ದಲಿತರ ಮನೆಯಲ್ಲಿ ಪೀಯೂಷ್ ಉಪಾಹಾರ

7

ದಲಿತರ ಮನೆಯಲ್ಲಿ ಪೀಯೂಷ್ ಉಪಾಹಾರ

Published:
Updated:
ದಲಿತರ ಮನೆಯಲ್ಲಿ ಪೀಯೂಷ್ ಉಪಾಹಾರ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಗಸಂದ್ರದ ದಲಿತ  ಕಾಲೊನಿಯಲ್ಲಿ ಸಂಭ್ರಮ ಮನೆ ಮಾಡಿತ್ತು.  ದಲಿತರ ಕಾಲೋನಿಯಲ್ಲಿರುವ ಆರ್‌ಎಸ್‌ಎಸ್‌ ಕಾರ್ಯಕರ್ತನ ಮನೆಗೆ ಉಪಹಾರಕ್ಕೆ ದೆಹಲಿಯಿಂದ ಬರುವ ಅತಿಥಿಯನ್ನು ಸ್ವಾಗತಿಸಲು ಇಡೀ  ಬೀದಿ ಸಿಂಗಾರಗೊಂಡಿತ್ತು.

ಕೇಂದ್ರ ಇಂಧನ ಮತ್ತು ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಪೀಯೂಷ್ ಗೋಯಲ್ ಮಂಗಳವಾರ ಬೆಳಿಗ್ಗೆ 9ರ ಸುಮಾರಿಗೆ ಕಾರ್ಯಕರ್ತರ ದಂಡಿನೊಂದಿಗೆ ಕಾಲೋನಿಗೆ ಬಂದರು.

ಇತ್ತೀಚಿಗೆ ನಿಧನರಾಗಿರುವ ದಲಿತ ಸಮುದಾಯದ ಆರ್‌ಎಸ್‌ಎಸ್‌ ಕಾರ್ಯಕರ್ತ ದಿವಂಗತ ಮದನಗಿರಿಯಪ್ಪ ಅವರ ಮನೆಗೆ ಸಚಿವರು ಧಾವಿಸಿದರು.

ಸಚಿವರನ್ನು ಆರತಿ ಬೆಳಗಿ ಬರ ಮಾಡಿಕೊಂಡ ಮದನಗಿರಿಯಪ್ಪ ಕುಟುಂಬದ ಸದಸ್ಯರು ವಿಶೇಷವಾಗಿ ಸಿದ್ಧಪಡಿಸಿದ ಚಪಾತಿ, ಚಿತ್ರಾನ್ನ, ಚಟ್ನಿ, ಆಲೂಗಡ್ಡೆ ಪಲ್ಯ, ಬೀನ್ಸ್‌ ಪಲ್ಯ ಬಡಿಸಿದರು.

ನೆಲದ ಮೇಲೆ ಹಾಸಿದ್ದ ಜಮಕಾನದ ಮೇಲೆ ಕುಳಿತು ಅಡಿಕೆ ತಟ್ಟೆಯಲ್ಲಿ ಉಪಾಹಾರ ಮಾಡಿದ ಸಚಿವರು,   ಮದನಗಿರಿಯಪ್ಪ ಅವರ ಮೊಮ್ಮಗನನ್ನು ತೊಡೆ ಮೇಲೆ ಕೂರಿಸಿಕೊಂಡು ಚಪಾತಿ ತಿನ್ನಿಸಿದರು. ಬಳಿಕ ₹ 500 ಮುಖಬೆಲೆಯ ಮೂರ್ನಾಲ್ಕು ನೋಟುಗಳನ್ನು ಮಗುವಿನ ಕೈಗಿಟ್ಟರು.

ಸಂತಸದಲ್ಲಿ ತೇಲಿದ ಈ ಕುಟುಂಬದ ಸದಸ್ಯರು, ‘ಪೀಯೂಷ್‌ ಗೋಯಲ್‌ ಅವರು ನಮ್ಮ ಮನೆಗೆ ಉಪಾಹಾರಕ್ಕೆ ಬಂದಿರುವುದು ಅತ್ಯಂತ ಸಂತಸ ತಂದಿದೆ’ ಎಂದರು.

ಬಳಿಕ ಪಕ್ಕದಲ್ಲೇ ಇದ್ದ ಶಂಕರ್ ಎಂಬುವರ ಮನೆಗೆ ತೆರಳಿದ ಸಚಿವರು, ಪಿಂಗಾಣಿ ಲೋಟದಲ್ಲಿ ಕಾಫಿ ಕುಡಿದರು. ಕಿರಿದಾದ ಮನೆಯಲ್ಲಿ ಮಂಚದ ಮೇಲೆ ಎಲ್ಲರೊಂದಿಗೆ ಕುಳಿತು ಕೆಲಕಾಲ ಹರಟೆ ಹೊಡೆದರು. ಇದೇ ಕಾಲೊನಿಯ ಬಿಜೆಪಿ ಕಾರ್ಯಕರ್ತ ರಾಮ ಮತ್ತು ಲಕ್ಷ್ಮಣ ಎಂಬುವರ ಮನೆಗೂ ತೆರಳಿ ಕಾಫಿ ಕುಡಿದರು.

ಆನಂತರ ಗಲ್ಲಿಯಲ್ಲೆ ಹಾಕಿದ್ದ ಸಣ್ಣ ವೇದಿಕೆ ಮೇಲೇರಿ ಮಾತನಾಡಿದ ಸಚಿವರು,  ‘ರಾಜಕೀಯ ಒತ್ತಡದ ನಡುವೆ ಮನೆಯಲ್ಲಿ ಊಟ, ಉಪಾಹಾರ ಮಾಡುವುದು ಕಡಿಮೆಯಾಗಿದೆ. ದಲಿತರ ಮನೆಯಲ್ಲಿ ತೋರಿಸಿದ ಪ್ರೀತಿ,  ಬಡಿಸಿದ ಉಪಾಹಾರ ನನ್ನ ಮನೆಗೆ ಬಂದಷ್ಟು ಖುಷಿ ನೀಡಿದೆ. ಈ ಕ್ಷಣವನ್ನು ನಾನು ಕೊನೆವರೆಗೂ ಮರೆಯುವುದಿಲ್ಲ’ ಎಂದರು.

‘ಬಿಜೆಪಿ ಸರ್ಕಾರ  ಮೀಸಲಾತಿ ಹಿಂಪಡೆಯುತ್ತದೆ ಎಂಬ ಮಾಹಿತಿ ಇದೆ. ಅಸಮಾನತೆ, ಜಾತೀಯತೆ ಇರುವ ತನಕ ಮೀಸಲಾತಿ ಇರಬೇಕು’ ಎಂದು ಆರ್‌.ಎಂ.ಎನ್‌. ರಮೇಶ್‌ ಎಂಬುವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮತ್ತೊಮ್ಮೆ ಮೈಕ್ ಎತ್ತಿಕೊಂಡ ಗೋಯಲ್, ‘ಮೀಸಲಾತಿ  ಬಗ್ಗೆ ಯಾರಿಗೂ ಗೊಂದಲ ಬೇಡ. ಕೇಂದ್ರ ಸರ್ಕಾರ ಮೀಸಲಾತಿ ಪರವಾಗಿದೆ’ ಎಂದು ಭರವಸೆ ನೀಡಿದರು. ಮದನಗಿರಿಯಪ್ಪ ಕುಟುಂಬಕ್ಕೆ ಶಾಸಕ ಸತೀಶ್‌ ರೆಡ್ಡಿ ₹ 1 ಲಕ್ಷ ಮೊತ್ತದ ಚೆಕ್‌ ನೀಡಿದರು.

ಕಸ ಸುರಿದು ಮತ್ತೆ ಗುಡಿಸಿದರು!

ದಲಿತರ ಮನೆಗೆ ಪೀಯೂಷ್ ಗೋಯಲ್‌ ತೆರಳುವ ಮುನ್ನ,  ಬೊಮ್ಮನಹಳ್ಳಿ ವೃತ್ತದಲ್ಲಿ ಸ್ವಚ್ಛ ಭಾರತ ಅಭಿಯಾನ ಏರ್ಪಡಿಸಲಾಗಿತ್ತು.  ಪೌರ ಕಾರ್ಮಿಕರು ಬೆಳಿಗ್ಗೆ 5ರ ಸುಮಾರಿನಲ್ಲೇ ಕಾರ್ಯಕ್ರಮ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸಿದ್ದರು.

ಬಳಿಕ ಸ್ಥಳಕ್ಕೆ ಬಂದ ಆಯೋಜಕರು   ಕಸ ಇಲ್ಲದಿರುವುದನ್ನು ಕಂಡು ಪೇಪರ್ ತುಂಡುಗಳನ್ನು ತಂದು ರಸ್ತೆಗೆ ಚೆಲ್ಲಿದರು. 8.30ರ ಸುಮಾರಿಗೆ ಬಂದ ಸಚಿವರು  ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ  ಮತ್ತೆ ಪೇಪರ್‌ ಗುಡಿಸಿ ಕಸದ ಡಬ್ಬಿಗೆ ತುಂಬಿದರು.

‘ಎಂದಿನಂತೆ ರಸ್ತೆ ಸ್ವಚ್ಛಗೊಳಿಸಿದ್ದೆವು. ಕಸ ಉಳಿಸಬೇಕು ಎಂಬುದು ಗೊತ್ತಿರಲಿಲ್ಲ. ಮತ್ತೊಮ್ಮೆ ಕಸ ಚೆಲ್ಲಿ ಗುಡಿಸಲಾಗುತ್ತಿದೆ’ ಎಂದು ಪೌರ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry