‘ಬಾಲ್ಯದಿಂದಲೇ ಪರಿಸರ ಕಾಳಜಿ ಮೂಡಿಸಿ’

7

‘ಬಾಲ್ಯದಿಂದಲೇ ಪರಿಸರ ಕಾಳಜಿ ಮೂಡಿಸಿ’

Published:
Updated:
‘ಬಾಲ್ಯದಿಂದಲೇ ಪರಿಸರ ಕಾಳಜಿ ಮೂಡಿಸಿ’

ನಾಪೋಕ್ಲು: ಸಮೀಪದ ಮೂರ್ನಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಶಾಲಾ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಪ್ರಭೇದದ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪಾರೆಮಜಲು ಅರುಣ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎ.ಟಿ. ಸುರೇಶ್, ಉಪಾಧ್ಯಕ್ಷ ಮನೋಜ್, ಶಾಲಾ ಮುಖ್ಯ ಶಿಕ್ಷಕಿ ಸರೋಜ ಇತರರು ಹಾಜರಿದ್ದರು.

ಸಸಿ ವಿತರಣೆ

ವಿಶ್ವಪರಿಸರ ದಿನದ ಅಂಗವಾಗಿ ಎಸ್ಎಸ್ಎಫ್ ಮಡಿಕೇರಿ ವಲಯದ ವತಿಯಿಂದ ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯ ಶಾಖೆಯಲ್ಲಿ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಎಸ್ಎಫ್ ರಾಜ್ಯ ಸಮಿತಿ ಸದಸ್ಯ ರಫೀಕ್ ಸಖಾಫಿ, ಜಿಲ್ಲಾ ಘಟಕದ ಅಧ್ಯಕ್ಷ ಕರೀಂ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ಲ, ಮಡಿಕೇರಿ ವಿಭಾಗದ ಅಧ್ಯಕ್ಷ ನಝೀರ್ ಬಾಕವಿ, ಖತೀಂ ತಂಙಳ್, ನಾಪೋಕ್ಲು ವಲಯ ಕಾರ್ಯದರ್ಶಿ ಸಲಾವುದ್ದೀನ್ ಉಪಸ್ಥಿತರಿದ್ದರು.

ನಾಳೆಗೊಂದು ನೆರಳು

ವಿಶ್ವಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಸುನ್ನಿಸ್ಟುಡೆಂಟ್ ಫೆಡರೇಶನ್  ವತಿಯಿಂದ ‘ನಾಳೆಗೊಂದು ನೆರಳು’ ಎಂಬ ಶೀರ್ಷಿಕೆ ಯಡಿ ರಾಜ್ಯ ವ್ಯಾಪಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಎಸ್ಎಸ್ಎಫ್ ಶಾಖೆ ವತಿಯಿಂದ ಸಮೀಪದ ಕೊಟ್ಟಮುಡಿ ಜುಮ್ಮಾ ಮಸೀದಿ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವಪರಿಸರ ದಿನವನ್ನು ಆಚರಿಸಲಾಯಿತು.

ಮಡಿಕೇರಿ ವಲಯ ಎಸ್ಎಸ್ಎಫ್ ಅಧ್ಯಕ್ಷ ನಝೀರ್ ಬಾಕವಿ, ಶಾಖಾ ಪ್ರಧಾನ ಕಾರ್ಯದರ್ಶಿ ಆಶೀಕ್, ಸಮಿತಿ ಸದಸ್ಯರಾದ ಕಲೀಲ್, ಇಮಾಮಿ ಬಶೀರ್, ಸಲಾವುದ್ದೀನ್, ಜಲೀಲ್, ಜಮಾಯತ್ ಸಮಿತಿ ಸದಸ್ಯ ಉಮರ್ ಮಜೀದ್ ಹಾಗೂ ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸಿ

ಶನಿವಾರಸಂತೆ: ಬಾಲ್ಯದಲ್ಲೇ ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕು ಎಂದು ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಣಿ ಹೇಳಿದರು.

ಶಾಲಾ ಆವರಣದಲ್ಲಿ ಸೋಮವಾರ ಸಸಿ ನೆಡುವ ಮೂಲಕ ‘ವಿಶ್ವ ಪರಿಸರ ದಿನ’ ಆಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಲಾ ಆವರಣವನ್ನು 6 ಭಾಗಗಳಾಗಿ ಗುರುತಿಸಿ, ಪ್ರತಿ ಭಾಗಗಳಿಗೂ ಪೆಂಗ್ವಿನ್ ಉದ್ಯಾನ, ಜುರಾಸಿಕ್ ಉದ್ಯಾನ, ಆಸ್ಟ್ರಿಚ್ ಉದ್ಯಾನ, ಕ್ರೋಕಡೈಲ್ ಉದ್ಯಾನ, ಟೈಗರ್ ಉದ್ಯಾನ ಎಂದು ನಾಮಕರಣ ಮಾಡಿ ಆಯಾ ಹೆಸರಿನ ಪ್ರಾಣಿಗಳನ್ನು ಅಲ್ಲಿ ಇರಿಸಲಾಯಿತು. ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ, ಪ್ರತಿ ವಿದ್ಯಾರ್ಥಿಗಳಿಗೂ ಸಸಿಗಳನ್ನು ಹಂಚಿ ಅವುಗಳನ್ನು ತಮ್ಮ ತಂಡಕ್ಕೆ ವಹಿಸಿದ ಉದ್ಯಾನದಲ್ಲಿ ನೆಟ್ಟು, ಬೆಳೆಸುವ ಸಂಪೂರ್ಣ ಜವಾಬ್ದಾರಿ ವಹಿಸಲಾಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ಸೇವ್ ದಿ ಪ್ಲಾನೆಟ್’ ನಾಟಕ ಪ್ರದರ್ಶಿಸಿ ಅಳಿದು ಹೋಗಿರುವ ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಿದರು. 

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯಶಿಕ್ಷಕ ವೆಂಕಟೇಶ್, ಶಿಕ್ಷಕ ಸತೀಶ್ ಉಪಸ್ಥಿತರಿದ್ದರು.

ಜೀವ ಸಂಕುಲ ಉಳಿಸಿ

ಕೊಡ್ಲಿಪೇಟೆಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಯುಕೋ ಕ್ಲಬ್ ಹಾಗೂ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಸಂಘದ ಆಶ್ರಯದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಎಸ್.ನಾಗರಾಜ್ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಪರಿಸರ ಬೆಳೆಸಿ ಜೀವ ಸಂಕುಲ ಉಳಿಸಿ’ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖ್ಯ ಶಿಕ್ಷಕ ಎನ್.ಎ.ಷಡಕ್ಷರಿ, ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್, ಸಹಶಿಕ್ಷಕರು ಹಾಜರಿದ್ದರು.

ಪರಿಸರ ಉಳಿಸಿ

ಸೋಮವಾರಪೇಟೆ: ಇಲ್ಲಿನ ಜಲಾಲಿಯ ಮಸೀದಿಯಲ್ಲಿ ಸೋಮವಾರಪೇಟೆ ಸೆಕ್ಟರ್ ವತಿಯಿಂದ ಸೋಮವಾರ ನಡೆದ ‘ನಾಳೆಗಾಗಿ ನೆರಳು’ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿ ಕರಿಗೆ ಗಿಡಗಳನ್ನು ವಿತರಿಸಲಾಯಿತು.

ಈ ಸಂದರ್ಭ ಎಸ್ಎಸ್ಎಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮಾತನಾಡಿ, ಮುಂದಿನ ಪೀಳಿಗಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತ್ಯಂತ ಅಗತ್ಯವಾಗಿದ್ದು, ಎಲ್ಲರೂ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವುದು ಒಂದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸೆಕ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಂ.ಆದಂ, ಪ್ರಮುಖರಾದ ಸಮದ್ ನಿಝಾಮಿ, ಅಲಿ ಸಖಾಫಿ, ಸಾಧಿಕ್ ಕರ್ಕಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry