ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಲ್‌ವಿಯಿಂದ ಇಸ್ರೊಗೆ ಲಾಭ: ನಿರ್ಮಲಾನಂದನಾಥ ಸ್ವಾಮೀಜಿ

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೊ ಅಭಿವೃದ್ಧಿಪಡಿಸಿರುವ ಭಾರಿ ತೂಕದ ಜಿಎಸ್‌ಎಲ್‌ವಿ ಮಾರ್ಕ್– 3ಡಿ1 ರಾಕೆಟ್‌ನಿಂದಾಗಿ ಭಾರಿ ಮೊತ್ತದ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಉಡಾವಣಾ ಸಂದರ್ಭದಲ್ಲಿ ಇಸ್ರೊ ಆಹ್ವಾನದ ಮೇರೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ಧವನ್‌ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಅವರು,  ‘ಉಪಗ್ರಹ ತಯಾರಿಸಲು ಆಗುವ ಖರ್ಚಿಗಿಂತ ಉಡಾವಣಾ ವೆಚ್ಚವೇ ಸುಮಾರು 4–5 ಪಟ್ಟು ಹೆಚ್ಚಾಗುತ್ತದೆ. ಭಾರಿ ಗಾತ್ರದ ಉಪಗ್ರಹ ಉಡಾವಣೆಗೆ ಇಸ್ರೊ, ವಿದೇಶಿ ರಾಕೆಟ್‌ ಅವಲಂಬಿಸಿತ್ತು. ಇನ್ನು ಮುಂದೆ ನಮ್ಮ ದೇಶದಲ್ಲೇ ದೊಡ್ಡ ಉಪಗ್ರಹಗಳ ಉಡಾವಣೆ ನಡೆಯುತ್ತದೆ.  ಇದು ನಮ್ಮ ವಿಜ್ಞಾನಿಗಳ ಸಾಧನೆ’ ಎಂದು ಹರ್ಷಿಸಿದರು.

‘ಜಿಎಸ್‌ಎಲ್‌ವಿಯು ಭೂಸ್ಥಿರ ಕಕ್ಷೆಯವರೆಗೆ ಗರಿಷ್ಠ ನಾಲ್ಕು ಟನ್‌ ಹೊತ್ತು ಒಯ್ಯುವ ಸಾಮರ್ಥ್ಯವಿದೆ. ಇದನ್ನು ಹತ್ತು ಟನ್‌ವರೆಗೆ ವಿಸ್ತರಿಸಬಹುದು ಎನ್ನುವ ಮಾಹಿತಿಯಿದೆ.  ಇದು ಮುಂದಿನ ದಿನಗಳಲ್ಲಿ ಇಸ್ರೊಗೆ ಲಾಭ ತಂದುಕೊಡುತ್ತದೆ’ ಎಂದರು.

‘ಈ ರಾಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಕ್ರಯೋಜೆನಿಕ್‌ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಹಿಂದೆ ರಷ್ಯಾ
ಸಹ ಭಾರತಕ್ಕೆ ಈ ತಂತ್ರಜ್ಞಾನ ಹಸ್ತಾಂತರಿಸಲು ನಿರಾಕರಿಸಿತ್ತು.

ಇಂತಹ ಕಷ್ಟದ ಸಂದರ್ಭದಲ್ಲೂ ವಿಜ್ಞಾನಿಗಳ ಕ್ಲಿಷ್ಟಕರ ತಂತ್ರಜ್ಞಾನ ಅಭಿವೃದ್ಧಿಯನ್ನು ಸವಾಲಾಗಿ ಸ್ವೀಕರಿಸಿ ಜಿಎಸ್‌ಎಲ್‌ವಿಯಲ್ಲಿ ಬಳಸಿದ್ದಾರೆ. ಇದಕ್ಕಾಗಿ ಭಾರತದ ವಿಜ್ಞಾನ ಸಮೂಹವನ್ನೇ ನಾವು ಬೆನ್ನು ತಟ್ಟಬೇಕು’ ಎಂದು ಶ್ಲಾಘಿಸಿದರು.

ಮೈಸೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಮತ್ತು ಮದ್ರಾಸ್‌ ಐಐಟಿಯಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆದು  ವಿಜ್ಞಾನದ ಆಗುಹೋಗುಗಳ ಬಗ್ಗೆ ತಿಳಿದುಕೊಂಡಿರುವ ನಿರ್ಮಲಾನಂದ ಸ್ವಾಮೀಜಿ ಅವರನ್ನು  ಉಡಾವಣೆ ವೇಳೆ  ಶ್ರೀಹರಿಕೋಟಾಗೆ ಬರುವಂತೆ ಇಸ್ರೊ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ 2–3 ಸಲ ಆಹ್ವಾನ ನೀಡಿದ್ದರು. ಆದರೆ, ಮಠದ ಕಾರ್ಯಕ್ರಮಗಳ ಒತ್ತಡದಿಂದ ಭಾಗವಹಿಸಲು ಆಗಿರಲಿಲ್ಲ.

‘ಉಡಾವಣಾ ವೇಳೆ ಇಷ್ಟು ಜನ ವಿಜ್ಞಾನಿಗಳ ಮಧ್ಯೆ ನಾನೊಬ್ಬನೇ ಕಾವಿ ತೊಟ್ಟು ನಿಂತಿದ್ದೆ. ನಾನು ಕಾವಿ ಹಾಕಿದ್ದರೂ ಮನದೊಳಗೆ ವಿಜ್ಞಾನಿ ಜಾಗೃತವಾಗಿದ್ದ. ಅವರ ವೈಜ್ಞಾನಿಕ ಭಾಷೆ ನನಗೆ ಸುಲಭವಾಗಿ ಗೊತ್ತಾಗುತ್ತಿತ್ತು. ಹಾಗಾಗಿ ನಾನು ಅವರಿಗೆ, ಅವರು ನನಗೆ ವಿಭಿನ್ನವಾಗಿ ಕಾಣಲಿಲ್ಲ. ಹಿಂದೆ ಅಮೆರಿಕದ ನಾಸಾ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಿಗೂ ಭೇಟಿ ನೀಡಿದ್ದೆ’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT