ಸೌಹಾರ್ದ ಫುಟ್‌ಬಾಲ್‌; ನೇಪಾಳ ವಿರುದ್ಧ ಗೆದ್ದ ಭಾರತ ತಂಡ

7

ಸೌಹಾರ್ದ ಫುಟ್‌ಬಾಲ್‌; ನೇಪಾಳ ವಿರುದ್ಧ ಗೆದ್ದ ಭಾರತ ತಂಡ

Published:
Updated:
ಸೌಹಾರ್ದ ಫುಟ್‌ಬಾಲ್‌; ನೇಪಾಳ ವಿರುದ್ಧ ಗೆದ್ದ ಭಾರತ ತಂಡ

ಮುಂಬೈ: ಅಂಧೇರಿ ಕ್ರೀಡಾ ಸಂಕೀರ್ಣದ  ಮೈದಾನದಲ್ಲಿ ಮಂಗಳವಾರ ಮಿಂಚಿನ ಆಟ ಆಡಿದ ರಕ್ಷಣಾ ವಿಭಾಗದ ಆಟಗಾರ ಸಂದೇಶ್‌ ಜಿಂಗಾನ್‌ ಮತ್ತು ಮಿಡ್‌ ಫೀಲ್ಡರ್‌ ಜೆಜೆ ಲಾಲ್‌ಪೆಕ್ಲುವಾ ಅವರು  ತವರಿನ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಇವರು ದಾಖಲಿಸಿದ ತಲಾ ಒಂದು ಗೋಲುಗಳ ಬಲದಿಂದ ಭಾರತ ತಂಡ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ ಬಾಲ್‌ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿತು.

ಕಿರ್ಗಿಸ್ತಾನ ವಿರುದ್ಧದ ಎಎಫ್‌ಸಿ ಕಪ್‌ ಅರ್ಹತಾ ಪಂದ್ಯಕ್ಕೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ವೇದಿಕೆ ಎನಿಸಿದ್ದ ಪಂದ್ಯದಲ್ಲಿ ಭಾರತ 2–0 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು.

ನೇಪಾಳ ವಿರುದ್ಧ 12–4ರ ಗೆಲುವಿನ ದಾಖಲೆ ಹೊಂದಿದ್ದ ಆತಿಥೇಯ ತಂಡ ಆರಂಭದಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವ ಪ್ರಯತ್ನ ನಡೆಸಿತು. ಪ್ರಮುಖ ಆಟಗಾರರ ಅನು ಪಸ್ಥಿತಿಯಲ್ಲೂ ಆತಿಥೇಯರು ಮಿಂಚಿನ ಆಟ ಆಡಿದರು. ರೌಲಿನ್‌ಸನ್ ಬೊರ್ಗೆಸ್‌  ಮತ್ತು ರಾಬಿನ್‌ ಸಿಂಗ್‌ ಅವರು  ಮೊದಲರ್ಧದಲ್ಲಿ ಮೋಡಿ ಮಾಡಿದರೂ ತಂಡಕ್ಕೆ ಖಾತೆ ತೆರೆಯಲು ಆಗಲಿಲ್ಲ.

10ನೇ ನಿಮಿಷದಲ್ಲಿ ಬೊರ್ಗೆಸ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ತಡೆದ ಮುಂಚೂಣಿ ವಿಭಾಗದ ಆಟಗಾರ ರಾಬಿನ್‌ ಸಿಂಗ್‌ ಅದನ್ನು ಗುರಿ ಮುಟ್ಟಿಸಲು ವಿಫಲರಾದರು.

ಇದರ ಬೆನ್ನಲ್ಲೇ ರಾಬಿನ್‌ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರು.  ಜಾಕಿಚಾಂದ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ತಲೆತಾಗಿಸಿ ಗುರಿ ತಲುಪಿಸುವ ರಾಬಿನ್‌ ಅವರ ಪ್ರಯತ್ನ ವಿಫಲವಾಯಿತು.

ಆ ಬಳಿಕ  ಬದಲಿ ಆಟಗಾರನಾಗಿ ಅಂಗಳಕ್ಕಿಳಿದಿದ್ದ ಯೂಜೆನ್ಸನ್‌ ಲಿಂಗ್ಡೊ ಅವರೂ  ಎದುರಾಳಿ ರಕ್ಷಣಾ ವಿಭಾಗದ ಆಟಗಾರರಿಗೆ ತಲೆನೋವಾಗಿ ಪರಿಣ ಮಿಸಿದರು. ಯೂಜೆನ್ಸನ್‌ ನೀಡಿದ ಪಾಸ್‌ ಗಳಲ್ಲಿ ರಾಬಿನ್‌ ಗೋಲು ಗಳಿಸಲು ವಿಫಲರಾದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 169ನೇ ಸ್ಥಾನದಲ್ಲಿದ್ದ ನೇಪಾಳ ಕೂಡ ಚುರುಕಿನ ಆಟದ ಮೂಲಕ ಗಮನಸೆಳೆಯಿತು. ಈ ತಂಡದ ಅರ್ಜಾನ್‌ ಬಿಸ್ಟಾ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಮತ್ತು ನಾಯಕ ಗುರುಪ್ರೀತ್‌ ಸಿಂಗ್‌ ಸೊಗಸಾದ ರೀತಿಯಲ್ಲಿ ತಡೆದು ತಂಡವನ್ನು ಆರಂಭಿಕ ಅಪಾಯದಿಂದ ಪಾರು ಮಾಡಿದರು.

ಇದರ ಬೆನ್ನಲ್ಲೇ ಶ್ರೇಷ್ಠ ಅವರು ಭಾರತದ ರಕ್ಷಣಾ ಕೋಟೆಯೊಳಗೆ ಪ್ರವೇಶಿಸಿದರು. ಇದನ್ನು ಗಮನಿಸಿದ ಗುರುಪ್ರೀತ್‌ ಗೋಲು ಪೆಟ್ಟಿಗೆಯಿಂದ ಮುಂದಕ್ಕೆ ಹೋಗಿ ಎದುರಾಳಿ ಆಟಗಾರ ನ ಪ್ರಯತ್ನವನ್ನು ವಿಫಲಗೊಳಿಸಿದರು. ಹೀಗಾಗಿ ಮೊದಲರ್ಧ ಗೋಲುರಹಿತವಾಗಿ ಅಂತ್ಯಕಂಡಿತು.

ದ್ವಿತೀಯಾರ್ಧದಲ್ಲಿ ಭಾರತ ತಂಡದ ಮುಖ್ಯ ಕೋಚ್ ಸ್ಟೀಫನ್‌ ಕಾನ್‌ಸ್ಟಂಟೈನ್‌ ಭಿನ್ನ ರಣನೀತಿ ಹೆಣೆದು ತಂಡವನ್ನು ಅಂಗಳಕ್ಕಿಳಿಸಿದರು.

ಅನನ್‌ ಎಡಥೋಡಿಕಾ ತಲೆತಾಗಿಸಿ ಕಳುಹಿಸಿದ ಚೆಂಡನ್ನು ನೇಪಾಳ ತಂಡದ ಗೋಲ್‌ಕೀಪರ್‌ ಕಿರಣ್‌ ಕುಮಾರ್‌ ಲಿಂಬು ತಡೆದರು. ಭಾರತದ ಪ್ರಯತ್ನಕ್ಕೆ 60ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಜಾಕಿಚಂದ್‌ ಸಿಂಗ್‌ ಬಾರಿಸಿದ ಚೆಂಡನ್ನು ತಡೆದ ಡಿಫೆಂಡರ್‌ ಸಂದೇಶ್‌ ಜಿಂಗಾನ್‌ ಅದನ್ನು ಲೀಲಾಜಾಲವಾಗಿ ಎದುರಾಳಿ ತಂಡದ ಗೋಲುಪೆಟ್ಟಿಗೆಯೊಳಗೆ ತೂರಿಸಿ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

ವಿಶ್ವ ಕ್ರಮಾಂಕದಲ್ಲಿ 100ನೇ ಸ್ಥಾನ ಹೊಂದಿರುವ ಭಾರತ ಆ ನಂತರ ಇನ್ನಷ್ಟು ವೇಗದ ಆಟಕ್ಕೆ ಮುಂದಾ ಯಿತು. 77ನೇ ನಿಮಿಷದಲ್ಲಿ ಜೆಜೆ ಲಾಲ್‌ಪೆಕ್ಲುವಾ ಗೋಲು ದಾಖಲಿ ಸುತ್ತಿದ್ದಂತೆ ಭಾರತದ ಆಟಗಾರರು ಖುಷಿಯಿಂದ ಕುಣಿದಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry