ಕೇಂದ್ರ ಸಾಲ ಮನ್ನಾ ಮಾಡಿದರೆ ರಾಜ್ಯವೂ ಸಿದ್ಧ

7
ರಾಜ್ಯ ಸರ್ಕಾರ ಪುನರುಚ್ಚಾರ * ವಿಧಾನಸಭೆಯಲ್ಲಿ ಉತ್ತರ ನೀಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

ಕೇಂದ್ರ ಸಾಲ ಮನ್ನಾ ಮಾಡಿದರೆ ರಾಜ್ಯವೂ ಸಿದ್ಧ

Published:
Updated:
ಕೇಂದ್ರ ಸಾಲ ಮನ್ನಾ ಮಾಡಿದರೆ ರಾಜ್ಯವೂ ಸಿದ್ಧ

ಬೆಂಗಳೂರು: ವಾಣಿಜ್ಯ ಬ್ಯಾಂಕ್‌ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲಗಳನ್ನು ಕೇಂದ್ರ ಸರ್ಕಾರ  ಮನ್ನಾ ಮಾಡಿದರೆ, ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಬರಗಾಲದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಮಂಗಳವಾರ ಅವರು ಉತ್ತರ ನೀಡಿದರು.

ಕೃಷಿ ಪತ್ತಿನ ಸಹಕಾರ ಸಂಘಗಳು, ಗ್ರಾಮೀಣ ಬ್ಯಾಂಕ್‌ಗಳು, ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ  ಇದೇ ವರ್ಷದ ಮಾರ್ಚ್‌ ಅಂತ್ಯದವರೆಗೆ ಒಟ್ಟು 83.75 ಲಕ್ಷ ರೈತರು ₹1.16 ಲಕ್ಷ ಕೋಟಿ ಸಾಲ ಪಡೆದಿದ್ದಾರೆ. ಅಲ್ಪಾವಧಿ ಕೃಷಿ ಸಾಲದ ಮೊತ್ತ ₹52,744 ಕೋಟಿಯಷ್ಟಿದೆ ಎಂದು ವಿವರ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೇಂದ್ರದ ಕಡೆಗೆ ಕೈ ತೋರಿಸದೆ ರೈತರ ಸಾಲ ಮನ್ನಾ ಮಾಡಿವೆ. ರಾಜ್ಯದಲ್ಲಿ  ಹಿಂದೆ ರೈತರ ಸಾಲ ಮನ್ನಾ ಮಾಡಿದಾಗಲೂ ಸ್ವಂತ ಸಂಪನ್ಮೂಲವನ್ನೇ ಬಳಸಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರವೇ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಈ ಬಗ್ಗೆ  ಪರಿಶೀಲಿಸಲಿದೆ’ ಎಂದಷ್ಟೇ ಕಾಗೋಡು ಹೇಳಿದರು.

ಮುದ್ರಿತ ರೂಪದಲ್ಲಿದ್ದ ಎಂಟು ಪುಟಗಳ ಉತ್ತರವನ್ನು ಓದಿದ ಸಚಿವ ಕಾಗೋಡು ತಿಮ್ಮಪ್ಪ, ‘ಬರ ಪರಿಹಾರ ಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಅಗತ್ಯ ಇರುವ ಅನುದಾನ ಬಿಡುಗಡೆ ಮಾಡಿದೆ’ ಎಂದು ವಿವರಿಸಿದರು.

ಪರಿಹಾರ ಸಿಕ್ಕಿಲ್ಲ: ಶೆಟ್ಟರ್‌  ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಪಾದಿಸಿದರು.

ಬೆಳಿಗ್ಗೆ ಬರಗಾಲದ ಮೇಲೆ ಚರ್ಚೆ ಆರಂಭಿಸಿದ ಅವರು, ‘2014ರಿಂದ ಈವರೆಗೆ 2,573 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ, 731 ರೈತರು ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದವರು ಎಂಬ ಕಾರಣಕ್ಕೆ ಅವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ಅಂಥ ರೈತ ಕುಟುಂಬಗಳಿಗೂ ಪರಿಹಾರ ನೀಡುವುದಾಗಿ ಮೌಖಿಕವಾಗಿ ಹೇಳಿದ್ದ ಮುಖ್ಯಮಂತ್ರಿ, ಆ ಬಗ್ಗೆ ಆದೇಶ ಹೊರಡಿಸಿಲ್ಲ’ ಎಂದೂ ಟೀಕಿಸಿದರು.

‘ಗದಗ– ಬೆಟಗೇರಿಯಲ್ಲಿ 46 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಅವಳಿ ನಗರಗಳ ಎಲ್ಲ 41,500 ಮನೆಗಳಿಗೆ ನಿರಂತರ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿ ಅಪೂರ್ಣ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ’ ಎಂದು ಶೆಟ್ಟರ್‌ ಆರೋಪಿಸಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ, ‘ಲೋಕಾರ್ಪಣೆ ಸಂದರ್ಭದಲ್ಲಿ 15 ಸಾವಿರ ಮನೆಗಳಿಗೆ ನಿರಂತರ ನೀರು ಪೂರೈಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯೇ ಹೇಳಿದ್ದರು.  ಉಳಿದ 20 ಸಾವಿರ ಮನೆಗಳಿಗೆ ಡಿಸೆಂಬರ್ ಅಂತ್ಯದ ವೇಳೆಗೆ ನೀರು ಪೂರೈಸಲಾಗುವುದು’ ಎಂದರು.

ಇಸ್ರೋ, ಪಾತಾಳ ಗಂಗೆ ವರದಿ ಮಂಡನೆ: ‘ಪಾತಾಳ ಗಂಗೆ ಯೋಜನೆಯ ಸಾಧಕಬಾಧಕಗಳ ಕುರಿತು ಜಲ ತಜ್ಞರು, ವಿಜ್ಞಾನಿಗಳ ಜೊತೆ ಸಂವಾದ ನಡೆಸಲಾಗಿದೆ. ಪರಿಣತರು ಈ ಕುರಿತು ಅಭಿಪ್ರಾಯ ನೀಡಿದ್ದಾರೆ. ಇಸ್ರೊ ನೀಡಿದ ವರದಿಯೂ ಸರ್ಕಾರದ ಬಳಿ ಇದೆ. ಈ ಎರಡನ್ನೂ ಸದನದಲ್ಲಿ ಮುಂದಿಡಲಾಗುವುದು’ ಎಂದು ಪಾಟೀಲ ಸದನಕ್ಕೆ ಭರವಸೆ ನೀಡಿದರು.

ಅಂತರ್ಜಲಕ್ಕೆ ಸಂಬಂದಿಸಿದ ಇಸ್ರೊ ವರದಿ ಹಾಗೂ ಪಾತಾಳಗಂಗೆ ಯೋಜನೆ  ಕುರಿತು ಸದನಕ್ಕೆ ಮಾಹಿತಿ ನೀಡಬೇಕು ಎಂದು ಶೆಟ್ಟರ್ ಆಗ್ರಹಕ್ಕೆ ಸಚಿವರು ಈ ಭರವಸೆ ಕೊಟ್ಟರು.

ಎರಡು ಬಾರಿ ಕ್ಷಮೆ ಕೋರಿದ ಕಾಗೋಡು

‘ಬರ ಪರಿಹಾರ ಕಾಮಗಾರಿಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಸಣ್ಣಪುಟ್ಟ ತಪ್ಪಾಗಿದ್ದರೆ ಕ್ಷಮಿಸಿ’ ಎಂದು  ಕಾಗೋಡು ತಿಮ್ಮಪ್ಪ ವಿನಂತಿಸಿದರು.

‘ಶಾಸಕರು ಸೂಚಿಸಿದ ಕಡೆ ಗೋಶಾಲೆ ತೆರೆಯಲು ಸೂಚಿಸಲಾಗಿದೆ’ ಎಂದು ಸಚಿವರು ವಿವರ ನೀಡಿದರು.

‘ಪ್ರತಿ ಜಿಲ್ಲೆಗೆ ಎರಡು ಬಾರಿ ಭೇಟಿ ಕೊಟ್ಟಿದ್ದೇನೆ. ನನ್ನ ಕೆಲಸವನ್ನು ನಿಯತ್ತಿನಿಂದ ಮಾಡಿದ್ದೇನೆ. ಹಾಗಿದ್ದರೂ ತಪ್ಪಾಗಿದ್ದರೆ ಕ್ಷಮಿಸಿ ಬಿಡಿ’ ಎಂದು ಕಾಗೋಡು ಹೇಳಿದರು.

ಚೆಕ್‌ ರೂಪದಲ್ಲಿ ಪರಿಹಾರ ವಿತರಣೆ

‘ಬೆಳೆ ನಷ್ಟದ ಬಾಕಿ ₹200 ಕೋಟಿ ಪರಿಹಾರದ ಮೊತ್ತವನ್ನು ಫಲಾನುಭವಿ ರೈತರಿಗೆ ಚೆಕ್ ಮೂಲಕ ತಲುಪಿಸಲಾಗುವುದು’ ಎಂದು  ತಿಮ್ಮಪ್ಪ ಹೇಳಿದರು.

‘ಬೆಳೆ ನಷ್ಟ ಪರಿಹಾರ ವಿತರಿಸಲು ತಂತ್ರಾಂಶ ಸಿದ್ಧಪಡಿಸಲಾಗಿದೆ. ಆಧಾರ್‌ ಸಂಖ್ಯೆ, ಬ್ಯಾಂಕ್ ಖಾತೆ ಹಾಗೂ ಜಮೀನಿನ ವಿವರಗಳು ಹೊಂದಾಣಿಕೆಯಾಗದೇ ಕೆಲವು ರೈತರಿಗೆ ಪರಿಹಾರ ವಿತರಿಸಲು ಸಾಧ್ಯವಾಗಿಲ್ಲ. ಇನ್ನೂ ಒಂದು ವಾರದೊಳಗೆ ತಾಂತ್ರಿಕ ತೊಂದರೆ ಬಗೆಹರಿಯದೇ ಇದ್ದರೆ ರೈತರಿಗೆ ಚೆಕ್‌ ತಲುಪಿಸಲು ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.

(ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಮಾತಿನ ವೈಖರಿ)

(ವಿಧಾನ ಪರಿಷತ್ ಸದಸ್ಯರಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಜಿಎಸ್‌ಟಿ ಕುರಿತ ಕಾರ್ಯಾಗಾರದಲ್ಲಿ ಜೆಡಿಎಸ್ ಸದಸ್ಯ ಶರವಣ ಅವರು ಬಂಗಾರದ ಮೇಲಿನ ತೆರಿಗೆ ಕುರಿತು ಪ್ರಶ್ನಿಸಿದಾಗ, ಇತರೆ ಸದಸ್ಯರು ನಗುತ್ತಾ ದನಿಗೂಡಿಸಿದರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry