ಅವ್ಯವಹಾರ: ಡಿಡಿಪಿಐ ಅಮಾನತಿಗೆ ಆಗ್ರಹ

7

ಅವ್ಯವಹಾರ: ಡಿಡಿಪಿಐ ಅಮಾನತಿಗೆ ಆಗ್ರಹ

Published:
Updated:
ಅವ್ಯವಹಾರ: ಡಿಡಿಪಿಐ ಅಮಾನತಿಗೆ ಆಗ್ರಹ

ಯಾದಗಿರಿ: ‘ರೀ ಅಧ್ಯಕ್ಷರೇ, ನಾವು ಚುನಾಯಿತರಾದ ಮೇಲೆ ಐದು ಸಾಮಾನ್ಯ ಸಭೆಗಳು ನಡೆದಿವೆ. ಅಷ್ಟೂ ಸಭೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಆಗಿರುವ ಭ್ರಷ್ಟಾಚಾರ ಕುರಿತು ತನಿಖೆಗೆ ಒತ್ತಾಯಿಸಿದ್ದೇವು. ಅಧಿಕಾರಿಯ ವಿರುದ್ಧ ಏನು ಕ್ರಮ ಜರುಗಿಸಲಾಗಿದೆ ದಾಖಲೆ ಸಹಿತ ನೀಡಿ. ಇಂತಹ ಅಧಿಕಾರಿ ನಮ್ಮ ಜಿಲ್ಲೆಗೆ ಬೇಡವೇ ಬೇಡ.

ಶೈಕ್ಷಣಿಕವಾಗಿ ಜಿಲ್ಲೆ ಈಗ ಕಣ್ಣುಬಿಡುತ್ತಿದೆ. ಇಂಥವರನ್ನು ಶಿಕ್ಷಣ ಇಲಾಖೆಯಲ್ಲಿ ಮುಂದುವರಿಸಿದರೆ ಇಡೀ ಇಲಾಖೆಯನ್ನೇ ಸರ್ವನಾಶ ಮಾಡಿಬಿಡುತ್ತಾರೆ. ಹೇಳುವುದಕ್ಕೆ ಒಂದಲ್ಲ, ಎರಡಲ್ಲ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಡಿಡಿಪಿಐ ಮತ್ತು ಅಧೀನ ಅಧಿಕಾರಿಗಳು ಭಾಗಿಗಳಾಗಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಶೋಚನೀಯ ಸ್ಥಿತಿ ತಲುಪಿವೆ’ ಎಂದು ಪಕ್ಷಭೇದ ಮರೆತು 22 ಮಂದಿ ಜಿಲ್ಲಾ ಪಂಚಾಯಿತಿ ಸದಸ್ಯರು ಡಿಡಿಪಿಐ ಅವರ ಅಮಾನತಿಗೆ ಆಗ್ರಹಿಸಿದರು. ನಂತರ ಅಧ್ಯಕ್ಷರ ವೇದಿಕೆ ಮುಂದೆ ಕುಳಿತು ಧರಣಿ ಆರಂಭಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ, ‘ಪ್ರಸಕ್ತ ವರ್ಷದ ಆಯವ್ಯಯ ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕಿದೆ’ ಎಂದು ವಿವರಣೆ ನೀಡುತ್ತಿದ್ದಂತೆ ಸದಸ್ಯರು, ‘ಶಿಕ್ಷಣ, ಅರಣ್ಯ ಹಾಗೂ ಕೃಷಿ ಇಲಾಖೆಯಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಹಿಂದಿನ ವರ್ಷದ ಕ್ರಿಯಾಯೋಜನೆಯ ಕಾಮಗಾರಿಗಳ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಭೀಮರೆಡ್ಡಿಗೌಡ ಮಾತನಾಡಿ, ‘ಹತ್ತಿಕುಣಿಯಲ್ಲಿನ ಶಾರದಾ ಶಾಲೆಯ ಮಾನ್ಯತೆಯನ್ನು ಡಿಡಿಪಿಐ ರದ್ದುಗೊಳಿಸಿ ಆದೇಶಿಸಿದ್ದಾರೆ. ಮಾನ್ಯತೆ ಕುರಿತಂತೆ ನ್ಯಾಯಾಲಯದಲ್ಲಿ ವಿಚಾರಣೆ ಇರುವಾಗಲೇ ಅಧಿಕಾರಿ ರದ್ದು ಆದೇಶ ನೀಡಿರುವುದು ಕಾನೂನು ಬಾಹಿರ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೇಂಚೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದ್ಕಕೆ ದನಿಗೂಡಿಸಿದ ಸದಸ್ಯ ಬಸವರಾಜ ಪಾಟೀಲ ಯಡಿಯೂರ, ‘ಕಳೆದ ವರ್ಷದಲ್ಲಿ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಓದುವ ಮಕ್ಕಳಿಗೆ ವಿತರಣೆ ಮಾಡಿರುವ ಸಮವಸ್ತ್ರ ಸಂಪೂರ್ಣ ಕಳಪೆಮಟ್ಟದಾಗಿತ್ತು. ಶೂ ವಿತರಣೆಯಲ್ಲೂ ಭಾರೀ ಅವ್ಯವಹಾರ ನಡೆದಿದೆ. ಒಬ್ಬ ವಿದ್ಯಾರ್ಥಿಗೆ ಶೂ ವಿತರಣೆಗೆ ಸರ್ಕಾರ ₹253 ನೀಡಿದೆ. ಆದರೆ, ಕೇವಲ ₹50ನಲ್ಲಿ ವಿದ್ಯಾರ್ಥಿಗಳಿಗೆ ಶೂ ವಿತರಣೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಯಥೇಚ್ಛವಾಗಿದೆ. ಹಾಗಿದ್ದರೂ 102 ಮಂದಿ ಶಿಕ್ಷಕರನ್ನು ವರ್ಗಾವಣೆ ಆಧಾರದ ಮೇಲೆ ಜಿಲ್ಲೆಯಿಂದ ಹೊರಕ್ಕೆ ಕಳುಹಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 35 ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡಿದ್ದಾರೆ.

ಒಂದು ಕಟ್ಟಡವೂ ಇಲ್ಲದ ಬಿದಿರು ಗುಡಿಸಲಿನಲ್ಲಿ ಶಾಲೆ ಆರಂಭಿಸಿರುವವರಿಗೆ ಮಾನ್ಯತೆ ನೀಡಿದ್ದಾರೆ. ಡಿಡಿಪಿಐ ಲಂಚಾವತಾರಕ್ಕೆ ಇಳಿದಿದ್ದಾರೆ. ಅತಿಥಿ ಶಿಕ್ಷಕರ ನೇಮಕದಲ್ಲೂ ಕೂಡ ವಂಚನೆ ನಡೆದಿದೆ’ ಎಂದು ಪ್ರತಿಭಟನಾಕಾರರು ದೂರಿದರು. ಇಡೀ ಜಿಲ್ಲಾ ಪಂಚಾಯ್ತಿ ಸದಸ್ಯರು ಆರೋಪ ಮಾಡಿದರೂ, ಡಿಡಿಪಿಐ ಕೆಂಚೇಗೌಡ ಅವರು ವಿಚಲಿತರಾಗದೇ ಅಧಿಕಾರಿಗಳಿಗೆ ‘ಯಾವುದೇ ಭ್ರಷ್ಟಾಚಾರ ಆಗಿಲ್ಲ’ ಎಂದು ಉತ್ತರಿಸಿದರು.

‘ಅಮಾನತು ಮಾಡುವ ಅಧಿಕಾರ ಇಲ್ಲ’

‘ಡಿಡಿಪಿಐ ಅವರ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸಬೇಕು. ಅಧಿಕಾರಿಯನ್ನು ಅಮಾನತುಪಡಿಸಬೇಕು’ ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರೂ ಜಿಲ್ಲಾ ಪಂಚಾಯಿತಿ ಸಿಇಒ ಅವಿನಾಶ್ ಮೆನನ್‌, ‘ಅವರನ್ನು ಅಮಾನತು ಮಾಡುವ ಅಧಿಕಾರ ನನಗಿಲ್ಲ. ನೀವು ಅವ್ಯವಹಾರ ಕುರಿತಂತೆ ದಾಖಲೆಗಳ ಸಹಿತ ದೂರು ನೀಡಿದರೆ ನಾನು ಸರ್ಕಾರಕ್ಕೆ ತನಿಖೆಗೆ ಪತ್ರ ಬರೆಯುತ್ತೇನೆ’ ಎಂದು ಸದಸ್ಯರಿಗೆ ಪ್ರತಿಕ್ರಿಯಿಸಿದರು.

‘ಹಾಗಿದ್ದರೆ. ಜಿಲ್ಲಾ ಪಂಚಾಯಿತಿಗೆ ಏನೂ ಪವರ್ ಇಲ್ವಾ. ನಾವಿದ್ದೇನು ಪ್ರಯೋಜನ. ಜಿಲ್ಲಾ ಪಂಚಾಯಿತಿ ಏಕೆ? ಒಬ್ಬ ಅಧಿಕಾರಿಯ ಕರ್ತವ್ಯ ಲೋಪ ಸರಿಪಡಿಸಲು ನಿಮಗೆ ಅಧಿಕಾರ ಇಲ್ಲ ಅಂದಮೇಲೆ ಈ ಸಾಮಾನ್ಯ ಸಭೆ ಏಕೆ ನಡೆಸಬೇಕು. ನಾವು ಚುನಾಯಿತರಾಗುವುದೇಕೆ?’ ಎಂದು ಸದಸ್ಯರು ಸಿಇಒ ಅವರನ್ನು ಖಾರವಾಗಿ ಪ್ರಶ್ನಿಸಿದರು.

ನಂತರ ಎಲ್ಲಾ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರ ನಡೆದರು. ಡಿಡಿಪಿಐ ವಿರುದ್ಧ ಧಿಕ್ಕಾರ ಕೂಗಿದರು.

ಸಿಗದ ಅನುಮೋದನೆ

ಮೇ 3ರಂದು ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ಸಿಕ್ಕಿರಲಿಲ್ಲ. ಈ ಸಲವೂ ಕ್ರಿಯಾಯೋಜನೆಗೆ ಅನುಮೋದನೆ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry