45 ದಿನಗಳಲ್ಲಿ ಕೆರೆಗೆ ಜೀವ ತುಂಬಿದರು

7

45 ದಿನಗಳಲ್ಲಿ ಕೆರೆಗೆ ಜೀವ ತುಂಬಿದರು

Published:
Updated:
45 ದಿನಗಳಲ್ಲಿ ಕೆರೆಗೆ ಜೀವ ತುಂಬಿದರು

ಬೆಂಗಳೂರು: ಬೊಮ್ಮಸಂದ್ರ ಸಮೀಪದ ಕ್ಯಾಲಸನಹಳ್ಳಿ ಕೆರೆಯಲ್ಲಿ ಹೂಳು ತುಂಬಿ ಮೈದಾನವಾಗಿತ್ತು.  ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌)  ನಿಧಿಯ ನೆರವಿನೊಂದಿಗೆ ‘ಸೇ ಟ್ರೀಸ್‌’ ಸ್ವಯಂಸೇವಾ ಸಂಸ್ಥೆ 45 ದಿನಗಳಲ್ಲೇ ಕೆರೆಗೆ ಹೊಸ ರೂಪ ನೀಡಿದೆ.

ಎರಡು ತಿಂಗಳಿನ ಹಿಂದೆ 36 ಎಕರೆಯ ಈ ಕೆರೆ ಚಿಕ್ಕ ಹೊಂಡದಂತೆ ಕಾಣುತ್ತಿತ್ತು. ನಗರದ ಸ್ಯಾನ್ಸೆರಾ ಎಂಜಿನಿಯರಿಂಗ್‌ ಕಂಪೆನಿ ನೀಡಿದ ಸಿಎಸ್‌ಆರ್‌ ಅನುದಾನದಲ್ಲಿ  ಸೇ ಟ್ರೀಸ್‌ ಸಂಸ್ಥೆ ಕೆರೆಯನ್ನು ಪುನರುಜ್ಜೀವನಗೊಳಿಸಿದೆ.

‘ಕಂಪೆನಿಯವರ ಅವಿರತ ಪ್ರಯತ್ನದಿಂದ ಕೆರೆ ಅಭಿವೃದ್ಧಿಯಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಬದಲಾವಣೆ ಆಗುತ್ತಿದೆ’ ಎಂದು ಸೇ ಟ್ರೀಸ್‌ ಸಂಸ್ಥೆಯ ದುರ್ಗೇಶ್‌ ಅಗ್ರಹಾರಿ ತಿಳಿಸಿದರು.

‘ಮೊದಲ ಬಾರಿಗೆ ಕೆರೆಯ ಸ್ಥಿತಿ ನೋಡಿದಾಗ ಶುಚಿಗೊಳಿಸುವುದು ಸವಾಲಿನ ಕೆಲಸ ಎಂದೆನಿಸಿತು. ಕೆರೆ ಅಭಿವೃದ್ಧಿಗೆ ₹ 4 ಕೋಟಿ ಮೀಸಲಿಟ್ಟು ಏಪ್ರಿಲ್‌ 20ರಿಂದ ಕೆಲಸ ಆರಂಭಿಸಿದೆವು. 3.6 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಹೂಳನ್ನು ತೆಗೆದೆವು. ಕೆರೆಗೆ ಮಳೆನೀರನ್ನು ಹರಿಸುವ ನಾಲೆಗಳನ್ನು 1.5 ಅಡಿಯಿಂದ 10 ಅಡಿ ವರೆಗೆ ವಿಸ್ತರಿಸಿದೆವು. ಇದರಿಂದ ಕೆರೆಯಲ್ಲಿ ನೀರು ಸಂಗ್ರಹಣ ಸಾಮರ್ಥ್ಯ 20 ಪಟ್ಟು ಹೆಚ್ಚಾಗಿದೆ’ ಎಂದು ಸ್ಯಾನ್ಸೆರಾ ಪ್ರತಿಷ್ಠಾನದ ಮುಖ್ಯಸ್ಥ ಆನಂದ್‌ ಮಲ್ಲಿಗವಾಡ್‌ ಹೇಳಿದರು.

‘ಕೆರೆ ಅಭಿವೃದ್ಧಿಯ ಕುರಿತು ಕ್ಯಾಲಸನಹಳ್ಳಿ ನಿವಾಸಿಗಳಿಗೆ ವಿವರಿಸಿದಾಗ ಅವರೂ ನಮ್ಮೊಂದಿಗೆ ಕೈಜೋಡಿಸಿದರು. ಸುತ್ತಲಿನ 200 ಮನೆಗಳ ಜನರು ಪ್ರತಿದಿನ ಕೆರೆ ಕೆಲಸದಲ್ಲಿ ಭಾಗಿಯಾಗುತ್ತಿದ್ದರು’ ಎಂದು ಸ್ಥಳೀಯರ ಸಹಕಾರ ಸ್ಮರಿಸಿದರು.

‘ಕೆರೆಯ 12 ಎಕರೆಯನ್ನು ಹಳ್ಳಿಯವರು ಕೃಷಿಗಾಗಿ ಬಳಸಿದ್ದರು. ಸಂಸ್ಥೆಯವರೊಂದಿಗೆ ಹೋಗಿ ಕೆರೆಯ ರಕ್ಷಣೆ ಕುರಿತು ಇರುವ ನಿಯಮಗಳನ್ನು ಅವರಿಗೆ ತಿಳಿ ಹೇಳಿದೆವು. ಜಮೀನನ್ನು ಹಿಂದಿರುಗಿಸಲು ಅವರೂ ಸ್ವಯಂಪ್ರೇರಿತವಾಗಿ ಒಪ್ಪಿಕೊಂಡರು’ ಎಂದು ಹಳ್ಳಿಯ ಮುಖಂಡ ಕೆ.ವೈ.ಶೇಷಪ್ಪ ತಿಳಿಸಿದರು.

‘ರಾಜ್ಯ ಸರ್ಕಾರ ಈ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದ್ದರೆ ಇಷ್ಟು ಬೇಗ  ಕಾಮಗಾರಿ ಮುಗಿಯುತ್ತಿರಲಿಲ್ಲ. ಒತ್ತುವರಿ ತೆರವುಗೊಳಿಸಲು ಸಮಯ ಹಿಡಿಯುತ್ತಿತ್ತು. ನಾಗರಿಕರ ಸಹಭಾಗಿತ್ವದಿಂದ 45 ದಿನಗಳಲ್ಲೇ ಕೆರೆಗೆ ಹೊಸರೂಪ ಬಂದಿದೆ. ಇದರಲ್ಲಿ ಎಲ್ಲರ ಕಠಿಣ ಪರಿಶ್ರಮ ಮತ್ತು ಕೆರೆ ಉಳಿಸುವ ಬದ್ಧತೆ ಕಾಣುತ್ತದೆ.  ಮಳೆ ಬಂದಾಗಲೂ ಕಾಮಗಾರಿ ನಿಲ್ಲಿಸಲಿಲ್ಲ. ಜಲಮೂಲವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಆದ್ಯತೆ ನೀಡುತ್ತೇವೆ’ ಎಂದರು.

ಸೇ ಟ್ರೀಸ್‌ ಸಂಸ್ಥೆ ಭಾನುವಾರ ನೂರಾರು ಸ್ವಯಂಸೇವಕರ ನೆರವು ಪಡೆದು ಜಲಮೂಲದ ಸುತ್ತಲಿನ ಪ್ರದೇಶದಲ್ಲಿ 1,000 ಹೆಚ್ಚು ಸಸಿ

ಗಳನ್ನು ನೆಟ್ಟಿದೆ. ‘ಕಂಪೆನಿಯವರು ಕಡಿಮೆ ಸಮಯದಲ್ಲಿ ಕೆರೆ ಅಭಿವೃದ್ಧಿ ಮಾಡಿದ್ದನ್ನು ನೋಡಿ ಆಶ್ಚರ್ಯ

ವಾಗಿದೆ. ಬೇರೆ ಕಂಪೆನಿಗಳು  ಕೆರೆಗಳನ್ನು ಉಳಿಸಲು ಇದೇ ರೀತಿ ಮುಂದೆ ಬರಬೇಕು’ ಎಂದು ಹೇಳುತ್ತಾರೆ ಶೇಷಪ್ಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry