ಬಳಕೆಯೇ ಆಗಿಲ್ಲ 2,888 ಎಕರೆ

7
ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡ ಜಾಗದ ಬಗ್ಗೆ ಬಿಡಿಎ ‘ಜಾಣ ಮರೆವು’ ಬೆಳಕಿಗೆ

ಬಳಕೆಯೇ ಆಗಿಲ್ಲ 2,888 ಎಕರೆ

Published:
Updated:
ಬಳಕೆಯೇ ಆಗಿಲ್ಲ 2,888 ಎಕರೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)  ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ  ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸಂಪೂರ್ಣ ಬಳಸಿಕೊಳ್ಳುವ ಗೋಜಿಗೇ ಹೋಗದಿರುವುದು ಬೆಳಕಿಗೆ ಬಂದಿದೆ.

ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಹಾಗೂ  ವಾಸ್ತವದಲ್ಲಿ ಬಳಸಿಕೊಂಡಿರುವ ಭೂಮಿ ಕುರಿತು ದಾಖಲೆಗಳ ಪರಿಶೀಲನೆ ನಡೆಸಿದಾಗ (ಭೂಲೆಕ್ಕ ಪರಿಶೋಧನೆ)  56 ಬಡಾವಣೆಗಳಲ್ಲಿ  ಒಟ್ಟು 2,888 ಎಕರೆ  34 ಗುಂಟೆ ಜಾಗ ಬಳಕೆಯೇ ಆಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

56 ಬಡಾವಣೆಗಳ ಅಭಿವೃದ್ಧಿಗೆ   ಇದುವರೆಗೆ  28,127 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿತ್ತು. ವ್ಯಾಜ್ಯಗಳ ಕಾರಣದಿಂದಾಗಿ  ಕೆಲವು ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯ ಹೊರಗಿಡಲಾಗಿತ್ತು. ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನ ಪಡಿಸಿಕೊಂಡ 16,643 ಎಕರೆ 16 ಗುಂಟೆ ಜಾಗವನ್ನು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

ಈ ಪೈಕಿ ಸುಮಾರು ಶೇಕಡಾ 17ರಷ್ಟು ಜಾಗ ಬಳಕೆ ಆಗದೇ ಉಳಿದಿದೆ ಎಂದು 2012ರವರೆಗೆ ನಡೆದಿರುವ ಭೂಲೆಕ್ಕ ಪರಿಶೋಧನೆಯಲ್ಲಿ ಕಂಡುಬಂದಿದೆ.

ಬಿಡಿಎ ರಚನೆ ಆಗುವ ಮುನ್ನ ಸಿಟಿ ಇನ್ಪ್ರಾಸ್ಟ್ರಕ್ಚರ್‌ ಟ್ರಸ್ಟ್‌ ಬೋರ್ಡ್‌  ಅಸ್ತಿತ್ವದಲ್ಲಿತ್ತು. ಆ ಕಾಲದಲ್ಲಿ  ಅಭಿವೃದ್ಧಿಪಡಿಸಿದ ಬಡಾವಣೆಗಳಿಂದ  ಹಿಡಿದು ಅರ್ಕಾವತಿ ಬಡಾವಣೆವರೆಗಿನ (ಇದರ ಅಂತಿಮ ಅಧಿಸೂಚನೆ ಪ್ರಕಟವಾಗಿದ್ದು 2004ರಲ್ಲಿ) ದಾಖಲೆಗಳನ್ನು ಪರಿಶೀಲಿಸಿ  ಬಳಸದೇ ಉಳಿದಿರುವ ಜಾಗವನ್ನು ಬಿಡಿಎ ಲೆಕ್ಕಹಾಕಿದೆ. 

‘ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಜಾಗವನ್ನು ಎಂಜಿನಿಯರಿಂಗ್‌ ವಿಭಾಗದವರು ಬಡಾವಣೆಗಾಗಿ ಸಂಪೂರ್ಣ ಬಳಕೆ ಮಾಡದೇ ಇರುವುದರಿಂದ ಹೆಚ್ಚಿನ ಜಾಗ ಒತ್ತುವರಿಯಾಗಿದೆ. ಕೆಲವು ಜಾಗಗಳನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ. ಭೂ ಲೆಕ್ಕ ಪರಿಶೋಧನೆ ವೇಳೆ ಇಷ್ಟೊಂದು ಪ್ರಮಾಣದ ಜಾಗ ಬಿಡಿಎ ಹೆಸರಿನಲ್ಲಿರುವುದು ತಿಳಿದ ಬಳಿಕವೂ ಅದನ್ನು ಗುರುತಿಸಿ ಬಳಸಿಕೊಳ್ಳುವ ಗಂಭೀರ ಪ್ರಯತ್ನಗಳು ನಡೆದಿಲ್ಲ. ಅನೇಕ ಬಡಾವಣೆಗಳಲ್ಲಿ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿಯೇ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಭೂಸ್ವಾಧೀನ ಪಡಿಸಿಕೊಂಡು ಅದರಿಂದ ನಿವೇಶನ ರಚಿಸಿ ಹಂಚಿಕೆ ಮಾಡದಿದ್ದರೆ ಸಾರ್ವಜನಿಕರಿಗೆ ವಂಚಿಸಿದಂತೆ’ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಅಭಿಪ್ರಾಯಪಟ್ಟರು.

ಒಟ್ಟು 1,007 ಎಕರೆ ಜಾಗ  ಡಿನೋಟಿಫಿಕೇಷನ್‌

ಭೂಸ್ವಾಧೀನ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ಬಳಿಕ ಒಟ್ಟು 1,007 ಎಕರೆ 34 ಗುಂಟೆ ಜಾಗವನ್ನು ಡಿನೋಟಿಫೈ ಮಾಡಲಾಗಿದೆ. ಅತಿ ಹೆಚ್ಚು ಜಾಗ ಡಿನೋಟಿಫೈ ಆಗಿರುವುದು ಜೆ.ಪಿ.ನಗರ 8ನೇ ಹಂತದಲ್ಲಿ. ಇಲ್ಲಿ 227 ಎಕರೆ 12 ಗುಂಟೆ ಜಾಗವನ್ನು ಡಿನೋಟಿಫೈ ಮಾಡಲಾಗಿತ್ತು. 

ಬನಶಂಕರಿ 5ನೇ ಹಂತದಲ್ಲಿ 200 ಎಕರೆ 38 ಗುಂಟೆ, ಬಿಟಿಎಂ ಬಡಾವಣೆಯಲ್ಲಿ 173 ಎಕರೆ 22 ಗುಂಟೆ, ಜೆ.ಪಿ.ನಗರ 9ನೇ ಹಂತದಲ್ಲಿ 101 ಎಕರೆ 32 ಗುಂಟೆ, ಆರ್‌ಎಂವಿ 2ನೇ ಹಂತದಲ್ಲಿ 104 ಎಕರೆ 35 ಗುಂಟೆ, ಜ್ಞಾನಭಾರತಿ ಬಡಾವಣೆಯಲ್ಲಿ 101 ಎಕರೆ 26 ಗುಂಟೆ  ಜಾಗವನ್ನು ಡಿನೋಟಿಫೈ ಮಾಡಲಾಗಿದೆ.  ಅರ್ಕಾವತಿ ಬಡಾವಣೆಗೆ 2750 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸುವ ಪ್ರಸ್ತಾವವಿತ್ತು. ಈ ಪೈಕಿ 1,089 ಎಕರೆ  12 ಗುಂಟೆ ಜಾಗವನ್ನು ಅಂತಿಮ ಅಧಿಸೂಚನೆಯಿಂದ ಹೊರಗಿಡಲಾಯಿತು.   ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಟ್ಟು 207 ಎಕರೆ 17 ಗುಂಟೆ ಜಾಗವನ್ನು ಡಿನೋಟಿಫೈ ಮಾಡಲಾಗಿದೆ.

* 2,888 ಎಕರೆ ಬಳಕೆ ಆಗದಿರುವುದು ಸಣ್ಣ ವಿಚಾರ ಅಲ್ಲ. ಇದನ್ನು  ಸಮರ್ಪಕ­ವಾಗಿ ಬಳಸಿಕೊಂಡರೆ ಬಿಡಿಎ ಆರ್ಥಿಕ ಮುಗ್ಗಟ್ಟಿನಿಂದ ಹೊರಗೆ ಬರಬಹುದು. 

- ಸಾಯಿದತ್ತ, ಸಾಮಾಜಿಕ ಕಾರ್ಯಕರ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry