ತಾಲ್ಲೂಕಿನಲ್ಲಿ ಅನಧಿಕೃತ ಶಾಲೆಗಳೇ ಇಲ್ಲ

7

ತಾಲ್ಲೂಕಿನಲ್ಲಿ ಅನಧಿಕೃತ ಶಾಲೆಗಳೇ ಇಲ್ಲ

Published:
Updated:
ತಾಲ್ಲೂಕಿನಲ್ಲಿ ಅನಧಿಕೃತ ಶಾಲೆಗಳೇ ಇಲ್ಲ

ಮೈಸೂರು: ತಾಲ್ಲೂಕಿನಲ್ಲಿ ಯಾವುದೇ ಅನಧಿಕೃತ ಶಾಲೆಗಳು ಇಲ್ಲ. ಅಂತಹ ಶಾಲೆಗಳು ಕಂಡು ಬಂದಲ್ಲಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಗ್ರಾಮಾಂತರ ಬಿಇಒ ವಿವೇಕಾನಂದ ಅವರು ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ವಿಶೇಷ ಸಭೆಗೆ ತಿಳಿಸಿದರು.

ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿವಿಧ ಇಲಾಖೆಗಳ ಕ್ರಿಯಾ ಯೋಜನೆ ಗಳ ಕುರಿತು ಚರ್ಚೆ ನಡೆಯಿತು.

ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ ಮಾನ್ಯತೆ ಪಡೆಯದೆ ಶಾಲೆಗಳು ಆರಂಭಿಸಿದ್ದು ಗಮನಕ್ಕೆ ಬಂದರೆ ಪೋಷಕರು ಮಾಹಿತಿ ನೀಡಬೇಕು ಎಂದು ಅವರು ಕೇಳಿಕೊಂಡರು.

ಆರ್‌ಟಿಇ ಕಾಯ್ದೆಯಡಿ ಎಲ್ಲ ಶಾಲೆಗಳಲ್ಲಿ ದಾಖಲಾತಿ ಕ್ರಮಬದ್ಧವಾಗಿ ನಡೆದಿದೆ. ಈ ಬಾರಿ 980 ಸೀಟುಗಳಿಗೆ 1380 ಅರ್ಜಿಗಳು ಬಂದಿದ್ದವು. ಕೆಲವು ಪೋಷಕರು ತಮ್ಮ ಆಯ್ಕೆಯ ಶಾಲೆ ಲಭಿಸದ ಕಾರಣ ಮಕ್ಕಳನ್ನು ದಾಖಲು ಮಾಡಿಲ್ಲ. ಇದರಿಂದ ಕೆಲವು ಸೀಟುಗಳು ಇನ್ನೂ ಖಾಲಿ ಇವೆ ಎಂದರು.

17 ಶಾಲೆಗಳ ದುರಸ್ತಿಗೆ ನಿರ್ಧಾರ: ಶಿಕ್ಷಣ ಇಲಾಖೆಯಲ್ಲಿ ಸಣ್ಣ ಕಾಮಗಾರಿಗೆ ಈ ಬಾರಿ ₹ 10.75 ಲಕ್ಷ ಮೀಸಲಿಡಲಾಗಿದೆ. ತೀರಾ ಶಿಥಿಲಗೊಂಡಿರುವ 17 ಶಾಲೆಗಳನ್ನು ಗುರುತಿಸಿ ಆ ಶಾಲೆಗಳ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹುಯಿಲಾಳು ಗ್ರಾಮದಲ್ಲಿ ಮೂರು ಶಾಲೆಗಳು ಕುಸಿದು ಬೀಳುವ ಅಪಾಯದ ಲ್ಲಿದ್ದು, ಅವುಗಳ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸದಸ್ಯರೊಬ್ಬರು ಒತ್ತಾಯಿಸಿದರು. ಇತರ ಕೆಲ ಸದಸ್ಯರೂ ತಮ್ಮ ವ್ಯಾಪ್ತಿಯ ಶಾಲೆಗಳನ್ನು ಕೈಬಿಟ್ಟಿರು ವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದೆ. ಅದನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಪಟ್ಟಿಕೊಡಲು ಸಭೆ ಕರೆಯಲಾಗಿದೆ. ವಾದ ವಿವಾದವನ್ನು ಸಾಮಾನ್ಯ ಸಭೆಯಲ್ಲಿ ನಡೆಸಬಹುದು ಎಂದು ಕಾರ್ಯನಿರ್ವಹಣಾ ಅಧಿಕಾರಿ ಲಿಂಗರಾಜಯ್ಯ ಸದಸ್ಯರಿಗೆ ತಿಳಿಸಿದರು.

ವಿವಿಧ ಇಲಾಖೆಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ವಿತರಿಸಬೇಕಿದ್ದು, ಕ್ರಿಯಾಯೋಜನೆ ರೂಪಿಸಿ ಪಟ್ಟಿ ನೀಡಿ ಎಂದು ಕಾಳಮ್ಮ ಕೆಂಪ ರಾಮಯ್ಯ ಸದಸ್ಯರಿಗೆ ಸೂಚಿಸಿದರು. ಉಪಾಧ್ಯಕ್ಷ ಮಂಜು ಹಾಜರಿದ್ದರು.

ಸದಸ್ಯರಿಗೆ ಬೆಲೆ ಇಲ್ಲವೇ?: ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಮ್ಮ ಕ್ಷೇತ್ರದ ವ್ಯಾಪ್ತಿಗೆ ಪರಿಶೀಲನೆಗೆ ಬರುವಾಗ ಮಾಹಿತಿ ನೀಡುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಕೆಲವು ಸದಸ್ಯರು, ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಸಭೆಯಲ್ಲಿ ನಡೆಯಿತು.

ಅಧ್ಯಕ್ಷರು ಬರುವ ವಿಚಾರವನ್ನು ಕೇವಲ ಅರ್ಧ ಗಂಟೆ ಮುಂಚಿತವಾಗಿ ತಿಳಿಸುತ್ತಾರೆ. ಏಕಾಏಕಿ ಬಂದು ಪರಿಶೀಲನೆ ನಡೆಸಿದರೆ ವಾಸ್ತವಾಂಶ ತಿಳಿಯುವುದಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ನಮಗೆ ಮಾತ್ರ ಮಾಹಿತಿ ಇರುತ್ತದೆ ಎಂದು ಸದಸ್ಯೆಯೊಬ್ಬರು ದೂರಿದರು.

ಇಲವಾಲ ಗ್ರಾಮದಲ್ಲಿ ಕೃಷಿಗೆ ಸಂಬಂಧಿಸಿದಂತೆ ನಡೆದ ಸಭೆಗೆ ಆಹ್ವಾನ ನೀಡಿಲ್ಲ ಎಂದು ಸದಸ್ಯರೊಬ್ಬರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ದಿಢೀರ್‌ ಭೇಟಿ ನೀಡುವುದು ಬೇಡ ಎನ್ನುವುದಿಲ್ಲ. ಆದರೆ, ಬರುವ ಮುನ್ನ ಆಯಾ ಕ್ಷೇತ್ರದ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಒಕ್ಕೊರಲಿನಿಂದ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ, ಇನ್ನು ಮುಂದೆ ಭೇಟಿ ಸಂದರ್ಭ ಮಾಹಿತಿ ನೀಡುತ್ತೇನೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry