ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಜಯ ಅನಿವಾರ್ಯ

ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಿರ್ಣಾಯಕ ಪಂದ್ಯ
Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತು ಸಾಕಷ್ಟು ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ತಂಡ ಈಗ ಮತ್ತೊಂದು ಸವಾಲಿಗೆ ಅಣಿಯಾಗಿದೆ.

ಬುಧವಾರ ನಡೆಯುವ ಚಾಂಪಿ ಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸರ್ಫರಾಜ್‌ ಅಹ್ಮದ್‌ ಬಳಗ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
ಸೆಮಿಫೈನಲ್‌ ಆಸೆ ಜೀವಂತವಾಗಿಟ್ಟು ಕೊಳ್ಳಬೇಕಾದರೆ ಪಾಕಿಸ್ತಾನ ಈ ಪೈಪೋಟಿಯಲ್ಲಿ ಗೆಲ್ಲಲೇಬೇಕು. ಹೀಗಾಗಿ ಸರ್ಫರಾಜ್‌ ಪಡೆಗೆ  ಇದು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ.

ಭಾರತದ ಎದುರಿನ  ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಗುಣಮಟ್ಟದ ಆಟ ಆಡಲು ವಿಫಲವಾಗಿತ್ತು.
ಗೆಲುವಿಗೆ 324ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡ 33.4 ಓವರ್‌ಗಳಲ್ಲಿ 164ರನ್‌ ಗಳಿಗೆ ಹೋರಾಟ ಮುಗಿಸಿತ್ತು. ಆರಂಭಿಕ ಆಟಗಾರ ಅಜರ್‌ ಅಲಿ ಮತ್ತು ಮೊಹಮ್ಮದ್ ಹಫೀಜ್‌ ಅವರನ್ನು ಬಿಟ್ಟರೆ ಇತರರು ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿರಲಿಲ್ಲ.

ದಕ್ಷಿಣ ಆಫ್ರಿಕಾ ತಂಡದ ನಾಯಕ ಎ.ಬಿ. ಡಿವಿಲಿಯರ್ಸ್

ಬಲಗೈ ಬ್ಯಾಟ್ಸ್‌ಮನ್‌ ಅಜರ್‌ 65 ಎಸೆತಗಳಲ್ಲಿ 50 ರನ್‌ ಗಳಿಸಿದ್ದರೆ, ಹಫೀಜ್‌ 33 ರನ್‌ ಕಲೆಹಾಕಲು 43 ಎಸೆತಗಳನ್ನು ತೆಗೆದುಕೊಂಡಿದ್ದರು. ಅನುಭವಿ ಶೋಯಬ್‌ ಮಲಿಕ್‌, ನಾಯಕ ಸರ್ಫರಾಜ್‌, ಆರಂಭಿಕ ಆಟಗಾರ ಅಹ್ಮದ್‌ ಶೆಹಜಾದ್‌, ಬಾಬರ್‌ ಆಜಂ ಅವರು ವೈಫಲ್ಯದಿಂದ ಹೊರಬರ ಬೇಕಿದೆ. ಆಗಮಾತ್ರ ತಂಡ ದೊಡ್ಡ ಮೊತ್ತ ಕಲೆಹಾಕುವ ಕನಸು ಕಾಣಬಹುದು. ಬೌಲಿಂಗ್‌ನಲ್ಲೂ ತಂಡದಿಂದ ಸುಧಾ ರಿತ ಸಾಮರ್ಥ್ಯ ಮೂಡಿ ಬರಬೇಕಿದೆ.

ಮೊಹಮ್ಮದ್‌ ಅಮೀರ್‌, ಭಾರತದ ವಿರುದ್ಧ ಸಮರ್ಥ ದಾಳಿ ನಡೆಸಿದ್ದರು. ಆದರೆ ವಿಕೆಟ್‌ ಉರುಳಿಸಲು ವಿಫಲರಾಗಿದ್ದರು. ಇಮಾದ್‌ ವಾಸೀಂ, ಹಸನ್‌ ಅಲಿ ಮತ್ತು ಶಾದಬ್‌ ಖಾನ್‌ ಅವರೂ ದುಬಾರಿಯಾಗಿದ್ದರು.  ಭಾರತದ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಅನುಭವಿ ವೇಗಿ ವಹಾಬ್‌ ರಿಯಾಜ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಅವರು ಅಲಭ್ಯರಾದರೆ ಜುನೈದ್‌ ಖಾನ್‌ಗೆ ಅವಕಾಶ ಸಿಗಬಹುದು.

ಮತ್ತೊಂದು ಗೆಲುವಿನ ಮೇಲೆ  ಕಣ್ಣು: ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿರುವ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಗೆಲುವಿಗಾಗಿ ಹಾತೊರೆಯುತ್ತಿದೆ.

ಐಸಿಸಿ ಏಕದಿನ ತಂಡಗಳ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡಿವಿಲಿಯರ್ಸ್‌ ಬಳಗವು  ಪಾಕಿಸ್ತಾನ ವನ್ನು ಸುಲಭವಾಗಿ ಸೋಲಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡುವ  ಉತ್ಸಾಹದಲ್ಲಿದೆ.

ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಹಾಶೀಮ್‌ ಆಮ್ಲಾ, ಕ್ವಿಂಟನ್‌ ಡಿ ಕಾಕ್‌, ಫಾಫ್‌ ಡು ಪ್ಲೆಸಿಸ್‌, ಎಬಿ ಡಿವಿಲಿಯರ್ಸ್‌, ಡೇವಿಡ್‌ ಮಿಲ್ಲರ್‌, ಜೆಪಿ ಡುಮಿನಿ ಅವರಂತಹ ಘಟಾನುಘಟಿಗಳು  ತಂಡದಲ್ಲಿದ್ದಾರೆ. ಬೌಲಿಂಗ್‌ ನಲ್ಲಿ ತಂಡ ಬಲಿಷ್ಠವಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT