ಜಿಡಿಪಿ ಶೇ 7.2 ನಿರೀಕ್ಷೆ

7

ಜಿಡಿಪಿ ಶೇ 7.2 ನಿರೀಕ್ಷೆ

Published:
Updated:
ಜಿಡಿಪಿ ಶೇ 7.2 ನಿರೀಕ್ಷೆ

ವಾಷಿಂಗ್ಟನ್: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2017-18) ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 7.2ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ.

ಇದೇ ಜನವರಿಯಲ್ಲಿ ಪ್ರಕಟಿಸಿದ ಆರ್ಥಿಕ ಮುನ್ನೋಟ ವರದಿಯಲ್ಲಿ  2017ನೇ ಸಾಲಿನಲ್ಲಿ ಭಾರತದ  ಜಿಡಿಪಿ ಶೇ 6.8ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿತ್ತು.

ಈಗ ತನ್ನ ಹಿಂದಿನ ಆ ವರದಿಯನ್ನು ಪರಿಷ್ಕರಿಸಿರುವ ವಿಶ್ವಬ್ಯಾಂಕ್‌,  ಜನವರಿಯಲ್ಲಿಯ ನಿರೀಕ್ಷೆಗಿಂತ ಶೇ 0.4ರಷ್ಟು ಹೆಚ್ಚುವರಿ ಆರ್ಥಿಕ ಅಭಿವೃದ್ಧಿಯನ್ನು ಭಾರತ ಸಾಧಿಸಲಿದೆ ಎಂದು  ಸ್ಪಷ್ಟಪಡಿಸಿದೆ.

ಆದರೆ, 2018 ಮತ್ತು 2019ರಲ್ಲಿ ಭಾರತದ ಜಿಡಿಪಿಯು ನಿರೀಕ್ಷೆಗಿಂತ ಕ್ರಮವಾಗಿ ಶೇ 0.3 ಮತ್ತು ಶೇ 0.1ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದೆ. 

ನೋಟು ರದ್ದತಿಯ ತಾತ್ಕಾಲಿಕ ನಕಾರಾತ್ಮಕ ಪರಿಣಾಮದಿಂದ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ವಬ್ಯಾಂಕ್‌ ವಿಶ್ಲೇಷಿಸಿದೆ.

ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ  ಹೊರಹೊಮ್ಮುತ್ತಿರುವ ಭಾರತದ  ವರ್ಚಸ್ಸಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದೂ ಹೇಳಿದೆ.

ಹೆಚ್ಚಿದ ಖಾಸಗಿ ಹೂಡಿಕೆ: ದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಖಾಸಗಿ ಹೂಡಿಕೆಯಾಗುತ್ತಿರುವುದು ಆರ್ಥಿಕ ಚೇತರಿಕೆಗೆ ಕಾರಣ ಎಂದು ವಿಶ್ವಬ್ಯಾಂಕ್‌ನ ‘ಜಾಗತಿಕ ಆರ್ಥಿಕ ಮುನ್ನೋಟ ವರದಿ’ ವಿವರಿಸಿದೆ.   

ನೋಟು ರದ್ದತಿಯ ನಂತರ ಉಂಟಾಗಿದ್ದ  ನಗದು ಕೊರತೆ ಸಮಸ್ಯೆ ನಿವಾರಣೆಯಾಗಿದ್ದು, ರಫ್ತು ವಲಯ ಮತ್ತು   ಸರ್ಕಾರಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿದೆ ಎಂದು ವಿಶ್ವಬ್ಯಾಂಕ್‌ನ ಎಂ. ಐಯ್ಹಾನ್‌ ಕೋಸ್‌ ವಿಶ್ಲೇಷಿಸಿದ್ದಾರೆ.  

ತಯಾರಿಕಾ ವಲಯದ ಸೂಚ್ಯಂಕ ಚೇತರಿಕೆ, ಕೈಗಾರಿಕಾ ಪ್ರಗತಿ ಸೂಚ್ಯಂಕ ಭಾಗಶಃ ಸುಧಾರಣೆ,  ಹೆಚ್ಚಿದ ದೇಶೀಯ ಮಾರುಕಟ್ಟೆಯ ಬೇಡಿಕೆ ಮತ್ತು ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಿಡಿಪಿ  ಹೆಚ್ಚಳಕ್ಕೆ ಕಾರಣವಾಗುವ ಅಂಶಗಳಾಗಿವೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry