ಮಹಿಳಾ ಕಾಲೇಜಿಗೆ ಹೈಟೆಕ್‌ ಸ್ಪರ್ಶ

7

ಮಹಿಳಾ ಕಾಲೇಜಿಗೆ ಹೈಟೆಕ್‌ ಸ್ಪರ್ಶ

Published:
Updated:
ಮಹಿಳಾ ಕಾಲೇಜಿಗೆ ಹೈಟೆಕ್‌ ಸ್ಪರ್ಶ

ಚಿಂತಾಮಣಿ: ಸರ್ಕಾರಿ ಶಾಲೆ, ಕಾಲೇಜುಗಳೆಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಾವ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದಂತೆ ನಡೆಯುತ್ತಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉಚ್ಚತಮ ಶಿಕ್ಷಣ ಅಭಿಯಾನ (ರೂಸಾ) ಯೋಜನೆಯಡಿಯಲ್ಲಿ  ಸ್ಮಾರ್ಟ್‌ ಕ್ಲಾಸ್‌ ಕೊಠಡಿಗಳು ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಹೊಂದಿದೆ. ಪ್ರತಿ ತರಗತಿಯ ಕೊಠಡಿಗೂ ಟಚ್‌ಸ್ಕ್ರೀನ್‌ ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌್‌, ಆಡಿಯೋ ವಿಡಿಯೋ ಸಿಸ್ಟಮ್‌, ಉಚಿತ ವೈಫೈ ಒದಗಿಸಲಾಗಿದೆ.

ತಂತ್ರಜ್ಞಾನ ಆಧಾರದಿಂದ  ಪ್ರಾಧ್ಯಾಪಕರ ಉಪನ್ಯಾಸಗಳು  ಲ್ಯಾಪ್‌ಟಾಪ್‌ನಲ್ಲಿ ಸೇವ್‌ ಆಗಿರುತ್ತವೆ. ವಿದ್ಯಾಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳು  ಪದೇ ಪದೇ ಉಪನ್ಯಾಸವನ್ನು ಕೇಳಿಸಿಕೊಳ್ಳಬಹುದು. ಅನಿವಾರ್ಯ ಕಾರಣಗಳಿಂದ ಗೈರು ಹಾಜರಾದ ವಿದ್ಯಾರ್ಥಿಗಳು ಆಲಿಸಬಹುದು. ಜಿಲ್ಲೆಯಲ್ಲಿ ಇಂತಹ ಸೌಲಭ್ಯವನ್ನು ಪಡೆದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ಕಿಯೋಸ್ಕ್‌ನಲ್ಲಿ ಅಳವಡಿಸಲಾಗಿದೆ. ವೈ ಫೈ ನ ಮೂಲ ಮಾಹಿತಿಯಲ್ಲಿ ಶೈಕ್ಷಣಿಕ ವಿವರಗಳು, ಇ–ಕ್ಲಾಸ್‌, ಇ–ಹಾಜರಾತಿ, ಪೋಷಕರ ಮಾಹಿತಿ ಕ್ಷಣಮಾತ್ರದಲ್ಲಿ ಸಿಗುತ್ತದೆ. ಇದನ್ನು ತಿದ್ದುಪಡಿ ಮಾಡುವ ಅಧಿಕಾರ ಪ್ರಾಂಶುಪಾಲರಿಗೆ ಮಾತ್ರ ಇರುತ್ತದೆ.

ಆನ್‌ಲೈನ್‌ ಪ್ರಶ್ನೆಪತ್ರಿಕೆ, ಉತ್ತರಗಳು ಸಿಗುತ್ತವೆ. ಪ್ರಾಧ್ಯಾಪಕರ ಜತೆ ಸಂವಾದ, ಚರ್ಚೆ. ಕಿರುಪರೀಕ್ಷೆಗಳನ್ನು ನಡೆಸಬಹುದು. ‘ಟೆಲಿ ಶಿಕ್ಷಣ’ ಉಪಗ್ರಹ ಆಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳು ತರಗತಿಗಳಲ್ಲಿ ಕುಳಿತು ಉನ್ನತ ಸಂಪನ್ಮೂಲ ಪ್ರಾಧ್ಯಾಪಕರ ಉಪನ್ಯಾಸ ಕೇಳಬಹುದು. ಪ್ರಶ್ನೆ, ಚರ್ಚೆ, ಸಂವಾದ ನಡೆಸುವ ಅವಕಾಶವೂ ಇದೆ.

33 ಕಾಯಂ ಉಪನ್ಯಾಸಕರು ಹಾಗೂ 90 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಉಪನ್ಯಾಸಕರಲ್ಲಿ 12 ಮಂದಿ ಪಿಎಚ್‌ಡಿ ಉಳಿದವರು ಎಂಫಿಲ್‌ ಪದವಿಗಳನ್ನು ಗಳಿಸಿರುವ ಅನುಭವಿಗಳಾಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ವಿಜ್ಞಾನ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜು ಕೀರ್ತಿಯನ್ನು ಪಡೆದಿದೆ. ವಿಜ್ಞಾನ ವಿಭಾಗದಲ್ಲಿ 3 ಹಾಗೂ ಕಲಾ ವಿಭಾಗದಲ್ಲಿ 1 ಸೇರಿ 4 ರ್‌್ಯಾಂಕ್‌ಗಳು ಕಾಲೇಜಿಗೆ ಲಭಿಸಿವೆ.

ನ್ಯಾಕ್‌ ಮಾನ್ಯತೆಯನ್ನು ಪಡೆದ ಮೊದಲ ಗ್ರಾಮೀಣ ಕಾಲೇಜುಗಳಲ್ಲಿ 5 ನೇ ಸ್ಥಾನ ಗಳಿಸಿದೆ. ಪದವಿ ಹಂತದಲ್ಲಿ ಬಿ.ಎ, ಬಿಎಸ್ಸಿ, ಬಿ.ಕಾಂ, ಬಿ,ಬಿ,ಎ ಹಾಗೂ ಸ್ನಾತಕೋತ್ತರ ಹಂತದಲ್ಲಿ ಎಂ.ಎ (ಕನ್ನಡ), ಎಂ.ಎ (ಇತಿಹಾಸ), ಎಂಎಸ್‌ಸಿ (ರಸಾಯನಶಾಸ್ತ್ರ), ಎಂ.ಕಾಂ ಕೋರ್ಸ್‌ಗಳ ಶಿಕ್ಷಣ ಪಡೆಯಲು ಅವಕಾಶವಿದೆ.

ಪಠ್ಯಪುಸ್ತಕಗಳ ವ್ಯಾಸಂಗ ಜತೆಗೆ ನೈಪುಣ್ಯ ಹೆಚ್ಚಿಸುವ ಸಲುವಾಗಿ ಇಂಗ್ಲಿಷ್‌ ಸಂವಹನ, ಸಾಮಾನ್ಯಜ್ಞಾನ ಕಲಿಕೆ, ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್‌ ಅಂಡ್‌ ಗೈಡ್ಸ್‌, ರೆಡ್‌ಕ್ರಾಸ್‌, ಪರಂಪರೆ ಕೂಟ, ಇಕೋಕ್ಲಬ್‌, ಸಾಹಸಕೂಟಗಳು ಕಾರ್ಯನಿರ್ವಹಿಸುತ್ತಿವೆ. ಕ್ರೀಡೆಗಳು ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ವಾಲಿಬಾಲ್‌ ಕ್ರೀಡಾಕೂಟವನ್ನು ಕಾಲೇಜು ಆಯೋಜಿಸಿತ್ತು.

ಸರ್ಕಾರದ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಗುಣಮಟ್ಟದ ಕಲಿಕಾ ವಾತಾವರಣ ಹೊಂದಿರುವ ಕಾರಣ ಯುಜಿಸಿಯಿಂದ 2(ಎಫ್‌), 12(ಬಿ) ಮಾನ್ಯತೆಯನ್ನು ಪಡೆದಿದೆ. ಇದರಿಂದ ಪ್ರತಿವರ್ಷ ಕಾಲೇಜಿಗೆ  ಯುಜಿಸಿಯಿಂದ 20 ಲಕ್ಷಕ್ಕೂ ಹೆಚ್ಚು  ಸಂಶೋಧನಾ ಅನುದಾನ ಸಿಗುತ್ತದೆ.

ವಿಚಾರ ಸಂಕಿರಣಗಳು, ಶೈಕ್ಷಣಿಕ ವಿದೇಶ ಪ್ರವಾಸ, ವೃತ್ತಿ ತರಬೇತಿ, ಪ್ರಯೋಗಾಲಯ, ಗಣಕಯಂತ್ರ ಪ್ರಯೋಗಾಲಯ, ತರಬೇತಿ ಕೇಂದ್ರ ನಿರ್ಮಾಣ ಒಳ ಮತ್ತು ಹೊರ ಕ್ರೀಡಾಂಗಣಗಳು, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅನುದಾನ ಸಿಗುತ್ತದೆ. 

ವಿದ್ಯಾರ್ಥಿ ವೇತನ: ಬಡವರು ಮತ್ತು ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸರ್ಕಾರ ಹಲವಾರು ರೀತಿಯ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು  ವಿದ್ಯಾರ್ಥಿವೇತನ ಪಡೆಯುತ್ತಿರುವ ಕಾಲೇಜು ಇದಾಗಿದೆ. ಜಿಂದಾಲ್‌ ಮತ್ತಿತರ ಖಾಸಗಿ ಕಂಪೆನಿಗಳ ವಿದ್ಯಾರ್ಥಿ ವೇತನ ಸಿಗುತ್ತಿದೆ. ಈ ವರ್ಷದಿದ ಪರಿಶಿಷ್ಟ ಜಾತಿ/ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲಾಗುತ್ತದೆ.

ಉದ್ಯೋಗ: ಗ್ರಾಮೀಣ ಭಾಗಗಳಿಂದಲೇ ಹೆಚ್ಚಾಗಿ ಬರುವ ವಿದ್ಯಾರ್ಥಿಗಳಿಗಾಗಿ ಉದ್ಯೋಗ ತರಬೇತಿ, ವ್ಯಕ್ತಿತ್ವ  ವಿಕಸನ ತರಬೇತಿ ನೀಡಲಾಗುತ್ತದೆ. ವಿವಿಧ ಕಂಪೆನಿಗಳಿಂದ ಉದ್ಯೋಗ ಮೇಳ (ಕ್ಯಾಂಪಸ್‌ ಆಯ್ಕೆ)ಗಳನ್ನು ಆಯೋಜಿಸಲಾಗುತ್ತದೆ.

ವಿದ್ಯಾರ್ಥಿಗಳ ಹಣ ವಾಪಸ್‌

ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಪ್ರಸಕ್ತ ಸಾಲಿನ ದಾಖಲಾತಿಗಳು ಆರಂಭವಾಗಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಕಾಲೇಜಿನ ಸಮಯದಲ್ಲಿ ಕಚೇರಿಯನ್ನು ಸಂಪರ್ಕಿಸಬಹುದು. ದಾಖಲಾತಿಯ ನಂತರ ವಿವಿಧ ವಿದ್ಯಾರ್ಥಿ ವೇತನಗಳ ಮೂಲಕ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕ, ಪಠ್ಯಪುಸ್ತಗಳ ಖರ್ಚಿನ ಹಣ ವಾಪಸ್‌ ಸಿಗುತ್ತದೆ. ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಈ ಸೌಲಭ್ಯವಿದೆ  ಎಂದು ಪ್ರಾಂಶುಪಾಲ ವಿ.ರಾಮಕೃಷ್ಣಪ್ಪ ತಿಳಿಸಿದ್ದಾರೆ.

– ಎಂ.ರಾಮಕೃಷ್ಣಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry