ಪಟೇಲರು ಬೆಂಗಳೂರಿಗೆ ಬಂದವ್ರೆ

7

ಪಟೇಲರು ಬೆಂಗಳೂರಿಗೆ ಬಂದವ್ರೆ

Published:
Updated:
ಪಟೇಲರು ಬೆಂಗಳೂರಿಗೆ ಬಂದವ್ರೆ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ಗುಜರಾತಿನ ಕಾಥೆವಾಡ ಸಮೀಪ ಸಂಸ್ಥಾನವೊಂದಿತ್ತು. ಅದರ ವಿಸ್ತೀರ್ಣ ಕೇವಲ 100 ಚದರ ಮೀಟರ್‌, ಅಲ್ಲಿನ ಜನ ಸಂಖ್ಯೆ ಕೇವಲ 209 ಮಂದಿ, ಅದರ ವಾರ್ಷಿಕ ವರಮಾನ ₹ 500. ಆ ರಾಜ್ಯದ ಹೆಸರು ವೆಜನೊನೆಸ್ನ.

ಭಾರತ ಏಕೀಕರಣ ಕುರಿತಂತೆ ಇಂಥ ಅಚ್ಚರಿ ಹುಟ್ಟಿಸುವ ನೂರಾರು ಸಂಗತಿಗಳು ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಕೈಬೀಸಿ ಕರೆಯುತ್ತಿವೆ.

ಕೇಂದ್ರ ಸಂಸ್ಕೃತಿ ಸಚಿವಾಲಯ ರೂಪಿಸಿರುವ ‘ಒಂದಾದ ಭಾರತ–ಸರ್ದಾರ್‌ ಪಟೇಲ್‌’ ಡಿಜಿಟಲ್‌ ಪ್ರದರ್ಶನ ನಮ್ಮ ದೇಶದ ಇತಿಹಾಸ ಮತ್ತು ಪ್ರಮುಖ ಘಟನಾವಳಿಗಳನ್ನು ಮನಮುಟ್ಟುವಂತೆ ಹೊಸ ರೀತಿಯಲ್ಲಿ ವಿವರಿಸುತ್ತದೆ.

ಮೌರ್ಯರ, ಮೊಘಲರ ಆಳ್ವಿಕೆಯ ಭೂಪ್ರದೇಶದ ವ್ಯಾಪ್ತಿ, ಮೊಹಮದ್ ಆಲಿ ಜಿನ್ನಾ ಕನಸಿನ ಪಾಕಿಸ್ತಾನ, ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಭಾರತದ ಭೂ ಪ್ರದೇಶ, ದೇಶಿಯ ಸಂಸ್ಥಾನಗಳ ರಾಜರು ಆಳುತ್ತಿದ್ದ ಭೂಪ್ರದೇಶ ಹಾಗೂ ಆ ಸಂಸ್ಥಾನಗಳನ್ನು ಒಗ್ಗೂಡಿಸಿ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ಅವರು ಭವ್ಯ ಭಾರತವನ್ನು ಕಟ್ಟಿದ ಪರಿಯನ್ನು ವಿವರಿಸುವ ಚಿತ್ರಮಾಹಿತಿ ಇಲ್ಲಿದೆ.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರುವ ಸಂಸ್ಥಾನಗಳ ವಿಲೀನ ಕುರಿತ ಸಾಕ್ಷ್ಯಚಿತ್ರ ವೀಕ್ಷಿಸುತ್ತಿರುವ ಪೊಲೀಸ್‌

ಅಂದಿನ ಸಂಸ್ಥಾನಗಳಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು, ಲಾಂಛನಗಳು ಮತ್ತು ಬಳಸುತ್ತಿದ್ದ ಅಪರೂಪದ ಅಂಚೆಚೀಟಿಗಳ ಡಿಜಿಟಲ್‌ ಸಂಗ್ರಹವಿದೆ. ಅದರ ಪಕ್ಕದಲ್ಲಿನ ಟೆಲಿಫೋನ್‌ಗೆ ಕಿವಿಗೊಟ್ಟು ನಿಂತರೆ ಸಾಕು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ದೇಶದಲ್ಲಿದ್ದ ದೊರೆಗಳು, ದೇಶ ವಿಭಜನೆ ಕಾಲದಲ್ಲಾದ ಆಸ್ತಿ ಹಂಚಿಕೆ, ಪ್ರಜಾಪ್ರಭುತ್ವ ಆಡಳಿತ ಸ್ಥಾಪನೆ ಹಾಗೂ ಸೇನೆ ಕಟ್ಟುವಲ್ಲಿ ಪಟೇಲ್‌ ಅವರ ಪಾತ್ರದ ಕಥನಗಳನ್ನು ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಕೇಳಬಹುದು.

ಮನೆಯ ಕಿಟಕಿಯ ಕರ್ಟನ್‌ ಸರಿಸಿದಂತೆ ಚಿತ್ರಪಟದ ಹಲಗೆ ಜಾರಿಸಿದಾಗ ಧ್ವನಿ, ಛಾಯಾಚಿತ್ರ ಮತ್ತು ವಿಡಿಯೊಗಳ ಮೂಲಕ ಸ್ವಾತಂತ್ರ್ಯ ಚಳವಳಿ, ಸಂವಿಧಾನ ರಚನೆ ಮತ್ತು ಜವಾಹರಲಾಲ್‌ ನೆಹರೂ ಆಡಳಿತದ ಅರಿವು ನಮಗೆ ಉಂಟಾಗುತ್ತದೆ. ದೇಶವಿಭಜನೆ ಕಾಲದ ಕೋಮುಗಲಭೆಗಳು, ಅದರಿಂದ ಜನಸಾಮಾನ್ಯರು ಅನುಭವಿಸಿದ ಕಷ್ಟ–ನಷ್ಟಗಳು ಪರದೆ ಮೇಲೆ ಮೂಡಿದಾಗ ಎಂಥವರ ಕಣ್ಣಲ್ಲೂ ನೀರು ಜಿನುಗುತ್ತದೆ.

ಇಲ್ಲೊಂದು ವಿಶಿಷ್ಟ ಪ್ರದೇಶವಿದೆ. ನೀವು ಅಲ್ಲಿಗೆ ಬಂದರೆ ಸರ್ದಾರ್‌ ಪಟೇಲ್‌ರೊಂದಿಗೆ ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತಿರಿ. ನೀವು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು. ಇದರ ಪಕ್ಕದಲ್ಲಿನ ಡಿಜಿಟಲ್‌ ಪರದೆಗಳಲ್ಲಿ ಹೈದರಾಬಾದ್‌, ಜಮ್ಮು–ಕಾಶ್ಮೀರ, ಜುನಾಗಢ, ಮಣಿಪುರ ಮತ್ತು ಭೋಪಾಲ್‌ ರಾಜ್ಯಗಳನ್ನು ದೇಶದ ಒಕ್ಕೂಟ ವ್ಯವಸ್ಥೆಗೆ ಸೇರಿಸಲು ಸರ್ದಾರ್‌ ಪಟೇಲರು ತೋರಿದ ಚಾಣಕ್ಷತನವನ್ನು ಸಾಕ್ಷ್ಯಚಿತ್ರಗಳ ಮೂಲಕ ತಿಳಿಯಬಹುದು.

ಎರಡು ಹೆಜ್ಜೆ ಮುಂದಕ್ಕೆ ಬಂದರೆ ಪಟೇಲ್‌ ಅವರು ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿರುವ ಪ್ರತಿಮೆ ಎದುರಾಗುತ್ತದೆ. ಇದರ ಬದಿಯಲ್ಲಿರುವ ವರ್ಚುವಲ್‌ ರಿಯಾಲಿಟಿ ಸಾಧನದಲ್ಲಿ 1950–60ರ ದಶಕದ ವ್ಯಂಗ್ಯಚಿತ್ರಗಳನ್ನು ನೋಡುತ್ತಾ ಮುಗುಳುನಗಬಹುದು.

ನೈತಿಕಮೌಲ್ಯ, ಕೋಮು ಸೌಹಾರ್ದತೆ, ಸಂವಹನ, ಸ್ವಾತಂತ್ರ್ಯ ಮತ್ತು ದೇಶ, ತ್ಯಾಗದ ಕುರಿತಾದ ಆಯ್ದ ಪ್ರಶ್ನೆಗಳನ್ನು ಕೇಳಿದಾಗ ಪಟೇಲ್‌ ಅವರು ಹಾಲೊಗ್ರಾಫಿಕ್ ಪ್ರೊಜೆಕ್ಷನ್‌ ಮೂಲಕ ಉತ್ತರ ನೀಡುತ್ತಾರೆ. ಇದರ ಪಕ್ಕದಲ್ಲೇ ಇರುವ ಯಂತ್ರ ನಿಮಗೆ ಹಲವು ಪ್ರಶ್ನೆಗಳನ್ನು ಕೇಳುತ್ತದೆ. ಸ್ವಾತಂತ್ರ್ಯ ಸೇನಾನಿ ಪಟೇಲ್‌ ಬಗ್ಗೆ ನಿಮಗಿರುವ ಜ್ಞಾನವನ್ನು ಇಲ್ಲಿ ಒರೆ ಹಚ್ಚಬಹುದು.

ಇಟಲಿ ಮತ್ತು ಜರ್ಮನಿ ಏಕೀಕರಣದ ಕಥನಗಳನ್ನೂ ವಿಡಿಯೊಗಳ ಮೂಲಕ ಮನಮುಟ್ಟುವಂತೆ ವಿವರಿಸಲಾಗುತ್ತದೆ. ಅಪರೂಪದ ಛಾಯಾಚಿತ್ರಗಳು ಮತ್ತು ದೇಶದಲ್ಲಾದ ಒಪ್ಪಂದಗಳ ಡಿಜಿಟಲ್‌ ಪ್ರತಿಗಳೂ ಇಲ್ಲಿವೆ.

****

ಸ್ಥಳ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಕಸ್ತೂರ್ಬಾ ರಸ್ತೆ, ಪ್ರತಿದಿನ ಬೆಳಿಗ್ಗೆ 10ರಿಂದ 5.30, ಜೂನ್‌ 30 ಕೊನೆಯ ದಿನ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry