15 ಮಂದಿ ಸೆರೆ, ₹ 5.77 ಕೋಟಿ ವಶ

7
ಬಸವನಗುಡಿ, ಪುಟ್ಟೇನಹಳ್ಳಿ ಪೊಲೀಸರ ಕಾರ್ಯಾಚರಣೆ

15 ಮಂದಿ ಸೆರೆ, ₹ 5.77 ಕೋಟಿ ವಶ

Published:
Updated:
15 ಮಂದಿ ಸೆರೆ, ₹ 5.77 ಕೋಟಿ ವಶ

ಬೆಂಗಳೂರು: ಗರಿಷ್ಠ ಮುಖಬೆಲೆಯ ಹಳೆ ನೋಟುಗಳನ್ನು ರದ್ದುಗೊಳಿಸಿ 8 ತಿಂಗಳು ಕಳೆದರೂ ನಗರದಲ್ಲಿ ‘ನೋಟು ಬದಲಾವಣೆ ದಂಧೆ’ ಮುಂದುವರಿದಿದ್ದು, ಬಸವನಗುಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರು ವಾರದ ಅಂತರದಲ್ಲಿ 15 ಮಂದಿಯನ್ನು ಬಂಧಿಸಿ ₹ 5.77 ಕೋಟಿ ಮೊತ್ತದ ನೋಟು ಜಪ್ತಿ ಮಾಡಿದ್ದಾರೆ.

ಗಾಂಧಿ ಬಜಾರ್, ಎಪಿಎಸ್ ಕಾಲೇಜು ಹಾಗೂ ಪುಟ್ಟೇನಹಳ್ಳಿ ಕೆರೆ ರಸ್ತೆಯಲ್ಲಿ ಪ್ರತ್ಯೇಕವಾಗಿ ದಾಳಿಗಳು ನಡೆದಿದ್ದು, ಬಂಧಿತರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರ, ರಿಯಲ್ ಎಸ್ಟೇಟ್ ಏಜೆಂಟರು ಹಾಗೂ ವಿವಿಧ ಬ್ಯಾಂಕ್‌ಗಳ ನೌಕರರೂ ಸೇರಿದ್ದಾರೆ. ಇವರು ಎನ್‌ಆರ್‌ಐ ಕೋಟಾದಡಿ ನೋಟು ಬದಲಾವಣೆಗೆ ಯತ್ನಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

₹ 2.15 ಕೋಟಿ:  ನೋಟು ಬದಲಾವಣೆಗಾಗಿ ಜೂನ್ 1ರಂದು ಮಂಗಳೂರಿನಿಂದ ನಗರಕ್ಕೆ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಇಕ್ಬಾಲ್ ಮಹಮದ್, ಬ್ಯಾಂಕ್‌ವೊಂದರ ಹೊರಗುತ್ತಿಗೆ ನೌಕರರಾದ ರಾಜೇಶ್ ಹಾಗೂ ರವೀಂದ್ರನಾಥ್ ಎಂಬುವರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ₹ 2.15 ಕೋಟಿ ಮೊತ್ತದ ನೋಟುಗಳು ಹಾಗೂ ದಂಧೆಗೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ರಮೇಶ್ ತಲೆಮರೆಸಿಕೊಂಡಿದ್ದಾರೆ.

ನಿಷೇಧಿತ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಇಕ್ಬಾಲ್ ತಮ್ಮ ಗೆಳೆಯ ರಮೇಶ್‌ಗೆ ಭರವಸೆ ಕೊಟ್ಟಿದ್ದರು. ಅವರ ಮಾತನ್ನು ನಂಬಿದ್ದ ರಮೇಶ್, ಐ ರಮೇಶ್ ಹಾಗೂ ರವೀಂದ್ರನಾಥ್ ಜತೆ ಸೇರಿ ಹಳೆ ನೋಟುಗಳನ್ನು ಹೊಂದಿಸಿದ್ದರು. ಆ ಹಣ ಪಡೆಯಲು ಇಕ್ಬಾಲ್ ನಗರಕ್ಕೆ ಬಂದಿದ್ದರು.

ವಾಣಿವಿಲಾಸ ರಸ್ತೆಯ ಎಸ್‌ಎಲ್‌ವಿ ಹೋಟೆಲ್‌ ಬಳಿ ಎಲ್ಲರೂ ಮಾತುಕತೆಯಲ್ಲಿ ತೊಡಗಿದ್ದಾಗ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ರಮೇಶ್ ತಪ್ಪಿಸಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ.

₹ 1.12 ಕೋಟಿ : ಎಪಿಎಸ್ ಕಾಲೇಜು ರಸ್ತೆಯ ಜಲಮಂಡಳಿ ವಾಟರ್ ಟ್ಯಾಂಕ್ ಬಳಿ ಬಸವನಗುಡಿ ಪೊಲೀಸರು ನಡೆಸಿದ ಮತ್ತೊಂದು ದಾಳಿಯಲ್ಲಿ ಜಯನಗರದ ಸದಾಶಿವ ಹಾಗೂ ಜೆ.ಪಿ. ನಗರದ ಹರ್ಷ ಎಂಬುವರು ಸಿಕ್ಕಿಬಿದ್ದಿದ್ದಾರೆ. 

‘ಗೆಳೆಯ ರಾಜು ಎಂಬಾತ ಶೇ 40ರ ಕಮಿಷನ್ ದರದಲ್ಲಿ ಹಣ ಬದಲಾವಣೆ ಮಾಡಿಕೊಡುವುದಾಗಿ ಹೇಳಿದ್ದ. ಆತನ ಮಾತು ನಂಬಿ ಸ್ನೇಹಿತರು ಹಾಗೂ ಸಂಬಂಧಿಕರಿಂದ ₹ 1.12 ಕೋಟಿ  ಸಂಗ್ರಹಿಸಿಕೊಂಡು ಬಂದಿದ್ದೆವು. ಆದರೆ, ಒಂದೂವರೆ ತಾಸು ಕಾದರೂ ಆತ ಬರಲಿಲ್ಲ’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರು ಇದೀಗ ರಾಜು ಪತ್ತೆಗೆ ಬಲೆ ಬೀಸಿದ್ದಾರೆ.

ಸರ್ಕಾರಿ ನೌಕರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ರಘುನಂದನ್ ಹಾಗೂ ಜೆ.ಪಿ.ನಗರದ ಸುರೇಶ್ ಎಂಬುವರು ಗಾಂಧಿ ಬಜಾರ್ ಮುಖ್ಯ ರಸ್ತೆಯ ನ್ಯಾಷನಲ್ ಕೊ ಆಪರೇಟಿವ್ ಬ್ಯಾಂಕ್ ಬಳಿ ₹ 50 ಲಕ್ಷ ಮೊತ್ತದ ನೋಟುಗಳ ಸಮೇತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಮನಗರದ ಕಚೇರಿಯಲ್ಲಿ ಕೆಲಸ ಮಾಡುವ ರಘುನಂದನ್, ಬಸವೇಶ್ವರನಗರದಲ್ಲಿ ನೆಲೆಸಿರುವ ಗೆಳೆಯ ಚಿನ್ನೇಗೌಡ ಎಂಬುವರ ಮೂಲಕ ಹಣ ಬದಲಾವಣೆಗೆ ಯತ್ನಿಸಿದ್ದರು. ಸೋಮವಾರ ಮಧ್ಯಾಹ್ನ ಅವರನ್ನು ವಶಕ್ಕೆ ಪಡೆದಿದ್ದು, ಚಿನ್ನೇಗೌಡ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

₹ 1 ಕೋಟಿ: ಶೇ 20ರ ಕಮಿಷನ್ ಆಸೆಗೆ ಈ ದಂಧೆಗೆ ಇಳಿದಿದ್ದ ನಾಲ್ವರನ್ನು ಪುಟ್ಟೇನಹಳ್ಳಿ ಪೊಲೀಸರು ಬಿಓಬಿ ಕಾಲೊನಿಯಲ್ಲಿ ಬಂಧಿಸಿದ್ದಾರೆ.

ಚಿಕ್ಕಜಾಲದ ಸಿ.ಎಚ್.ಭರತ್, ಉತ್ತರಹಳ್ಳಿಯ ಶ್ರೀನಿವಾಸ್, ಶಿಡ್ಲಘಟ್ಟದ ಶ್ರೀನಿವಾಸ್ ಮೂರ್ತಿ ಹಾಗೂ ಚಂದ್ರೇಗೌಡ ಎಂಬುವರನ್ನು ಬಂಧಿಸಿ, 1 ಕೋಟಿ ಮೊತ್ತದ ನೋಟುಗಳು ಹಾಗೂ ಕಾರನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ತಂಡ: ಸೋಮವಾರ ರಾತ್ರಿ ಪುಟ್ಟೇನಹಳ್ಳಿಯ ಮಿಲೇನಿಯಂ ಅಪಾರ್ಟ್‌ಮೆಂಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ದಂಧೆಕೋರರ ಮತ್ತೊಂದು ತಂಡ ಸಿಕ್ಕಿಬಿದ್ದಿದೆ.

ವಿಜಯನಗರದ ವಿ.ಮುರಳಿ, ವೈಯಾಲಿಕಾವಲ್‌ನ ಬಾಲಾಜಿ, ಶಫಿಕ್ ಅಹಮದ್ ಹಾಗೂ ಮಂಜುನಾಥ್  ಎಂಬುವರು ಪ್ರಯಾಣಿಸುತ್ತಿದ್ದ ಕಾರನ್ನು ಪೊಲೀಸರು ತಡೆದಿದ್ದಾರೆ. ತಪಾಸಣೆ ನಡೆಸಿದಾಗ ಹಿಂದಿನ ಸೀಟಿನ ಕೆಳಗೆ ₹ 1 ಕೋಟಿ ಮೊತ್ತದ ನಿಷೇಧಿತ ನೋಟುಗಳು ಸಿಕ್ಕಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry