್ಳಬೇಕು, ಚುರುಕುಗೊಳ್ಳಬೇಕು. ನ್ಯೂರಾನ್ ಚುರುಕುಗೊಳ್ಳಬೇಕಾದರೆ ತಲೆಗೆ ರಕ್ತ ಸಂಚಲನೆಯಾಗುವ ಸರಳ ಯೋಗಾಸನಗಳು ಹಾಗೂ ಮುದ್ರೆಗಳನ್ನು ಅಭ್ಯಾಸ ಮಾಡಬೇಕು. ಹಿರಿಯ ನಾಗರಿಕರು ಅಭ್ಯಾಸ ಮಾಡಬೇಕಾದ ಪ್ರಮುಖ ಮುದ್ರೆಗಳು ಇಂತಿವೆ.

ಪ್ರಾಣಶಕ್ತಿ ಹೆಚ್ಚಿಸುವ, ಚೈತನ್ಯ ತುಂಬುವ ಪ್ರಾಣಮುದ್ರೆ (20 ನಿಮಿಷ). ಒತ್ತಡ ನಿವಾರಣೆಗೆ, ಏಕಾಗ್ರತೆಗೆ ಜ್ಞಾನಮುದ್ರೆ (10ರಿಂದ 20 ನಿಮಿಷ). ನೆನಪಿನ ಶಕ್ತಿ ಹೆಚ್ಚಾಗಿಸಲು ಹಕಿನಿ ಮುದ್ರೆ (10ರಿಂದ 20ನಿಮಿಷ), ಮಿದುಳಿನ ನರಕೋಶ ಚುರುಕುತನಕ್ಕೆ ಹಾಗೂ ನೆನಪು ಶಕ್ತಿವೃದ್ಧಿಗೆ ಭದ್ರಕಾಳಿ ಮುದ್ರೆ (10ರಿಂದ 20 ನಿಮಿಷ).

ಆಯಾ ಕಾಯಿಲೆಗೆ ಸಂಬಂಧಪಟ್ಟ ಮುದ್ರೆಗಳನ್ನು ಕಲಿತು ಅಭ್ಯಾಸ ಮಾಡುವುದು ಫಲಕಾರಿ. ಉದಾಹರಣೆಗೆ ಮಧುಮೇಹ, ಸೊಂಟನೋವು, ಮಂಡಿ ನೋವು ಹೃದಯ ಸಂಬಂಧಿ ಕಾಯಿಲೆಗಳಿಗೆ ನಿರ್ದಿಷ್ಟ ಮುದ್ರೆಗಳನ್ನು ಅಭ್ಯಾಸ ಮಾಡಬಹುದು.

ವೃದ್ಧಾಪ್ಯ ಎನ್ನುವುದು ನಿಸರ್ಗದ ಸಹಜ ನಿಯಮ. ಅದು ಕಾಯಿಲೆ ಅಲ್ಲ. ಶರೀರಕ್ಕೆ ವಯಸ್ಸಾದಂತೆ ರಕ್ತದ ಒತ್ತಡ, ಮಧುಮೇಹ, ಸೊಂಟನೋವು, ಅಸ್ತಮಾ, ಕೆಮ್ಮು, ಎಲುಬಿನ ಸಾಂದ್ರತೆ ಕಡಿಮೆಯಾಗುವುದು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಪ್ಪಿನ ಹಂತದಲ್ಲಿ ಶರೀರದ ಎಲ್ಲ ಭಾಗಗಳಲ್ಲೂ ಸವಕಲು ಉಂಟಾಗುವುದು, ಮೂತ್ರಕೋಶದ ತೊಂದರೆ ಹಾಗೂ ಮಾನಸಿಕ ಸಮಸ್ಯೆಗಳಾದ ಜ್ಞಾಪಕಶಕ್ತಿ ಕೊರತೆ, ಖಿನ್ನತೆ, ಆಂತರಿಕವಾಗಿ ಹಿಂಜರಿಯುವುದು, ಮಾನಸಿಕವಾಗಿ ಕುಗ್ಗುವುದು ಸಾಮಾನ್ಯ ಸಂಗತಿಗಳು ಎನಿಸಿವೆ.

ಇಂಥ ಸಂದರ್ಭಗಳಲ್ಲಿ ವೈದ್ಯರ ತಪಾಸಣೆ ಮತ್ತು ಔಷಧ ಉಪಚಾರಗಳೊಂದಿಗೆ ಯೋಗೋಪಚಾರವೂ (ಯೋಗ ಚಿಕಿತ್ಸೆ) ಉತ್ತಮ ಫಲ ನೀಡಬಲ್ಲದು. ಇದರಿಂದ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಬಹುದು. ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದಾಗ ಮಾನಸಿಕ ಉಲ್ಲಾಸವೂ ಹೆಚ್ಚುತ್ತದೆ.

ಹಿರಿಯ ನಾಗರಿಕರು ತಮಗೆ ಸಾಧ್ಯವಾಗುವ ಸರಳ ವ್ಯಾಯಾಮಗಳು, ನಡಿಗೆ, ಆಯ್ದ ಯೋಗಾಸನಗಳಾದ ತಾಡಾಸನ, ಅರ್ಧ ಚಕ್ರಾಸನ, ಪಾದಹಸ್ತಾಸನ, ಅರ್ಧಕಟಿ ಚಕ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಮಾಸನ, ಊರ್ಧ್ವಪ್ರಸಾರಿತ ಪಾದಾಸನ, ಪವನ ಮುಕ್ತಾಸಾಸನ, ಸೇತುಬಂಧ ಸರ್ವಾಂಗಾಸನ, (ಸಾಧ್ಯವಾದರೆ) ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಏಕಪಾದ ಶಲಭಾಸನ, ಶವಾಸನ ಹಾಗೂ ಪ್ರಾಣಾಯಾಮಗಳನ್ನು ಕ್ರಮವಾಗಿ ಅಭ್ಯಾಸ ಮಾಡಬೇಕು.

ಧ್ಯಾನ ಮತ್ತು ಮುದ್ರೆಗಳನ್ನು ದಿನವೂ ಅಭ್ಯಾಸ ಮಾಡಿದಾಗ ಮನಸು ಚುರುಕಾಗಿ, ಕ್ರಿಯಾಶೀಲತೆ ಹೆಚ್ಚುತ್ತದೆ. ವೃದ್ಧರಿಗೆ ಜೀವನದ ಸಂಜೆಯನ್ನು ಆರಾಮವಾಗಿ, ಕ್ರಿಯಾಶೀಲವಾಗಿ ಕಳೆಯಲು ಸಾಧ್ಯವಾಗುತ್ತದೆ.

ಯೋಗದ ಜೊತೆಯಲ್ಲಿ ಹಿರಿಯ ನಾಗರಿಕರು ಸಮತೋಲನ ಆಹಾರ ಸೇವಿಸಬೇಕು. ಸಕ್ಕರೆ, ಕೊಬ್ಬು ಹಾಗೂ ಉಪ್ಪನ್ನು ಮಿತವಾಗಿ ಸೇವಿಸಬೇಕು. ಹಣ್ಣು ಹಂಪಲುಗಳನ್ನು ಸಾಕಷ್ಟು ಸೇವಿಸಬೇಕು. ಮೂಲಂಗಿ, ಸೌತೆಕಾಯಿ, ಕ್ಯಾರೆಟ್ ಹೆಚ್ಚು ತಿನ್ನಬೇಕು. ಮೂಳೆಗಳು ಬಲಿಷ್ಠವಾಗಿರಲು ಹಾಲು, ಮೆಂತೆ ಸೊಪ್ಪು, ರಾಗಿ, ಸೀತಾಫಲ ಹಾಗೂ ಅಗತ್ಯ ಪೋಷಕಾಂಶಗಳಿರುವ ಆಹಾರ ಸೇವಿಸುವುದು ಅಗತ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry