ಸ್ಫೋಟಿಸಿದ ಬಟ್ಲರ್‌; ಇಂಗ್ಲೆಂಡ್‌ ಉತ್ತಮ ಮೊತ್ತ

7
ಎರಡನೇ ವಿಕೆಟ್‌ಗೆ 81 ರನ್‌ ಸೇರಿಸಿದ ಅಲೆಕ್ಸ್ ಹೇಲ್ಸ್‌–ಜೋ ರೂಟ್ ಜೋಡಿ

ಸ್ಫೋಟಿಸಿದ ಬಟ್ಲರ್‌; ಇಂಗ್ಲೆಂಡ್‌ ಉತ್ತಮ ಮೊತ್ತ

Published:
Updated:
ಸ್ಫೋಟಿಸಿದ ಬಟ್ಲರ್‌; ಇಂಗ್ಲೆಂಡ್‌ ಉತ್ತಮ ಮೊತ್ತ

ಕಾರ್ಡಿಫ್‌:  ಎರಡನೇ ವಿಕೆಟ್‌ಗೆ ಅಲೆಕ್ಸ್ ಹೇಲ್ಸ್‌ -ಜೋ ರೂಟ್‌ ಜೋಡಿ ಸೇರಿಸಿದ 81 ರನ್‌ ಮತ್ತು ಅಂತಿಮ ಓವರ್‌ಗಳಲ್ಲಿ ಜೋಸ್ ಬಟ್ಲರ್‌ ಸಿಡಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.

ಸೋಫಿಯಾ ಗಾರ್ಡನ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ 49.3 ಓವರ್‌ಗಳಲ್ಲಿ ಆಲೌಟಾಯಿತಾದರೂ 310 ರನ್‌ ಗಳಿಸಲು ಸಮರ್ಥವಾಯಿತು.

ತಂಡ 37 ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್ ರಾಯ್ ಔಟಾದರು. ಆದರೆ ಹೇಲ್ಸ್ ಮತ್ತು ರೂಟ್‌ 81 ರನ್‌ ಸೇರಿಸಿ ಇನಿಂಗ್ಸ್‌ಗೆ ಬಲ ತುಂಬಿದರು. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಔಟಾಗದೆ 133 ರನ್‌ ಗಳಿಸಿದ ರೂಟ್‌ ಇಲ್ಲೂ ಮಿಂಚು ಹರಿಸಿದರು.

65 ಎಸೆತಗಳಲ್ಲಿ 64 ರನ್ ಗಳಿಸಿದ ಅವರು ಎರಡು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿ ಗಳಿಸಿದರು.

ಅವರಿಗೆ ಅಲೆಕ್ಸ್ ಹೇಲ್ಸ್ ಉತ್ತಮ ಬೆಂಬಲ ನೀಡಿದರು. ತಾಳ್ಮೆಯ 56 ರನ್‌ (62 ಎಸೆತ) ಗಳಿಸಿದ ಹೇಲ್ಸ್‌ ಎರಡು ಸಿಕ್ಸರ್‌ ಮತ್ತು ಮೂರು ಬೌಂಡರಿ ಸಿಡಿಸಿದರು. ಹೇಲ್ಸ್ ಔಟಾದ ನಂತರ ಇಯಾನ್ ಮಾರ್ಗನ್‌ ಬಂದು ಬೇಗನೇ ವಾಪಸಾದರು.

ಇದರ ಬೆನ್ನಲ್ಲೇ ರೂಟ್ ಕೂಡ ಪೆವಿಲಿಯನ್ ಸೇರಿದರು. ಜವಾಬ್ದಾರಿಯುತ ಆಟವಾಡಿದ ಬೆನ್ ಸ್ಟೋಕ್ಸ್ (48) ಅರ್ಧ ಶತಕ ಪೂರೈಸಲಾಗದೆ ವಾಪಸಾದರು. ಈ ಸಂದರ್ಭದಲ್ಲಿ ತಂಡ 5 ವಿಕೆಟ್‌ಗಳಿಗೆ 210 ರನ್‌ ಎಂಬ ಸ್ಥಿತಿಯಲ್ಲಿತ್ತು.

33.4ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್‌ 48 ಎಸೆತಗಳಲ್ಲಿ 61 ರನ್ ಗಳಿಸಿದರು.

ಅವರ ಇನಿಂಗ್ಸ್‌ನಲ್ಲಿ ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿಗಳು ಇದ್ದವು. ಎದುರಿಸಿದ ಮೊದಲ ಒಂಬತ್ತು ಓವರ್‌ಗಳಲ್ಲಿ ಒಂಟಿ ಮತ್ತು ಎರಡು ರನ್‌ಗಳನ್ನು ಮಾತ್ರ ಹೆಕ್ಕಿದ ಅವರು 43ನೇ ಓವರ್‌ನಲ್ಲಿ ಟಿಮ್ ಸೌಥಿ ಎಸೆತದಲ್ಲಿ ಗಳಿಸಿದ ಬೌಂಡರಿಯೊಂದಿಗೆ ರನ್‌ ಗಳಿಕೆಗೆ ವೇಗ ತುಂಬಿದರು.  ಮೊಯಿನ್ ಅಲಿ, ಆದಿಲ್ ರಶೀದ್‌ ಮತ್ತು ಲಿಯಾನ್ ಪ್ಲಂಕೆಟ್‌ ಅವರಿಂದ ಉತ್ತಮ ಸಹಕಾರ ಪಡೆದ ಬಟ್ಲರ್‌ ತಂಡವನ್ನು 300ರ ಗಡಿ ದಾಟಿಸಿದರು. ವೇಗಿ ಆ್ಯಡಮ್‌ ಮಿಲ್ನೆ ಮತ್ತು ಕೋರಿ ಆ್ಯಂಡರ್ಸನ್‌ ತಲಾ ಮೂರು ವಿಕೆಟ್‌ ಕಬಳಿಸಿ ಮಿಂಚಿದರು.

ಲಂಡನ್‌ನಲ್ಲಿ ಶನಿವಾರ  ಉಗ್ರರು ನಡೆಸಿದ ದಾಳಿಯಲ್ಲಿ ಮೃತರಾದವರಿಗೆ ಪಂದ್ಯದ ನಡುವೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇಂಗ್ಲೆಂಡ್ ಇನಿಂಗ್ಸ್‌ನ 6.4 ಓವರ್‌ ಮುಕ್ತಾಯ ವಾದ ಕೂಡಲೇ ಪಂದ್ಯವನ್ನು ಸ್ಥಗಿತಗೊಳಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌:
49.3 ಓವರ್‌ಗಳಲ್ಲಿ 310ಕ್ಕೆ ಆಲೌಟ್‌ (ಅಲೆಕ್ಸ್ ಹೇಲ್ಸ್‌ 56, ಜೋ ರೂಟ್‌ 64, ಬೆನ್‌ ಸ್ಟೋಕ್ಸ್‌ 48, ಜೋಸ್ ಬಟ್ಲರ್‌ ಔಟಾಗದೆ 61; ಟಿಮ್‌ ಸೌಥಿ 44ಕ್ಕೆ2, ಆ್ಯಡಮ್ ಮಿಲ್ನೆ 79ಕ್ಕೆ3, ಕೋರಿ ಆ್ಯಂಡರ್ಸನ್‌ 55ಕ್ಕೆ3)

(ವಿವರ ಅಪೂರ್ಣ)

ಮುಖ್ಯಾಂಶಗಳು

* 48 ಎಸೆತಗಳಲ್ಲಿ 61 ರನ್‌ ಗಳಿಸಿದ ಬಟ್ಲರ್‌

* ಆ್ಯಡಮ್ ಮಿಲ್ನೆ, ಕೋರಿ ಆ್ಯಂಡರ್ಸನ್‌ಗೆ ತಲಾ ಮೂರು ವಿಕೆಟ್‌

* ತಾಳ್ಮೆಯ ಆಟವಾಡಿದ ಅಲೆಕ್ಸ್ ಹೇಲ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry