ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ

Last Updated 7 ಜೂನ್ 2017, 5:15 IST
ಅಕ್ಷರ ಗಾತ್ರ

ಕೋಲಾರ: ‘ಜಿಡಿಎಸ್‌ ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯ, ಧರ್ಮದವರು ಪಕ್ಷದಲ್ಲಿದ್ದಾರೆ. ಹೀಗಾಗಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪಕ್ಷದ ಮುಖಂಡ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷದ ವಿವಿಧ ಘಟಕಗಳಲ್ಲಿ ಯಾವುದೇ ಸ್ಥಾನ ಸಿಕ್ಕಿದರೂ ಅಸಮಾಧಾನಗೊಳ್ಳದೆ ನಿಷ್ಠೆಯಿಂದ ಕೆಲಸ ಮಾಡಿ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ’ ಎಂದು ಮನವಿ ನೀಡಿದರು.

‘ಜಿಲ್ಲೆ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಸೂಕ್ತರನ್ನು ಗುರುತಿಸಿ ಅವರ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಲಾಗುತ್ತದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 7 ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗುತ್ತದೆ. ಸಮಿತಿ ಸದಸ್ಯರು ಪ್ರತಿ ಹೋಬಳಿಗೂ ಭೇಟಿ ನೀಡಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸುತ್ತಾರೆ’ ಎಂದು ವಿವರಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕೆಂದು ವರಿಷ್ಠರು ಸೂಚಿಸಿದ್ದಾರೆ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಉತ್ಸಾಹದಿಂದ ಸಂಘಟನೆ ಯಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಿ ನೇಮಕ ಮಾಡಲಾಗುವುದು’ ಎಂದು ತಿಳಿಸಿದರು.

‘ಹೋಬಳಿ ಘಟಕದ ಅಧ್ಯಕ್ಷರು ಸೂಚಿಸಿದ ಕಾರ್ಯಕರ್ತರನ್ನು ಪದಾಧಿಕಾರಿಗಳ ಸ್ಥಾನಕ್ಕೆ ನೇಮಿಸುವಂತೆ ವರಿಷ್ಠರಿಗೆ ಶಿಫಾರಸು ಮಾಡಲಾಗುತ್ತದೆ. ವಾರದೊಳಗೆ ಎಲ್ಲ ಹೋಬಳಿಗಳ ಅಕಾಂಕ್ಷಿಗಳ ಪಟ್ಟಿಯನ್ನು ಸಮಿತಿ ಸಲ್ಲಿಸಬೇಕು. ಈಗಾಗಲೇ ಪಕ್ಷದ ವೀಕ್ಷಕರು ಕ್ಷೇತ್ರಕ್ಕೆ ಬಂದಿದ್ದು, ಪ್ರತಿ ಹೋಬಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸುವುದರ ಜತೆಗೆ ವರ್ತನೆಯನ್ನು ಗಮನಿಸುತ್ತಿದ್ದಾರೆ’ ಎಂದು ಹೇಳಿದರು.

ಗೊಂದಲಗಳಿಲ್ಲ: ‘ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿಂದಿನ ಹಾಗೂ ಈಗಿನ ಚುನಾವಣೆಗಳಿಗೆ ತುಂಬಾ ವ್ಯತ್ಯಾಸವಿದೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆ ಮಾಡಬೇಕು. ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ನೆಲೆಯಿದೆ. ಅನಗತ್ಯ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬೇಡಿ’ ಎಂದು ಕಿವಿಮಾತು ಹೇಳಿದರು.

‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ. ಪುರಸಭೆ ಹಾಗೂ ನಗರಸಭಾ ಸದಸ್ಯರ ಗೆಲುವಿನ ಹಿಂದೆ ಸಾಮಾನ್ಯ ಕಾರ್ಯಕರ್ತರ ಶ್ರಮವಿದೆ. ಆದರೆ, ಕಾರ್ಯಕರ್ತರಿಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿದರೆ ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತದೆ’ ಎಂದರು.

ಪಟ್ಟಿ ಮಾಡಲಾಗಿದೆ: ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಇ. ಗೋಪಾಲಪ್ಪ ಮಾತನಾಡಿ, ‘ಈಗಾಗಲೇ ಕೆಲ ಘಟಕಗಳ ಪದಾಧಿಕಾರಿಗಳ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಹೋಬಳಿ ಘಟಕಗಳ ಪದಾಧಿಕಾರಿಗಳ ಪಟ್ಟಿ ಸಿದ್ಧವಾದ ನಂತರ ವರಿಷ್ಠರಿಗೆ ಕಳುಹಿಸಲಾಗುವುದು. ಅವರು ಸೂಚಿಸಿದ ವ್ಯಕ್ತಿಗಳನ್ನೇ ಪದಾಧಿಕಾರಿಗಳಾಗಿ ಘೋಷಿಸಲಾಗುವುದು’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ -ಅನ್ವರ್ ಪಾಷಾ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಪಕ್ಷದ ಮುಖಂಡ ಅಶೋಕ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT