ಬರದಲ್ಲಿ ಬೆಳೆ ಉಳಿಸಿದ ನೀರು ಸಂಗ್ರಹ

7

ಬರದಲ್ಲಿ ಬೆಳೆ ಉಳಿಸಿದ ನೀರು ಸಂಗ್ರಹ

Published:
Updated:
ಬರದಲ್ಲಿ ಬೆಳೆ ಉಳಿಸಿದ ನೀರು ಸಂಗ್ರಹ

ಕುಷ್ಟಗಿ: ತಾಲ್ಲೂಕಿನ ಕೆ.ಗೋನಾಳ ಗ್ರಾಮದ ರೈತ ಶ್ರೀಧರ ಬಳೂಟಗಿ ‘ಕೃಷಿಭಾಗ್ಯ’ ಯೋಜನೆಯಲ್ಲಿ ತಮ್ಮ ಜಮೀನಿನ ಪಕ್ಕದಲ್ಲಿ ಅಳವಡಿಸಿಕೊಂಡಿರುವ ಕೃಷಿಹೊಂಡ ಭರ್ತಿಯಾಗಿದೆ. ಬಿತ್ತಿದ ನಂತರ ಮಳೆಯೇ ಇಲ್ಲ. ಆದರೆ, ಹೊಂಡದ ನೀರು ಎರಡು ಎಕರೆ ಪ್ರದೇಶದಲ್ಲಿನ ಮುಂಗಾರು ಹಂಗಾಮಿನ ಹೆಸರು ಬೆಳೆಗೆ ಆಸರೆಯಾಗಿದೆ.

ಎರಡು ವಾರದ ಹಿಂದೆ ಟೆಂಗುಂಟಿ, ಬಸಾಪುರ, ಹೊಸೂರು, ಕೆ.ಗೋನಾಳ ಸುತ್ತಮುತ್ತ ಉತ್ತಮ ಮಳೆಯಾಗಿತ್ತು. ಬರದಿಂದ ಕಂಗೆಟ್ಟಿದ್ದ ರೈತರು ಮುಂಗಾರು ಹೆಸರು ಬಿತ್ತನೆ ಮಾಡಿದ್ದಾರೆ. ನಂತರ ಮಳೆಯಾಗದ ಕಾರಣ ನಾಟಿ  ಹಂತದಲ್ಲಿಯೇ ಬೆಳೆಗಳು ಕಮರಿಹೋಗಿವೆ.

ಆದರೆ, ಕೃಷಿಹೊಂಡದ  ನೀರನ್ನೇ ತುಂತುರು ನೀರಾವರಿ ಮೂಲಕ ಸಮರ್ಪಕವಾಗಿ ಬಳಸಿಕೊಂಡಿರುವುದರಿಂದ ಶ್ರೀಧರ ಅವರ ಮಳೆಯಾಶ್ರಿತ ಜಮೀನಿನಲ್ಲಿ ಹೆಸರು ಬೆಳೆ ಜೀವ ಹಿಡಿದುಕೊಂಡಿದೆ.  ಇನ್ನೂ ಒಂದು ಬಾರಿ ಬೆಳೆಗೆ ನೀರು ಕೊಡಲು ಸಾಧ್ಯವಿದೆ.

‘ಕೃಷಿಹೊಂಡ ನಿರ್ಮಿಸಿಕೊಂಡಿರುವ ನನಗೆ ಕೃಷಿ ಇಲಾಖೆ ಡೀಸೆಲ್‌ ಎಂಜಿನ್‌ ಪಂಪ್‌ಸೆಟ್‌ ಜೊತೆಗೆ ಸ್ಪಿಂಕ್ಲರ್‌ ಸಲಕರಣೆಗಳನ್ನು ನೀಡಿದೆ. ಇದರಿಂದ ಮಳೆ ನೀರನ್ನು ಸಂಗ್ರಹಿಸಿ ಜಮೀನಿಗೆ ತುಂತುರು ನೀರಾವರಿ ಮೂಲಕ ಉಣಿಸಲು ಸಾಧ್ಯವಾಗಿದೆ. ಎರಡು ವಾರದವರೆಗೂ ಮಳೆ ಬಾರದಿದ್ದರೂ ಬೆಳೆ ಜೀವ ಹಿಡಿಯಬಹುದು’ ಎಂದು ರೈತ ಶ್ರೀಧರ ಸಂತಸ ವ್ಯಕ್ತಪಡಿಸಿದರು.

‘ಒಂದು ವರ್ಷದಿಂದಲೂ ಮಳೆಯಾಗಿರಲಿಲ್ಲ. ಕೊಳವೆಬಾವಿಗಳನ್ನು ಕೊರೆದರೂ ಹನಿ ನೀರು ಬಾರದ ಉದಾಹರಣೆಗಳು ಇವೆ. ಇಂಥ ಪರಿಸ್ಥಿತಿಯಲ್ಲಿ ಬೆಳೆಗೆ ರೈತರು ಮಳೆ ನೀರು ಸಂಗ್ರಹಿಸಿಕೊಂಡು ಉಪಯೋಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ’ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಅಧಿಕಾರಿ ದೊಡ್ಡಪ್ಪ ಜ್ಯೋತಿ.

‘ಕೃಷಿ ಭಾಗ್ಯ ಯೋಜನೆಯಲ್ಲಿ 4–5 ಹಳ್ಳಿಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕೃಷಿಹೊಂಡಗಳನ್ನು ರೈತರು ನಿರ್ಮಿಸಿಕೊಂಡಿದ್ದಾರೆ. ಅರ್ಧಕ್ಕಿಂತಲೂ ಅಧಿಕ ಹೊಂಡಗಳು ಒಂದೇ ಮಳೆಗೆ ಭರ್ತಿಯಾಗಿವೆ. ತೇವಾಂಶ ಕೊರತೆಯಿಂದ ಬೆಳೆ ಸಂದಿಗ್ಧ ಹಂತ ತಲುಪಿದಾಗ ಕೃಷಿಹೊಂಡಗಳಲ್ಲಿ ಮಳೆ ನೀರು ಸಂಗ್ರಹಿಸಿರುವುದು ರೈತರಿಗೆ ಪ್ರೇರಣೆಯಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ ಕಮತರ ಹೇಳಿದರು.

* * 

ಕೃಷಿಹೊಂಡದ ನೀರು ಬಳಸಿದರೆ ಬೆಳೆಗೆ ಅನುಕೂಲ. ಬಿಟ್ಟರೆ ಅಂತರ್ಜಲ ಹೆಚ್ಚಳಕ್ಕೆ ಪೂರಕ. ಪಶು ಪಕ್ಷಿಗಳಿಗೂ ಆಸರೆ.

ವೀರಣ್ಣ ಕಮತರ

ಕೃಷಿ ಇಲಾಖೆ, ಸಹಾಯಕ ನಿರ್ದೇಶಕ


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry