ಜಿಲ್ಲೆಯ ಎಲ್ಲೆಂದರಲ್ಲಿ ಮದ್ಯ ಮಾರಾಟ

7

ಜಿಲ್ಲೆಯ ಎಲ್ಲೆಂದರಲ್ಲಿ ಮದ್ಯ ಮಾರಾಟ

Published:
Updated:
ಜಿಲ್ಲೆಯ ಎಲ್ಲೆಂದರಲ್ಲಿ ಮದ್ಯ ಮಾರಾಟ

ಬೀದರ್‌: ‘ಜಿಲ್ಲೆಯಲ್ಲಿ ರಾಜಾರೋಷ­ವಾಗಿ ಮದ್ಯ ಮಾರಾಟ ನಡೆದಿದೆ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಎಲ್ಲ ಧಾಬಾಗಳಲ್ಲಿ ಬಹಿರಂಗವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕೈಚೆಲ್ಲಿ ಕುಳಿತಿ­ದ್ದಾರೆ’ ಎಂದು ಆರ್‌.ಆರ್‌.ಕೆ. ಸಮಿತಿ ಕಾರ್ಯದರ್ಶಿ ಶರಣಬಸಪ್ಪ  ದೇಶಮುಖ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಲಿಂಗರಾಜ ಅಪ್ಪ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ತಿಪಟೂರಿನ ಡಾ.ಬಿ.ಆರ್.­ಅಂಬೇಡ್ಕರ್‌ ಯುವಜನ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯ­ದಲ್ಲಿ ಮಂಗಳವಾರ ಆಯೋಜಿಸಿದ್ದ   ‘ಮಾದಕ ವಸ್ತುಗಳ ಸೇವನೆಯ ಕೆಡುಕು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಎಲ್ಲ ಬ್ರ್ಯಾಂಡ್‌ಗಳ ನಕಲಿ ಮದ್ಯ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಎಲ್ಲಿಯೂ ದಾಳಿ ನಡೆಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಮದ್ಯ ಮಾರಾಟ ಹಾಗೂ ಸೇವನೆ ತಡೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಏನು ಪ್ರಯೋಜನ’ ಎಂದರು.

‘ಪ್ರೌಢಶಾಲೆ ವಿದ್ಯಾರ್ಥಿಗಳೂ ಬಾರ್‌ಗಳಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ­ಗಳು ನಶೆ ಮಾಡಲು ಕೋರೆಕ್ಸ್ ಕುಡಿಯುತ್ತಿದ್ದಾರೆ. ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬ್ರೌನ್‌ ಶುಗರ್‌ ಸಿಕ್ಕಿದ್ದು ಇದೇ ಜಿಲ್ಲೆಯಲ್ಲಿ. ನೆರೆಯ ತೆಲಂಗಾಣ­ದಿಂದ ಈಗಲೂ ಗಾಂಜಾ ಸರಬರಾಜು ಆಗುತ್ತಿದೆ. ಅವುಗಳಿಗೆ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈ­ಗೊ­ಳ್ಳಬೇಕಿದೆ’ ಎಂದು ಹೇಳಿದರು.

‘ಒಂದು ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಿದರೆ ಮದ್ಯದ ಚಟಕ್ಕೆ ಅಂಟಿಕೊಂಡಿರುವವರು ಇನ್ನೊಂದು ರಾಜ್ಯದ ಗಡಿಯೊಳಗೆ ಹೋಗಿ ಮದ್ಯ ಸೇವಿಸುತ್ತಾರೆ. ಆದ್ದರಿಂದ ದೇಶದ­ಲ್ಲಿಯೇ ಮದ್ಯ ಮಾರಾಟ ನಿಷೇಧಿಸ­ಬೇಕು. ಸರ್ಕಾರಕ್ಕೆ ಮದ್ಯ ಮಾರಾಟ ದಿಂದ ತೆರಿಗೆ ರೂಪದಲ್ಲಿ ಆದಾಯ ಬರು ತ್ತಿದೆ. ಬೇರೆ ಮೂಲಗಳನ್ನು ಹುಡುಕಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸ ಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸದಸ್ಯ ಶಾಂತಲಿಂಗ ಸಾವಳಗಿ ಮಾತನಾಡಿ,‘ವಿಶ್ವದಲ್ಲಿ ಪ್ರತಿ ವರ್ಷ ಅಪಘಾತಗಳಿಂದಾಗಿ 9,000 ಜನ ಮೃತಪಟ್ಟರೆ, 9 ಲಕ್ಷ ಜನ ಮದ್ಯಪಾನದಿಂದ ಬರುವ ರೋಗಗ ಳಿಂದ ಸಾವಿಗೀಡಾಗುತ್ತಿದ್ದಾರೆ. ಕುಡಿತದ ದುಷ್ಪರಿಣಾಮಗಳ ಬಗೆಗೆ ಗೊತ್ತಿದ್ದರೂ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಾದಕ ದ್ರವ್ಯಗಳ ಸೇವನೆಯಿಂದ ವ್ಯಕ್ತಿಗಳು ತಮ್ಮ ಘನತೆಯನ್ನು ಕಳೆದು ಕೊಳ್ಳುತ್ತಿದ್ದಾರೆ.  ಪ್ರತಿಯೊಬ್ಬರು ಕುಡಿತದ ಕೆಡಕಿನ ಬಗೆಗೆ ಅರಿತುಕೊಳ್ಳ ಬೇಕು. ಸಮಾಜದಲ್ಲಿ ಗೌರವಯುತವಾಗಿ ಬಾಳಲು ಪಣ ತೊಡಬೇಕು’ ಎಂದು ಸಲಹೆ ನೀಡಿದರು.

‘ಲಿಖೆ ತೋ ಐಸಾ ಲಿಖೇ ಕೀ.., ಕಲಂ ಬಿ ರೋ ಪಡೆ...’ ಎನ್ನುವ  ಶಾಯರಿಯ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದ ಅವರು ‘ವಿದ್ಯಾರ್ಥಿಗಳು ಓದು ಬರಹದಲ್ಲಿ ಆಸಕ್ತಿಯಿಂದ ತೊಡಗಿಸಿ ಕೊಳ್ಳುವ ಮೂಲಕ ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೆಸರು ತರಬೇಕು’ ಎಂದು ಹೇಳಿದರು.

‘ಬಾಲ್ಯದಲ್ಲಿ ಅಮ್ಮನ ಪ್ರೀತಿ, ಯೌವನದಲ್ಲಿ ಹೆಂಡತಿಯ ಪ್ರೀತಿ ಖುಷಿ ಕೊಡುತ್ತದೆ. ಹೆಂಡತಿ ಬಂದಾಗ ಜನ್ಮ ಕೊಟ್ಟವರನ್ನು ಮರೆಯಬಾರದು. ಒಳ್ಳೆಯ ತಂದೆ ತಾಯಿ ಲಭಿಸುವುದು ನಮ್ಮ ಪುಣ್ಯ. ತಂದೆ ತಾಯಿಗಳಿಗೆ ಗೌರವ ಕೊಡಬೇಕು. ಈ ಎಲ್ಲ ಅಂಶಗಳನ್ನು ಇಂದಿನ ಯುವಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ವಿಚಾರ ಸಂಕಿರಣ ಉದ್ಘಾ­ಟಿಸಿದರು. ಚಿಟ್ಟಾ ಗ್ರಾಮ ಪಂಚಾಯಿತಿ ಸದಸ್ಯ ಗಫೂರ್‌ಸಾಬ್, ರೋಹಿದಾಸ ಘೋಡೆ ಹಾಗೂ ಪ್ರಾಚಾರ್ಯ ಡಾ.ಸಂಜೀವ್‌ರೆಡ್ಡಿ ಹುಡುಗಿಕರ್ ಇದ್ದರು. ಕಾರ್ಯಕ್ರಮದಲ್ಲಿ ‘ಕುಡಿತ ಸಾಕು, ಜೀವನ ಬೇಕು’ ನಾಟಕ ಪ್ರದರ್ಶಿ ಸಲಾಯಿತು. ಪ್ರಹ್ಲಾದ ನಿರೂಪಿಸಿ, ಗೀತಾ ವಂದಿಸಿದರು.

* *

ಸುಧೀರಕುಮಾರ ರೆಡ್ಡಿ  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾಗ ಜಿಲ್ಲೆಯ ಧಾಬಾಗಳಲ್ಲಿ ನಿಂತು ಹೋಗಿದ್ದ ಅಕ್ರಮ ಮದ್ಯ ಮಾರಾಟ ಈಗ ಮತ್ತೆ ಆರಂಭವಾಗಿದೆ.

ಶರಣಬಸಪ್ಪ ದೇಶಮುಖ

ಆರ್‌ಆರ್‌ಕೆ ಸಮಿತಿ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry