ಮಾದರಿ ಪುನರ್ವಸತಿ ಕೇಂದ್ರ:ಭರವಸೆ

7

ಮಾದರಿ ಪುನರ್ವಸತಿ ಕೇಂದ್ರ:ಭರವಸೆ

Published:
Updated:
ಮಾದರಿ ಪುನರ್ವಸತಿ ಕೇಂದ್ರ:ಭರವಸೆ

ಕುಶಾಲನಗರ: ಬಸವನಹಳ್ಳಿ ಮತ್ತು ಬ್ಯಾಡಗೂಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ವರ್ಷದೊಳಗೆ ಮೂಲ ಸೌಲಭ್ಯದೊಂದಿಗೆ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿ ಪುನರ್ವಸತಿ ಕೇಂದ್ರ ರೂಪಿಸಲಾಗು ವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಹೇಳಿದರು.

ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಗಿರಿಜನ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸಭೆ ನಡೆಸಿದ ಮಣಿವಣ್ಣನ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಬಸವನಹಳ್ಳಿ ಮತ್ತು ಬ್ಯಾಟಗೂಟ್ಟ ದಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ತಾತ್ಕಾಲಿಕ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಅಧಿಕಾರಿಗಳು ಸರಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದು ನಿರ್ಮಿತಿ ಕೇಂದ್ರ ಹಾಗೂ ಭೂ ಸೇನಾ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಾಲ್ಕು ಮನೆಗಳಿಗೆ ಒಂದು ಶೌಚಾಲಯದಂತೆ ಬಡಾವಣೆಯ ಮೂರು ಕಡೆ ಸಮುದಾಯ ಶೌಚಾಲಯ ನಿರ್ಮಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಸೆಪ್‌್ಟಿಕ್ ಟ್ಯಾಂಕ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ವ್ಯವಸ್ಥೆಗಾಗಿ ಉತ್ತಮ ಗುಣಮಟ್ಟದ ಎರಡು ಓವರ್ ಹೆಡ್ ಟ್ಯಾಂಕ್‌ಗಳನ್ನು  ತಿಂಗಳೊಳಗೆ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಜಿ.ಪಂ.ಎಂಜಿನಿಯರ್‌ಗೆ ಸೂಚಿಸಿದರು.

‘ನಮ್ಮ ಕುಟುಂಬಗಳಿಗೆ ನೀಡುತ್ತಿದ್ದ ಆಹಾರ ಪದಾರ್ಥಗಳನ್ನು ನಿಲ್ಲಿಸಿದ್ದಾರೆ. ಕೂಲಿ ಇಲ್ಲದೆ ಜೀವನ ನಿರ್ವಹಣೆಗೆ ತುಂಬ ತೊಂದರೆ ಆಗಿದೆ’ ಎಂದು ಗಿರಿಜನ ಮುಖಂಡ ಸ್ವಾಮಿ ಅಳಲು ತೊಡಿಕೊಂಡರು.

ಇದಕ್ಕೆ ಸ್ಪಂದಿಸಿದ ಮಣಿವಣ್ಣನ್‌, ಗಿರಿಜನರಿಗೆ ಆಹಾರ ಸಾಮಾಗ್ರಿಗಳನ್ನು  3 ತಿಂಗಳವರೆಗೆ ಉಚಿತವಾಗಿ ವಿತರಿಸಿ ಎಂದು  ಐಟಿಡಿಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಶೌಚಾಲಯ ನಿರ್ಮಾಣ, ಮನೆಗಳ ನಿರ್ಮಾಣ, ಅಂಗನವಾಡಿ ಕೇಂದ್ರ, ಶೆಡ್ ನಿರ್ಮಾಣ ಸೇರಿದಂತೆ ಒಂದೊಂದು ಕಾಮಗಾರಿ ನಿರ್ವಹಣೆಯ ಜವಾಬ್ದಾರಿಯನ್ನು ಒಂದೊಂದು ಇಲಾಖೆಯ ಅಧಿಕಾರಿ ಗಳಿಗೆ ವಹಿಸಿ, ನಿಗದಿತ ದಿನಾಂಕದೊಳಗೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.

ನಿಗದಿತ ಸಮಯದಲ್ಲಿ ಕಾಮಗಾರಿ ಗಳು ಪೂರ್ಣಗೊಳ್ಳದೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಸವನಹಳ್ಳಿಯಲ್ಲಿ 181 ಹಾಗೂ ಬ್ಯಾಡಗೂಟ್ಟದಲ್ಲಿ 287 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಲಾಟರಿ ಮೂಲಕ  ಹಂಚಿಕೆ ಮಾಡಲಾಗುವುದು. ಅದೇ ಪ್ರಕಾರವಾಗಿ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಣಿವಣ್ಣನ್ ಗಿರಿಜನ ಮುಖಂಡರಿಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ಡಿಸೋಜ ಮಾತನಾಡಿ, ಗಿರಿಜನ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದು ನಮ್ಮ  ಜವಾಬ್ದಾರಿಯಾಗಿದೆ. ಈಗಾಗಲೇ ನಿವೇಶನ ಗುರುತಿಸಿ ತಾತ್ಕಾಲಿಕ ವಸತಿ, ನೀರು, ವಿದ್ಯುತ್ ಹಾಗೂ ಶೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಲ್ಲಿ ಬೆಳಕಿನ ವ್ಯವಸ್ಥೆ , ಶೌಚಾಲಯ ಹಾಗೂ ಶೆಡ್ ನಿರ್ಮಾಣ ದಲ್ಲಿ ಕೆಲವು ನೂನ್ಯತೆಗಳಿದ್ದು, ಅವುಗ ಳನ್ನು ಸರಿಪಡಿಸಲಾಗುವುದು ಎಂದರು.

ಗಿರಿಜನ ನಿರಾಶ್ರಿತರಿಗೆ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸುವ ಮೂಲಕ ವಿಶ್ವದಲ್ಲಿಯೇ ಮಾದರಿಯಾದ ಪುನರ್ವಸತಿ ಕೇಂದ್ರವನ್ನಾಗಿ ರೂಪಿಸಲು ಶ್ರಮಿಸುವುದಾಗಿ ಹೇಳಿದರು.

ಮಡಿಕೇರಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್,  ಜಿಲ್ಲಾ ಪಂಚಾಯಿತಿ    ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ರೇವಣ್ಣಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಪೆದ್ದಪಯ್ಯ,  ನಿರ್ಮಿತಿ ಕೇಂದ್ರದ ಸಹಾ ಯಕ ಎಂಜಿನಿಯರ್ ಸಚಿನ್, ಭೂಸೇನಾ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಾಂಡುರಂಗ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಸಹಾಯಕ ನಿರ್ದೇಶಕ ರಾಮೇಗೌಡ,  ಎಸಿಎಫ್ ಚಿಣ್ಣಪ್ಪ, ಆರ್ ಎಫ್ಒ ನೆಹರೂ, ವೈದ್ಯಾ ಧಿಕಾರಿ ಡಾ.ಚೇತನ್, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವ ಕುಮಾರ್, ಬಿಇಒ ಮಲ್ಲೇಸ್ವಾಮಿ, ಕಂದಾಯ ಅಧಿಕಾರಿ ನಂದಕುಮಾರ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry