ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿಪಿ ಪರಿಶೀಲನೆಗೆ ಜಾಗೃತಿ ತಂಡಗಳು

ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶ * ಕೆಎಸ್‌ಪಿಸಿಬಿ, ಜಲಮಂಡಳಿ ಕ್ರಮ
Last Updated 6 ಜೂನ್ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದಲ್ಲಿರುವ ಕಟ್ಟಡ ಮತ್ತು ವಸತಿ ಸಮುಚ್ಚಯಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಸಿಕೊಂಡಿವೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಜಾಗೃತಿ ತಂಡಗಳು ಬರಲಿವೆ.

ರಾಜ್ಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ಜಲಮಂಡಳಿ ಜಂಟಿಯಾಗಿ ಈ ತಂಡಗಳನ್ನು ರೂಪಿಸಿವೆ. ಕೆರೆ ಮಾಲಿನ್ಯಕ್ಕೆ ಕಾರಣವಾಗಿರುವ 157 ವಸತಿ ಸಮುಚ್ಚಯಗಳನ್ನು ಕೆಎಸ್‌ಪಿಸಿಬಿ ಈಗಾಗಲೇ ಗುರುತಿಸಿದೆ. ಅವುಗಳೂ ಸೇರಿದಂತೆ ಕೆರೆ ಪ್ರದೇಶದಲ್ಲಿರುವ ಎಲ್ಲಾ ಕಟ್ಟಡಗಳಿಗೂ ತಂಡಗಳು ಭೇಟಿ ನೀಡಲಿವೆ.

ಒಟ್ಟು 5 ತಂಡಗಳು ರಚನೆಯಾಗಿವೆ. ಪ್ರತಿ ತಂಡದಲ್ಲೂ ಎರಡೂ ಸಂಸ್ಥೆಗಳ 10 ಮಂದಿ ಅಧಿಕಾರಿಗಳು ಇರುತ್ತಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಎಸ್‌ಪಿಸಿಬಿ ಅಧ್ಯಕ್ಷ ಲಕ್ಷ್ಮಣ್, ‘ಎಸ್‌ಟಿಪಿ ಅಳವಡಿಸಿಕೊಳ್ಳದವರಿಗೆ ಹಾಗೂ ಪೂರ್ಣ ಪ್ರಮಾಣ ಎಸ್‌ಟಿಪಿ ಇಲ್ಲದವರಿಗೆ ಎಚ್ಚರಿಕೆ ನೀಡಿ, ಅಳವಡಿಕೆಗೆ ಮೂರು ತಿಂಗಳು ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ಘಟಕ ಸ್ಥಾಪಿಸಿಕೊಳ್ಳದಿದ್ದರೆ ವಿದ್ಯುತ್‌್, ನೀರಿನ ಸಂಪರ್ಕ ಕಡಿತಗೊಳಿಸುತ್ತೇವೆ’ ಎಂದರು.

‘ಈ ಕಾರ್ಯ ಮುಗಿದ ನಂತರ ವರ್ತೂರು ಕೆರೆ ಜಲಾನಯನ ಪ್ರದೇಶದಲ್ಲಿರುವ ಕಟ್ಟಡಗಳ ಪರಿಶೀಲನೆಯನ್ನೂ ಈ ತಂಡಗಳು ನಡೆಸಲಿವೆ’ ಎಂದರು.
ಎಸ್‌ಟಿಪಿ ಕಡ್ಡಾಯ: 20 ಮತ್ತು ಅದಕ್ಕಿಂತ ಅಧಿಕ ಮನೆಗಳಿರುವ ಹೊಸ ವಸತಿ ಸಮುಚ್ಚಯಗಳಿಗೆ ಹಾಗೂ 50 ಮತ್ತು ಅದಕ್ಕಿಂತ ಹೆಚ್ಚು ಮನೆಗಳಿರುವ ವಸತಿ ಸಮುಚ್ಚಯಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಲಾಗಿದೆ.

‘ವಸತಿ ಸಮುಚ್ಚಯಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿದ್ದ ಜಲಮಂಡಳಿ, 2016ರ ಅಕ್ಟೋಬರ್‌ನಿಂದ ಜನವರಿ ವರೆಗೆ ₹5.40 ಕೋಟಿ ದಂಡ ಸಂಗ್ರಹಿಸಿದೆ. ಅದರಲ್ಲಿ 20 ರಿಂದ 49 ಮನೆಗಳಿರುವ ಹಳೆಯ ಸಮುಚ್ಚಯಗಳಿಗೆ ವಿನಾಯ್ತಿ ನೀಡಲಾಗಿತ್ತು. ಆದರೆ, ಈಗ ಎಲ್ಲಾ ಕಟ್ಟಡಗಳೂ ಎಸ್‌ಟಿಪಿ ಅಳವಡಿಸಿಕೊಳ್ಳಬೇಕು. ಅಲ್ಲದೆ, ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡಿಕೊಳ್ಳಬೇಕು’ ಎಂದು ಲಕ್ಷ್ಮಣ್‌ ತಿಳಿಸಿದರು.

* ಗುರುವಾರದಿಂದ ಈ ತಂಡಗಳು ಪರಿಶೀಲನೆ ಪ್ರಾರಂಭಿಸಲಿವೆ. 20 ದಿನಗಳಲ್ಲಿ ಎಲ್ಲಾ ಕಟ್ಟಡಗಳ ಪರಿಶೀಲನೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ

ಲಕ್ಷ್ಮಣ್‌, ಕೆಎಸ್‌ಪಿಸಿಬಿ ಅಧ್ಯಕ್ಷ

ಕೆರೆ ಪರಿಶೀಲನೆಗೆ ಸಮಿತಿ

ಮಾಲಿನ್ಯದಿಂದ ನಲುಗಿರುವ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಿಗೆ ಕೇಂದ್ರ ನಗರಾಭಿವೃದ್ಧಿ   ಇಲಾಖೆಯ ಸಂಸದೀಯ ಸಮಿತಿಯ ಸದಸ್ಯರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸಮಿತಿಯ ಅಧ್ಯಕ್ಷ ಪಿನಾಕಿ ಮಿಶ್ರಾ ಮಾತನಾಡಿ, ‘ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರಕ್ಕೆ ಬೆಳ್ಳಂದೂರು, ವರ್ತೂರು ಕೆರೆಗಳ ಮಾಲಿನ್ಯ ಅಪಖ್ಯಾತಿ ತಂದುಕೊಟ್ಟಿದೆ. ಅಲ್ಲದೆ, ಇಲ್ಲಿ ವಾಯು ಮಾಲಿನ್ಯದ ಪ್ರಮಾಣವೂ ಹೆಚ್ಚಿದೆ’ ಎಂದು ಬೇಸರಿಸಿದರು.

‘ಕೆರೆಯ ಸಂರಕ್ಷಣೆಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸದ ಕಟ್ಟಡಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಬೇಕು’ ಎಂದು ಅವರು ಹೇಳಿದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ‘ಸಮಿತಿಯ  ಮುಖಾಂತರ ಇನ್ನಷ್ಟು ಒತ್ತಡ ತಂದು ಈ ಜಲಮೂಲಗಳ ಅಭಿವೃದ್ಧಿ ಮಾಡುತ್ತೇವೆ. ಅಲ್ಲದೇ ನಗರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವುದುನಮ್ಮ ಗುರಿ’ ಎಂದು ಹೇಳಿದರು.

‘ಈ ಜಲಮೂಲಗಳ ಪುನಶ್ಚೇತನಕ್ಕೆ ಕಿರು ಹಾಗೂ ದೀರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ರಾಜ್ಯ ಸರ್ಕಾರ ಸದ್ಯ ಕೆಲವು ಕ್ರಮ ಕೈಗೊಂಡಿದೆ. ಕೆರೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಸಭೆಯನ್ನು ಶೀಘ್ರದಲ್ಲಿ ಕರೆದು ಸಮಗ್ರ ಯೋಜನೆ ರೂಪಿಸಬೇಕು’ ಎಂದು ಅವರು ಆಗ್ರಹಿಸಿದರು.

ಉಪನಗರ ರೈಲು, ಪೆರಿಫೆರಲ್‌ ವರ್ತುಲ ರಸ್ತೆ, ನಮ್ಮ ಮೆಟ್ರೊ, ಸ್ಮಾರ್ಟ್‌ ಸಿಟಿ, ಕಸದಿಂದ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆ ವಿಚಾರವನ್ನು ಮೋಹನ್ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT