ಸಿಆರ್‌ಪಿಎಫ್‌ಗೆ ನೆರವಾದ ಸಹ್ರಿ, ಬೀದಿ ನಾಯಿಗಳು!

7
ಕಾಶ್ಮೀರದ ಬಂಡಿಪೊರದಲ್ಲಿ ಉಗ್ರರ ದಾಳಿ ಯತ್ನ ವಿಫಲಗೊಳಿಸಿದ್ದು ಹೇಗೆ?

ಸಿಆರ್‌ಪಿಎಫ್‌ಗೆ ನೆರವಾದ ಸಹ್ರಿ, ಬೀದಿ ನಾಯಿಗಳು!

Published:
Updated:
ಸಿಆರ್‌ಪಿಎಫ್‌ಗೆ ನೆರವಾದ ಸಹ್ರಿ, ಬೀದಿ ನಾಯಿಗಳು!

ಶ್ರೀನಗರ: ಅದು ಸೋಮವಾರದ ಮುಂಜಾವಿನ ಹೊತ್ತು. ಕಮಾಂಡೆಂಟ್‌ ಇಕ್ಬಾಲ್‌ ಅಹ್ಮದ್‌ ಅವರು ಸಹ್ರಿಗಾಗಿ (ಉಪವಾಸ ಆರಂಭಕ್ಕೂ ಮುನ್ನ ಸೇವಿಸುವ ಆಹಾರ) ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಅಷ್ಟರಲ್ಲಿ, ಅವರ ವೈರ್‌ಲೆಸ್‌ ಸಾಧನ ಒಂದೇ ಸಮನೆ ಕೂಗಿಕೊಳ್ಳುವುದಕ್ಕೆ ಆರಂಭಿಸಿತು.

ಉತ್ತರ ಕಾಶ್ಮೀರದ ಬಂಡಿಪೊರ ಪ್ರದೇಶದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರದ ಮೇಲೆ ಆತ್ಮಾಹತ್ಯಾ ದಾಳಿ ನಡೆಯುತ್ತಿದೆ ಎಂಬ ಸಂದೇಶ ಬಂತು.

ಸಹ್ರಿಯನ್ನು ಅವರು ಮರೆತೇ ಬಿಟ್ಟರು. ತಕ್ಷಣ ರೈಫಲ್‌ ಹಿಡಿದು ಸಮೀಪದಲ್ಲೇ ಇದ್ದ, ನಿಷೇಧಿತ ಲಷ್ಕರ್‌–ಎ ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದವರು ಎನ್ನಲಾದ ನಾಲ್ವರು ಉಗ್ರರು ದಾಳಿ ನಡೆಸುತ್ತಿದ್ದ ಸುಂಬಲ್‌ ಶಿಬಿರದತ್ತ ಧಾವಿಸಿದರು.

ಚೇತನ್‌ ಚೀತಾ ಎಂಬ ಕಮಾಂಡರ್‌ ಗಾಯಗೊಂಡಿದ್ದರಿಂದ ಅಹ್ಮದ್‌ ಅವರು ಸಿಆರ್‌ಪಿಎಫ್‌ನ 45ನೇ ಬೆಟಾಲಿಯನ್ನಿನ ನೇತೃತ್ವ ವಹಿಸಿದ್ದರು. ತಮ್ಮ ನೇತೃತ್ವದ 2 ತುಕಡಿಗಳ ಸಿಬ್ಬಂದಿ ಇದ್ದ ಶಿಬಿರದ ಮೇಲೆ ದಾಳಿ ನಡೆಯುತ್ತಿದೆ ಎಂಬ ಸಂದೇಶ ಬಂದಾಗ ಅವರು ಸುಂಬಲ್‌ನಿಂದ 200–300 ಮೀಟರ್‌ ದೂರದಲ್ಲಿದ್ದರು.

ರಂಜಾನ್‌ ಮಾಸದಲ್ಲಿ ಉಪವಾಸ ಆಚರಿಸುವ ಧರ್ಮನಿಷ್ಠ ಅಹ್ಮದ್‌ ಅವರು ದಾಳಿಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಶಿಬಿರದತ್ತ ಧಾವಿಸಿದ್ದು ಮಾತ್ರವಲ್ಲದೇ, ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿ ಆ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸುವರೆಗೂ ಅಲ್ಲೇ ಇದ್ದರು.

‘ಭದ್ರತಾ ಪಡೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಲು ಮತ್ತು ಆ ಪ್ರದೇಶದಲ್ಲಿ ತ್ವರಿತವಾಗಿ ಜಮಾವಣೆಗೊಳ್ಳಲು ಸಾಧ್ಯವಾಗಿದ್ದರಿಂದ ಉಗ್ರರ ಯತ್ನ ವಿಫಲಗೊಳಿಸಿ ಹಲವರ ಜೀವ ಉಳಿಸಲು ಸಾಧ್ಯವಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೆರವಾದ ನಾಯಿಗಳು:  ಸುಂಬಲ್‌ ಶಿಬಿರದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಸುಳಿವು ನೀಡಿದ್ದು ಎರಡು ಬೀದಿ ನಾಯಿಗಳು! ಇವುಗಳ ನೆರವಿನಿಂದಾಗಿ ಹಲವು ಯೋಧರ ಜೀವ ಉಳಿಯಿತು.

ಯಾವಾಗಲೂ ಸಿಆರ್‌ಪಿಎಫ್‌ ಸಿಬ್ಬಂದಿ ಹಾಕುವ ಆಹಾರವನ್ನು ಸೇವಿಸುವ ಈ ನಾಯಿಗಳು ನಿರಂತರವಾಗಿ ಬೊಗಳುವ ಮೂಲಕ, ನಿರ್ದಿಷ್ಟ ಪ್ರದೇಶದಲ್ಲಿ ಯಾರೋ ಅವಿತಿರುವ ಸುಳಿವನ್ನು ಯೋಧರಿಗೆ ನೀಡಿದವು.

ನಂತರ ಸಿಆರ್‌ಪಿಎಫ್‌ ಯೋಧರು ಆ ಪ್ರದೇಶದತ್ತ ಬೆಳಕು ಹಾಯಿಸಿ, ಉಗ್ರರು ಅಡಗಿ ಕುಳಿತಿರುವುದನ್ನು ಖಚಿತಪಡಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry