ಅಧಿಕಾರಿಗಳಿಗೆ ಭದ್ರತೆ ಒದಗಿಸುವಂತೆ ಒತ್ತಾಯ

7
ಜಂಟಿ ಆಯುಕ್ತರಿಗೆ ಬೆದರಿಕೆ

ಅಧಿಕಾರಿಗಳಿಗೆ ಭದ್ರತೆ ಒದಗಿಸುವಂತೆ ಒತ್ತಾಯ

Published:
Updated:
ಅಧಿಕಾರಿಗಳಿಗೆ ಭದ್ರತೆ ಒದಗಿಸುವಂತೆ ಒತ್ತಾಯ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಅವರಿಗೆ ಬೆದರಿಕೆ ಪತ್ರ ಬರೆದಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ  ಒತ್ತಾಯಿಸಿ ಆರೋಗ್ಯ ವಿಭಾಗದ ಅಧಿಕಾರಿಗಳು ಮತ್ತು ನೌಕರರು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ದಕ್ಷ ಅಧಿಕಾರಿಗಳಿಗೆ ರಕ್ಷಣೆ ಕೊಡಿ, ಬೆದರಿಕೆ ಪತ್ರ ಬರೆದವರನ್ನು ಬಂಧಿಸಿ’ ಎಂಬ ಘೋಷಣೆಗಳನ್ನು ಕೂಗುತ್ತ ಪಾಲಿಕೆ ಆವರಣದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. 

ಅಧಿಕಾರಿಗಳು ಮತ್ತು ನೌಕರರ ಸಂಘದ ನಿರ್ದೇಶಕ ಎ.ಅಮೃತರಾಜ್‌ ಮಾತನಾಡಿ, ‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ  ಜಂಟಿ ಆಯುಕ್ತರು ಇತ್ತೀಚೆಗೆ ನೋಟಿಸ್‌ಗಳನ್ನು ನೀಡಿದ್ದರು. ಇದರಿಂದ ಅಸಮಾಧಾನಗೊಂಡಿರುವವರೇ ಈ ಪತ್ರ ಕಳುಹಿಸಿದ್ದಾರೆ. ಇಂತಹ ಕೃತ್ಯ ಅಧಿಕಾರಿಗಳ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಕಿಡಿಗೇಡಿಗಳಿಗೆ ಶಿಕ್ಷೆಯಾದರೆ ಮಾತ್ರ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ’ ಎಂದರು.

‘ಆರೋಗ್ಯ ಅಧಿಕಾರಿಗಳು  ತ್ಯಾಜ್ಯ ವಿಂಗಡಣೆ ಮತ್ತು ವಾಣಿಜ್ಯ ಮಳಿಗೆಗಳ ತಪಾಸಣೆ ನಡೆಸಬೇಕಾಗುತ್ತದೆ.  ಮಾರುಕಟ್ಟೆಗಳಲ್ಲಿ 40 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್‌  ವಶಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರು ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಕಿಡಿಗೇಡಿಯನ್ನು ಬಂಧಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಮೇಯರ್‌  ಒತ್ತಾಯಿಸಬೇಕು’ ಎಂದು ಸಂಘದ ಮತ್ತೊಬ್ಬ ನಿರ್ದೇಶಕ ಚ.ನಾಗರಾಜ ಹೇಳಿದರು.

ಘನತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡದ ಅಂಗಡಿ ಮಾಲೀಕರಿಗೆ ಕೆಲ ದಿನಗಳ ಹಿಂದೆ ಖಾನ್‌ ನೋಟಿಸ್‌ ನೀಡಿದ್ದರು.  ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯವವರಿಗೆ ಪಾಲಿಕೆ ಇತ್ತೀಚೆಗೆ ಭಾರಿ ದಂಡ ವಿಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry