ಮಾಲಿನ್ಯ ತಡೆಗೆ ಬದಲಿ ಇಂಧನ ಅವಶ್ಯ

7

ಮಾಲಿನ್ಯ ತಡೆಗೆ ಬದಲಿ ಇಂಧನ ಅವಶ್ಯ

Published:
Updated:
ಮಾಲಿನ್ಯ ತಡೆಗೆ ಬದಲಿ ಇಂಧನ ಅವಶ್ಯ

ಮಂಡ್ಯ: ‘ಪೆಟ್ರೋಲ್‌, ಡೀಸೆಲ್‌ ಅಧಿಕ ಬಳಕೆಯಿಂದಾಗಿ ವಾಯು ಮಾಲಿನ್ಯ ಮಿತಿಮೀರಿದೆ. ಶುದ್ಧ ಗಾಳಿ ಗಾಗಿ ಬದಲಿ ಇಂಧನ ಮೂಲಗಳ ಸಂಶೋಧನೆ ಹೆಚ್ಚಾಗಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಹೇಳಿದರು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರದ ವತಿಯಿಂದ ಮಂಗಳವಾರ ಪಿಇಎಸ್‌ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಾಲಿನ್ಯಕಾರಕವಾಗಿರುವ ಇಂಧನ ಗಳ ಬಳಕೆಗೆ ಬದಲಾಗಿ ಜೈವಿಕ ಇಂಧನ ಬಳಸುವುದರಿಂದ ವಾಯುಮಾಲಿನ್ಯ ತಡೆಯಬಹುದು. ಮನುಷ್ಯ ಪ್ರಕೃತಿ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಕಾಡುಪ್ರಾಣಿಗಳ ಜೀವನಚಕ್ರಕ್ಕೆ ತೊಂದರೆ ಕೊಟ್ಟರೆ ಪ್ರಾಣಿಗಳು ಮನುಷ್ಯನ ಜೀವನಕ್ಕೆ ತೊಂದರೆ ಕೊಡುತ್ತವೆ. ಹೀಗಾಗಿ ಪ್ರಾಣಿಗಳು ಈಚೆಗೆ ಕಾಡು ಬಿಟ್ಟು ನಾಡಿನತ್ತ ಬರುತ್ತಿವೆ. ಮನುಷ್ಯ ಹಾಗೂ ಪ್ರಾಣಿಗಳ ಸಮರ ತಡೆಯಲು ಪರಿಸರ ಸಂರಕ್ಷಣೆ ಮಾಡಬೇಕು’ ಎಂದು ಹೇಳಿದರು.

ಇಸ್ರೊ ವಿಜ್ಞಾನಿ ಪ್ರೊ.ವಿ.ಜಗನ್ನಾಥ್‌ ಮಾತನಾಡಿ ‘ನಿಸರ್ಗದೊಂದಿಗೆ ಜನರ ಸಂಬಂಧ ತತ್ವದ ಮೇಲೆ ಈ ಬಾರಿಯ ಪರಿಸರ ದಿನಾಚರಣೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಪರಿಸರದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು. ಉತ್ತಮ ಪರಿಸರಕ್ಕಾಗಿ ಎಲ್ಲರೂ ಸಂಘಟಿತ ರಾಗಬೇಕು. ಎಲ್ಲ ದೇಶಗಳು ಪರಿಸರಕ್ಕಾಗಿ ಒಂದಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್‌.ಡಿ.ಚೌಡಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪರಿಸರ ಅಧಿಕಾರಿ ಎಂ.ಜಿ.ಯತೀಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಧನಂಜಯ, ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಲ್‌. ಪ್ರಸನ್ನಕುಮಾರ್‌ ಹಾಜರಿದ್ದರು.

ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಮಂಡ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಹಿತ್ಯ ಲಯನ್ಸ್‌ ಕ್ಲಬ್‌ ವತಿಯಿಂದ ಲಕ್ಷ್ಮಿಜನಾರ್ಧನ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಅಧ್ಯಕ್ಷ ಚಿಕ್ಕಸ್ವಾಮಿ ‘ಮನುಷ್ಯನ ದುರಾಸೆಯಿಂದಾಗಿ ಪರಿಸರ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಉತ್ತಮ ಪರಿಸರಕ್ಕಾಗಿ ಭೂಮಿತಾಯಿಯನ್ನು ಕಾಪಾಡಬೇಕಾಗಿದೆ. ನೂರಾರು ನದಿ ಹರಿಯುವ ನಮ್ಮ ದೇಶ ಯೋಗ ರಾಷ್ಟ್ರವಾಗಿದೆ. ಇಂತಹ ದೇಶದಲ್ಲಿ ಮಳೆ ಇಲ್ಲದೆ ಬರ ಬಂದಿರುವುದು ದುರದೃಷ್ಟಕ’ ಎಂದು ಹೇಳಿದರು.

‘ಓಝೋನ್‌ ಪದರ ನಾಶ ಹೊಂದುತ್ತಿರುವುದರಿಂದ ಮನುಷ್ಯ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಿಂದ ತಾಪಮಾನ ಹೆಚ್ಚುತ್ತಿದ್ದು ಭೂಮಿ ಬೆಂಕಿಯ ಉಂಡೆಯಾಗುತ್ತಿದೆ. ನಮ್ಮ ದೇಶದಲ್ಲಿ ತ್ಯಾಜ್ಯವನ್ನು ಕೊಳೆಸುತ್ತಿರು ವುದರಿಂದ ಮಿಥೇನ್‌ ಅನಿಲ ಉತ್ಪತ್ತಿ ಯಾಗುತ್ತಿದೆ. ಈ ಅನಿಲವನ್ನು ಇಂಧನ ಮೂಲವಾಗಿ ಬಳಸಿಕೊಂಡರೆ ದೇಶದಲ್ಲಿ ವಿದ್ಯುತ್‌ ಕಾಣಬಹುದು. ಆದರೆ ಮೀಥೇನ್‌ ಅನಿಲದಿಂದಾಗಿ ದೇಶದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ’ ಎಂದರು.

ಲಯನ್ಸ್‌ ಸಂಸ್ಥೆಯ ಉಪ ರಾಜ್ಯಪಾಲ ವಿ.ನಾಗರಾಜ್‌ ಮಾತನಾಡಿ ‘ಲಯನ್ಸ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳಿದ್ದು ಮಕ್ಕಳು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಡ ಕಾರ್ಮಿಕರಿಗೆ ಛತ್ರಿ ವಿತರಣೆ ಮಾಡಲಾಯಿತು. ಸಾಹಿತ್ಯ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ, ಲಕ್ಷ್ಮಿ ಜನಾರ್ಧನ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಬಿ.ಎಂ.ಅಪ್ಪಾಜಪ್ಪ, ಜಿ.ಎ.ರಮೇಶ್‌, ಎಚ್‌.ಎಲ್‌.ವಿಶಾಲ್‌ರಘು, ಆನಂದ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry