ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿ

7

ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿ

Published:
Updated:
ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿ

ಹಾಸನ: ಸರ್ಕಾರಿ ಶಾಲೆಗಳ ಸಮಗ್ರ ಸಬಲೀಕರಣ ಎಲ್ಲರ ಜವಾಬ್ದಾರಿ. ಇದಕ್ಕಾಗಿ ನಾಗರಿಕರು ಪರಿಶ್ರಮ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು,  ಶೈಕ್ಷಣಿಕ ಗುಣಮಟ್ಟ ವೃದ್ಧಿ ಕುರಿತಂತೆ ಹಲವು ಸಲಹೆ, ಸೂಚನೆಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನೀಡಿದರು. ಅಲ್ಲದೇ ಈ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ವಿ.ಚೈತ್ರಾ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್‌ ಅವರಿಗೆ ತಿಳಿಸಿದರು.

ಕೇವಲ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಕೊರತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖಕ್ಕೆ ಕಾರಣವಲ್ಲ. ಅಲ್ಲಿ ಮೂಲಸೌಕರ್ಯಗಳು ಮತ್ತು ಶೈಕ್ಷಣಿಕ ವಾತಾವರಣದ ಕೊರತೆಯೂ ಮುಖ್ಯ ಕಾರಣ. ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರೆಲ್ಲರೂ ತಾವು ಕಲಿತ ಶಾಲೆಗಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಹೊಂದಿರುತ್ತಾರೆ. ಹಾಗಾಗಿ ಎಲ್ಲಾ  ಶಾಲೆಗಳಲ್ಲಿ ತಿಂಗಳ ಒಳಗೆ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿ ಸಭೆ ನಡೆಸಬೇಕು. ಇದರಿಂದ ಆ ಶಾಲೆಗಳ ಶೇ 50 ರಷ್ಟು ಸಮಸ್ಯೆ ಬಗೆಹರಿಯಬಲ್ಲದು. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

6-14 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಶಾಲಾ ಶಿಕ್ಷಣವನ್ನು ಪಡೆಯುವಂತಾಗಬೇಕು. ಪೋಕ್ಸೊ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಶಿಕ್ಷಣ  ಇಲಾಖೆಯ ಅಧಿಕಾರಿಗಳು ಮಾತನಾಡಿ, ಒಂದನೇ ತರಗತಿಯ ದಾಖಲಾತಿಗೆ ಕನಿಷ್ಠ ವಯೋಮಿತಿಯನ್ನು 5 ವರ್ಷ 10 ತಿಂಗಳಿಗೆ ನಿಗದಿ ಮಾಡಲಾಗಿದೆ. ಖಾಸಗಿ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ. ಓದಿದ ವಿದ್ಯಾರ್ಥಿಗಳಿಗೆ ಇದರಲ್ಲಿ ವಿನಾಯಿತಿ ದೊರೆಯುತ್ತಿದೆ. ಆದರೆ ಅಂಗನವಾಡಿಯಲ್ಲಿ ಕಲಿತ ಮಕ್ಕಳು ಈ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಆಂಗ್ಲ ಭಾಷೆಯ ವ್ಯಾಮೋಹ, ಖಾಸಗಿ ಶಾಲೆಗಳ ವಾಹನಗಳು ಹಳ್ಳಿ-ಹಳ್ಳಿಯ ಮನೆ-ಮನೆಗಳಿಗೆ ತೆರಳುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಹೆಚ್ಚಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಶಾಲಾ ದಾಖಲಾತಿ ವಯೋಮಿತಿ ನಿಗದಿ ಬಗ್ಗೆ ಶೀಘ್ರದಲ್ಲೇ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಬಗೆಹರಿಸುವುದಾಗಿ ಕೃಪಾ ಅವರು ಸಭೆಗೆ ತಿಳಿಸಿದರು.

ಚೈತ್ರಾ ಮಾತನಾಡಿ, ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಪ್ರತಿ ತಿಂಗಳು ಶಿಕ್ಷಕರು ಪೋಷಕರ ಸಭೆ ನಡೆಸಬೇಕು. ಶಿಕ್ಷಕರ ಹಾಜರಾತಿ ಹಾಗೂ ಬೋಧನಾ ಸಾಮರ್ಥ್ಯದ  ಬಗ್ಗೆಯೂ ಮೌಲ್ಯಮಾಪನ ನಡೆಯಬೇಕು. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು.

ಸ್ಥಳೀಯವಾಗಿ ಉತ್ತಮ ಬೋಧನಾ ಸಾಮರ್ಥ್ಯ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡು ಅಕ್ಕಪಕ್ಕದ ಸರ್ಕಾರಿ ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆಯನ್ನು ಹೊಂದಾಣಿಕೆ ಮೂಲಕ ಸರಿದೂಗಿಸಿಕೊಳ್ಳಬೇಕು ಎಂದರು.

ವೆಂಕಟೇಶ್ ಕುಮಾರ್  ಮಾತನಾಡಿ, ಶಾಲೆಗಳಲ್ಲಿ ಶೌಚಾಲಯಗಳ ಲಭ್ಯತೆ ಇದೆ.  ನೀರಿನ ಸಮಸ್ಯೆ ಇರುವ ಶಾಲೆ ಮತ್ತು  ಹಾಸ್ಟೇಲ್‌ಗಳಿಗೆ  ಟ್ಯಾಂಕರ್ ಮೂಲಕ ಒದಗಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ವಿಜ್ಞಾನ, ಗಣಿತ, ಇಂಗ್ಲಿಷ್‌ ವಿಷಯಗಳಿಗೆ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಬಾಹ್ಯ ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚಿನ ತರಬೇತಿ  ಒದಗಿಸುವಂತೆ ಶಿಕ್ಷಕರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿದ್ದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪುರುಷೋತ್ತಮ್ ಭಾಗವಹಿಸಿದ್ದರು.

ಹೊರಗುತ್ತಿಗೆ ಶಿಕ್ಷಕರ ನೇಮಕ

ಹಾಸನ: ಖಾಸಗಿ ಶಾಲಾ ಮಕ್ಕಳೊಂದಿಗೆ ಸ್ಪರ್ಧೆ ನಡೆಸಬೇಕಾಗುವುದರಿಂದ ಅಲ್ಲಿಯೂ ಅದೇ ಗುಣಮಟ್ಟದ ಮೂಲ ಸೌಕರ್ಯಗಳು ದೊರೆಯಬೇಕು. ಶಿಕ್ಷಕರ ಕೊರತೆ ಇರುವ ಕಡೆ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲು ಅನುಕೂಲವಾಗುವಂತೆ ಸರ್ಕಾರದೊಂದಿಗೆ ವ್ಯವಹರಿಸಿ ಅನುಕೂಲ ಮಾಡಿಕೊಡಲಾಗುವುದು. ಎಲ್ಲಾ ಶಾಲೆಗಳಲ್ಲಿ ಶೌಚಾಲಯವಿರಬೇಕು ಮತ್ತು ಸದ್ಭಳಕೆಯಾಗಬೇಕು. ಮಕ್ಕಳಿಗೆ ಕೈತೊಳೆಯುವ ಅಭ್ಯಾಸ ಕಲಿಸಬೇಕು, ಗಣಕ ಯಂತ್ರಗಳ ಬಗ್ಗೆ ಕನಿಷ್ಠ ಅರಿವು ಮೂಡಿಸಬೇಕು, ನೆಪ ಮಾತ್ರಕ್ಕೆ ಗ್ರಂಥಾಲಯಗಳು ಇರದೆ ವಿದ್ಯಾರ್ಥಿಗಳಿಗೆ ಓದಿನ ಅಭ್ಯಾಸ ಹಾಗೂ ಆಸಕ್ತಿ  ಹೆಚ್ಚಿಸುವ ರೂಪದಲ್ಲಿರಬೇಕು ಎಂದು ಕೃಪಾ ಸಲಹೆ ನೀಡಿದರು.

2,538 ಸರ್ಕಾರಿ ಶಾಲೆಗಳು

ಹಾಸನ: ಜಿಲ್ಲೆಯಲ್ಲಿರುವ 2,538 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಗ್ರಂಥಾಲಯದ ವ್ಯವಸ್ಥೆ ಇದೆ.  ನೀರಿನ ಕೊರತೆಗೆ  ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.  ಕಂಪ್ಯೂಟರ್ ಶಿಕ್ಷಣ ಮತ್ತು ಇತರೆ ಮೂಲ ಸೌಕರ್ಯಗಳಿಗೆ ಸರ್ಕಾರದಿಂದ ಹೆಚ್ಚಿನ ನೆರವು ಅಗತ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಲಿಂಗು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry