ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅಧ್ಯಯನದ ಕಣಜ ತೋವಿನಕೆರೆ

Last Updated 7 ಜೂನ್ 2017, 5:24 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ತೋವಿನಕರೆ ಹೋಬಳಿಯ ಹಳ್ಳಿಗಳು ಕೃಷಿ ಅಧ್ಯಯನಕ್ಕೆ ಉತ್ತಮ ಪ್ರಾತ್ಯಕ್ಷಿಕೆಯ ತಾಕುಗಳು ಎನಿಸಿವೆ. ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ರೈತರು ಕೃಷಿ ಅಧ್ಯಯನಕ್ಕೆ ಈ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ.

ದಾಸನಕುಂಟೆ, ಮಣುವಿನಕುರ್ಕೆ, ಬಂಡೆಹಳ್ಳಿ, ಜುಂಜುರಾಮನಹಳ್ಳಿ, ಉಪ್ಪಾರಪಾಳ್ಯ, ಕುರುಬರಪಾಳ್ಯ, ಸಿವಿಡಿ ಪಾಳ್ಯ, ತೋವಿನಕೆರೆಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಸಮೀಪದ ಕೋರಾ ಹೋಬಳಿಯ ನಂದಿಹಳ್ಳಿಯೂ ಅಧ್ಯಯನಾಸಕ್ತರನ್ನು ಸೆಳೆಯುತ್ತಿದೆ.

ಈ ಗ್ರಾಮಗಳನ್ನೇ ಅಧ್ಯಯನ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣಗಳು ಇವೆ. ತೆಂಗು, ಅಡಿಕೆ, ವಿವಿಧ ತಳಿಯಹೂವುಗಳು, ತರಕಾರಿಗಳು ಹೀಗೆ ನಾನಾ ನಮೂನೆಯ ಬೇಸಾಯದ ಮೂಲಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಹುಡುಕಿದಷ್ಟು ಮಾದರಿ ರೈತರು, ತೋಟಗಳು ಕಾಣಸಿಗುತ್ತವೆ. ‘ಮಾದರಿ ಕೃಷಿ ಕ್ಷೇತ್ರ’ವಾಗಿಯೂ ಹೋಬಳಿಯ ಹಳ್ಳಿಗಳು ಕಾಣುತ್ತವೆ.

ತೋವಿನಕೆರೆಯ ಜಯಪದ್ಮಮ್ಮ ಅವರ ತೋಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನಿರ್ವಹಿಸುತ್ತಿರುವ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ, ಕಬ್ಬಿಗೆರೆ ಜವರೇಗೌಡ ಅವರ ಮನೆಯಲ್ಲಿ ಇರುವ ನೂರಾರು ವರ್ಷಗಳ ಹಿಂದಿನ ಕೃಷಿ ಉಪಕರಣಗಳು, ನಂದಿಹಳ್ಳಿಯ ಶ್ರೀಕಂಠಮೂರ್ತಿ ಅವರ ಓದೇಕರ್ ಫಾರಂನಲ್ಲಿರುವ ಔಷಧಿ ಸಸ್ಯಗಳು, ಹಣ್ಣಿನ ಗಿಡ, ಮರಗಳು, ವಿಜಯಕುಮಾರ್ ಅವರ ನಂದಿಫಾರಂ, ಗೊಲ್ಲರ ಹಟ್ಟಿಯ ರೈತರು ಬೆಳೆಯುವ ಸಿರಿ ಧಾನ್ಯಗಳು ಹಾಗೂ ಅವರ ಸಾಂಪ್ರದಾಯಿಕ ಕೃಷಿ ಜ್ಞಾನ, ಜೋನಿಗರಹಳ್ಳಿಯ ಹೂವಿನ ಬೇಸಾಯ, ಹೊಲತಾಳ್‌ ಗ್ರಾಮದ ಸಿದ್ದಗಂಗಯ್ಯ ಅವರ ಜಮೀನು... ಹೀಗೆ ಹುಡುಕಿದಷ್ಟೂ  ಅಧ್ಯಯನ ಆಕರದ ಜಮೀನುಗಳು ಇವೆ.

ಮಿಶ್ರ ಬೇಸಾಯದ ಮೂಲಕ ಆರ್ಥಿಕವಾಗಿ ಸಶಕ್ತರಾಗಿರುವ ಸಣ್ಣ ಹಿಡುವಳಿದಾರರೂ ಇದ್ದಾರೆ. ಜಯಪದ್ಮಮ್ಮ ಅವರ ತೋಟದಲ್ಲಿಯೇ ಎರಡು ವರ್ಷಗಳಲ್ಲಿ 21ಕ್ಕೂ ಹೆಚ್ಚು ರೈತ ಕಾರ್ಯಾಗಾರಗಳು ಜರುಗಿವೆ. ಈ ವರ್ಷ ಹೋಬಳಿಯಲ್ಲಿ ಸರಾಸರಿ ಐದರಿಂದ ಆರು ಕೋಟಿ ರೂಪಾಯಿ ಹುಣಸೇ ಹಣ್ಣಿನ ವಹಿವಾಟು ನಡೆದಿದೆ. ತೋವಿನಕೆರೆಯಲ್ಲಿಯೇ ಎರಡು ಮಳೆ ಮಾಪನ ಕೇಂದ್ರಗಳಿವೆ. ಕೈಯಲ್ಲಿಯೇ ಮಳೆ ನೀರು ಮಾಪನ ಮಾಡುವುದು ಒಂದಾದರೆ, ಮತ್ತೊಂದು ಬೆಂಗಳೂರಿನ ಕಂಟ್ರೋಲ್‌ ರೂಂಗೆ ಮಳೆ ಪ್ರಮಾಣ ವಿವರ ನೀಡುವ ಮಾಪಕವಾಗಿದೆ.  

ಜಿಕೆವಿಕೆ ಪ್ರವೇಶ: 2014 ಮತ್ತು 2016ರಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಿಂದ ಬಿಎಸ್ಸಿ ಕೃಷಿ, ಬಿಎಸ್ಸಿ ಮಾರುಕಟ್ಟೆ ಮತ್ತು ಬಿಎಸ್ಸಿ ಕೃಷಿ ಸಾಧನ ಸಲಕರಣೆ ವಿಭಾಗದ 20 ವಿದ್ಯಾರ್ಥಿಗಳು ‘ರಾಷ್ಟ್ರೀಯ ಕೃಷಿ ಕಾರ್ಯಾನುಭವ ಯೋಜನೆ’ಯಡಿ ಹೋಬಳಿಯ ಹಳ್ಳಿಗಳಿಗೆ ಅಧ್ಯಯನ ಪ್ರವಾಸಕ್ಕೆ ಬಂದಿದ್ದರು. 90 ದಿನಗಳ ಪ್ರವಾಸದಲ್ಲಿ ಸ್ಥಳೀಯವಾಗಿಯೇ ವಿದ್ಯಾರ್ಥಿಗಳು ನೆಲೆ ನಿಂತಿದ್ದರು. ಕೃಷಿ ವಿದ್ಯಾರ್ಥಿಗಳು 90 ದಿನ, ಮಾರುಕಟ್ಟೆ ಮತ್ತು ಸಾಧನ ಸಲಕರಣೆ ವಿಭಾಗದ ವಿದ್ಯಾರ್ಥಿಗಳು 30 ದಿನ ಅಧ್ಯಯನ ನಡೆಸಿದ್ದರು.

ತಲಾ ಐದು ಮಂದಿ ಗುಂಪು ರಚಿಸಿಕೊಂಡು ಜಮೀನುಗಳ ಮಣ್ಣು ಪರೀಕ್ಷೆ ಮತ್ತು ವೈಯಕ್ತಿಕವಾಗಿ ರೈತರಿಗೆ ಎದುರಾಗಿರುವ ಬೆಳೆ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಸೋಮವಾರ ಮತ್ತು ಗುರುವಾರ ವಿಶ್ವವಿದ್ಯಾಲದಿಂದ ಬರುವ ತಜ್ಞರಿಗೆ ‘ಇಂತಹ ರೈತರ ಬೆಳೆಗೆ ಈ ಸಮಸ್ಯೆ ಇದೆ. ಪರಿಹಾರವೇನು’ ಎಂದು ಪಟ್ಟಿ ನೀಡಿ ಪರಿಹರಿಸಿದ ಉದಾಹರಣೆಗಳು ಇವೆ. ಚನ್ನರಾಯನದುರ್ಗದಲ್ಲಿ ಬೀಜೋಪಚಾರದ ಕಾರ್ಯಾಗಾರ ನಡೆಸಿದ್ದರು. ಭತ್ತ, ರಾಗಿ ನಾಟಿ ಸಹ ಮಾಡಿದ್ದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದಲೂ ಪ್ರಗತಿಪರ ರೈತರ ತೋಟಗಳಿಗೆ ಮತ್ತು ಹೂವಿನ ಬೇಸಾಯದ ಬಗ್ಗೆ ತಿಳಿವಳಿಕೆ ನೀಡಲು ಬೇರೆ ಬೇರೆ ಭಾಗಗಳ ರೈತ ಮಹಿಳೆಯರನ್ನು ಕರೆ ತಂದಿದ್ದಾರೆ.

ವಿದ್ಯಾರ್ಥಿಗಳಿಗೆ ಅರಿವು: ಒಂದು ಕಡೆ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬಂದರೆ, ಮತ್ತೊಂದೆಡೆ ಕೃಷಿ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷಾ ತಯಾರಿಗಾಗಿ ಭೇಟಿ ನೀಡುತ್ತಾರೆ. ಪ್ರಾಯೋಗಿಕ ಪರೀಕ್ಷೆಗೆ 200 ಅಂಕಗಳಿರುತ್ತವೆ. ವಿದ್ಯಾರ್ಥಿ ವಿವಿಧ ತಳಿಯ ತರಕಾರಿಗಳು, ಸೊಪ್ಪುಗಳು, ಸಸ್ಯಗಳು, ಮರಗಳು, ಬಿತ್ತನೆಯ ಬೀಜಗಳು, ಗೊಬ್ಬರ, ಕೃಷಿ ಉಪಕರಣಗಳು ಮತ್ತು ಬಳಕೆ ಬಗ್ಗೆ ಉತ್ತರಿಸಬೇಕು.

ಪ್ರಾಯೋಗಿಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲು ಕೆಲವು ಖಾಸಗಿ ಸಂಸ್ಥೆಗಳು ನಡೆಸುವ ಕಾರ್ಯಾಗಾರಗಳಿಗೆ ಸಾವಿರಾರು ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಆ ಬದಲು ರೈತರಿಂದಲೇ ಸರಳವಾಗಿ ಮಾಹಿತಿ ಸಿಗುವ ಈ ಅವಕಾಶ  ವಿದ್ಯಾರ್ಥಿಗಳನ್ನು ಕೈಬೀಸಿ ಆಹ್ವಾನಿಸುತ್ತಿದೆ.

85ಕ್ಕೂ ಹೆಚ್ಚು ಕೃಷಿ ಸಲಕರಣೆ ಸಂಗ್ರಹ
ಕಬ್ಬಿಗೆರೆಯ ಜವರೇಗೌಡ ಅವರ ಮನೆ ಕೃಷಿ ಸಾಧನ ಸಲಕರಣೆಗಳ ಕಣಜವಾಗಿದೆ. ಅವರ ಪೂರ್ವಿಕರು ಬಳಸುತ್ತಿದ್ದ ಕೃಷಿ ಸಲಕರಣೆಗಳನ್ನು ಸಂಗ್ರಹಿಸಿಟ್ಟಿದ್ದಾರೆ.

‘ನಮ್ಮ ಅಪ್ಪ, ಅಜ್ಜನ ಕಾಲದಲ್ಲಿ ಎತ್ತುಗಳ ಕೊರಳಿಗೆ ಕಟ್ಟಿದ್ದ ನಾನಾ ನಮೂನೆಯ ಪಟ್ಟಿಗಳು, ದಾರಗಳೂ ನಮ್ಮಲ್ಲಿ ಇವೆ. ಸಾಲುಮಣೆ, ಕುಂಟೆ, ಕೊಡಲಿ, ರಾಸುಗಳಿಗೆ ಗಂಜಲ ಕಟ್ಟಿದರೆ ಅದನ್ನು ತೆಗೆಯುವ ಉಪಕರಣವೂ ಇದೆ. ಶಿರಾ, ಹೆಸರುಘಟ್ಟ, ಕೊರಟಗೆರೆಯಲ್ಲಿ ನಡೆದ ಕೃಷಿ ಮೇಳದಲ್ಲಿ ಇವುಗಳನ್ನು ಪ್ರದರ್ಶಿಸಿದ್ದೇನೆ. ಜಿಕೆವಿಕೆಯವರೂ ಕೃಷಿ ಮೇಳಕ್ಕೆ ಆಹ್ವಾನಿಸಿದ್ದರು. ಪ್ರಮಾಣ ಪತ್ರವನ್ನೂ ಸಹ ನೀಡಿದ್ದಾರೆ’ ಎಂದು ಜವರೇಗೌಡರು ಹೆಮ್ಮೆಪಡುತ್ತಾರೆ.

ಕೃಷಿ ಪ್ರವಾಸಕ್ಕೆ ಬರುವವರು ಇವರ ಮನೆಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಗೌಡರ ಬಳಿ ವ್ಯವಸಾಯದ ಪಾಠ ಹೇಳಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಗೌಡರು ಈ ವರ್ಷದ ಬರಗಾಲದಲ್ಲಿಯೂ ಒಂದು ಎಕರೆಯಲ್ಲಿ 18 ಚೀಲ ರಾಗಿ ಬೆಳೆದಿದ್ದಾರೆ. ಅಂದ ಮೇಲೆ ಅವರ ಕೃಷಿ ಸಾಧನೆಯ ಹಾದಿ ಕೃಷಿ ಆಸಕ್ತರನ್ನು ಸೆಳೆಯದೆ ಇರದು.

ಕೃಷಿ ಉಪಯೋಗ ತಿಳಿಯಿತು
‘ನಮ್ಮ ಅಪ್ಪನಿಗೆ ತುಮಕೂರಿನ ಸಂಪರ್ಕ ಹೆಚ್ಚು. ತೋವಿನಕೆರೆ ಬಳಿಯ ಬ್ರಹ್ಮಸಂದ್ರದಲ್ಲಿ ನಮ್ಮ ಸಂಬಂಧಿಕರು ಇದ್ದಾರೆ. ಅವರಿಂದ ಅಲ್ಲಿನ ಕೃಷಿ ಬಗ್ಗೆ ತಿಳಿಯಿತು. ನಾನು ಬೇರೆ ಬೇರೆ ಕಡೆಗಳಲ್ಲಿ ಗಿಡ, ಬಿತ್ತನೆ ಬೀಜ, ಸೊಪ್ಪು, ತರಕಾರಿ ಬೆಳೆಗಳನ್ನು ನೋಡಿದ್ದೆ. ಆದರೆ ಅವುಗಳ ಹೆಸರು, ಉಪಯೋಗ ತಿಳಿದಿರಲಿಲ್ಲ. ತೋವಿನಕೆರೆ ಭೇಟಿಯಿಂದ ಅನುಕೂಲವಾಯಿತು. ಇಲ್ಲಿ ಪಡೆದ ಜ್ಞಾನದಿಂದ ಪ್ರಾಯೋಗಿಕ ಪರೀಕ್ಷೆ ಉತ್ತಮವಾಗಿ ಎದುರಿಸಿದೆ’ ಇದು ಬಿಎಸ್ಸಿ ಕೃಷಿ ಪದವಿ ಸೇರಲಿಚ್ಚಿಸಿರುವ ಬೆಂಗಳೂರಿನ ಹೆಸರುಘಟ್ಟದ ವಿದ್ಯಾರ್ಥಿನಿ ಎಸ್.ಚಂದನ ಅವರ ವಿಶ್ವಾಸದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT