ನಿರ್ವಹಣೆ ಕೊರತೆ: ಒಣಗಿದ ಹುಲ್ಲು, ಸಸಿಗಳು

7

ನಿರ್ವಹಣೆ ಕೊರತೆ: ಒಣಗಿದ ಹುಲ್ಲು, ಸಸಿಗಳು

Published:
Updated:
ನಿರ್ವಹಣೆ ಕೊರತೆ: ಒಣಗಿದ ಹುಲ್ಲು, ಸಸಿಗಳು

ಕಲಬುರ್ಗಿ: ನಗರದ ರಾಷ್ಟ್ರಪತಿ ವೃತ್ತದಿಂದ ರಾಮಮಂದಿರ ವೃತ್ತದ ಹೊಸ ಜೇವರ್ಗಿ ರಸ್ತೆಯ ವಿಭಜಕಗಳಲ್ಲಿ ಮಹಾನಗರ ಪಾಲಿಕೆಯು ನೆಟ್ಟಿದ್ದ ಅಲಂಕಾರಿಕ ಸಸಿಗಳು ಮತ್ತು ಹುಲ್ಲುಹಾಸು ನಿರ್ವಹಣೆ ಕೊರತೆಯಿಂದ ಒಣಗಿ ಹೋಗುತ್ತಿವೆ.

ಕಲಬುರ್ಗಿ ಜಿಲ್ಲೆಯನ್ನು ‘ಸ್ಮಾರ್ಟ್ ಸಿಟಿ’ ಪಟ್ಟಿಗೆ ಸೇರಿಸಬೇಕು ಎಂಬ ಆಶಯದೊಂದಿಗೆ ಪಾಲಿಕೆಯು ₹25 ಲಕ್ಷ ವೆಚ್ಚದಲ್ಲಿ ರಸ್ತೆ ವಿಭಜಕಗಳ ಮಧ್ಯೆ ಹುಲ್ಲುಹಾಸು, ಕಣಗಿಲೆ ಸಸಿಗಳನ್ನು ನೆಟ್ಟಿತ್ತು. ಟ್ಯಾಂಕರ್ ಮೂಲಕ ಅವುಗಳಿಗೆ ನೀರುಣಿಸುವುದು ಕಷ್ಟ ಎಂಬ ಕಾರಣಕ್ಕೆ ವಿಭಜಕದ ಮಧ್ಯೆ ನಾಲ್ಕು ಕೊಳವೆ ಬಾವಿ ಕೊರೆಸಿ, ಹನಿ ನೀರಾವರಿ ಪದ್ಧತಿ ಅಳವಡಿಸಿತ್ತು. ಆದಾಗ್ಯೂ ಸಸಿಗಳು ಮತ್ತು ಹುಲ್ಲುಹಾಸು ಒಣಗುತ್ತಿವೆ. ಕೆಲವೆಡೆ ಸಸಿಗಳು ಮುರಿದು ಬಿದ್ದಿವೆ.

ಗ್ರಿಲ್ ಅಳವಡಿಕೆ ಅಪೂರ್ಣ: ರಾಷ್ಟ್ರಪತಿ ವೃತ್ತದಿಂದ ರಾಮಮಂದಿರ ವೃತ್ತದ ವರೆಗೆ ರಸ್ತೆ ವಿಭಜಕದ ಎರಡೂ ಬದಿ ಗ್ರಿಲ್ ಅಳವಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಆರು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ರಾಷ್ಟ್ರಪತಿ ವೃತ್ತದಿಂದ ಜೇವರ್ಗಿ ರಸ್ತೆ ಮಾರ್ಗವಾಗಿ 500 ಮೀಟರ್ ಗ್ರಿಲ್ ಅಳವಡಿಸಲಾಗಿದ್ದು, ಇನ್ನುಳಿದ ಕಡೆ ಹಾಗೆಯೇ ಸಸಿಗಳನ್ನು ನೆಡಲಾಗಿದೆ.

ವಿದ್ಯುತ್ ತಂತಿಗಳಿಂದ ಅಪಾಯ: ರಸ್ತೆ ವಿಭಜಕದ ಮಧ್ಯೆ ಇರುವ ವಿದ್ಯುತ್ ಕಂಬಗಳ ಕೆಳ ಬದಿಯಲ್ಲಿ ಅಳವಡಿಸಿರುವ ತಂತಿಗಳು ಹೊರಬಂದಿವೆ. ಕೆಲವೆಡೆ ವಿದ್ಯುತ್ ತಂತಿಗಳು ತುಂಡಾಗಿವೆ. ಇದರಿಂದಾಗಿ ನೀರು ಸಿಂಪರಣೆ ಮಾಡುವಾಗ ವಿದ್ಯುತ್ ತಂತಿಗೆ ತಗುಲಿದರೆ ಅಪಾಯ ಆಹ್ವಾನಿಸುವ ಸ್ಥಿತಿ ಇದೆ.

‘ಮೊದಲ ಹಂತದಲ್ಲಿ ರಾಷ್ಟ್ರಪತಿ ವೃತ್ತದಿಂದ ಕೊಠಾರಿ ಭವನದವರೆಗೆ ಗ್ರಿಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆ ಕೆಲಸ ಅರ್ಧಕ್ಕೆ ನಿಂತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು. ರಾಮಮಂದಿರ ವೃತ್ತದಿಂದ ವೆಂಕಟಗಿರಿ ಹೋಟೆಲ್‌ವರೆಗಿನ ರಸ್ತೆ ವಿಭಜಕಕ್ಕೆ ಗ್ರಿಲ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಪಾಲಿಕೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಪಿ.ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರು ಲಭ್ಯವಿದ್ದರೂ ನಿರ್ವಹಣೆ ಕೊರತೆಯಿಂದ ಸಸಿಗಳು ಮತ್ತು ಹುಲ್ಲು ಬಾಡುತ್ತವೆ ಎಂಬ ಕಾರಣಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಬಿಸಿಲು ಹೆಚ್ಚಿದ್ದ ಕಾರಣ ಕೆಲವೆಡೆ ಹುಲ್ಲು ಮತ್ತು ಸಸಿಗಳು ಒಣಗಿವೆ. ಇನ್ನು ಮುಂದೆ ನಿರಂತರವಾಗಿ ನೀರುಣಿಸುವಂತೆ ಕಾರ್ಮಿಕರಿಗೆ ಸೂಚಿಸಲಾಗುವುದು’ ಎಂದು ಹೇಳಿದರು.

* * 

ಬಿಸಿಲಿನಿಂದಾಗಿ ಹುಲ್ಲು ಮತ್ತು ಸಸಿ ಒಣಗಿವೆ. ರಸ್ತೆ ವಿಭಜಕದ ಹಸಿರೀಕರಣ ನಿರ್ವಹಣೆಯನ್ನು ಹೊರ ಗುತ್ತಿಗೆ ನೀಡಲು ನಿರ್ಧರಿಸಲಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ.

ಆರ್.ಪಿ.ಜಾಧವ್, ಕಾರ್ಯನಿರ್ವಾಹಕ ಎಂಜಿನಿಯರ್, ಮಹಾನಗರ ಪಾಲಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry