ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳ ಬಳಿಕ ಡಿಸಿಪಿ ವಿರುದ್ಧ ಇಲಾಖಾ ವಿಚಾರಣೆ

ಗಲಭೆ ಸಂದರ್ಭ ನಡೆದಿದ್ದ ಐಜಿಪಿ ಚರಣ್ ರೆಡ್ಡಿ ಮೊಬೈಲ್ ಸಂಭಾಷಣೆ ಬಹಿರಂಗಪಡಿಸಿದ ಆರೋಪ
Last Updated 6 ಜೂನ್ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಡೆದ ಗಲಭೆ ಸಂದರ್ಭದಲ್ಲಿ ಐಜಿಪಿ ಚರಣ್‌ರೆಡ್ಡಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ನಡುವೆ ನಡೆದಿದ್ದ ಮೊಬೈಲ್ ಸಂಭಾಷಣೆಯನ್ನು ಬಹಿರಂಗಪಡಿಸಿದ ಆರೋಪ ಸಂಬಂಧ ಡಿಸಿಪಿ ಅಜಯ್ ಹಿಲೋರಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶವಾಗಿದೆ.

‘ಪ್ರತಿಭಟನೆ ನಿಯಂತ್ರಿಸುವಲ್ಲಿ ವಿಫಲರಾಗಿರುವ ಹಾಗೂ ಇಲಾಖೆಯ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಿ ಕರ್ತವ್ಯಲೋಪ ಎಸಗಿರುವ ಡಿಸಿಪಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಚರಣ್‌ರೆಡ್ಡಿ ಅವರು 2016ರ ಸೆಪ್ಟಂಬರ್‌ನಲ್ಲೇ ಆಗಿನ ಡಿಜಿಪಿ ಓಂಪ್ರಕಾಶ್ ಅವರಿಗೆ ವರದಿ ಕೊಟ್ಟಿದ್ದರು. ಆದರೆ, ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ನನೆಗುದಿಗೆ ಬಿದ್ದಿದ್ದ ಆ ವರದಿಯನ್ನು ಇತ್ತೀಚೆಗೆ ಪರಿಶೀಲಿಸಿದ ಈಗಿನ ಡಿಜಿಪಿ ಆರ್‌.ಕೆ.ದತ್ತ, ‘ಇದೊಂದು ಗಂಭೀರ ಪ್ರಕರಣ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ಕೊಡಿ’ ಎಂದು ಕಮಿಷನರ್ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.

ಏನಿದು ವಿವಾದ: ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಖಂಡಿಸಿ ವಿವಿಧ ಸಂಘಟನೆಗಳು 2016ರ ಸೆ.9ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದವು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹಿಂದಿನ ದಿನವೇ ಕರವೇಯ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಕನ್ನಡ ಪ್ರಕಾಶ್ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದಿದ್ದರು.

ಆಗ ಚರಣ್‌ರೆಡ್ಡಿ ಅವರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದರು. ಅವರ ಮೊಬೈಲ್‌ ಸಂಖ್ಯೆಗೆ (9480801005)  ಕರೆ ಮಾಡಿದ್ದ ನಾರಾಯಣಗೌಡ, ‘ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ನಮ್ಮ ಕಾರ್ಯರ್ತರನ್ನು ಬಂಧಮುಕ್ತಗೊಳಿಸಿ’ ಎಂದು ಕೋರಿದ್ದರು. ಆ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.

ವರ್ಗಾವಣೆ ಸಿಟ್ಟು: ಸೆ.14ರಂದು ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಡಿಸಿಪಿ ಟಿ.ಆರ್.ಸುರೇಶ್ (ಉತ್ತರ) ಹಾಗೂ ಅಜಯ್ ಹಿಲೋರಿ (ಪಶ್ಚಿಮ) ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಕೋಲಾರದಿಂದ ಆರು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಹಿಲೋರಿ, ವಿವಾದ ಹೊತ್ತು ವರ್ಗಾವಣೆ ಆಗಿದ್ದರಿಂದ ಅಸಮಾಧಾನಗೊಂಡಿದ್ದರು.

ತಮ್ಮ ವಿರುದ್ಧ ವರದಿ ಕೊಟ್ಟಿದ್ದ ಚರಣ್‌ರೆಡ್ಡಿ ವಿರುದ್ಧ ಕೋಪಗೊಂಡಿದ್ದ ಅವರು, ‘ಪೊಲೀಸ್ ವಶದಲ್ಲಿದ್ದ ಕನ್ನಡ ಪ್ರಕಾಶ್‌ನನ್ನು ಚರಣ್‌ರೆಡ್ಡಿ ಬಿಡುಗಡೆ ಮಾಡಿಸಿದ್ದರು. ಈಗ ಆತನೇ ಪಶ್ಚಿಮ ವಿಭಾಗದಲ್ಲಿ ಗಲಭೆ ಮಾಡಿದ್ದಾನೆ’ ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದರು. ಅಲ್ಲದೆ,   ಚರಣ್‌ರೆಡ್ಡಿ–ನಾರಾಯಣಗೌಡ ನಡುವಿನ ಪೂರ್ತಿ ಸಂಭಾಷಣೆಯನ್ನು ಬಹಿರಂಗಪಡಿಸಿದ್ದರು ಎನ್ನಲಾಗಿದೆ.

ಚರಣ್‌ರೆಡ್ಡಿ ವರದಿ: ‘ಬಂದ್ ಕಾರಣದಿಂದ ಸೆ.8ರಂದೇ ಪ್ರಕಾಶ್‌ನನ್ನು ವಶಕ್ಕೆ ಪಡೆದಿದ್ದು ನಿಜ. ಅದೇ ದಿನ ಸಂಜೆ ನಾರಾಯಣಗೌಡ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದ ಹಿಂದಿನ ಕಮಿಷನರ್ ಮೇಘರಿಕ್, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡದಂತೆ ಎಚ್ಚರಿಕೆ ನೀಡಿದ್ದರು. ಅವರು ಒಪ್ಪಿಕೊಂಡ ಬಳಿಕವೇ ಪ್ರಕಾಶ್ ಹಾಗೂ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿತ್ತು’ ಎಂದು ಚರಣ್‌ರೆಡ್ಡಿ ಹೇಳಿದ್ದಾರೆ.

‘ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದವರನ್ನು ಮೂರ್ನಾಲ್ಕು ದಿನ ನಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ. ಶಾಂತಿಯುತವಾಗಿ ಬಂದ್ ನಡೆಸುವುದಾಗಿ ಕರವೇ ಅಧ್ಯಕ್ಷ ಹೇಳಿದ್ದರಿಂದ ನಾನೇ ಬ್ಯಾಟರಾಯನಪುರ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ, ಕಾರ್ಯಕರ್ತರನ್ನು ಬಿಟ್ಟು ಕಳುಹಿಸುವಂತೆ ಸೂಚಿಸಿದ್ದೆ.’

‘ಮರುದಿನ ಯಾವುದೇ ಅಹಿತಕರ ಘಟನೆ ನಡೆಯದೆ, ಬಂದ್ ಶಾಂತಿಯುತವಾಗಿ ನಡೆದಿತ್ತು. ಆದರೆ, ಸೆ.14ರಂದು ಗಲಭೆ ನಡೆಯುತ್ತದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಒಂದು ವೇಳೆ ಈ ವಿಷಯ ಮೊದಲೇ ಗೊತ್ತಿದ್ದರೆ ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದ ಅಜಯ್ ಹಿಲೋರಿ ಏನು ಮಾಡುತ್ತಿದ್ದರು? ಬುದ್ಧಿವಂತರಾದವರು ಮುಂಜಾಗ್ರತಾ ಕ್ರಮವಾಗಿ ಪ್ರಕಾಶ್‌ನನ್ನು ಮತ್ತೆ ಬಂಧಿಸಬಹುದಿತ್ತಲ್ಲವೇ.’

‘ನಾನೇ ಪ್ರಕಾಶ್‌ನನ್ನು ಬಂಧಿಸಿದ್ದೆ’: ‘ಶಾಂತಿ ಕದಡುವ ಯಾರೊಬ್ಬರನ್ನೂ ರಕ್ಷಿಸಿಲ್ಲ. ಮಹಾದಾಯಿ ವಿಚಾರಕ್ಕೆ ಗಲಾಟೆ ನಡೆದಾಗ ಮಾಗಡಿ ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ್ದ ಇದೇ ಪ್ರಕಾಶ್‌ನನ್ನು ನಾನೇ ಬಂಧಿಸಿದ್ದೆ. ಆಗ ಅಷ್ಟೆಲ್ಲ ಗಲಾಟೆ ನಡೆಯುತ್ತಿದ್ದರೂ ಡಿಸಿಪಿ ಹಿಲೋರಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ’ ಎಂದು ಅವರು ವರದಿಯಲ್ಲಿ ವಿವರಿಸಿದ್ದಾರೆ.

ಅಧಿಕಾರಿಗಳಿಗೂ ಕೋಪ
ಕಾವೇರಿ ವಿವಾದದ ಬಳಿಕ ಸಿಎಆರ್‌ಗೆ ವರ್ಗವಾಗಿದ್ದ ಅಜಯ್‌ ಹಿಲೋರಿ, ಆರು ತಿಂಗಳ ಬಳಿಕ ಮತ್ತೆ ಪೂರ್ವ ವಿಭಾಗಕ್ಕೆ ವರ್ಗ ಮಾಡಿಸಿಕೊಂಡಿದ್ದು ಕೆಲ ಅಧಿಕಾರಿಗಳ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ಕದ್ದಾಲಿಕೆ ಅಲ್ಲ, ಲೀಗಲ್ ಇಂಟರ್‌ಸೆಪ್ಷನ್

ಪ್ರತಿಭಟನೆ ಅಥವಾ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಗಲಭೆ ನಡೆಸುವ ಪ್ರವೃತ್ತಿವುಳ್ಳವರ ಮೊಬೈಲ್ ಸಂಖ್ಯೆಗಳ ಮೇಲೆ ನಿಗಾ ವಹಿಸುತ್ತೇವೆ. ಅವರು ಯಾರ್‌್ಯಾರಿಗೆ ಕರೆ ಮಾಡುತ್ತಾರೆ, ಅವರ ಮುಂದಿನ ಯೋಜನೆಗಳೇನು ಎಂಬುದನ್ನು ತಿಳಿಯಲು ಸಂಭಾಷಣೆಯನ್ನೂ ಆಲಿಸುತ್ತೇವೆ. ಇದು ಕದ್ದಾಲಿಕೆ (ಟ್ಯಾಪಿಂಗ್) ಆಗುವುದಿಲ್ಲ. ಕಾನೂನಿನ ಅಡಿಯಲ್ಲೇ ಈ ಪ್ರಕ್ರಿಯೆ ನಡೆಯುತ್ತದೆ. ಇದನ್ನು ‘ಲೀಗಲ್ ಇಂಟರ್‌ಸೆಪ್ಷನ್’ ಎಂದು ಕರೆಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಂಕಿತ ವ್ಯಕ್ತಿಗಳ ಫೋನ್ ಸಂಭಾಷಣೆ ಆಲಿಸಲು ಅನುಮತಿ ನೀಡುವಂತೆ ಪೊಲೀಸ್ ಕಮಿಷನರ್ ಅವರು ಸಂಬಂಧಪಟ್ಟ ಮೊಬೈಲ್ ಸೇವಾ ಸಂಸ್ಥೆಗೆ ಪತ್ರ ಬರೆಯುತ್ತಾರೆ. ಅವರು ಹತ್ತು ದಿನಗಳವರೆಗೆ ಮಾತ್ರ ಅವಕಾಶ ನೀಡುತ್ತಾರೆ. ಇನ್ನೂ ಹೆಚ್ಚು ದಿನ ಅನುಮತಿ ಬೇಕೆಂದರೆ ಗೃಹ ಇಲಾಖೆ ಕಾರ್ಯದರ್ಶಿ ಶಿಫಾರಸು ಮಾಡುತ್ತಾರೆ. ಆಗ 60 ದಿನಗಳವರೆಗೆ ಅನುಮತಿ ಸಿಗುತ್ತದೆ’ ಎಂದು ಮಾಹಿತಿ ನೀಡಿದರು.

‘ಕಾವೇರಿ ಗಲಭೆ ಸಂದರ್ಭದಲ್ಲಿ ಪೊಲೀಸರು ನಾರಾಯಣಗೌಡ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರ ಮೊಬೈಲ್ ಸಂಖ್ಯೆಗಳ ಮೇಲೆ ನಿಗಾ ವಹಿಸಿದ್ದರು. ಹೀಗಾಗಿ, ಅವರ ಎಲ್ಲ ಸಂಭಾಷಣೆಗಳೂ ರೆಕಾರ್ಡ್ ಆಗಿದ್ದವು. ಈ ರೀತಿಚರಣ್‌ರೆಡ್ಡಿ ಅವರ ಸಂಭಾಷಣೆಯೂ ಡಿಸಿಪಿ ಕೈಗೆ ಸಿಕ್ಕಿರಬಹುದು. ಅದನ್ನು ಅವರು ಮಾಧ್ಯಮಕ್ಕೆ ತಲುಪಿಸಿರಬಹುದು’ ಎಂದು ಹೇಳಿದರು.

* ನನ್ನ ವಿರುದ್ಧ ಏನು ಆರೋಪ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ. ಹೀಗಾಗಿ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ

–ಅಜಯ್ ಹಿಲೋರಿ, ಡಿಸಿಪಿ, ಪೂರ್ವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT