ಹೆಚ್ಚುತ್ತಿರುವ ಜ್ವರ; ಗ್ರಾಮಸ್ಥರ ಆತಂಕ

7

ಹೆಚ್ಚುತ್ತಿರುವ ಜ್ವರ; ಗ್ರಾಮಸ್ಥರ ಆತಂಕ

Published:
Updated:
ಹೆಚ್ಚುತ್ತಿರುವ ಜ್ವರ; ಗ್ರಾಮಸ್ಥರ ಆತಂಕ

ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳದಲ್ಲಿ ಶಂಕಿತ ಡೆಂಗಿ ಪ್ರಕರಣ ಕಾಣಿಸಿ ಕೊಂಡಿದ್ದು ಸುಮಾರು 50ಕ್ಕೂ ಹೆಚ್ಚು ಜನ ಜ್ವರ ಬಾಧೆಗೊಳಗಾಗಿದ್ದಾರೆ. ನಗರದಲ್ಲಿ ಸುಮಾರು 45 ಜನ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವರು ಸಮೀಪದ ಹೊಸಪೇಟೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳಿಂದಲೂ ಗ್ರಾಮದಲ್ಲಿ ಜ್ವರ, ಮೈಕೈ ನೋವಿನಂಥ ಸಮಸ್ಯೆ ಕಾಣಿಸಿಕೊಂಡಿದೆ. ಸೋಮವಾರ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ.

ಆರೋಗ್ಯ ಇಲಾಖೆ ಕಾರ್ಯಾಚರಣೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ರಾಮಕೃಷ್ಣ ನೇತೃತ್ವದ ತಂಡ ಪರಿಶೀಲನೆ ಕೈಗೊಂಡಿದೆ. ಸ್ಥಳದಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ. ಇದುವರೆಗೆ ಸುಮಾರು 35 ಜನರ ರಕ್ತದ ಮಾದರಿ ಸಂಗ್ರಹಿಸಿದ್ದೇವೆ ಎಂದು ಡಾ.ರಾಮಕೃಷ್ಣ ತಿಳಿಸಿದರು.

ಗ್ರಾಮದಲ್ಲಿ ಅಲ್ಲಲ್ಲಿ ನಿಂತ ನೀರಿನ ಮಾದರಿ ಸಂಗ್ರಹ ಮಾಡಲಾಗಿದೆ. ಲಾರ್ವಾ ಸಮೀಕ್ಷೆ ನಡೆದಿದೆ ಎಂದರು.

ಗ್ರಾಮದಲ್ಲಿ ಸುತ್ತಾಡಿದ ವೈದ್ಯರ ತಂಡ ತೆರೆದ ಚರಂಡಿಯಲ್ಲಿ ಸಂಗ್ರಹ ವಾದ ಕೊಚ್ಚೆ ತೆರವುಗೊಳಿಸಬೇಕು. ಸೊಳ್ಳೆ ಸಂಗ್ರಹವಾಗದಂತೆ ತಡೆಯಬೇಕು ತಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದೆ. ನಾಳೆಯೇ ಇಡೀ ಗ್ರಾಮದ ಸ್ವಚ್ಛತೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕೊರಮ್ಮನಿಗೆ ಮೊರೆ?: ಜ್ವರ ಸಾಂಕ್ರಾಮಿಕವಾಗಿರುವುದರಿಂದ ಆತಂಕಗೊಂಡ ಗ್ರಾಮಸ್ಥರು ಗ್ರಾಮದ ಕೊರಮ್ಮ ದೇವಿ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಕೊರಮ್ಮ ದೇವಿ ಮೂರ್ತಿಯ ಸೀರೆಗೆ ಊದಿನಕಡ್ಡಿಯ ಬೆಂಕಿ ತಗುಲಿತ್ತು. ಇದರಿಂದಾಗಿಯೇ ಗ್ರಾಮಕ್ಕೆ ಕೇಡುಂಟಾಗಿದೆ ಎಂದು ಭಾವಿಸಿದ ಗ್ರಾಮಸ್ಥರು ಪ್ರಾಯಶ್ಚಿತ್ತ ರೂಪವಾಗಿ ಇಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್‌ ನೋಟೀಸ್‌: ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಭೇಟಿಯಾದ ಜಿಲ್ಲಾ ಮಲೇರಿಯಾ ಅಧಿಕಾರಿಗಳು ಅಲ್ಲಿನ ಪರೀಕ್ಷಾ ವರದಿ ಸಂಗ್ರಹಿಸುತ್ತಿದ್ದಾರೆ. ಕೇವಲ ಜ್ವರ ಕಂಡುಬಂದಾಗ ಡೆಂಗಿ ಅಥವಾ thrombocytopenia ಎಂದು ವರದಿ ನೀಡಿರುವುದು ಗಮನಕ್ಕೆ ಬಂದಿದೆ.

ಈ ರೀತಿ ವರದಿ ನೀಡಿ ರೋಗಿಗಳಲ್ಲಿ ಆತಂಕ ಹುಟ್ಟಿಸುವುದು ಮತ್ತು ಅನಗತ್ಯ ದುಬಾರಿ ಪರೀಕ್ಷೆಗಳನ್ನು ಮಾಡಿಸುವುದು ಸಲ್ಲದು. ಅಂಥ ವರದಿ ನೀಡಿದ ಆಸ್ಪತ್ರೆಗಳ ವಿರುದ್ಧ ಶೋಕಾಸ್‌ ನೋಟಿಸ್‌ ಕೊಡುವುದಾಗಿ ಡಾ.ರಾಮಕೃಷ್ಣ ಹೇಳಿದರು.

ಅಂಕಿ–ಅಂಶ

50 ಜ್ವರ ಪೀಡಿತರ ಅಂದಾಜು ಸಂಖ್ಯೆ

35 ರಕ್ತದ ಮಾದರಿ ಸಂಗ್ರಹ

* *

ಇದುವರೆಗೆ ಕಂಡುಬಂದಿರುವುದು ಶಂಕಿತ ಪ್ರಕರಣ ಅಷ್ಟೆ. ಪರೀಕ್ಷಿಸದೆ ಹೇಳಲಾಗದು. ಸದ್ಯ ಜ್ವರ ಪೀಡಿತರ ಪರಿಸ್ಥಿತಿ ಸ್ಥಿರವಾಗಿದೆ

ಡಾ.ಎಚ್‌.ರಾಮಕೃಷ್ಣ

ಜಿಲ್ಲಾ ಆರೋಗ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry