ಕಾಲುವೆಗಳ ದುರಸ್ತಿಗೆ ಆಗ್ರಹಿಸಿ ಧರಣಿ

7

ಕಾಲುವೆಗಳ ದುರಸ್ತಿಗೆ ಆಗ್ರಹಿಸಿ ಧರಣಿ

Published:
Updated:
ಕಾಲುವೆಗಳ ದುರಸ್ತಿಗೆ ಆಗ್ರಹಿಸಿ ಧರಣಿ

ಭಾರತೀನಗರ: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲುವೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ನಿಗಮದ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗ  ಜಮಾಯಿಸಿದ ಪ್ರತಿಭಟನಾಕಾರರು,  ಇಲಾಖಾಧಿಕಾರಿ ಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚೆನ್ನಯ್ಯ ಪಿಕಪ್ ನಾಲೆಯು ಗಿಡ ಗಂಟೆಗಳಿಂದ ಹಾಗೂ ಹೂಳು ತುಂಬಿಕೊಂಡು ಮುಚ್ಚಿ ಹೋಗುವ ಹಂತಕ್ಕೆ ತಲುಪಿದೆ. ಇದರಿಂದಾಗಿ ಕಡೆಯ ಭಾಗದ ಜಮೀನುಗಳಿಗೆ ನೀರು ಇಲ್ಲದಂತಾಗಿದೆ. ನೀರಿಲ್ಲದೆ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿದ್ದು, ಅಪಾರ ನಷ್ಟವುಂಟಾಗಿದೆ ಎಂದು ದೂರಿದರು. ಸದ್ಯ ನೀರಿಲ್ಲದಿರುವುದರಿಂದ ವಿಶ್ವೇಶ್ವರಯ್ಯ ನಾಲೆ (ವಿಸಿ ನಾಲೆ) ರೈತರ ಸ್ಥಿತಿಯೂ ಇದೇ ಆಗಿದ್ದು, ಈ ನಾಲೆಯನ್ನೂ ತಕ್ಷಣ ಕಾಮಗಾರಿ ಹಮ್ಮಿಕೊಂಡು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿದರು.

ಕೆಲವೆಡೆ ನಾಲೆಗಳ ಲೈನಿಂಗ್ ಕಾಮಗಾರಿ ಹಮ್ಮಿಕೊಂಡಿದ್ದು, ಇದೂ ಕೂಡ ಕಳಪೆಯಿಂದ ಕೂಡಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕೆಂದು ಆಗ್ರಹಿಸಿದರು.

ವಾರದೊಳಗೆ ನಾಲೆಗಳನ್ನು ಸ್ವಚ್ಚಗೊಳಿಸಿ ಅಭಿವೃದ್ಧಿಗೊಳಿಸಬೇಕು. ಇಲ್ಲದಿದ್ದಲ್ಲಿ ಇನ್ನು ಉಗ್ರ ಚಳುವಳಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಚಾಂಷುಗರ್‌ಗೆ ಮುತ್ತಿಗೆ 

ರೈತರು ಕಬ್ಬು ಸರಬರಾಜು ಮಾಡಿದ ಹಳೇ ಬಾಕಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಚಾಂಷುಗರ್‌ ಕಾರ್ಖಾನೆಗೆ ಮುತ್ತಿಗೆ ಹಾಕಿದರು.

ಕಬ್ಬು ಸರಬರಾಜು ಮಾಡಿ ಆರೇಳು ತಿಂಗಳು ಕಳೆದರೂ ಇನ್ನೂ ಕಬ್ಬಿನ ಹಣ ಪಾವತಿಸಿಲ್ಲ. ವರ್ಷಗಳೇ ಕಳೆದರೂ ಬಾಕಿ ಹಣ 200 ರೂಪಾಯಿಗಳನ್ನು ರೈತರಿಗೆ ಬಟವಾಡೆ ಮಾಡುವಲ್ಲಿ ಕಾರ್ಖಾನೆ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದರು.

ಕೂಡಲೇ ರೈತರಿಗೆ ಹಣ ನೀಡುವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಇಲ್ಲೇ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಬ್ರಿಟ್ಟೋ ಅವರು, ರೈತರಿಗೆ ಕಬ್ಬು ಸರಬರಾಜು ಬಾಬ್ತು ₹ 12 ಕೋಟಿ, ಹಳೇ ಬಾಕಿ 200ರ ಪೈಕಿ 6 ಕೋಟಿ ಹಣವನ್ನು ನೀಡಬೇಕಿದ್ದು, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು 25 ಲಕ್ಷ ಹಣವನ್ನು ಕಳುಹಿಸಿದ್ದರು. ಇದನ್ನು ರೈತರಿಗೆ ಬಟವಾಡೆ ಮಾಡಲಾಗಿದೆ ಎಂದು ತಿಳಿಸಿದರು.

ಒಂದು ತಿಂಗಳೊಳಗಾಗಿ ರೈತರಿಗೆ ಎಲ್ಲ ಹಣವನ್ನು ಬಟವಾಡೆ ಮಾಡಲು ಮಾಲೀಕರು ತಿಳಿಸಿದ್ದು, ಅವರ ಆದೇಶದಂತೆ ಎಲ್ಲ ರೈತರಿಗೂ ಹಣ ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಭಾರತೀನಗರ ಘಟಕ  ಅಧ್ಯಕ್ಷ ಕೆ.ಪಿ. ದೊಡ್ಡಿ ಪುಟ್ಟಸ್ವಾಮಿ, ಅಣ್ಣೂರು ಶಿವಲಿಂಗೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry