ಮೆಗ್ಗಾನ್‌ ಆಸ್ಪತ್ರೆ ಅವ್ಯವಸ್ಥೆಗೆ ಜಿಲ್ಲಾಧಿಕಾರಿ ‘ಚಿಕಿತ್ಸೆ’

7

ಮೆಗ್ಗಾನ್‌ ಆಸ್ಪತ್ರೆ ಅವ್ಯವಸ್ಥೆಗೆ ಜಿಲ್ಲಾಧಿಕಾರಿ ‘ಚಿಕಿತ್ಸೆ’

Published:
Updated:
ಮೆಗ್ಗಾನ್‌ ಆಸ್ಪತ್ರೆ ಅವ್ಯವಸ್ಥೆಗೆ ಜಿಲ್ಲಾಧಿಕಾರಿ ‘ಚಿಕಿತ್ಸೆ’

ಶಿವಮೊಗ್ಗ: ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು. ಆಸ್ಪತ್ರೆ ಆವರಣದಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಿದ್ದ 10ಕ್ಕೂ ಹೆಚ್ಚು ಖಾಸಗಿ ಆಂಬುಲೆನ್ಸ್‌ ಜಪ್ತಿ ಮಾಡಲು ಪೊಲೀಸರಿಗೆ ಸೂಚನೆ ನೀಡಿದರು.

‘ಬಡರೋಗಿಗಳಿಗೆ  ಆಂಬುಲೆನ್ಸ್ ವ್ಯವಸ್ಥೆ ಮಾಡುವುದು ಆಸ್ಪತ್ರೆಯ ಜವಾಬ್ದಾರಿ. ಖಾಸಗಿ ಆಂಬುಲೆನ್ಸ್‌ಗಳು ಜಾಸ್ತಿಯಾಗಿರುವುದು ಗಮನಿಸಿದರೆ, ಸಾರ್ವಜನಿಕರು ಇಲ್ಲಿ ಹಣಕೊಟ್ಟು ಸೇವೆ ಪಡೆಯುತ್ತಾರೆ ಎಂಬ ಭಾವನೆ ಮೂಡುತ್ತದೆ. ಆಸ್ಪತ್ರೆಯ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳ ವ್ಯವಹಾರಕ್ಕೆ ಅವಕಾಶ ನೀಡಬಾರದು’ ಎಂದು ತಾಕೀತು ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್‌ ಅಶೋಕ್‌ ಖರೆ ಅವರನ್ನು ಮೊಬೈಲ್  ಮೂಲಕ ಸಂಪರ್ಕಿಸಿದ ಜಿಲ್ಲಾಧಿಕಾರಿ, ಖಾಸಗಿ ಆಂಬುಲೆನ್ಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಆಸ್ಪತ್ರೆಯ ಮುಂಭಾಗದ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳು, ಆಟೊರಿಕ್ಷಾಗಳು ಅಸ್ತವ್ಯಸ್ತವಾಗಿ ನಿಲುಗಡೆ ಮಾಡಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಕೂಡಲೇ ಎಲ್ಲ ವಾಹನಗಳನ್ನೂ ತೆರವುಗೊಳಿಸಲು ಆದೇಶಿಸಿದರು.

ಆಸ್ಪತ್ರೆಗೆ ತುರ್ತು ಅಗತ್ಯ ಇರುವ ರೋಗಿಗಳು ಬರುವ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಎಲ್ಲ ರೀತಿಯ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು. ಸಾಲಾಗಿ ನಿಲುಗಡೆ ಮಾಡದ ವಾಹನಗಳಿಗೆ ದಂಡ ವಿಧಿಸಬೇಕು ಎಂದು ಸಲಹೆ ನೀಡಿದರು.

ಗೂಡಂಗಡಿ ತೆರವಿಗೆ ಕ್ರಮ: ಆಸ್ಪತ್ರೆಯ ಕಾಂಪೌಂಡ್‌ ಸುತ್ತಲೂ  ಸಾಗರ  ರಸ್ತೆಯ ಅಕ್ಕ–ಪಕ್ಕದಲ್ಲಿ ಗೂಡಂಗಡಿ ಹಾಗೂ ಶಾಶ್ವತ ಶೆಡ್‌ ನಿರ್ಮಿಸಿಕೊಂಡು ಕೆಲವರು ವ್ಯಾಪಾರ  ನಡೆಸುತ್ತಿದ್ದಾರೆ. ಇದರಿಂದ ತೊಂದರೆಯಾಗಿದೆ.  ಇಲ್ಲಿರುವ ಎಲ್ಲ ಅನಧಿಕೃತ ಗೂಡಂಗಡಿ ತೆರವು ಗೊಳಿಸಬೇಕು ಎಂದು ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಅವರಿಗೆ ಸೂಚನೆ ನೀಡಿದರು.

ಆಸ್ಪತ್ರೆಗೆ ನಿಯಮಿತ ಭೇಟಿ: ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ಆಸ್ಪತ್ರೆಯ ಎಲ್ಲ ನ್ಯೂನತೆಗಳನ್ನೂ ಕಾಲಮಿತಿ ಒಳಗೆ ಬಗೆಹರಿಸಿಕೊಳ್ಳಬೇಕು. ಬಡವರಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಆರೈಕೆ, ಗುಣಮಟ್ಟದ ಸೇವೆ ನೀಡಬೇಕು. ಅಕ್ರಮ ಎಸಗುವ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಾಲಿಕೆ ಆಯುಕ್ತರ ಜತೆ ನಗರದ ಇತರೆ ಭಾಗಳಿಗೂ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಇಂದು ಸಭೆ

ಈಚೆಗೆ ಪತ್ನಿಯೊಬ್ಬರು ರೋಗಿಪೀಡಿತ ಪತಿಯನ್ನು ನೆಲದ ಮೇಲೆ ಎಳೆದುಕೊಂಡು ಹೋದ ಘಟನೆ ಕುರಿತು ಚರ್ಚೆ ನಡೆಸಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೂನ್‌ 7ರಂದು ಬೆಳಿಗ್ಗೆ 9.45ಕ್ಕೆ ಜಿಲ್ಲಾಧಿಕಾರಿ ಎಂ. ಲೋಕೇಶ್ ಸಭೆ ಕರೆದಿದ್ದಾರೆ. ಶಿವಮೊಗ್ಗ ವೈದ್ಯಕೀಯ ಕಾಲೇಜು ನಿರ್ದೇಶಕ ಸುಶೀಲ್‌ ಕುಮಾರ್, ಅಧೀಕ್ಷಕ ಸತ್ಯನಾರಾ ಯಣ್, ಜಿಲ್ಲಾ ಸರ್ಜನ್‌ ಡಾ.ಆರ್. ರಘುನಂದನ್‌ ಉಪಸ್ಥಿತರಿರುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry