ನೂರು ಅಡಿ ರಸ್ತೆಯಲ್ಲಿ ಗುಂಡಿಗಳ ಕಾರುಬಾರು!

7

ನೂರು ಅಡಿ ರಸ್ತೆಯಲ್ಲಿ ಗುಂಡಿಗಳ ಕಾರುಬಾರು!

Published:
Updated:
ನೂರು ಅಡಿ ರಸ್ತೆಯಲ್ಲಿ ಗುಂಡಿಗಳ ಕಾರುಬಾರು!

ಮಂಡ್ಯ: ನಗರದ ಸೌಂದರ್ಯಕ್ಕೆ ಆಭರಣದಂತಿರುವ ನೂರು ಅಡಿ ರಸ್ತೆಯಲ್ಲಿ ನೂರಾರು ಗುಂಡಿಗಳಿದ್ದು, ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಆದರೂ, ಇದು ನಗರಸಭೆ ಗಮನಕ್ಕೆ ಬಾರದಿರುವುದು ದುರದೃಷ್ಟಕರ.

ಗೌಸಿಯಾ ಪ್ರೌಢಶಾಲೆಯಿಂದ ರಸ್ತೆಯ ಕೊನೆ ಟಿವಿಎಸ್‌ ಶೋರೂಂವರೆಗೆ ಒಂದೂವರೆ ಕಿ.ಮೀ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ. ವಿನಾಯಕ ಆಟೊ ನಿಲ್ದಾಣದಲ್ಲಂತೂ ರಸ್ತೆ ಮಧ್ಯೆ ಒಂದು ಅಡಿ ಆಳದ ಹಳ್ಳವೇ ನಿರ್ಮಾಣವಾಗಿದೆ. ಬೈಕ್‌ ಸವಾರರು ಹಳ್ಳವನ್ನು ತಪ್ಪಿಸಿ ರಸ್ತೆ ಬದಿಯಲ್ಲಿ ಚಾಲನೆ ಮಾಡುತ್ತಿದ್ದಾರೆ. ಕಾರ್‌ಗಳು ಮೆಲ್ಲಗೆ ಹಳ್ಳದೊಳಗೆ ಇಳಿದು ಹತ್ತುತ್ತಿವೆ. ಬಸ್‌ಗಳು ಹಳ್ಳ ಇಳಿದು ಹತ್ತುವಷ್ಟರಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿಡಿದು ಕೂರುವಂತಾಗಿದೆ. ಆ ಭಾಗ ಇಳಿಜಾರಾಗಿರುವ ಕಾರಣ ವೇಗವಾಗಿ ಬರುವ ವಾಹನಗಳಿಗೆ ಈ ಹಳ್ಳ ಅಪಾಯ ಸೃಷ್ಟಿಸಿದೆ.

‘15 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಇಲ್ಲಿ ಇಷ್ಟು ದೊಡ್ಡ ಹಳ್ಳ ನಿರ್ಮಾಣವಾಗಿದೆ. ರಸ್ತೆ ರಿಪೇರಿ ಮಾಡಲು ನಗರಸಭೆ ಸಿಬ್ಬಂದಿಗೆ ಇಷ್ಟು ದಿನ ಬೇಕಾಗಿರಲಿಲ್ಲ. ಆದರೆ, ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿ ನಾಲ್ಕೈದು ಬೈಕ್‌್ ಸವಾರರು ಬಿದ್ದು ಗಾಯಗೊಂಡಿದ್ದಾರೆ’ ಎಂದು ರಸ್ತೆ ಬದಿಯಲ್ಲಿರುವ ಬೇಕರಿಯ ಮಾಲೀಕ ಶಂಕರಪ್ಪ ಹೇಳಿದರು.

ನೂರು ಅಡಿ ರಸ್ತೆಯಲ್ಲಿ ಇದೊಂದೇ ಗುಂಡಿ ಇಲ್ಲ. ಇಂತಹ ನೂರಾರು ಗುಂಡಿಗಳು ರಸ್ತೆಯನ್ನು ಕಾಡುತ್ತಿವೆ. ಗ್ರಾಮಾಂತರ ಪೊಲೀಸ್‌ ಠಾಣೆಯಿಂದ ಮುಂದಕ್ಕೆ ರಸ್ತೆ ಚೆನ್ನಾಗಿದೆ. ಆದರೆ, ನಗರದ ಮುಖ್ಯ ಭಾಗದಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ತಲೆನೋವಾಗಿದೆ.

ರಸ್ತೆ ಬದಿಯ ಬಿಸಿಲು ಮಾರಮ್ಮ ದೇವಾಲಯದ ಮುಂದೆ ಡಾಂಬರು ಕಿತ್ತು ಹೋಗಿದ್ದು ಒಂದೇ ಕಡೆ ನಾಲ್ಕೈದು ಗುಂಡಿಗಳಿವೆ. ವಾಹನಗಳು ಹಾದು ಹೋದರೆ ಸಾಕು, ರಸ್ತೆ ತುಂಬೆಲ್ಲ ದೂಳು ಏಳುತ್ತದೆ.

ಅರಳಿ ಮರದ ಸಾಲು: ದ್ವಿಪಥವಾಗಿರುವ ನೂರು ಅಡಿ ರಸ್ತೆಯ ಮಧ್ಯೆ ವಿಭಜಕ ಇದೆ. ಈ ವಿಭಜಕಕ್ಕೆ ಹೊಂದಿಕೊಂಡಂತೆ ಮರಗಳ ಸಾಲು ಇದೆ. ಇಲ್ಲಿ ಅರಳಿ ಮರ ಹೆಚ್ಚಾಗಿರುವುದು ವಿಶೇಷವಾಗಿದೆ. ವಿಜಯ ಬ್ಯಾಂಕ್‌ ಮುಂಭಾಗದಲ್ಲಿ ಏಳೆಂಟು ಅರಳಿ ಮರಗಳಿವೆ. ಆ ಭಾಗದಲ್ಲಿ ರಸ್ತೆ ಹೆಚ್ಚಾಗಿ ಕಿತ್ತು ಹೋಗಿದೆ. ಸಣ್ಣ ಮಳೆ ಬಂದರೂ ರಸ್ತೆಯ ಮೇಲೆ ನೀರು ಹನಿಯಾಗುವ ಕಾರಣ ಕಿತ್ತು ಹೋಗಿರುವ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಆಗಿದೆ.

‘ಇಲ್ಲಿ ರಸ್ತೆ ಕಿತ್ತು ಹೋಗಿ ಆರು ತಿಂಗಳುಗಳೇ ಆಗಿದೆ. ಆದರೆ ಯಾರೂ ರಿಪೇರಿ ಮಾಡಿಲ್ಲ. ಮಳೆ ಬಂದಾಗ ವೇಗವಾಗಿ ಬರುವ ವಾಹನಗಳು ರಸ್ತೆ ಬದಿ ಅಂಗಡಿಗಳಿಗೆ ನೀರು ಹಾರಿಸಿಕೊಂಡು ಹೋಗುತ್ತವೆ’ ಎಂದು ರಸ್ತೆಬದಿಯಲ್ಲಿ ಗ್ಯಾರೇಜ್‌ ನಡೆಸುವ ಸಾದಿಕ್‌ ಪಾಷಾ ಹೇಳಿದರು.

ಆಸ್ಪತ್ರೆ ಸಾಲು ನೂರು ಅಡಿ ರಸ್ತೆಯ ತುದಿಯಲ್ಲಿ ಸೇವಾ ನರ್ಸಿಂಗ್‌ ಹೋಮ್‌, ಶ್ರೀನಿಧಿ ಆಸ್ಪತ್ರೆ ಸೇರಿ ಹಲವು ಕ್ಲಿನಿಕ್‌ಗಳಿವೆ. ಇದು ಜಿಲ್ಲಾಸ್ಪತ್ರೆಗೆ ಸಮೀಪ ಇರುವ ಕಾರಣ ಇಲ್ಲಿ ನಿತ್ಯ ಆಂಬುಲೆನ್ಸ್‌ಗಳು ಓಡಾಡುತ್ತವೆ. ಈ ಗುಂಡಿಗಳನ್ನು ತಪ್ಪಿಸಿ ಆಸ್ಪತ್ರೆ ಸೇರುವಷ್ಟರಲ್ಲಿ ಚಾಲಕರು ಹೈರಾಣಾಗುತ್ತಿದ್ದಾರೆ.

‘ನೂರು ಅಡಿ ರಸ್ತೆ ಸುಧಾರಣೆಗೆ ₹ 1 ಕೋಟಿ ಪ್ರಸ್ತಾವ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹಣ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಇನ್ನೆರಡು ತಿಂಗಳೊಳಗೆ ಎಲ್ಲ ನಿಯಮಾವಳಿ ಪೂರೈಸಿ ಕಾಮಗಾರಿ ಆರಂಭಿಸಲಾಗುವುದು’ ಎಂದು ನಗರಸಭೆ ಸದಸ್ಯ ಅರುಣ್‌ಕುಮಾರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry